ಕ್ರಿಶ್ಚಿಯನ್ ಧರ್ಮ
ಹಿಂದೆ

ವಿಮೋಚನಕಾಂಡ 40

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಗ ಯೆಹೋವನು ಮೋಶೆಗೆ,

2“ಮೊದಲನೆಯ ತಿಂಗಳಿನ ಪ್ರಥಮ ದಿನದಲ್ಲಿ ದೇವದರ್ಶನದ ಗುಡಾರವನ್ನು ತೆರೆಯಬೇಕು.

3ಆಜ್ಞಾಶಾಸನಗಳ ಮಂಜೂಷವನ್ನು ಅದರಲ್ಲಿ ಇಟ್ಟು ಆ ಮಂಜೂಷವನ್ನು ಪರದೆಯಿಂದ ಮರೆಮಾಡಬೇಕು.

4ಆ ಮೇಲೆ ಮೇಜನ್ನು ಒಳಗೆ ತಂದು ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು; ದೀಪಸ್ತಂಭವನ್ನು ಒಳಗೆ ತಂದು ಅದರ ಹಣತೆಗಳನ್ನು ಸರಿಯಾಗಿ ಇಡಬೇಕು.

5ಆಜ್ಞಾಶಾಸನಗಳ ಮಂಜೂಷದ ಎದುರಾಗಿ ಚಿನ್ನದ ಧೂಪವೇದಿಯನ್ನು ಇಟ್ಟು ಗುಡಾರದ ಬಾಗಿಲಿನ ಪರದೆಯನ್ನು ಕಟ್ಟಬೇಕು.

6ದೇವದರ್ಶನ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇರಿಸಬೇಕು.

7ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ದೊಡ್ಡ ತೊಟ್ಟಿಯೊಂದನ್ನು ಇಟ್ಟು ಅದರಲ್ಲಿ ನೀರನ್ನು ತುಂಬಿಸಬೇಕು.

8ಅಂಗಳದ ಸುತ್ತಲಿನ ಆವರಣವನ್ನು ತೆರೆದು, ಅಂಗಳದ ಬಾಗಿಲಿಗೆ ಪರದೆಯನ್ನು ತೂಗಿಬಿಡಬೇಕು.

9“ನೀನು ಅಭಿಷೇಕತೈಲವನ್ನು ತೆಗೆದುಕೊಂಡು ಗುಡಾರವನ್ನೂ ಅದರಲ್ಲಿರುವುದೆಲ್ಲವನ್ನೂ ಅದರ ಎಲ್ಲಾ ಉಪಕರಣಗಳನ್ನೂ ಅಭಿಷೇಕಿಸಿ ನನಗಾಗಿ ಪ್ರತಿಷ್ಠಿಸಬೇಕು; ಅಂದಿನಿಂದ ಅದು ಪರಿಶುದ್ಧವಾಗಿರುವುದು.

10ಯಜ್ಞವೇದಿಯನ್ನೂ ಅದರ ಉಪಕರಣಗಳನ್ನೂ ಅಭಿಷೇಕಿಸಿ ಸರ್ವಾಂಗಹೋಮ ಯಜ್ಞವೇದಿಯನ್ನು ಪ್ರತಿಷ್ಠಿಸಬೇಕು; ಆ ಯಜ್ಞವೇದಿ ಅತ್ಯಂತ ಪರಿಶುದ್ಧವಾಗಿರಬೇಕು.

11ನೀನು ತಾಮ್ರದ ಬೋಗುಣಿಯನ್ನೂ ಅದರ ಪೀಠವನ್ನೂ ಅಭಿಷೇಕಿಸಿ ಪ್ರತಿಷ್ಠಿಸಬೇಕು.

12“ಅದಲ್ಲದೆ ಆರೋನನನ್ನೂ ಮತ್ತು ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಹತ್ತಿರಕ್ಕೆ ಬರಮಾಡಿ

13ಆರೋನನು ನನಗೆ ಯಾಜಕನಾಗುವಂತೆ ಅವನಿಗೆ ಪವಿತ್ರವಾದ ದೀಕ್ಷಾವಸ್ತ್ರಗಳನ್ನು ತೊಡಿಸಿ ಅವನನ್ನು ಅಭಿಷೇಕಿಸಿ ಪ್ರತಿಷ್ಠಿಸಬೇಕು.

14ಆ ನಂತರ ನೀನು ಅವನ ಮಕ್ಕಳನ್ನು ಬರಮಾಡಿ

15ಅವರಿಗೆ ಅಂಗಿಗಳನ್ನು ತೊಡಿಸಿ ಅವರು ನನಗೋಸ್ಕರ ಯಾಜಕರಾಗುವುದಕ್ಕಾಗಿ ನೀನು ಅವರ ತಂದೆಯನ್ನು ಅಭಿಷೇಕಿಸಿದಂತೆಯೇ ಅವರನ್ನೂ ಅಭಿಷೇಕಿಸಬೇಕು. ಈ ಅಭಿಷೇಕದಿಂದ ಯಾಜಕತ್ವವು ಅವರಿಗೂ ಅವರ ಸಂತತಿಯವರಿಗೂ ಶಾಶ್ವತವಾಗಿರುವುದು” ಎಂದು ಹೇಳಿದನು.

16ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಎಲ್ಲವನ್ನು ಮಾಡಿದನು.

17ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಪ್ರಥಮದಿನದಲ್ಲಿ ಮೋಶೆ ಗುಡಾರವನ್ನು ತೆರೆದನು.

18ಮೋಶೆಯು ಗುಡಾರವನ್ನು ತೆರೆದು ಅದಕ್ಕೆ ಮೆಟ್ಟುವಕಲ್ಲುಗಳನ್ನು ಹಾಕಿ ಚೌಕಟ್ಟುಗಳನ್ನು ನಿಲ್ಲಿಸಿ ಅಗುಳಿಗಳನ್ನು ಕೊಟ್ಟು ಕಂಬಗಳನ್ನು ನಿಲ್ಲಿಸಿದನು.

19ಗುಡಾರದ ಮೇಲೆ ಡೇರೆಯ ಬಟ್ಟೆಯನ್ನು ಹಾಸಿ ಆ ಡೇರೆಗೆ ಮೇಲ್ಹೊದಿಕೆಯನ್ನು ಹಾಕಿ ಅದನ್ನು ಮರೆಮಾಡಿದನು. ಯೆಹೋವನು ಆಜ್ಞಾಪಿಸಿದಂತೆಯೇ ಮೋಶೆ ಅದನ್ನೆಲ್ಲಾ ಮಾಡಿದನು.

20ಅವನು ಆಜ್ಞಾಶಾಸನಗಳನ್ನು ಮಂಜೂಷದಲ್ಲಿಟ್ಟು ಮಂಜೂಷಕ್ಕೆ ಕೋಲುಗಳನ್ನು ಹಾಕಿ ಕೃಪಾಸನವನ್ನು ಇರಿಸಿದನು.

21ಮೋಶೆಯು ಮಂಜೂಷವನ್ನು ಗುಡಾರದೊಳಕ್ಕೆ ತಂದು, ಅದರ ಮುಂದೆ ಪರದೆಯನ್ನು ಇರಿಸಿ ಯೆಹೋವನು ಆಜ್ಞಾಪಿಸಿದಂತೆಯೇ ಆಜ್ಞಾಶಾಸನಗಳ ಮಂಜೂಷವನ್ನು ಮರೆಮಾಡಿದನು.

22ಮೋಶೆ ದೇವದರ್ಶನದ ಗುಡಾರದೊಳಗೆ ಉತ್ತರ ಭಾಗದಲ್ಲಿ ತೆರೆಯ ಹೊರಗಡೆ ಮೇಜನ್ನು ಇರಿಸಿದನು.

23ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆ ಮೇಜಿನ ಮೇಲೆ ರೊಟ್ಟಿಗಳನ್ನು ಕ್ರಮವಾಗಿ ಯೆಹೋವನ ಸನ್ನಿಧಿಯಲ್ಲಿ ಇರಿಸಿದನು.

24ಅವನು ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇರಿಸಿದನು.

25ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆ, ಅದರ ಹಣತೆಗಳನ್ನು ಯೆಹೋವನ ಸನ್ನಿಧಿಯಲ್ಲಿ ಕ್ರಮವಾಗಿ ಇರಿಸಿದನು.

26ಮತ್ತು ಅವನು ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ತೆರೆಯ ಎದುರಿಗೆ ಇರಿಸಿದನು.

27ಯೆಹೋವನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ, ಅದರ ಮೇಲೆ ಪರಿಮಳ ದ್ರವ್ಯಗಳ ಧೂಪವನ್ನು ಹಾಕಿದನು.

28ಅವನು ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಿದನು.

29ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಸರ್ವಾಂಗಹೋಮ ಯಜ್ಞವೇದಿಯನ್ನು ಇಟ್ಟು ಅದರ ಮೇಲೆ ಸರ್ವಾಂಗಹೋಮವನ್ನು ಮತ್ತು ಧಾನ್ಯಸಮರ್ಪಣೆಯನ್ನೂ ಮಾಡಿದನು.

30ಯೆಹೋವನು ಆಜ್ಞಾಪಿಸಿದಂತೆ ಮೋಶೆ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ನೀರಿನ ತೊಟ್ಟಿಯನ್ನು ಇರಿಸಿ ತೊಳೆದುಕೊಳ್ಳುವುದಕ್ಕಾಗಿ ಅದರಲ್ಲಿ ನೀರು ತುಂಬಿಸಿದನು.

31ಮೋಶೆಯು, ಆರೋನನು ಮತ್ತು ಅವನ ಮಕ್ಕಳೂ ಅದರಲ್ಲಿ ಕೈಕಾಲು ತೊಳೆದುಕೊಂಡರು.

32ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗಲೂ, ಯಜ್ಞವೇದಿಯ ಹತ್ತಿರ ಬರುವಾಗಲೂ ಯೆಹೋವನು ಆಜ್ಞಾಪಿಸಿದಂತೆ ಕೈಕಾಲುಗಳನ್ನು ತೊಳೆದುಕೊಳ್ಳುತ್ತಿದ್ದರು.

33ಮೋಶೆಯು ಗುಡಾರಕ್ಕೂ ಯಜ್ಞವೇದಿಗೂ ಸುತ್ತಲು ಅಂಗಳದ ಆವರಣವನ್ನು ತೆರೆದು ಅಂಗಳದ ಬಾಗಿಲಿಗೆ ಪರದೆಯನ್ನು ಹಾಕಿದನು. ಈ ಪ್ರಕಾರ ಮೋಶೆ ಆ ಕೆಲಸವನ್ನೆಲ್ಲಾ ಮುಗಿಸಿದನು.

34ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿತು; ಯೆಹೋವನ ತೇಜಸ್ಸು ಗುಡಾರವನ್ನು ತುಂಬಿಕೊಂಡಿತು.

35ಮೇಘವು ದೇವದರ್ಶನದ ಗುಡಾರದ ಮೇಲೆ ನೆಲೆಗೊಂಡಿದ್ದು ಯೆಹೋವನ ತೇಜಸ್ಸು ಪರಿಶುದ್ಧ ನಿವಾಸದ ತುಂಬಾ ಅವರಿಸಿ ಯೆಹೋವನ ಮಹಿಮೆಯು ಗುಡಾರದೊಳಗೆ ತುಂಬಿಕೊಂಡ್ದಿದರಿಂದಲೂ ಮೋಶೆಯು ಗುಡಾರದ ಒಳಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ.

36ಆ ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ ಇಸ್ರಾಯೇಲರು ಮುಂದೆ ಪ್ರಯಾಣ ಮಾಡುತ್ತಿದ್ದರು.

37ಆ ಮೇಘವು ಮೇಲಕ್ಕೆ ಹೋಗದೇ ಇದ್ದು ಅದು ಹೊರಡುವ ತನಕ ಅವರು ಪ್ರಯಾಣ ಮಾಡದೆ ಇರುತ್ತಿದ್ದರು.

38ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿಯೂ ಅವರ ಕಣ್ಣುಗಳ ಮುಂದೆ ಹಗಲು ಹೊತ್ತಿನಲ್ಲಿ ಯೆಹೋವನ ಮೇಘವು ಗುಡಾರದ ಮೇಲೆಯೂ ಇರುತ್ತಿತ್ತು; ರಾತ್ರಿ ವೇಳೆಯಲ್ಲಿ ಆ ಮೇಘದೊಳಗೆ ಅಗ್ನಿಯು ಇರುತ್ತಿತ್ತು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath