ಕ್ರಿಶ್ಚಿಯನ್ ಧರ್ಮ
ಹಿಂದೆ

ಯೆಹೆಜ್ಕೇಲನು 17

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

2“ನರಪುತ್ರನೇ, ನೀನು ಇಸ್ರಾಯೇಲ್ ವಂಶದವರಿಗೆ ಈ ಸಾಮ್ಯವನ್ನು ಒಗಟಾಗಿ ಹೇಳು,

3ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಅಗಲವಾದ ಮತ್ತು ಉದ್ದವಾದ ರೆಕ್ಕೆಗಳಿಂದ ತುಂಬಿದ, ನಾನಾ ಬಣ್ಣದ ದೊಡ್ಡ ಹದ್ದು ಲೆಬನೋನಿಗೆ ಬಂದು, ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ಕಿತ್ತು ಹಾಕಿತು.

4ತುಟ್ಟತುದಿಯ ಚಿಗುರುಗಳನ್ನು ಕಚ್ಚಿ, ವ್ಯಾಪಾರದ ದೇಶಕ್ಕೆ ತೆಗೆದುಕೊಂಡು ಹೋಗಿ ಬಹಳ ವರ್ತಕರಿರುವ ಪಟ್ಟಣದಲ್ಲಿ ಇಟ್ಟುಬಿಟ್ಟಿತು.

5“‘ಆಮೇಲೆ ಅದು ಆ ದೇವದಾರು ಇದ್ದ ದೇಶದ ಒಂದು ಬೀಜವನ್ನು ತೆಗೆದುಕೊಂಡು ಫಲವತ್ತಾದ ನೀರಾವರಿಯ ಭೂಮಿಯಲ್ಲಿ ನೆಟ್ಟು, ನೀರವಂಜಿಯ ಮರದ ಹಾಗೆ ಬೆಳೆಯಿಸಿತು.

6ಅದು ಮೊಳೆತು ದ್ರಾಕ್ಷಾಲತೆಯಾಗಿ ತುಂಬಾ ಹರಡಿಕೊಂಡು ತನ್ನ ರೆಂಬೆಗಳನ್ನು ಆ ಹದ್ದಿನ ಕಡೆಗೆ ಚಾಚಿ ಅದರ ಕೆಳಗೆ ತನ್ನ ಬೇರುಗಳನ್ನು ಬಿಟ್ಟಿತು; ಅದು ಲತೆಯಾಗಿ ಬೆಳೆದು, ರೆಂಬೆಗಳನ್ನು ಹರಡಿಸಿ, ಚಿಗುರುಗಳನ್ನು ಹೊರಡಿಸಿತು.

7“‘ಅಗಲವಾದ ರೆಕ್ಕೆಗಳುಳ್ಳ ಗರಿ ತುಂಬಿದ ಮತ್ತೊಂದು ದೊಡ್ಡ ಹದ್ದು ಇತ್ತು; ಇಗೋ, ಆ ದ್ರಾಕ್ಷಾಲತೆಯು ತಾನು ನಾಟಿಕೊಂಡಿದ್ದ ಪಾತಿಯೊಳಗಿಂದ ಅದರ ಕಡೆಗೆ ತನ್ನ ಬೇರುಗಳನ್ನು ತಿರುಗಿಸಿ, ತನ್ನ ರೆಂಬೆಗಳನ್ನು ಚಾಚಿ ಅದರಿಂದ ನೀರನ್ನು ಹಾಯಿಸುತ್ತಿತ್ತು.

8ಅದು ಸೊಂಪಾದ ದ್ರಾಕ್ಷಾಲತೆಯಾಗಿ ರೆಂಬೆಗಳನ್ನು ಹರಡಿ ಫಲಕೊಡುವುದಕ್ಕೆ ಅನುಕೂಲವಾದ ಒಳ್ಳೆಯ ನೀರಾವರಿಯ ನೆಲದಲ್ಲಿ ನಾಟಿಕೊಂಡಿತ್ತು.’”

9ಈ ಮಾತನ್ನು ನುಡಿ, “ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಅದು ಸಮೃದ್ಧವಾಗಿಯೇ ಇರುವುದೋ? ಅದನ್ನು ನಾಟಿದ ಹದ್ದು ಅದರ ಬೇರುಗಳನ್ನು ಕಿತ್ತು, ಅದರ ಫಲವನ್ನು ಕಡಿದುಬಿಡಲು ಅದು ಒಣಗಿ ಅದರ ಹಸುರೆಲೆಗಳೆಲ್ಲಾ ಬಾಡುವುದಲ್ಲವೆ? ಅದು ಬೇರು ಸಹಿತ ಕೀಳಲ್ಪಡುವುದು; ಬಹಳ ಬಲದಿಂದಲ್ಲ, ಬಹಳ ಜನರಿಂದಲ್ಲ.

10ಆಹಾ, ನಾಟಿಕೊಂಡಿದ್ದ ಆ ಲತೆಯು ಸಮೃದ್ಧವಾಗಿಯೇ ಇರುವುದೋ? ಮೂಡಣ ಗಾಳಿಯು ಬಡಿಯುವಾಗ ಬಾಡೇ ಬಾಡುವುದಲ್ಲವೇ? ಬೆಳೆದ ಪಾತಿಯಲ್ಲಿಯೇ ಒಣಗಿಹೋಗುವುದು.”

11ಯೆಹೋವನು ಇನ್ನೊಂದು ವಾಕ್ಯವನ್ನು ನನಗೆ ದಯಪಾಲಿಸಿದನು,

12“ದ್ರೋಹಿ ವಂಶದವರಾದ ಈ ಜನರಿಗೆ ಹೀಗೆ ಹೇಳು, ಇದರ ಅಭಿಪ್ರಾಯವು ನಿಮಗೆ ಗೊತ್ತಿಲ್ಲವೋ? ಇಗೋ, ಬಾಬೆಲಿನ ಅರಸನು ಯೆರೂಸಲೇಮಿಗೆ ಬಂದು ಅಲ್ಲಿನ ಅರಸನನ್ನೂ ಮತ್ತು ಪ್ರಧಾನರನ್ನೂ ಹಿಡಿದು ಬಾಬಿಲೋನಿಗೆ ತೆಗೆದುಕೊಂಡು ಹೋದನು.

13ರಾಜವಂಶದವನೊಬ್ಬನನ್ನು ಆರಿಸಿ ಅವನೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವನಿಂದ ಆಣೆಯಿಡಿಸಿದನು.

14ಇವನ ರಾಜ್ಯವು ಮೇಲಕ್ಕೆ ಏಳಲಾರದೆ ಇದ್ದರೂ, ಒಡಂಬಡಿಕೆಯನ್ನು ಕೈಗೊಳ್ಳುವುದರಿಂದ ಅದು ನಿಲ್ಲುವುದು.

15ಆದರೆ ಅವನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದು ಕುದುರೆಗಳನ್ನೂ ಮತ್ತು ಬಹಳ ಮಂದಿ ಸೈನಿಕರನ್ನೂ ನಮಗೆ ಒದಗಿಸೆಂದು ಐಗುಪ್ತಕ್ಕೆ ರಾಯಭಾರಿಗಳನ್ನು ಕಳುಹಿಸಿದನು. ಆದರೂ ಇವನು ಗೆಲ್ಲುವನೋ? ಇಂಥಾ ಕೃತ್ಯಗಳನ್ನು ನಡೆಸಿದವನು ಪಾರಾಗುವನೋ? ಒಡಂಬಡಿಕೆಯನ್ನು ಮೀರಿದವನು ತಪ್ಪಿಸಿಕೊಂಡಾನೇ?”

16ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ಇವನು ಯಾರಿಂದ ಅರಸನಾಗಿ ನೇಮಿಸಲ್ಪಟ್ಟನೋ, ಯಾವನಿಗೆ ಮಾಡಿದ ಪ್ರಮಾಣವನ್ನು ತಿರಸ್ಕರಿಸಿದನೋ, ಯಾರ ಒಡಂಬಡಿಕೆಯನ್ನು ಮೀರಿದನೋ, ಆ ಅರಸನ ಬಳಿಯಲ್ಲಿ, ಅಂದರೆ ಬಾಬೆಲೆಂಬ ಅವನ ವಾಸಸ್ಥಾನದಲ್ಲಿ ಇವನು ಸಾಯುವುದು ಖಂಡಿತ.

17ಫರೋಹನೂ, ಅವನ ಮಹಾಸೈನ್ಯವೂ, ದೊಡ್ಡ ಪರಿವಾರವೂ ಬಂದು ಬಹಳ ಜನರನ್ನು ಕೊಲ್ಲುವುದಕ್ಕೆ ದಿಬ್ಬಗಳನ್ನು ಹಾಕಿ, ಕೋಟೆಗಳನ್ನು ಕಟ್ಟಿದರೂ ಯುದ್ಧದಲ್ಲಿ ಇವನಿಗೆ ಏನೂ ಸಹಾಯವಾಗುವುದಿಲ್ಲ.

18ಏಕೆಂದರೆ ಇವನು ಇಟ್ಟ ಆಣೆಯನ್ನು ತಿರಸ್ಕರಿಸಿ ಒಡಂಬಡಿಕೆಯನ್ನು ಮೀರಿದನಲ್ಲವೇ? ಕೈಯ ಮೇಲೆ ಕೈಯಿಟ್ಟು ಆಣೆಮಾಡಿದರೆ ಪ್ರಯೋಜನವೇನು? ಇದನ್ನೆಲ್ಲಾ ಮಾಡಿದ್ದರಿಂದ ಇವನು ಪಾರಾಗನು.”

19ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನನ್ನ ಜೀವದಾಣೆ, ನನಗೆ ಮಾಡಿದ ಪ್ರಮಾಣವನ್ನು ಅವನು ತಿರಸ್ಕರಿಸಿ, ನನ್ನ ಒಡಂಬಡಿಕೆಯನ್ನು ಮೀರಿದ ದೋಷವನ್ನು ಅವನ ತಲೆಗೆ ಕಟ್ಟುವೆನು.

20ನಾನು ಅವನಿಗೆ ನನ್ನ ಬಲೆಯೊಡ್ಡುವೆನು, ನಾನು ಹಾಕಿದ ಉರುಲಿನಲ್ಲಿ ಸಿಕ್ಕಿಬೀಳುವನು, ಅವನನ್ನು ಬಾಬಿಲೋನಿಗೆ ತಂದು ಅಲ್ಲೇ ಅವನೊಂದಿಗೆ ವಾದಿಸಿ, ಅವನು ನನಗೆ ಮಾಡಿದ ಅಪರಾಧವನ್ನು ಅವನ ಮೇಲೆ ಹೊರಿಸುವೆನು.

21ಅವನ ಸೇನೆಗಳೆಲ್ಲಾ ಚದರಿ ಓಡಿಹೋಗಿ, ಕತ್ತಿಯ ಬಾಯಿಗೆ ತುತ್ತಾಗುವುವು; ಉಳಿದವರನ್ನು ಎಲ್ಲಾ ಕಡೆಯ ಗಾಳಿಗೂ ತೂರಿಬಿಡುವೆನು; ಈ ಮಾತನ್ನು ಆಡಿದವನು ಯೆಹೋವನಾದ ನಾನೇ ಎಂದು ನಿಮಗೆ ಗೊತ್ತಾಗುವುದು.”

22ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ನಾನೇ ಎತ್ತರವಾದ ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ತೆಗೆದು ಅದನ್ನು ನೆಡುವೆನು; ತುಟ್ಟತುದಿಯ ಚಿಗುರುಗಳಲ್ಲಿ ಅತಿ ಕೋಮಲವಾದದ್ದನ್ನು ಚಿವುಟಿ ತಂದು, ಉನ್ನತೋನ್ನತವಾದ ಪರ್ವತದ ಮೇಲೆ ನೆಡುವೆನು.

23ನಾನು ಅದನ್ನು ಇಸ್ರಾಯೇಲಿನ ಉನ್ನತ ಪರ್ವತಾಗ್ರದಲ್ಲಿ ನೆಡಲು, ಅದು ಸೊಂಪಾದ ದೇವದಾರು ಮರವಾಗಿ ರೆಂಬೆಗಳನ್ನು ಹರಡಿ ಫಲಕೊಡುವುದು; ಅದರಲ್ಲಿ ಸಕಲವಿಧವಾದ ಪಕ್ಷಿಗಳು ವಾಸಿಸುತ್ತಾ ಅದರ ರೆಂಬೆಗಳ ನೆರಳನ್ನು ಆಶ್ರಯಿಸುವವು.

24ಆಗ ಯೆಹೋವನಾದ ನಾನು ಎತ್ತರವಾದ ಮರವನ್ನು ತಗ್ಗಿಸಿ, ತಗ್ಗಾದದ್ದನ್ನು ಎತ್ತರಗೊಳಿಸಿ, ಹಸುರಾದದ್ದನ್ನು ಒಣಗಿಸಿ, ಒಣಗಿದ್ದನ್ನು ಚಿಗುರಿಸಿದ್ದೇನೆ ಎಂದು ಅರಣ್ಯದ ಸಕಲ ವೃಕ್ಷಗಳು ತಿಳಿಯುವವು. ಇದನ್ನು ಯೆಹೋವನಾದ ನಾನೇ ನುಡಿದು ನಡೆಸಿದ್ದೇನೆ.”

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath