ಯೆಹೆಜ್ಕೇಲನು 10
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಇಗೋ, ನಾನು ನೋಡಲಾಗಿ ಕೆರೂಬಿಗಳ ತಲೆಗಳ ಮೇಲಣ ಗಗನಮಂಡಲದ ಮೇಲ್ಗಡೆ ಇಂದ್ರನೀಲಮಣಿಯಂತೆ ಹೊಳೆಯುವ ಸಿಂಹಾಸನದ ಆಕಾರವು ನನಗೆ ಕಾಣಿಸಿತು.
2ಆತನು ನಾರಿನ ಬಟ್ಟೆಯನ್ನು ಹೊದ್ದುಕೊಂಡ ಆ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ, ಕೆರೂಬಿಗಳ ಕೆಳಗೆ ಪ್ರವೇಶಿಸಿ, ಕೆರೂಬಿಗಳ ಮಧ್ಯದೊಳಗಿಂದ ಬೊಗಸೆಯಲ್ಲಿ ಕೆಂಡಗಳನ್ನು ತುಂಬಿ, ತಂದು ಅದನ್ನು ಪಟ್ಟಣದ ಮೇಲೆ ಎರಚು” ಎಂದು ಅಪ್ಪಣೆಕೊಡಲು ಅವನು ನನ್ನ ಕಣ್ಣೆದುರಿಗೇ ಹೋಗಿ ಅಲ್ಲಿ ಪ್ರವೇಶಿಸಿದನು.
3ಅವನು ಒಳಗೆ ಸೇರಿದಾಗ ಕೆರೂಬಿಗಳು ದೇವಾಲಯದ ದಕ್ಷಿಣಭಾಗದಲ್ಲಿ ನಿಂತಿದ್ದವು, ಮೇಘವು ಒಳಗಣ ಪ್ರಾಕಾರವನ್ನು ತುಂಬಿತ್ತು.
4ಇದಲ್ಲದೆ ಯೆಹೋವನ ತೇಜಸ್ಸು ಕೆರೂಬಿಗಳನ್ನು ಬಿಟ್ಟು ಮೇಲಕ್ಕೇರಿ ದೇವಾಲಯದ ಹೊಸ್ತಿಲಿನ ಮೇಲ್ಗಡೆ ನಿಂತಿತು; ದೇವಾಲಯದಲ್ಲಿಯೂ ಮೇಘವು ತುಂಬಿತ್ತು; ಯೆಹೋವನ ತೇಜಸ್ಸಿನ ಅದ್ಭುತಕಾಂತಿಯು ಅಂಗಳದಲ್ಲೆಲ್ಲಾ ವ್ಯಾಪಿಸಿತ್ತು.
5ಆಗ ಕೆರೂಬಿಗಳ ರೆಕ್ಕೆಗಳ ಶಬ್ದವು ಸರ್ವಶಕ್ತನಾದ ದೇವರು ಮಾತನಾಡುವ ಧ್ವನಿಯಷ್ಟು ಗಂಭೀರವಾಗಿ ಹೊರಗಣ ಅಂಗಳದವರೆಗೂ ಕೇಳಿಸಿತು.
6ಆತನು ನಾರಿನ ಬಟ್ಟೆಯನ್ನು ಹೊದ್ದುಕೊಂಡಿದ್ದ ಪುರುಷನಿಗೆ, “ನೀನು ಗರಗರನೆ ತಿರುಗುವ ಗಾಲಿಗಳ ನಡುವೆ ಪ್ರವೇಶಿಸಿ, ಕೆರೂಬಿಗಳ ಮಧ್ಯದೊಳಗಿಂದ ಬೆಂಕಿಯನ್ನು ತೆಗೆದುಕೋ” ಎಂದು ಅಪ್ಪಣೆ ಕೊಡಲು ಅವನು ಒಳಕ್ಕೆ ಹೋಗಿ ಒಂದು ಚಕ್ರದ ಪಕ್ಕದಲ್ಲಿ ನಿಂತುಕೊಂಡನು.
7ಆಗ ಒಬ್ಬ ಕೆರೂಬಿಯು ಇತರ ಕೆರೂಬಿಗಳ ನಡುವೆ ಕೈ ಚಾಚಿ ಅವುಗಳ ಮಧ್ಯದಲ್ಲಿದ್ದ ಬೆಂಕಿಯನ್ನು ತೆಗೆದು ನಾರಿನ ಬಟ್ಟೆಯನ್ನು ಹೊದ್ದುಕೊಂಡವನ ಬೊಗಸೆಯಲ್ಲಿ ಹಾಕಿತು; ಅವನು ಅದನ್ನು ತೆಗೆದುಕೊಂಡು ಆಚೆಗೆ ಹೊರಟನು.
8ಕೆರೂಬಿಗಳ ಒಂದೊಂದು ರೆಕ್ಕೆಯ ಕೆಳಗೂ ಮನುಷ್ಯಹಸ್ತದಂಥ ಒಂದೊಂದು ಹಸ್ತವು ಕಾಣಿಸಿತು.
9ಇಗೋ, ನಾನು ನೋಡಲಾಗಿ ಆ ಕೆರೂಬಿಗಳ ಪಕ್ಕಗಳಲ್ಲಿ, ಒಂದೊಂದು ಕೆರೂಬಿಯ ಪಕ್ಕದಲ್ಲಿ ಒಂದೊಂದು ಚಕ್ರದಂತೆ ನಾಲ್ಕು ಚಕ್ರಗಳಿದ್ದವು; ಆ ಚಕ್ರಗಳ ಬಣ್ಣವು ಪೀತರತ್ನದ ಹಾಗೆ ಹೊಳೆಯುತ್ತಿತ್ತು.
10ಅವುಗಳ ರೂಪವು ಹೇಗಿತ್ತೆಂದರೆ ಒಂದು ಚಕ್ರದೊಳಗೆ ಇನ್ನೊಂದು ಚಕ್ರವು ಅಡ್ಡವಾಗಿ ರಚಿಸಿದಂತಿತ್ತು, ಆ ನಾಲ್ಕು ಒಂದೇ ಮಾದರಿಯಾಗಿದ್ದವು.
11ಅವು ಹೊರಳುವಾಗ ನಾಲ್ಕು ಕಡೆಗಳಲ್ಲಿ ಯಾವ ಕಡೆಗಾದರೂ ಹೊರಳುತ್ತಿದ್ದವು, ಓರೆಯಾಗಿ ಹೊರಳುತ್ತಿರಲಿಲ್ಲ; ಎದುರುಮುಖವಾಗಿ ಹೋಗುತ್ತಿದ್ದವೇ ಹೊರತು ಓರೆಯಾಗಿ ಹೋಗುತ್ತಿರಲಿಲ್ಲ.
12ಕೆರೂಬಿಗಳ ಬೆನ್ನು, ಕೈ, ರೆಕ್ಕೆ, ಅಂತು ಸರ್ವಾಂಗಗಳಲ್ಲಿಯೂ ಮತ್ತು ಚಕ್ರಗಳಲ್ಲಿಯೂ ಕಣ್ಣುಗಳು ಸುತ್ತಲೂ ತುಂಬಿದ್ದವು; ನಾಲ್ಕು ಕೆರೂಬಿಗಳಲ್ಲಿ ಒಂದೊಂದಕ್ಕೂ ಒಂದೊಂದು ಚಕ್ರವಿತ್ತು.
13ನಾನು ಕೇಳಿದಂತೆ ಆ ಚಕ್ರಗಳ ಹೆಸರು ಗರಗರಗಾಲಿ ಎಂಬುದೇ.
14ಒಂದೊಂದು ಕೆರೂಬಿಗೆ ನಾಲ್ಕು ನಾಲ್ಕು ಮುಖಗಳಿದ್ದವು; ಮೊದಲನೆಯದು ಕೆರೂಬಿಯದು, ಎರಡನೆಯದು ಮನುಷ್ಯನದು, ಮೂರನೆಯದು ಸಿಂಹದ್ದು, ನಾಲ್ಕನೆಯದು ಗರುಡಪಕ್ಷಿಯದು.
15ಆ ಕೆರೂಬಿಗಳು ಮೇಲಕ್ಕೆ ಏರಿದವು; ನಾನು ಕೆಬಾರ್ ನದಿಯ ಹತ್ತಿರ ನೋಡಿದ ಜೀವಿಗಳು ಇವೇ.
16ಕೆರೂಬಿಗಳು ಮುಂದೆ ಹೋಗುವಾಗ ಚಕ್ರಗಳೂ ಅವುಗಳ ಪಕ್ಕದಲ್ಲಿ ಹೋಗುತ್ತಿದ್ದವು; ಕೆರೂಬಿಗಳು ನೆಲದಿಂದ ಮೇಲಕ್ಕೆ ಏರಬೇಕೆಂದು ರೆಕ್ಕೆಗಳನ್ನು ಹರಡಿಕೊಂಡಾಗ ಚಕ್ರಗಳೂ ಓರೆಯಾಗದೆ ಅವುಗಳ ಸಂಗಡಲೇ ಏರಿದವು.
17ಜೀವಿಗಳ ಆತ್ಮವು ಚಕ್ರಗಳಲ್ಲಿಯೂ ಇದ್ದ ಕಾರಣ, ಅವು ನಿಂತುಹೋದಾಗ ಇವೂ ನಿಂತುಹೋದವು, ಅವು ಏರಿದಾಗ ಇವೂ ಅವುಗಳ ಜೊತೆಯಲ್ಲೇ ಏರಿದವು.
18ಬಳಿಕ ಯೆಹೋವನ ತೇಜಸ್ಸು ದೇವಾಲಯದ ಹೊಸ್ತಿಲನ್ನು ಬಿಟ್ಟು ಕೆರೂಬಿಗಳ ಮೇಲೆ ನಿಂತಿತು.
19ಆಗ ನನ್ನ ಕಣ್ಣೆದುರಿಗೆ ಕೆರೂಬಿಗಳು ರೆಕ್ಕೆಗಳನ್ನು ಹರಡಿಕೊಂಡು ಚಕ್ರಸಮೇತವಾಗಿ ನೆಲದಿಂದ ಏರಿ ಹೊರಟು ಯೆಹೋವನ ಆಲಯದ ಪೂರ್ವ ಬಾಗಿಲಿನ ಮುಂದೆ ನಿಂತವು, ಅವುಗಳ ಮೇಲ್ಗಡೆ ಇಸ್ರಾಯೇಲಿನ ದೇವರ ತೇಜಸ್ಸು ನೆಲಸಿತ್ತು.
20ಇಸ್ರಾಯೇಲಿನ ದೇವರ ವಾಹನವಾಗಿ ಕೆಬಾರ್ ನದಿಯ ಹತ್ತಿರ ನನಗೆ ಕಾಣಿಸಿದ ಆ ಜೀವಿಗಳು ಇವೇ; ಅವು ಕೆರೂಬಿಗಳೆಂದು ಈಗ ನನಗೆ ತಿಳಿದುಬಂತು.
21ಒಂದೊಂದಕ್ಕೆ ನಾಲ್ಕು ನಾಲ್ಕು ಮುಖಗಳೂ, ನಾಲ್ಕು ನಾಲ್ಕು ರೆಕ್ಕೆಗಳೂ ಇದ್ದವು; ಅವುಗಳ ರೆಕ್ಕೆಗಳ ಕೆಳಗೆ ಮನುಷ್ಯ ಹಸ್ತದಂಥ ಹಸ್ತಗಳು ಇದ್ದವು.
22ಅವುಗಳ ಮುಖಗಳು ಕೆಬಾರ್ ನದಿಯ ಹತ್ತಿರ ನಾನು ಕಂಡ ಮುಖಗಳಂತೆ ನನಗೆ ಕಂಡುಬಂದವು, ಅವು ಆ ಮುಖಗಳೇ; ಪ್ರತಿಯೊಂದು ಜೀವಿಯು ನೇರವಾಗಿಯೇ ಹೋಗುತ್ತಿದ್ದವು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath