ವಿಮೋಚನಕಾಂಡ 20
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ದೇವರು ಈ ಎಲ್ಲಾ ಆಜ್ಞಾವಿಧಿಗಳನ್ನು ಅವರಿಗೆ ಕೊಟ್ಟನು:
2“ನೀನು ಗುಲಾಮತನದಲ್ಲಿದ್ದ ಐಗುಪ್ತ ದೇಶದೊಳಗಿಂದ ನಿನ್ನನ್ನು ಬಿಡುಗಡೆಮಾಡಿದ ಯೆಹೋವನು ಎಂಬ ‘ನಾನೇ ನಿನ್ನ ದೇವರು’
3ನಾನಲ್ಲದೆ ನಿಮಗೆ ಬೇರೆ ದೇವರುಗಳು ಇರಬಾರದು.
4“ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು. ಆಕಾಶದಲ್ಲಾಗಲಿ, ಭೂಮಿಯಲ್ಲಾಗಲಿ, ಭೂಮಿಯ ಕೆಳಗಣ ನೀರಿನಲ್ಲಾಗಲಿ ಇರುವ ಯಾವುದರ ರೂಪವನ್ನೂ ಮಾಡಿಕೊಳ್ಳಬಾರದು.
5ಅವುಗಳಿಗೆ ಅಡ್ಡ ಬೀಳಬಾರದು, ಪೂಜೆ ಮಾಡಬಾರದು. ನಿನ್ನ ದೇವರಾದ ಯೆಹೋವನೆಂಬ ನಾನು ನನಗೆ ಸಲ್ಲತಕ್ಕ ಗೌರವವನ್ನು ಮತ್ತೊಬ್ಬನಿಗೆ ಬಿಟ್ಟುಕೊಡುವುದಿಲ್ಲ. ಆದುದರಿಂದ ನನ್ನನ್ನು ದ್ವೇಷಿಸುವವರ ವಿಷಯದಲ್ಲಿ ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ, ಮೂರು ನಾಲ್ಕು ತಲೆಗಳವರೆಗೆ ಬರಮಾಡುವೆನು.
6ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಗೊಳ್ಳುವವರಿಗಾದರೋ ಸಾವಿರ ತಲೆಗಳವರೆಗೆ ದಯೆತೋರಿಸುವೆನು.
7ನಿನ್ನ ದೇವರಾದ ಯೆಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. ಯೆಹೋವನು ತನ್ನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತುವವನನ್ನು ಶಿಕ್ಷಿಸದೆ ಬಿಡುವುದಿಲ್ಲ.
8“ಸಬ್ಬತ್ ದಿನವನ್ನು ದೇವರ ದಿನವೆಂದು ಆಚರಣೆಗೆ ತರುವುದಕ್ಕೆ ನೆನಪಿನಲ್ಲಿಟ್ಟುಕೊಳ್ಳಬೇಕು.
9ಆರು ದಿನಗಳು ನೀನು ದುಡಿದು ನಿನ್ನ ಕೆಲಸವನ್ನೆಲ್ಲಾ ಮಾಡಿಕೊಳ್ಳಬೇಕು.
10ಆದರೆ ಏಳನೆಯ ದಿನವು ನಿನ್ನ ದೇವರಾದ ಯೆಹೋವನಿಗೆ ಮೀಸಲಾದ ವಿಶ್ರಾಂತಿಯ ಸಬ್ಬತ್ ದಿನವಾಗಿದೆ. ಆ ದಿನದಲ್ಲಿ ನೀನು ಯಾವ ಕೆಲಸವನ್ನು ಮಾಡಬಾರದು. ನಿನ್ನ ಗಂಡುಮಕ್ಕಳು, ಹೆಣ್ಣುಮಕ್ಕಳು, ಗಂಡಾಳು, ಹೆಣ್ಣಾಳು, ಪಶುಪ್ರಾಣಿಗಳು ನಿನ್ನ ಊರಿನಲ್ಲಿರುವ ಅನ್ಯದೇಶದವನು ಸಹ ಯಾವ ಕೆಲಸವನ್ನೂ ಮಾಡಬಾರದು.
11ಆರು ದಿನಗಳಲ್ಲಿ ಯೆಹೋವನು ಭೂಮ್ಯಾಕಾಶಗಳನ್ನೂ, ಸಮುದ್ರವನ್ನೂ, ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣ ಮಾಡಿ, ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು. ಆದುದರಿಂದ ಯೆಹೋವನು ಸಬ್ಬತ್ ದಿನವನ್ನು ತನ್ನ ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.
12“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು, ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಬದುಕುವಿ.
13“ಕೊಲೆ ಮಾಡಬಾರದು.
14“ವ್ಯಭಿಚಾರಮಾಡಬಾರದು.
15“ಕದಿಯಬಾರದು.
16“ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿ ಹೇಳಬಾರದು.
17“ಮತ್ತೊಬ್ಬನ ಮನೆಯನ್ನು ನೋಡಿ ಆಶೆಪಡಬಾರದು. ಮತ್ತೊಬ್ಬನ ಹೆಂಡತಿ, ಗಂಡಾಳು, ಹೆಣ್ಣಾಳು, ಎತ್ತು, ಕತ್ತೆ ಮುಂತಾದ ಯಾವುದನ್ನೂ ಬಯಸಬಾರದು.”
18ಆ ಗುಡುಗು, ಮಿಂಚು, ತುತ್ತೂರಿಯ ಧ್ವನಿ, ಹಾಗೂ ಬೆಟ್ಟದಿಂದ ಹೊರಬರುತ್ತಿದ್ದ ಹೊಗೆಯನ್ನು ಜನರೆಲ್ಲರೂ ನೋಡಿ, ನಡುಗುತ್ತಾ ದೂರದಲ್ಲಿ ನಿಂತುಕೊಂಡರು.
19ಅವರು ಮೋಶೆಗೆ, “ನೀನೇ ನಮ್ಮ ಸಂಗಡ ಮಾತನಾಡು, ನಾವು ಕೇಳುತ್ತೇವೆ. ದೇವರು ನಮ್ಮ ಸಂಗಡ ಮಾತನಾಡಿದರೆ ನಾವು ಸತ್ತು ಹೋಗುತ್ತೇವೆ” ಎಂದು ಹೇಳಿದರು.
20ಅದಕ್ಕೆ ಮೋಶೆಯು ಜನರಿಗೆ, “ಭಯಪಡಬೇಡಿರಿ, ದೇವರು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ, ನೀವು ಪಾಪ ಮಾಡದಂತೆ ಆತನ ಮೇಲಿನ ಭಯವು ನಿಮಗೆ ಇರಬೇಕೆಂತಲೂ ಇಳಿದು ಬಂದಿದ್ದಾನೆ” ಎಂದನು.
21ಜನರು ದೂರದಲ್ಲಿ ನಿಂತಿದ್ದರು. ಮೋಶೆಯು ದೇವರಿರುವ ಆ ಕಾರ್ಗತ್ತಲಿನ ಸಮೀಪಕ್ಕೆ ಹೋದನು.
22ಯೆಹೋವನು ಮೋಶೆಗೆ ಹೀಗೆಂದನು, “ನೀನು ಇಸ್ರಾಯೇಲರಿಗೆ ಹೇಳಬೇಕಾದದ್ದೇನೆಂದರೆ; ‘ನಾನು ಆಕಾಶದಿಂದ ನಿಮ್ಮ ಸಂಗಡ ಮಾತನಾಡಿದ್ದನ್ನು ನೀವು ನೋಡಿದ್ದೀರಿ.
23ನೀವು ಬೆಳ್ಳಿ ಬಂಗಾರಗಳ ದೇವರುಗಳನ್ನು ಮಾಡಿಕೊಳ್ಳಬೇಡಿರಿ.
24ನೀವು ನನ್ನ ಯಜ್ಞವೇದಿಯನ್ನು ಮಣ್ಣಿನಿಂದ ಮಾಡಬೇಕು. ನೀವು ಅದರ ಮೇಲೆ ನಿಮ್ಮ ಸರ್ವಾಂಗಹೋಮ, ಸಮಾಧಾನಯಜ್ಞ, ಕುರಿದನಗಳನ್ನು ಸಮರ್ಪಿಸಬೇಕು. ನಾನು ನನ್ನ ಹೆಸರನ್ನು ಗೌರವಿಸುವಂತೆ ಮಾಡುವ ಎಲ್ಲಾ ಸ್ಥಳಗಳಲ್ಲಿಯೂ ನಾನು ನಿಮ್ಮ ಬಳಿಗೆ ಬಂದು ನಿಮ್ಮನ್ನು ಆಶೀರ್ವದಿಸುವೆನು.
25ನೀವು ನನಗಾಗಿ ಕಲ್ಲಿನಿಂದ ಯಜ್ಞವೇದಿಯನ್ನು ಕಟ್ಟುವುದಾದರೆ, ಅದನ್ನು ಕೆತ್ತಿರುವ ಕಲ್ಲುಗಳಿಂದ ಕಟ್ಟಬಾರದು. ಏಕೆಂದರೆ ಉಳಿ, ಮುಂತಾದುದನ್ನು ಅದರ ಮೇಲೆ ಉಪಯೋಗಿಸಿದರೆ ಅದು ಅಪವಿತ್ರವಾಗುವುದು.
26ಅದಲ್ಲದೆ ನನ್ನ ಯಜ್ಞವೇದಿಯನ್ನು ನಿಮ್ಮ ನಗ್ನತೆಯು ಕಾಣುವ ಹಾಗೆ ಮೆಟ್ಟಲುಗಳನ್ನು ಬಳಸಿ ಅದನ್ನು ಹತ್ತಬಾರದು’” ಎಂದು ಆಜ್ಞಾಪಿಸಿದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath