ವಿಮೋಚನಕಾಂಡ 31
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನು ಮೋಶೆಗೆ ಹೀಗೆಂದನು,
2“ನೋಡು, ನಾನು ಯೆಹೂದ ಕುಲದವನಾದ ಹೂರನ ಮೊಮ್ಮಗನೂ, ಊರಿಯನ ಮಗನೂ ಆಗಿರುವ ಬೆಚಲೇಲನೆಂಬುವನನ್ನು ಹೆಸರು ಹಿಡಿದು ಕರೆದಿದ್ದೇನೆ.
3ಕಲಾತ್ಮಕವಾದ ವಿನ್ಯಾಸಗಳನ್ನು ಮಾಡುವುದಕ್ಕೂ, ಚಿನ್ನ, ಬೆಳ್ಳಿ ಹಾಗು ತಾಮ್ರಗಳಿಂದ ಕೆಲಸ ಮಾಡುವುದಕ್ಕೂ,
4ರತ್ನಗಳನ್ನು ಕೆತ್ತುವುದಕ್ಕೂ, ಮರದಲ್ಲಿ ಕೆತ್ತನೇ ಕೆಲಸಗಳನ್ನು ಮಾಡುವುದಕ್ಕೂ,
5ಅವನಿಗೆ ದೇವರಾತ್ಮವನ್ನು ದಯಪಾಲಿಸಿ, ಅದಕ್ಕೆ ಬೇಕಾದ ಜ್ಞಾನ, ವಿದ್ಯೆ, ವಿವೇಕಗಳನ್ನೂ ಸಕಲ ಶಿಲ್ಪ ಕಲಾಜ್ಞಾನವನ್ನೂ ಅನುಗ್ರಹಿಸಿದ್ದೇನೆ.
6ಅವನೊಂದಿಗೆ ದಾನ್ ಕುಲದವನಾದ ಅಹೀಸಾಮಾಕನ ಮಗನಾದ ಒಹೋಲೀಯಾಬನನ್ನೂ ನೇಮಿಸಿದ್ದೇನೆ. ಅದಲ್ಲದೆ ನಾನು ನಿನಗೆ ಆಜ್ಞಾಪಿಸಿದ್ದೆಲ್ಲವನ್ನೂ ಮಾಡುವುದಕ್ಕೆ ಜ್ಞಾನಿಗಳಾದವರೆಲ್ಲರ ಹೃದಯಗಳಲ್ಲಿ ಜ್ಞಾನವನ್ನುಂಟುಮಾಡಿದ್ದೇನೆ.
7ದೇವದರ್ಶನದ ಗುಡಾರ, ಆಜ್ಞಾಶಾಸನಗಳನ್ನು ಇಟ್ಟಿರುವ ಮಂಜೂಷ ಅದರ ಮೇಲಿರುವ ಕೃಪಾಸನ, ಗುಡಾರದ ಎಲ್ಲಾ ಉಪಕರಣಗಳು,
8ಮೇಜು ಅದರ ಉಪಕರಣಗಳು, ಚೊಕ್ಕ ಬಂಗಾರದ ದೀಪಸ್ತಂಭ ಅದರ ಉಪಕರಣಗಳು,
9ಧೂಪವೇದಿ, ಯಜ್ಞವೇದಿ ಅದರ ಉಪಕರಣಗಳು, ನೀರಿನ ತೊಟ್ಟಿ ಅದರ ಪೀಠ,
10ಅಲಂಕಾರವಾದ ದೀಕ್ಷಾವಸ್ತ್ರಗಳು ಅಂದರೆ ಆರೋನನಿಗೂ ಅವನ ಮಕ್ಕಳಿಗೂ ಬೇಕಾದ ಪವಿತ್ರ ಯಾಜಕವಸ್ತ್ರಗಳು,
11ಅಭಿಷೇಕತೈಲ ಮತ್ತು ಪವಿತ್ರಸ್ಥಾನದ ಸೇವೆಗೆ ಬೇಕಾದ ಪರಿಮಳಧೂಪ ಇವುಗಳನ್ನೆಲ್ಲಾ ನಾನು ನಿನಗೆ ಆಜ್ಞಾಪಿಸಿದಂತೆಯೇ ಅವರು ಮಾಡುವರು.”
12ಯೆಹೋವನು ಮತ್ತೆ ಮೋಶೆಗೆ ಹೀಗೆಂದನು,
13“ನೀನು ಇಸ್ರಾಯೇಲರಿಗೆ ಆಜ್ಞಾಪಿಸಬೇಕಾದದ್ದೇನೆಂದರೆ: ನಾನು ನೇಮಿಸಿದ ಪವಿತ್ರ ಸಬ್ಬತ್ ದಿನಗಳನ್ನು ನೀವು ತಪ್ಪದೇ ಆಚರಿಸಬೇಕು. ನಿಮ್ಮನ್ನು ಶುದ್ಧಿಪಡಿಸುವ ಯೆಹೋವನು ನಾನೇ ಎಂದು ನೀವು ತಿಳಿದುಕೊಳ್ಳುವಂತೆ ಇದೇ ನನಗೂ ನಿಮಗೂ ನಿಮ್ಮ ಸಂತತಿಯವರ ಮಧ್ಯ ಇರುವ ಗುರುತು.
14ಆದಕಾರಣ ನೀವು ಸಬ್ಬತ್ ದಿನವನ್ನು ಪರಿಶುದ್ಧವಾದ ದಿನವೆಂದು ಎಣಿಸಿ ಆಚರಿಸಬೇಕು. ಅದನ್ನು ಅಶುದ್ಧಪಡಿಸುವ ಪ್ರತಿಯೊಬ್ಬನಿಗೆ ಮರಣಶಿಕ್ಷೆಯಾಗಬೇಕು. ಆ ದಿನದಲ್ಲಿ ಯಾವನಾದರೂ ಕೆಲಸವನ್ನು ಮಾಡಿದರೆ ಅವನನ್ನು ಕುಲದಿಂದ ತೆಗೆದುಹಾಕಬೇಕು.
15ಆರು ದಿನಗಳು ಕೆಲಸ ಮಾಡಬೇಕು. ಏಳನೆಯ ದಿನ ಸಂಪೂರ್ಣವಾಗಿ ಕೆಲಸವನ್ನು ನಿಲ್ಲಿಸಬೇಕಾದ ಸಬ್ಬತ್ ದಿನವಾಗಿದೆ. ಅದು ಯೆಹೋವನಿಗೆ ಪರಿಶುದ್ಧವಾದ ದಿನ. ಇಂಥ ಸಬ್ಬತ್ ದಿನದಲ್ಲಿ ಕೆಲಸವೇನಾದರೂ ಮಾಡುವವನಿಗೆ ಮರಣಶಿಕ್ಷೆಯಾಗಬೇಕು.
16ಆದುದರಿಂದ ಇಸ್ರಾಯೇಲರು ಸಬ್ಬತ್ ದಿನವನ್ನು ಆಚರಿಸಬೇಕು. ಈ ಆಚರಣೆಯು ಅವರಿಗೂ, ಅವರ ಸಂತತಿಯವರಿಗೂ ಶಾಶ್ವತವಾದ ನಿಯಮವಾಗಿದೆ.
17ಇದು ನನಗೂ ಇಸ್ರಾಯೇಲರಿಗೂ ನಡುವೆಯಿರುವ ಸದಾಕಾಲದ ಗುರುತು. ಏಕೆಂದರೆ ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನು ಉಂಟುಮಾಡಿ ಏಳನೆಯ ದಿನದಲ್ಲಿ ಕೆಲಸವನ್ನು ಮಾಡದೇ ವಿಶ್ರಮಿಸಿಕೊಂಡನಲ್ಲವೇ?”
18ಯೆಹೋವನು ಸೀನಾಯಿ ಬೆಟ್ಟದಲ್ಲಿ ಮೋಶೆಯ ಸಂಗಡ ಮಾತನಾಡುವುದನ್ನು ಮುಗಿಸಿದ ಮೇಲೆ ಅವನಿಗೆ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟನು. ಅವು ದೇವರ ಕೈಯಿಂದ ಬರೆಯಲ್ಪಟ್ಟ ಶಿಲಾಶಾಸನಗಳಾಗಿವೆ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath