ವಿಮೋಚನಕಾಂಡ 4
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಅದಕ್ಕೆ ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ಯೆಹೋವನು ನಿನಗೆ ಕಾಣಿಸಿಕೊಂಡೇ ಇಲ್ಲ ಎಂದು ಹೇಳಬಹುದು?” ಎಂದನು.
2ಅದಕ್ಕೆ ಯೆಹೋವನು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದನು. ಅವನು, ಇದು “ಇದು ಒಂದು ಕೋಲು” ಅಂದನು.
3ಯೆಹೋವನು ಅವನಿಗೆ, “ಅದನ್ನು ನೆಲದ ಮೇಲೆ ಹಾಕು” ಎಂದನು. ಅವನು ನೆಲದಲ್ಲಿ ಹಾಕುತ್ತಲೇ ಅದು ಹಾವಾಯಿತು! ಮೋಶೆ ಅದಕ್ಕೆ ಭಯಪಟ್ಟು ಓಡಿಹೋದನು.
4ಯೆಹೋವನು ಮೋಶೆಗೆ, “ನಿನ್ನ ಕೈಚಾಚಿ ಅದರ ಬಾಲವನ್ನು ಹಿಡಿ” ಎಂದು ಹೇಳಿದನು. ಅವನು ಅದನ್ನು ಹಿಡಿದ ಕೂಡಲೇ ಅದು ಕೋಲಾಯಿತು.
5ಆಗ ಯೆಹೋವನು ಅವನಿಗೆ, “ಇದರಿಂದ ಅವರು ತಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರಾಗಿರುವ ಯೆಹೋವನು, ನಿನಗೆ ಕಾಣಿಸಿಕೊಂಡಿರುವುದು ನಿಜ ಎಂದು ನಂಬುವರು” ಎಂದು ಹೇಳಿದನು.
6ಯೆಹೋವನು ತಿರುಗಿ ಅವನಿಗೆ, “ನಿನ್ನ ಕೈಯನ್ನು ಎದೆಯಭಾಗದೊಳಗೆ ಇಟ್ಟುಕೋ” ಎಂದು ಹೇಳಿದನು. ಅವನು ಹಾಗೆ ಇಟ್ಟುಕೊಂಡು ಹೊರಗೆ ತೆಗೆಯಲು ಅವನ ಕೈ ಕುಷ್ಠ ಹತ್ತಿ ಹಿಮದಂತೆ ಬೆಳ್ಳಗಾಗಿತ್ತು.
7ಯೆಹೋವನು ಅವನಿಗೆ ನಿನ್ನ ಕೈಯನ್ನು ತಿರುಗಿ ಎದೆಯಭಾಗದೊಳಗೆ “ಸೇರಿಸು” ಎಂದು ಹೇಳಿದನು. ಅವನು ಅದನ್ನು ತಿರುಗಿ ಎದೆಯಭಾಗದೊಳಗೆ ಸೇರಿಸಿ ತೆಗೆದು ನೋಡಿದಾಗ ಅದು ಉಳಿದ ದೇಹದಂತೆ ಆಗಿತ್ತು.
8ಆಗ ಯೆಹೋವನು ಅವನಿಗೆ, “ಅವರು ನಿನ್ನನ್ನು ನಂಬದೆ, ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ತಿರಸ್ಕರಿಸಿದರೂ, ಎರಡನೆಯ ಸೂಚಕಕಾರ್ಯವನ್ನು ನಂಬುವರು.
9ಆ ಎರಡು ಸೂಚಕಕಾರ್ಯಗಳನ್ನೂ, ಅವರು ನಂಬದೆಯೂ, ನಿನ್ನ ಮಾತನ್ನು ಕೇಳದೆಯೂ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದುಕೊಂಡು ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ಒಣಗಿದ ನೆಲದಲ್ಲಿ ಸುರಿದ ನೀರು ರಕ್ತವಾಗುವುದು” ಎಂದು ಹೇಳಿದನು.
10ಆಗ ಮೋಶೆಯು ಯೆಹೋವನಿಗೆ, “ಕರ್ತನೇ, ನಾನು ಮೊದಲಿನಿಂದಲೂ, ನೀನು ನಿನ್ನ ದಾಸನ ಸಂಗಡ ಮಾತನಾಡಿದ ಮೇಲೆಯೂ ನಾನು ವಾಕ್ಚಾತುರ್ಯವಿಲ್ಲದವನು. ನಾನು ತೊದಲುವವನಾಗಿದ್ದು ನನ್ನ ನಾಲಿಗೆಯೂ ಮಂದವಾಗಿವೆ” ಎಂದು ಹೇಳಿದನು.
11ಅದಕ್ಕೆ ಯೆಹೋವನು ಅವನಿಗೆ, “ಮನುಷ್ಯರಿಗೆ ಬಾಯಿಕೊಟ್ಟವನು ಯಾರು? ಒಬ್ಬನನ್ನು ಮೂಕನಾಗಿ, ಕಿವುಡನಾಗಿ, ದೃಷ್ಠಿಯುಳ್ಳವನಾಗಿ ಹಾಗೂ ಕುರುಡನಾಗಿ ಉಂಟುಮಾಡಿದವನಾರು? ಯೆಹೋವನಾದ ನಾನೇ ಅಲ್ಲವೇ?
12ಹಾಗಾದರೆ ಈಗಲೇ ನೀನು ಹೊರಡು, ನಾನು ನಿನ್ನಗೆ ಮಾತನಾಡಲು ಬೇಕಾದ ಸಾಮರ್ಥ್ಯವನ್ನು ಕೊಡುತ್ತಾ, ನೀನು ಮಾತನಾಡಬೇಕಾದದ್ದನ್ನು ನಿನಗೆ ಬೋಧಿಸುವೆನು” ಎಂದು ಹೇಳಿದನು.
13ಅದಕ್ಕೆ ಮೋಶೆಯು, “ಕರ್ತನೇ, ದಯವಿಟ್ಟು ನೀನು ಬೇರೊಬ್ಬನನ್ನು ಕಳುಹಿಸಬೇಕು” ಎಂದನು.
14ಆಗ ಯೆಹೋವನು ಮೋಶೆಯ ಮೇಲೆ ಕೋಪಗೊಂಡು ಅವನಿಗೆ, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲವನೆಂದು ನನಗೆ ತಿಳಿದಿದೆ. ಅವನೇ ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ನೋಡಿದಾಗ ಅವನು ತನ್ನ ಹೃದಯದಲ್ಲಿ ಸಂತೋಷಿಸುವನು.
15ನೀನು ಅವನ ಸಂಗಡ ಮಾತನಾಡಿ ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಿಕೊಡು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀವು ಮಾಡಬೇಕಾದದ್ದನ್ನು ಬೋಧಿಸುವೆನು.
16ಅವನು ನಿನಗೆ ಬದಲಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಂತಿರುವನು. ನೀನು ಅವನಿಗೆ ದೇವರಂತಿರುವಿ.
17ಇದಲ್ಲದೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಹೋಗಬೇಕು. ಇದರಿಂದಲೇ ಆ ಸೂಚಕಕಾರ್ಯಗಳನ್ನು ಮಾಡುವಿ” ಅಂದನು.
18ಆಗ ಮೋಶೆ ತನ್ನ ಮಾವನಾದ ಇತ್ರೋನನ ಬಳಿಗೆ ಹಿಂದಿರುಗಿ ಬಂದು ಅವನಿಗೆ, “ನಾನು ಐಗುಪ್ತ ದೇಶದಲ್ಲಿರುವ ನನ್ನ ಸಹೋದರರ ಬಳಿಗೆ ಹಿಂತಿರುಗಿ ಹೋಗಿ ಅವರು ಜೀವದಿಂದ ಇದ್ದಾರೋ ಇಲ್ಲವೋ ಎಂದು ಹೋಗಿ ನೋಡುವೆನು” ಎಂದನು. ಇತ್ರೋನನು ಮೋಶೆಗೆ, “ನೀನು ಸಮಾಧಾನದಿಂದ ಹೋಗು” ಅಂದನು.
19ಯೆಹೋವನು ಮಿದ್ಯಾನಿನಲ್ಲಿ ಮೋಶೆಗೆ, ನೀನು ಐಗುಪ್ತ ದೇಶಕ್ಕೆ ಹಿಂತಿರುಗಿ ಹೋಗು. ನಿನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದವರೆಲ್ಲರೂ ಸತ್ತು ಹೋದರು ಎಂದನು.
20ಮೋಶೆ ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕತ್ತೆಯ ಮೇಲೆ ಕುಳ್ಳಿರಿಸಿ ಅವರನ್ನು ಕರೆದುಕೊಂಡು ಐಗುಪ್ತ ದೇಶಕ್ಕೆ ಹೊರಟುಹೋದನು. ಜೊತೆಯಲ್ಲಿ ಅವನು ದೇವದಂಡವನ್ನು ಕೈಯಲ್ಲಿ ತೆಗೆದುಕೊಂಡನು.
21ಯೆಹೋವನು ಮೋಶೆಗೆ ಇಂತೆಂದನು, “ನೀನು ಐಗುಪ್ತ ದೇಶಕ್ಕೆ ಹಿಂತಿರುಗಿ ಬಂದಾಗ ನಾನು ನಿನ್ನ ಕೈಯಿಂದ ಮಾಡಿದ ಮಹತ್ಕಾರ್ಯಗಳನ್ನೆಲ್ಲಾ ಫರೋಹನ ಮುಂದೆ ಮಾಡಬೇಕು. ಆದರೂ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಆದ್ದರಿಂದ ಅವನು ಜನರನ್ನು ಹೋಗಲು ಬಿಡುವುದಿಲ್ಲ.
22ಆಗ ನೀನು ಫರೋಹನಿಗೆ, ‘ಇಸ್ರಾಯೇಲನು ನನ್ನ ಮಗನು, ನನಗೆ ಚೊಚ್ಚಲಮಗನು.
23ಹಾಗೂ ನನ್ನ ಮಗನು ನಿನ್ನ ದೇಶದಿಂದ ಹೊರಟು ನನ್ನನ್ನು ಆರಾಧಿಸುವುದಕ್ಕೆ ಅವನಿಗೆ ಅಪ್ಪಣೆಕೊಡಬೇಕು. ಅದಕ್ಕೆ ನೀನು ಒಪ್ಪದೇ ಹೋದರೆ, ನಾನು ನಿನಗಿರುವ ಚೊಚ್ಚಲಮಗನನ್ನು ಸಾಯಿಸುವೆನೆಂದು ಯೆಹೋವನು ಹೇಳುತ್ತಾನೆ’” ಎಂದು ತಿಳಿಸಬೇಕು.
24ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ, ಛತ್ರದಲ್ಲಿದ್ದಾಗ ಯೆಹೋವನು ಅವನೆದುರಿಗೆ ಬಂದು ಅವನ ಪ್ರಾಣವನ್ನು ತೆಗೆಯಬೇಕೆಂದಿದ್ದನು.
25ಹೀಗಿರುವಾಗ ಚಿಪ್ಪೋರಳು ಕಲ್ಲಿನ ಚೂರಿಯಿಂದ ತನ್ನ ಮಗನಿಗೆ ಸುನ್ನತಿ ಮಾಡಿ ಅದನ್ನು ಮೋಶೆಯ ಪಾದಗಳಿಗೆ ಮುಟ್ಟಿಸಿದಳು. ನಂತರ ಅವಳು, “ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂದಳು.
26ಆಗ ಯೆಹೋವನು ಅವನನ್ನು ಉಳಿಸಿದನು. ಆಗ ಅವಳು, “ಸುನ್ನತಿಯ ನಿಮಿತ್ತವೇ ನೀನು ನನಗೆ ರಕ್ತಧಾರೆಯಿಂದಾದ ಮದಲಿಂಗನು” ಎಂಬ ಮಾತನ್ನು ಹೇಳಿದಳು.
27ಇದಲ್ಲದೆ ಯೆಹೋವನು ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳುವುದಕ್ಕೆ ಮರುಭೂಮಿಗೆ ಹೊರಟುಹೋಗು” ಎಂದನು. ಅವನು ಹೋಗಿ ದೇವರ ಬೆಟ್ಟದಲ್ಲೇ ಅವನನ್ನು ಎದುರುಗೊಂಡು ಮುದ್ದಿಟ್ಟನು.
28ಆಗ ಮೋಶೆಯು ಆರೋನನಿಗೆ, ತನ್ನನ್ನು ಕಳುಹಿಸಿದ ಯೆಹೋವನ ಎಲ್ಲಾ ಮಾತುಗಳನ್ನೂ, ತನಗೆ ಆಜ್ಞಾಪಿಸಿದ ಸೂಚಕಕಾರ್ಯಗಳನ್ನೂ, ತಾನು ಮಾಡಿದವುಗಳನ್ನೆಲ್ಲಾ ಆರೋನನಿಗೆ ತಿಳಿಸಿದನು.
29ತರುವಾಯ ಮೋಶೆ ಮತ್ತು ಆರೋನರು ಹೋಗಿ ಇಸ್ರಾಯೇಲ್ಯರ ಹಿರಿಯರನ್ನೆಲ್ಲಾ ಒಟ್ಟಿಗೆ ಸೇರಿಸಿದರು.
30ಯೆಹೋವನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ತಿಳಿಸಿ ಜನರ ಕಣ್ಣುಗಳ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು.
31ಜನರು ನಂಬಿದರು. ಯೆಹೋವನು ಇಸ್ರಾಯೇಲರನ್ನು ಕಟಾಕ್ಷಿಸಿ ತಮ್ಮ ದುರವಸ್ಥೆಯನ್ನು ಮನಸ್ಸಿಗೆ ತಂದುಕೊಂಡನೆಂಬುದನ್ನು, ಇಸ್ರಾಯೇಲರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath