ಕ್ರಿಶ್ಚಿಯನ್ ಧರ್ಮ
ಹಿಂದೆ

ವಿಮೋಚನಕಾಂಡ 36

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1“ಬೆಚಲೇಲನು ಹಾಗೂ ಒಹೋಲೀಯಾಬನು ಮತ್ತು ಬೇರೆ ಜ್ಞಾನಿಗಳೆಲ್ಲರು ಅಂದರೆ ಯೆಹೋವನಿಂದ ಜ್ಞಾನವಿವೇಕಗಳನ್ನು ಹೊಂದಿ ಪವಿತ್ರ ದೇವಮಂದಿರವನ್ನು ನಿರ್ಮಾಣ ಮಾಡುವ ಕೆಲಸಕ್ಕಾಗಿ ಬೇಕಾದ ಸಕಲವಿಧವಾದ ವಸ್ತುಗಳನ್ನು ಮಾಡುವ ಕ್ರಮ ತಿಳಿದಿರುವವರು, ಯೆಹೋವನು ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನೂ ಮಾಡುವರು” ಅಂದನು.

2ಬೆಚಲೇಲನನ್ನೂ ಒಹೋಲೀಯಾಬನನ್ನೂ ಮತ್ತು ಯಾರ ಹೃದಯದಲ್ಲಿ ಯೆಹೋವನು ಜ್ಞಾನವನ್ನು ಕೊಟ್ಟಿದ್ದನೋ, ಯಾರಾರಿಗೆ ಈ ಕೆಲಸಮಾಡುವುದಕ್ಕೆ ಹೃದಯದಲ್ಲಿ ಪ್ರೇರಣೆಯಾಯಿತೋ ಅಂಥ ಜ್ಞಾನಿಗಳೆಲ್ಲರನ್ನೂ ಮೋಶೆಯು ತನ್ನ ಹತ್ತಿರಕ್ಕೆ ಕರೆಯಿಸಿದನು.

3ಅವರು ದೇವಮಂದಿರವನ್ನು ನಿರ್ಮಿಸುವ ಕೆಲಸಕ್ಕೆ ಇಸ್ರಾಯೇಲ್ಯರು ತಂದಿದ್ದ ಕಾಣಿಕೆಗಳನ್ನೆಲ್ಲಾ ಮೋಶೆಯಿಂದ ಪಡೆದುಕೊಂಡರು. ಇಸ್ರಾಯೇಲರು ಪ್ರತಿದಿನ ಹೊತ್ತಾರೆಯಲ್ಲಿ ಮೋಶೆಯ ಬಳಿಗೆ ಬಂದು ಕಾಣಿಕೆಗಳನ್ನು ಮನಃಪೂರ್ವಕವಾಗಿ ಕೊಡುತ್ತಿದ್ದರು.

4ಆಗ ದೇವಮಂದಿರದ ಕೆಲಸವನ್ನು ಮಾಡುತ್ತಿದ್ದ ಆ ಜ್ಞಾನಿಗಳೆಲ್ಲರು,

5ತಮ್ಮ ತಮ್ಮ ಕೆಲಸವನ್ನು ಬಿಟ್ಟು ಮೋಶೆಯ ಬಳಿಗೆ ಬಂದು ಅವನಿಗೆ, “ಯೆಹೋವನು ಆಜ್ಞಾಪಿಸಿದ ಕೆಲಸಕ್ಕೆ ಬೇಕಾಗಿರುವುದಕ್ಕಿಂತಲೂ ಬಹಳ ಹೆಚ್ಚಾಗಿ ಜನರು ಕಾಣಿಕೆಗಳನ್ನು ತರುತ್ತಿದ್ದಾರೆ ಎಂದು” ಹೇಳಿದರು.

6ಆಗ ಮೋಶೆಯು ಇದನ್ನು ಗಮನಿಸಿ, “ದೇವಮಂದಿರದ ಕೆಲಸಕ್ಕಾಗಿ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಇನ್ನು ಮುಂದೆ ಕಾರ್ಯಗಳನ್ನೂ ಮಾಡಬಾರದು” ಎಂದು ಅಪ್ಪಣೆಮಾಡಿ ಅದನ್ನು ಪಾಳೆಯದಲ್ಲಿ ಪ್ರಕಟಿಸಿದನು. ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.

7ಏಕೆಂದರೆ ಕೆಲಸವನ್ನೆಲ್ಲಾ ಮಾಡುವುದಕ್ಕೆ ಸಾಕಾಗುವುದಕ್ಕಿಂತಲೂ ಹೆಚ್ಚು ಸಾಮಗ್ರಿಗಳಿದ್ದವು.

8ಆ ಕೆಲಸ ಮಾಡುತ್ತಿದ್ದ ಜ್ಞಾನಿಗಳೆಲ್ಲರು ಹೊಸೆದ ನಾರಿನ ಹತ್ತು ಪರದೆಗಳಿಂದ ಗುಡಾರವನ್ನು ಮಾಡಿ ಆ ಪರದೆಗಳಲ್ಲಿ ನೀಲಿ, ನೇರಳೆ ಮತ್ತು ಕಡುಗೆಂಪು ವರ್ಣಗಳ ದಾರಗಳಿಂದ ನೇಯ್ಗೆಯವರಂತೆ ಕೆರೂಬಿಗಳನ್ನು ಮಾಡಿ ಅದಕ್ಕೆ ಚಮತ್ಕಾರವಾಗಿ ಕಸೂತಿ ಹಾಕಿ ಮಾಡಿದರು.

9ಪ್ರತಿಯೊಂದು ಪರದೆಯು ಇಪ್ಪತ್ತೆಂಟು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು. ಎಲ್ಲಾ ಪರದೆಗಳು ಸಮಾನ ಅಳತೆಯಲ್ಲಿದ್ದವು.

10ಐದೈದು ಪರದೆಗಳನ್ನು ಒಂದೊಂದಾಗಿ ಜೋಡಿಸಿದರು.

11ಈ ಎರಡು ಜೋಡಣೆಗಳಲ್ಲಿ ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ

12ನೀಲಿ ದಾರದಿಂದ ಕುಣಿಕೆಗಳನ್ನು ಮಾಡಿದರು; ಆ ಕುಣಿಕೆಗಳನ್ನು ಐವತ್ತೈವತ್ತರ ಮೇರೆಗೆ ಒಂದಕ್ಕೊಂದು ಎದುರಾಗಿ ಇರಿಸಿದರು.

13ಅದಲ್ಲದೆ ಐವತ್ತು ಚಿನ್ನದ ಕೊಂಡಿಗಳನ್ನು ಮಾಡಿ ಆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು; ಹೀಗೆ ಅದು ಒಂದೇ ಗುಡಾರ ಆಯಿತು.

14ಬೆಚಲೇಲನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಉಣ್ಣೆಯ ಹನ್ನೊಂದು ಪರದೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದನು.

15ಒಂದೊಂದು ಪರದೆಯು ಮೂವತ್ತು ಮೊಳ ಉದ್ದವಾಗಿಯೂ ನಾಲ್ಕು ಮೊಳ ಅಗಲವಾಗಿಯೂ ಇದ್ದವು; ಎಲ್ಲಾ ಪರದೆಗಳೂ ಒಂದೇ ಅಳತೆಯಾಗಿದ್ದವು.

16ಐದು ಪರದೆಗಳನ್ನು ಒಂದಾಗಿ ಜೋಡಿಸಿ ಮಿಕ್ಕ ಆರು ಪರದೆಗಳನ್ನೂ ಒಂದಾಗಿ ಜೋಡಿಸಿದರು.

17ಒಂದೊಂದರ ಕೊನೆಯ ಪರದೆಯ ಅಂಚಿನಲ್ಲಿ ಐವತ್ತೈವತ್ತು ಕುಣಿಕೆಗಳನ್ನು ಮಾಡಿದರು.

18ಒಂದೇ ಡೇರೆಯಾಗುವಂತೆ ಸಮಸ್ತವನ್ನು ಜೋಡಿಸುವುದಕ್ಕಾಗಿ ತಾಮ್ರದ ಐವತ್ತು ಕೊಂಡಿಗಳನ್ನು ಮಾಡಿದರು.

19ಅದಲ್ಲದೆ ಹದಮಾಡಿರುವ ಟಗರಿನ ತೊಗಲುಗಳಿಂದ ಒಂದು ಮೇಲ್ಹೊದಿಕೆಯನ್ನೂ, ಕಡಲಪ್ರಾಣಿಯ ತೊಗಲುಗಳಿಂದ ಮತ್ತೊಂದು ಮೇಲ್ಹೊದಿಕೆಯನ್ನೂ ಮಾಡಿದರು.

20ಗುಡಾರಕ್ಕೆ ಜಾಲೀಮರದಿಂದ ನೆಟ್ಟಗೆ ನಿಂತಿರುವ ಹಲಗೆಗಳಿಂದ ಚೌಕಟ್ಟುಗಳನ್ನು ಮಾಡಿದರು.

21ಪ್ರತಿಯೊಂದು ಚೌಕಟ್ಟೂ ಹತ್ತು ಮೊಳ ಉದ್ದವಾಗಿಯೂ ಒಂದುವರೆ ಮೊಳ ಅಗಲವಾಗಿಯೂ ಇತ್ತು;

22ಪ್ರತಿಯೊಂದು ಚೌಕಟ್ಟೂ ಅಡ್ಡಪಟ್ಟಿಗಳಿಂದ ಜೋಡಿಸಲ್ಪಟ್ಟ ಎರಡು ನಿಲುವುಪಟ್ಟಿಗಳುಳ್ಳದ್ದಾಗಿತ್ತು; ಗುಡಾರದ ಎಲ್ಲಾ ಚೌಕಟ್ಟುಗಳನ್ನೂ ಹಾಗೆ ಮಾಡಿಸಿದರು.

23ಗುಡಾರದ ದಕ್ಷಿಣದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು;

24ನಲ್ವತ್ತು ಬೆಳ್ಳಿಯ ಗದ್ದಿಗೆಕಲ್ಲುಗಳನ್ನು ಮಾಡಿ ಆ ಇಪ್ಪತ್ತು ಚೌಕಟ್ಟುಗಳ ಕೆಳಗೆ ಇಟ್ಟರು; ಒಂದೊಂದು ಚೌಕಟ್ಟಿನಲ್ಲಿರುವ ಎರಡು ನಿಲುವುಪಟ್ಟಿಗಳ ಕೆಳಗೆ ಒಂದೊಂದು ಗದ್ದಿಗೆಕಲ್ಲನ್ನು ಇಟ್ಟರು.

25ಹಾಗೆಯೇ ಗುಡಾರದ ಉತ್ತರದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು

26ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಗದ್ದಿಗೆಕಲ್ಲುಗಳ ಮೇರೆಗೆ ನಲ್ವತ್ತು ಬೆಳ್ಳಿಯ ಗದ್ದಿಗೆಕಲ್ಲಗಳನ್ನು ಮಾಡಿದರು.

27ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದಿಕ್ಕಿನಲ್ಲಿ ಆರು ಚೌಕಟ್ಟುಗಳನ್ನು ಮಾಡಿದರು.

28ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು.

29ಅವು ಬುಡದಿಂದ ತುದಿಯವರೆಗೂ ಅಂದರೆ ಮೊದಲನೆಯ ಬಳೆಯವರೆಗೂ ಜೋಡಿಸಿದ್ದವು; ಹಾಗೆ ಎರಡು ಮೂಲೆಗಳಿಗೂ ಮಾಡಿದರು.

30ಹೀಗೆ ಎಂಟು ಚೌಕಟ್ಟುಗಳೂ ಮತ್ತು ಪ್ರತಿಯೊಂದು ಚೌಕಟ್ಟಿಗೆ ಎರಡೆರಡು ಬೆಳ್ಳಿಯ ಗದ್ದಿಗೆಕಲ್ಲುಗಳೂ ಒಟ್ಟು ಹದಿನಾರು ಗದ್ದಿಗೆಕಲ್ಲುಗಳಿದ್ದವು.

31ಜಾಲೀಮರದಿಂದ ಅಗುಳಿಗಳನ್ನು ಮಾಡಿದರು.

32ಗುಡಾರದ ಎರಡು ಕಡೆಗಳ ಚೌಕಟ್ಟುಗಳಿಗೂ ಅದರ ಹಿಂದುಗಡೆಯ ಅಂದರೆ ಪಶ್ಚಿಮ ಕಡೆಯ ಚೌಕಟ್ಟುಗಳಿಗೂ ಐದೈದು ಅಗುಳಿಗಳನ್ನು ಮಾಡಿದರು.

33ಚೌಕಟ್ಟುಗಳ ನಟ್ಟನಡುವೆಯಲ್ಲಿರುವ ಅಗುಳಿಯು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ಮುಟ್ಟುವಂತೆ ಮಾಡಿದರು.

34ಆ ಚೌಕಟ್ಟುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಿ ಅವುಗಳಲ್ಲಿ ಆ ಅಗುಳಿಗಳಿಗಾಗಿ ಚಿನ್ನದ ಬಳೆಗಳನ್ನು ಮಾಡಿದರು. ಆ ಅಗುಳಿಗಳನ್ನೂ ಚಿನ್ನದ ತಗಡುಗಳಿಂದ ಹೊದಿಸಿದರು.

35ನಯವಾಗಿ ಹೊಸೆದ ನಾರಿನ ಪರದೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರಗಳಿಂದ ಕೆರೂಬಿಗಳಿಗೆ ಚಮತ್ಕಾರವಾಗಿ ಕಸೂತಿಹಾಕಿ ಒಂದು ತೆರೆಯನ್ನು ಮಾಡಿದರು.

36ಅದಕ್ಕೆ ಜಾಲೀಮರದಿಂದ ನಾಲ್ಕು ಕಂಬಗಳನ್ನು ಮಾಡಿ ಚಿನ್ನದ ತಗಡುಗಳನ್ನು ಹೊದಿಸಿದರು; ಅವುಗಳಿಗೆ ಚಿನ್ನದ ಕೊಂಡಿಗಳನ್ನು ಮಾಡಿ ನಾಲ್ಕು ಬೆಳ್ಳಿಯ ಗದ್ದಿಗೆಕಲ್ಲುಗಳನ್ನು ಎರಕಹೊಯಿಸಿದರು.

37ಡೇರೆಯ ಬಾಗಿಲಿಗೆ ಹುರಿ ನಾರಿನ ಪರದೆಯಲ್ಲಿ ನೀಲಿ, ನೇರಳೆ, ಕಡುಗೆಂಪು ವರ್ಣಗಳುಳ್ಳ ದಾರದಿಂದ ಕಸೂತಿಹಾಕಿ ಪರದೆಯನ್ನು ಮಾಡಿದರು.

38ಆ ಪರದೆಯನ್ನು ತೂಗು ಹಾಕುವುದಕ್ಕಾಗಿ ಐದು ಕಂಬಗಳನ್ನೂ ಅವುಗಳ ಕೊಂಡಿಗಳನ್ನೂ ಮಾಡಿ ಅವುಗಳ ಸುತ್ತಲ ಮೆಟ್ಟಿಲುಗಳಿಗೂ, ಕಟ್ಟುಗಳಿಗೂ ಚಿನ್ನದ ತಗಡುಗಳನ್ನು ಹೊದಿಸಿದರು. ಅವುಗಳ ಐದು ತಳಭಾಗಗಳನ್ನು ತಾಮ್ರದಿಂದ ಮಾಡಿದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath