ಯೆಹೆಜ್ಕೇಲನು 30
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,
2“ನರಪುತ್ರನೇ, ನೀನು ಈ ಪ್ರವಾದನೆಯನ್ನು ಹೇಳು, ‘ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅರಚಿಕೊಳ್ಳಿರಿ! ಅಯ್ಯೋ ದುರ್ದಿನವೇ!
3ದಿನವು ಹತ್ತಿರವಾಯಿತು! ಹೌದು, ಯೆಹೋವನ ದಿನವು, ಕಾರ್ಮುಗಿಲಿನ ದಿನವು ಸಮೀಪಿಸಿತು; ಅದು ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವುದು.
4ಖಡ್ಗವು ಐಗುಪ್ತದ ಮೇಲೆ ಬೀಳುವುದು; ಅಲ್ಲಿನ ಪ್ರಜೆಗಳು ಹತರಾಗಲು ಕೂಷಿನಲ್ಲಿಯೂ ಸಂಕಟವಾಗುವುದು; ಐಗುಪ್ತದ ಜನಸಮೂಹವು ಒಯ್ಯಲ್ಪಡುವುದು, ಅದರ ಅಸ್ತಿವಾರವು ಮುರಿದು ಹಾಳಾಗುವುದು.
5“‘ಕೂಷ್ಯರು, ಪೂಟ್ಯರು, ಲೂದ್ಯರು, ಬಗೆಬಗೆಯ ಸಕಲ ವಿದೇಶೀಯರು, ಕೂಬ್ಯರು, ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಐಗುಪ್ತ್ಯರೊಂದಿಗೆ ಖಡ್ಗದಿಂದ ಹತರಾಗುವರು.’”
6ಯೆಹೋವನು ಇಂತೆನ್ನುತ್ತಾನೆ, “ಐಗುಪ್ತಕ್ಕೆ ಆಧಾರವಾದವರು ಬೀಳುವರು, ಅದರ ಶಕ್ತಿಯ ಅಹಂಕಾರವು ಇಳಿದು ಹೋಗುವುದು; ಅಲ್ಲಿನ ಜನರು ಮಿಗ್ದೋಲಿನಿಂದ ಸೆವೇನೆಯವರೆಗೆ ಖಡ್ಗದಿಂದ ಹತರಾಗುವರು” ಇದು ಕರ್ತನಾದ ಯೆಹೋವನ ನುಡಿ.
7ಹಾಳಾಗಿರುವ ದೇಶಗಳೊಳಗೆ ಆ ದೇಶವೂ ಹಾಳಾಗಿರುವುದು, ಪಾಳುಬಿದ್ದಿರುವ ಪಟ್ಟಣಗಳೊಳಗೆ ಅದರ ಪಟ್ಟಣಗಳೂ ಪಾಳು ಬಿದ್ದಿರುವವು.
8“‘ನಾನು ಐಗುಪ್ತಕ್ಕೆ ಬೆಂಕಿ ಹಚ್ಚಿ ಅದರ ಸಹಾಯಕರನ್ನೆಲ್ಲಾ ನಾಶಮಾಡಿದ ಮೇಲೆ ನಾನೇ ಯೆಹೋವನು’ ಎಂದು ಅವರಿಗೆ ಗೊತ್ತಾಗುವುದು.
9‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ, ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು; ಐಗುಪ್ತದ ನಾಶದ ದಿನದಲ್ಲಿ ಆದ ಹಾಗೆ ಕೂಷ್ಯರಿಗೂ ಸಂಕಟವು ಉಂಟಾಗುವುದು; ಇಗೋ, ಆ ದಿನ ಬಂತು!’”
10ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಐಗುಪ್ತದ ಅಸಂಖ್ಯಾತ ಪ್ರಜೆಯನ್ನು ಕೊನೆಗಾಣಿಸುವೆನು.
11ಆ ದೇಶವನ್ನು ನಾಶಪಡಿಸಲಿಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು; ಅವರು ಐಗುಪ್ತದ ಮೇಲೆ ಕತ್ತಿ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.
12ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ಹೌದು, ದೇಶವನ್ನೂ, ಅದರಲ್ಲಿನ ಸಮಸ್ತವನ್ನೂ ಅನ್ಯರ ಕೈಯಿಂದ ಹಾಳುಮಾಡಿಸುವೆನು. ಯೆಹೋವನಾದ ನಾನೇ ಇದನ್ನು ನುಡಿದಿದ್ದೇನೆ.”
13ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ನೋಫಿನ ವಿಗ್ರಹಗಳನ್ನೆಲ್ಲ ಒಡೆದು ಕೊನೆಗಾಣಿಸುವೆನು; ಐಗುಪ್ತ ದೇಶದಲ್ಲಿ ಇನ್ನು ಯಾವ ಅರಸನೂ ಇರಲಾರನು; ನಾನು ಆ ದೇಶಕ್ಕೆ ಭಯವನ್ನು ಉಂಟುಮಾಡುವೆನು.
14ನಾನು ಪತ್ರೋಸನ್ನು ಹಾಳುಮಾಡಿ, ಚೋವನಿಗೆ ಬೆಂಕಿಯಿಡುವೆನು. ನೋಪುರವನ್ನು ದಂಡಿಸಿ,
15“ಐಗುಪ್ತಕ್ಕೆ ರಕ್ಷಣೆಯ ಕೋಟೆಯಾದ ಸೀನಿನ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ನೋಪುರದ ನಿವಾಸಿಗಳನ್ನೆಲ್ಲಾ ಕತ್ತರಿಸಿ ಬಿಡುವೆನು.
16ನಾನು ಐಗುಪ್ತಕ್ಕೆ ಕಿಚ್ಚನ್ನು ಹತ್ತಿಸಲು ಸೀನು ಪ್ರಾಣ ಸಂಕಟಪಡುವುದು; ನೋಪುರವು ಭಂಗಕ್ಕೆ ಈಡಾಗುವುದು; ನೋಫಿನ ಮೇಲೆ ವೈರಿಗಳು ಮಧ್ಯಾಹ್ನದಲ್ಲೇ ಬೀಳುವರು.
17“ಓನಿನ ಮತ್ತು ಪೀಬೆಸೆತಿನ ಯುವಕರು ಖಡ್ಗದಿಂದ ಹತರಾಗುವರು; ಅಲ್ಲಿನ ನಿವಾಸಿಗಳು ಸೆರೆಯಾಗಿ ಹೋಗುವರು.
18ಐಗುಪ್ತವು ಹೊರಿಸಿದ ನೊಗಗಳನ್ನು ನಾನು ತಹಪನೇಸಿನಲ್ಲಿ ಮುರಿಯುವಾಗ, ಅಲ್ಲಿ ಹೊತ್ತು ಮೂಡದು. ಅದರ ಶಕ್ತಿಯ ಅಹಂಕಾರವು ಅಡಗಿ ಹೋಗುವುದು, ಕಾರ್ಮುಗಿಲು ಅದನ್ನು ಆವರಿಸುವುದು, ಅದರ ಯುವತಿಯರು ಸೆರೆಗೆ ಒಯ್ಯಲ್ಪಡುವರು.
19ಹೀಗೆ ನಾನು ಐಗುಪ್ತ್ಯರಿಗೆ ದಂಡನೆಗಳನ್ನು ವಿಧಿಸಿ ತೀರಿಸುವಾಗ ನಾನೇ ಯೆಹೋವನು” ಎಂದು ಅವರಿಗೆ ಗೊತ್ತಾಗುವುದು.
20ಹನ್ನೊಂದನೆಯ ವರ್ಷದ, ಮೊದಲನೆಯ ತಿಂಗಳಿನ ಏಳನೆಯ ದಿನದಲ್ಲಿ ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,
21“ನರಪುತ್ರನೇ, ನಾನು ಐಗುಪ್ತದ ಅರಸನಾದ ಫರೋಹನ ಕೈಯನ್ನು ಮುರಿದುಬಿಟ್ಟಿದ್ದೇನೆ; ಇಗೋ, ಅದನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ, ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ, ಅದನ್ನು ಬಿಗಿಸಲಿಲ್ಲ.”
22ಆದುದರಿಂದ ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನು ಐಗುಪ್ತದ ಅರಸನಾದ ಫರೋಹನಿಗೆ ವಿರುದ್ಧವಾಗಿ ಅವನ ಕೈಗಳನ್ನು, ಅಂದರೆ ಸರಿಯಾಗಿರುವುದನ್ನೂ, ಮುರಿದದ್ದನ್ನೂ ತೀರಾ ಮುರಿದು ಬಿಟ್ಟು, ಖಡ್ಗವು ಅವನ ಕೈಯೊಳಗಿಂದ ಬೀಳುವಂತೆ ಮಾಡುವೆನು.
23“ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವೆನು.
24ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸಿ ನನ್ನ ಖಡ್ಗವನ್ನು ಅವನ ಕೈಗೆ ಕೊಟ್ಟು ಫರೋಹನ ಕೈಗಳನ್ನು ಮುರಿಸಲು, ಗಾಯದಿಂದ ಪ್ರಾಣ ಸಂಕಟಪಡುವವನಂತೆ ಫರೋಹನು ಆ ಅರಸನ ಮುಂದೆ ನರಳಾಡುವನು.
25ನಾನು ಬಾಬೆಲಿನ ಅರಸನ ಕೈಗಳನ್ನು ಬಲಪಡಿಸುವೆನು; ಫರೋಹನ ಕೈಗಳಾದರೋ ಜೋಲುಬೀಳುವವು; ನಾನು ನನ್ನ ಖಡ್ಗವನ್ನು ಬಾಬೆಲಿನ ಅರಸನಿಗೆ ಕೊಡಲು ಅವನು ಅದನ್ನು ಐಗುಪ್ತ ದೇಶದ ಮೇಲೆ ಎತ್ತುವನು. ಆಗ ನಾನೇ ಯೆಹೋವನು” ಎಂದು ಎಲ್ಲರಿಗೂ ಗೊತ್ತಾಗುವುದು.
26“ನಾನು ಐಗುಪ್ತ್ಯರನ್ನು ಜನಾಂಗಗಳಲ್ಲಿ ಚದುರಿಸಿ ದೇಶದೇಶಗಳಿಗೆ ಚದುರಿಸಿ ಬಿಡುವಾಗ ನಾನೇ ಯೆಹೋವನು ಎಂದು ಅವರಿಗೆ ತಿಳಿದು ಬರುವುದು.”
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath