ವಿಮೋಚನಕಾಂಡ 23
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ದುಷ್ಟರೊಂದಿಗೆ ಸೇರಿ ಸುಳ್ಳು ಸಾಕ್ಷಿಯನ್ನು ಹೇಳಬಾರದು.
2ದುಷ್ಟ ಕಾರ್ಯವನ್ನು ಮಾಡುವವರು ಬಹಳಮಂದಿ ಇದ್ದಾರೆ, ಆದಾಗ್ಯೂ ನೀವು ಅವರ ಜೊತೆಯಲ್ಲಿ ಸೇರಬಾರದು. ಬಹು ಮಂದಿಯ ಮಾತಿಗೆ ಒಪ್ಪಿ ನ್ಯಾಯವನ್ನು ಕೆಡಿಸುವ ಸಾಕ್ಷಿಯನ್ನು ಹೇಳಬಾರದು.
3ಇದಲ್ಲದೆ ಬಡವನ ಮೇಲಿನ ಕರುಣೆಯಿಂದ ಪಕ್ಷಪಾತದ ತೀರ್ಮಾನವನ್ನು ಮಾಡಬಾರದು.
4ನಿನ್ನ ವೈರಿಯ ಎತ್ತಾಗಲಿ, ಕತ್ತೆಯಾಗಲಿ ತಪ್ಪಿಸಿಕೊಂಡು ಹೋಗಿರಲಾಗಿ ಅದು ನಿನಗೆ ಸಿಕ್ಕಿದರೆ ಅದನ್ನು ಅವನ ಬಳಿಗೆ ಹೋಗಿ ಒಪ್ಪಿಸಬೇಕು.
5ನಿನ್ನನ್ನು ಹಗೆಮಾಡುವವನ ಕತ್ತೆಯ ಹೊರೆಯ ಕೆಳಗೆ ಬಿದ್ದಿರುವುದನ್ನು ಕಂಡರೆ, ಅದನ್ನು ಎಬ್ಬಿಸುವುದಕ್ಕೆ ಮನಸ್ಸಿಲ್ಲದಿದ್ದರೂ ಅವನಿಗೆ ಸಹಾಯ ಮಾಡಿ ಎಬ್ಬಿಸಲೇಬೇಕು.
6ನಿಮ್ಮಲ್ಲಿರುವ ಬಡವರ ನ್ಯಾಯಕೋರಿ ನಿಮ್ಮ ಬಳಿಗೆ ಬಂದಾಗ ನೀವು ಅನ್ಯಾಯವಾಗಿ ತೀರ್ಮಾನಮಾಡಬಾರದು.
7ಮೋಸದ ಕಾರ್ಯಕ್ಕೆ ದೂರವಾಗಿರಬೇಕು. ನಿರಪರಾಧಿಯೂ, ನೀತಿವಂತನಾಗಿಯೂ ಇರುವ ಮನುಷ್ಯನಿಗೆ ಮರಣದಂಡನೆಯನ್ನು ವಿಧಿಸಲೇಬಾರದು. ಅಂಥ ದುಷ್ಟನಿಗೆ ನಾನು ಶಿಕ್ಷೆಯನ್ನು ವಿಧಿಸದೇ ಬಿಡುವುದಿಲ್ಲ.
8ಲಂಚವನ್ನು ತೆಗೆದುಕೊಳ್ಳಬಾರದು, ಲಂಚವು ಕಣ್ಣುಳ್ಳವರನ್ನು ಕುರುಡರಂತೆ ಮಾಡುತ್ತದೆ, ನಿರಪರಾಧಿಗೆ ದೊರಕಬೇಕಾದ ನ್ಯಾಯವನ್ನು ತಪ್ಪಿಸುತ್ತದೆ.
9ಪರದೇಶದವನಿಗೆ ಉಪದ್ರವವನ್ನು ಕೊಡಬಾರದು. ನೀವೂ ಐಗುಪ್ತದೇಶದಲ್ಲಿ ಪರದೇಶದವರಾಗಿದ್ದೀರಷ್ಟೇ. ಅಂಥವರ ಮನೋವ್ಯಥೆಯನ್ನು ತಿಳಿದವರಾಗಿದ್ದೀರಿ.
10ಆರು ವರ್ಷ ನಿಮ್ಮ ಹೊಲವನ್ನು ಬಿತ್ತನೆಮಾಡಿ ಅದರ ಬೆಳೆಯನ್ನು ತೆಗೆದುಕೊಳ್ಳಿರಿ.
11ಆದರೆ ಏಳನೆಯ ವರ್ಷದಲ್ಲಿ ಆ ಭೂಮಿಯನ್ನು ಉಳದೆ ಬೀಳುಬಿಡಬೇಕು. ನಿಮ್ಮ ದೇಶದ ಬಡವರು ಅದರಲ್ಲಿ ಬೆಳೆಯುವುದನ್ನು ತಿನ್ನಲಿ. ಮಿಕ್ಕದ್ದನ್ನು ಕಾಡುಮೃಗಗಳು ಮೇಯಲಿ. ನಿಮ್ಮ ದ್ರಾಕ್ಷಿತೋಟಗಳ ಮತ್ತು ಎಣ್ಣೇ ಮರಗಳ ತೋಪುಗಳ ವಿಷಯದಲ್ಲಿಯೂ ಇದೇ ರೀತಿಯಲ್ಲಿ ಮಾಡಬೇಕು.
12ಆರು ದಿನಗಳು ನಿಮ್ಮ ಕೆಲಸವನ್ನು ನಡಿಸಿ ಏಳನೆಯ ದಿನದಲ್ಲಿ ಯಾವ ಕೆಲಸವನ್ನು ಮಾಡದೇ ಇರಬೇಕು. ಆ ಹೊತ್ತು ನಿಮ್ಮ ಎತ್ತುಗಳು, ಕತ್ತೆಗಳು, ದಾಸ, ದಾಸಿಯರು, ಪರದೇಶಸ್ಥರು ವಿಶ್ರಮಿಸಿಕೊಳ್ಳಲಿ.
13ನಾನು ನಿಮಗೆ ಹೇಳಿದ್ದನ್ನೆಲ್ಲಾ ಜಾಗರೂಕತೆಯಿಂದ ಕೈಕೊಳ್ಳಬೇಕು. ಅನ್ಯ ದೇವರುಗಳ ಹೆಸರುಗಳನ್ನು ಸ್ಮರಿಸಬಾರದು, ಅವುಗಳನ್ನು ಉಚ್ಚರಿಸಬಾರದು.
14ನೀವು ವರ್ಷಕ್ಕೆ ಮೂರಾವರ್ತಿ ನನಗೆ ಹಬ್ಬಮಾಡಬೇಕು.
15ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕಾದ ಹಬ್ಬ. ನಾನು ನಿಮಗೆ ಆಜ್ಞಾಪಿಸಿದಂತೆ ನೀವು ಚೈತ್ರಮಾಸದಲ್ಲಿ ನೇಮಕವಾದ ಕಾಲದಲ್ಲಿ ಏಳು ದಿನವೂ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಆ ತಿಂಗಳಲ್ಲಿಯೇ ಐಗುಪ್ತ ದೇಶದಿಂದ ಹೊರಟು ಬಂದ ನೆನಪಿಗಾಗಿ ಇದನ್ನು ಆಚರಿಸಬೇಕು. ಕೈಯಲ್ಲಿ ಕಾಣಿಕೆಯಿಲ್ಲದೆ ಬರಿಗೈಯಲ್ಲಿ ನನ್ನ ಸನ್ನಿಧಿಗೆ ಯಾರು ಬರಬಾರದು.
16ಅದಲ್ಲದೆ ನೀವು ಬಿತ್ತಿದ ಹೊಲದಲ್ಲಿ ಪ್ರಥಮಫಲವು ದೊರೆತಾಗ ಸುಗ್ಗಿಯ ಹಬ್ಬವನ್ನು ಆಚರಿಸಬೇಕು. ಹೊಲ ತೋಟಗಳ ಬೆಳೆಯನ್ನೂ ಕೂಡಿಸುವಾಗ ಅಂದರೆ ವರ್ಷದ ಕೊನೆಯಲ್ಲಿ ಸುಗ್ಗಿ ಹಬ್ಬವನ್ನು ಆಚರಿಸಬೇಕು.
17ವರ್ಷಕ್ಕೆ ಮೂರಾವರ್ತಿ ನಿಮ್ಮಲ್ಲಿರುವ ಗಂಡಸರೆಲ್ಲರೂ ಕರ್ತನಾದ ಯೆಹೋವನ ಸನ್ನಿಧಿಗೆ ಒಟ್ಟಾಗಿ ಸೇರಿ ಬರಬೇಕು.
18ನನಗೆ ಯಜ್ಞವನ್ನು ಮಾಡುವಾಗ ಆ ಯಜ್ಞಪಶುವಿನ ರಕ್ತದೊಡನೆ ಹುಳಿಯಾದ ಹಿಟ್ಟನ್ನು ಸಮರ್ಪಿಸಬಾರದು. ನನ್ನ ಹಬ್ಬದಲ್ಲಿ ನೀವು ನನಗೆ ಸಮರ್ಪಿಸಬೇಕಾದ ಪಶುವಿನ ಕೊಬ್ಬನ್ನು ಮರುದಿನದವರೆಗೆ ಇಡಲೇಬಾರದು.
19ನಿಮ್ಮ ಬೆಳೆಯ ಪ್ರಥಮಫಲದಲ್ಲಿ ಅತಿ ಶ್ರೇಷ್ಠವಾದದ್ದನ್ನು ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು. ಹೋತ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
20ಇಗೋ ದಾರಿಯಲ್ಲಿ ನಿಮ್ಮನ್ನು ಕಾಪಾಡುವುದಕ್ಕೂ, ನಾನು ಗೊತ್ತುಮಾಡಿರುವ ಸ್ಥಳಕ್ಕೆ ನಿಮ್ಮನ್ನು ಕರೆತರುವುದಕ್ಕೂ ದೂತನನ್ನು ನಿಮ್ಮ ಮುಂದಾಗಿ ಕಳುಹಿಸಿದ್ದೇನೆ.
21ನೀವು ಆತನಲ್ಲಿ ಲಕ್ಷ್ಯವಿಟ್ಟು ಆತನ ಮಾತಿಗೆ ವಿಧೇಯರಾಗಿರಬೇಕು. ಆತನನ್ನು ಧಿಕ್ಕರಿಸಿದರೆ ನಿಮ್ಮ ಅಪರಾಧವನ್ನು ಕ್ಷಮಿಸಲಾರನು. ನನ್ನ ನಾಮಮಹಿಮೆ ಆತನಲ್ಲಿ ಇರುವುದು.
22ನೀವು ಆತನ ಮಾತುಗಳನ್ನು ಶ್ರದ್ಧೆಯಿಂದ ಆಲಿಸಿ ನನ್ನ ಆಜ್ಞೆಗಳ ಪ್ರಕಾರ ನಡೆದುಕೊಂಡರೆ ನಾನು ನಿಮ್ಮ ಶತ್ರುಗಳಿಗೆ ಶತ್ರುವಾಗಿಯೂ, ನಿಮ್ಮನ್ನು ಪೀಡಿಸುವವರನ್ನು ಪೀಡಿಸುವವನಾಗಿಯೂ ಇರುವೆನು.
23ನನ್ನ ದೂತನು ನಿಮ್ಮ ಮುಂದಾಗಿ ಹೊರಟು ಅಮೋರಿಯರು, ಹಿತ್ತಿಯರು, ಪೆರಿಜೀಯರು, ಕಾನಾನ್ಯರು, ಹಿವ್ವಿಯರು, ಯೆಬೂಸಿಯರೂ ಇರುವ ದೇಶಕ್ಕೆ ನಿಮ್ಮನ್ನು ಸೇರಿಸುವನು. ಅವರನ್ನಾದರೋ ನಾನು ನಿರ್ಮೂಲಮಾಡುವೆನು.
24ಅವರ ದೇವತೆಗಳಿಗೆ ನೀವು ಅಡ್ಡಬಿದ್ದು ನಮಸ್ಕರಿಸಲೂ ಬಾರದು, ಅವರ ಆಚರಣೆಗಳನ್ನು ಅನುಸರಿಸಲೇ ಬಾರದು. ಆ ಜನಗಳನ್ನು ನಿರ್ಮೂಲಮಾಡಿ ವಿಗ್ರಹಸ್ತಂಭಗಳನ್ನು ನಾಶಮಾಡಬೇಕು.
25ನಿಮ್ಮ ದೇವರಾದ ಯೆಹೋವನೊಬ್ಬನನ್ನೇ ಆರಾಧಿಸಬೇಕು. ಆಗ ಆತನು ನಿಮ್ಮ ಅನ್ನಪಾನಗಳನ್ನು ಆಶೀರ್ವದಿಸುವನು. ನಿಮ್ಮಲ್ಲಿರುವ ವ್ಯಾಧಿಯನ್ನು ತೆಗೆದುಹಾಕುವನು.
26ನಿಮ್ಮ ದೇಶದಲ್ಲಿ ಗರ್ಭಪಾತವಾಗಲಿ, ಬಂಜೆತನವಾಗಲಿ ಇರುವುದೇ ಇಲ್ಲ. ನಿಮಗೆ ಸಂಪೂರ್ಣವಾದ ಆಯುಷ್ಯವನ್ನು ದಯಪಾಲಿಸುವೆನು.
27ನೀವು ಹೋಗುವ ಎಲ್ಲಾ ಕಡೆಗಳಲ್ಲಿಯೂ ನಾನು ಜನಗಳ ಮನಸ್ಸಿನಲ್ಲಿ ಹೆದರಿಕೆಯನ್ನುಂಟು ಮಾಡಿ ಅವರನ್ನು ಕಳವಳಗೊಳಿಸಿ, ನಿಮ್ಮ ವಿರೋಧಿಗಳೆಲ್ಲರೂ ಓಡಿಹೋಗುವಂತೆ ಮಾಡುವೆನು.
28ಅದಲ್ಲದೆ ಕಡಜದ ಹುಳಗಳನ್ನು ನಿಮಗೆ ಮುಂಚಿತವಾಗಿ ಕಳುಹಿಸಿ ಹಿವ್ವಿಯರು, ಕಾನಾನ್ಯರು, ಹಿತ್ತಿಯರು ನಿಮ್ಮ ಮುಂದೆ ನಿಲ್ಲದಂತೆ ಅವು ಅವರನ್ನು ಓಡಿಸಿಬಿಡುವಂತೆ ಮಾಡುವೆನು.
29ಆದರೆ ನಾನು ಒಂದೇ ವರ್ಷದೊಳಗೆ ಅವರೆಲ್ಲರನ್ನು ಅಲ್ಲಿಂದ ಹೊರಡಿಸುವುದಿಲ್ಲ. ಏಕೆಂದರೆ ದೇಶದಲ್ಲಿ ಜನರು ಕಡಿಮೆಯಾಗುವುದರಿಂದ ಕಾಡುಮೃಗಗಳು ಹೆಚ್ಚಿ ನಿಮಗೆ ತೊಂದರೆಯಾದೀತು.
30ನೀವು ಅಭಿವೃದ್ಧಿಯಾಗಿ ದೇಶದಲ್ಲೆಲ್ಲಾ ತುಂಬಿಕೊಳ್ಳುವ ತನಕ ಅವರನ್ನು ಸ್ವಲ್ಪ ಸ್ವಲ್ಪವಾಗಿ ಹೊರಡಿಸುವೆನು.
31ಕೆಂಪುಸಮುದ್ರದಿಂದ ಫಿಲಿಷ್ಟಿಯರ ದೇಶದ ಬಳಿಯಲ್ಲಿರುವ ಸಮುದ್ರದವರೆಗೂ ಮತ್ತು ಈ ಅರಣ್ಯದಿಂದ ಯೂಫ್ರೆಟಿಸ್ ಮಹಾನದಿಯವರೆಗೂ ಇರುವ ದೇಶವನ್ನೆಲ್ಲಾ ನಿಮಗಾಗಿ ನೇಮಿಸಿ ಅದರಲ್ಲಿರುವ ನಿವಾಸಿಗಳನ್ನು ನಿಮಗೆ ಅಧೀನಪಡಿಸುವೆನು. ನೀವು ಅವರನ್ನು ಹೊರಡಿಸುವಿರಿ.
32ನೀವು ಅವರೊಡನೆ ಅವರ ದೇವತೆಗಳೊಡನೆ ಆಗಲಿ ಯಾವುದೇ ವಿಧವಾದ ಒಡಂಬಡಿಕೆಯನ್ನೂ ಮಾಡಿಕೊಳ್ಳಬಾರದು.
33ಅವರು ನಿಮ್ಮ ದೇಶದಲ್ಲೇ ವಾಸವಾಗಿರಬಾರದು. ವಾಸವಾಗಿದ್ದರೆ ನನಗೆ ವಿರುದ್ಧವಾಗಿ ನೀವು ಪಾಪ ಮಾಡುವಂತೆ ಅವರು ಪ್ರೇರೇಪಿಸುವರು. ನೀವು ಅವರ ದೇವತೆಗಳನ್ನು ಪೂಜಿಸಿದರೆ ಆ ಪೂಜೆಯು ನಿಮಗೆ ಉರುಲಾಗುವುದು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath