ಎಸ್ತೇರಳು 8
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆ ದಿನದಲ್ಲಿ ಅರಸನಾದ ಅಹಷ್ವೇರೋಷನು ಯೆಹೂದ್ಯರ ವೈರಿಯಾದ ಹಾಮಾನನ ಮನೆಯನ್ನು ಎಸ್ತೇರ್ ರಾಣಿಗೆ ಕೊಟ್ಟನು. ಆಕೆಯು ಮೊರ್ದೆಕೈಗೂ ತನಗೂ ಇರುವ ಸಂಬಂಧವನ್ನು ತಿಳಿಸಿದಳು.
2ಆಗ ಅರಸನು ತಾನು ಹಾಮಾನನಿಗೆ ನೀಡಿದ್ದ ತನ್ನ ಮುದ್ರೆಯುಂಗುರವನ್ನು ಮೊರ್ದೆಕೈಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು.
3ಎಸ್ತೇರಳು ಪುನಃ ಅರಸನನ್ನು ಮಾತನಾಡಿಸುವುದಕ್ಕೆ ಹೋಗಿ ಅವನ ಪಾದಗಳಿಗೆ ಬಿದ್ದು, ಅಳುತ್ತಾ, “ಅಗಾಗನ ವಂಶದವನಾದ ಹಾಮಾನನು ಯೆಹೂದ್ಯರ ಹಾನಿಗಾಗಿ ಕಲ್ಪಿಸಿದ ದುಷ್ಟ ಯೋಜನೆಗಳನ್ನು, ಅಪಾಯಗಳನ್ನು ನಿವಾರಿಸಬೇಕು” ಎಂದು ವಿಜ್ಞಾಪಿಸಿದಳು.
4ಅರಸನು ಸುವರ್ಣ ರಾಜದಂಡವನ್ನು ಆಕೆಯ ಕಡೆಗೆ ಚಾಚಿದ್ದರಿಂದ ಆಕೆಯು ಎದ್ದು ಅರಸನ ಮುಂದೆ ನಿಂತಳು.
5ಆಗ ಎಸ್ತೇರಳು ಅವನಿಗೆ, “ಅರಸನು ನನ್ನ ಮೇಲೆ ಕಟಾಕ್ಷವಿಟ್ಟು, ನನ್ನನ್ನು ಮೆಚ್ಚಿ, ನಾನು ಹೇಳುವ ಮಾತು ಒಳ್ಳೆಯದೆಂದು ಅದಕ್ಕೆ ಸಮ್ಮತಿಸುವುದಾದರೆ, ಅರಸನ ಎಲ್ಲಾ ಸಂಸ್ಥಾನಗಳಲ್ಲಿರುವ ಯೆಹೂದ್ಯರನ್ನು ಸಂಹರಿಸುವ ವಿಷಯವಾಗಿ ಅಗಾಗನ ವಂಶದವನೂ, ಹಮ್ಮೆದಾತನ ಮಗನು ಆದ ಹಾಮಾನನು ಬರೆಯಿಸಿದ ಪತ್ರವನ್ನು ರದ್ದುಮಾಡುವುದಕ್ಕಾಗಿ ಆಜ್ಞಾಪತ್ರವನ್ನು ಪ್ರಕಟಿಸಬೇಕು.
6ನನ್ನ ಜನರಿಗೆ ಕೇಡು ಸಂಭವಿಸುವುದನ್ನು ನೋಡಿ ನಾನು ಸಹಿಸಿಕೊಂಡಿರುವುದು ಹೇಗೆ? ನನ್ನ ಕುಲನಾಶನವನ್ನು ನೋಡುತ್ತಾ ಸುಮ್ಮನಿರುವುದು ಹೇಗೆ?” ಎಂದು ಬಿನ್ನವಿಸಿದಳು.
7ಆಗ ಅಹಷ್ವೇರೋಷ್ ರಾಜನು ರಾಣಿಯಾದ ಎಸ್ತೇರಳಿಗೂ ಮತ್ತು ಯೆಹೂದ್ಯನಾದ ಮೊರ್ದೆಕೈಗೂ, “ಹಾಮಾನನು ಯೆಹೂದ್ಯರಿಗೆ ವಿರುದ್ಧವಾಗಿ ಕೈಯೆತ್ತಿದ್ದರಿಂದ ಅವನನ್ನು ಗಲ್ಲಿಗೆ ಹಾಕಿಸಿ, ಅವನ ಸೊತ್ತನ್ನು ಎಸ್ತೇರಳಿಗೆ ದಾನಮಾಡಿದ್ದೇನಲ್ಲಾ, ಅರಸನ ಹೆಸರಿನಲ್ಲಿ ಬರೆಯಲ್ಪಟ್ಟು ರಾಜಮುದ್ರೆಯಿರುವ ಲೇಖನವನ್ನು ಯಾರೂ ರದ್ದುಮಾಡಲು ಬರುವುದಿಲ್ಲ.
8ಆದುದರಿಂದ ಯೆಹೂದ್ಯರ ವಿಷಯವಾಗಿ ನಿಮಗೆ ಸರಿತೋರುವುದನ್ನು ಅರಸನ ಹೆಸರಿನಲ್ಲಿ ನೀವೂ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ” ಎಂದು ಹೇಳಿದನು.
9ಆಗ ರಾಜಲೇಖಕರು ಕರೆಯಲ್ಪಟ್ಟರು. ಅವರು ಬಂದು ಮೂರನೆಯ ತಿಂಗಳಾದ ಜೇಷ್ಠಮಾಸದ ಇಪ್ಪತ್ತಮೂರನೆಯ ದಿನದಲ್ಲಿ, ಮೊರ್ದೆಕೈಯ ಆಜ್ಞಾನುಸಾರ ಯೆಹೂದ್ಯರಿಗೂ, ಭಾರತ ಮೊದಲುಗೊಂಡು ಕೂಷಿನ ವರೆಗೂ ಇರುವ ನೂರ ಇಪ್ಪತ್ತೇಳು ಸಂಸ್ಥಾನಗಳ ಉಪರಾಜರಿಗೂ, ದೇಶಾಧಿಪತಿಗಳಿಗೂ ಮತ್ತು ಅಧಿಕಾರಿಗಳಿಗೂ ಪತ್ರಗಳನ್ನು ಬರೆದರು. ಆ ಪತ್ರಗಳು ಆಯಾ ಸಂಸ್ಥಾನಗಳ ಬರಹಗಳಲ್ಲಿಯೂ, ಆಯಾ ಜನಾಂಗಗಳ ಭಾಷೆಗಳಲ್ಲಿಯೂ ಇದ್ದವು. ಯೆಹೂದ್ಯರಿಗೆ ಬರೆದ ಪತ್ರಗಳು ಯೆಹೂದ್ಯ ಬರಹದಲ್ಲಿಯೂ, ಭಾಷೆಗಳಲ್ಲಿಯೂ ಲಿಖಿತವಾದವು.
10ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಆ ಪತ್ರಗಳಿಗೆ ರಾಜಮುದ್ರೆಯನ್ನು ಹಾಕಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದಂಥ, ಅರಸನ ಸೇವೆಗಾಗಿ ಉಪಯೋಗಿಸಲ್ಪಡುತ್ತಿದ್ದ ವೇಗವಾಗಿ ಓಡುವಂಥ ಕುದುರೆಗಳ ಮುಖಾಂತರ ಕಳುಹಿಸಿದನು.
11ಆ ಪತ್ರಗಳಲ್ಲಿ ಅರಸನು, “ಅಹಷ್ವೇರೋಷ್ ರಾಜನ ಎಲ್ಲಾ ಸಂಸ್ಥಾನಗಳ ಆಯಾ ಪಟ್ಟಣಗಳಲ್ಲಿರುವ ಯೆಹೂದ್ಯರು ಒಂದೇ ದಿನದಲ್ಲಿ ಅಂದರೆ, ಹನ್ನೆರಡನೆಯ ತಿಂಗಳಾದ ಫಾಲ್ಗುಣಮಾಸದ ಹದಿಮೂರನೆಯ ದಿನದಲ್ಲಿ ಒಟ್ಟಾಗಿ ಸೇರಿಕೊಳ್ಳಬೇಕು.
12ತಮ್ಮ ಪ್ರಾಣರಕ್ಷಣೆಗಾಗಿ ಎದ್ದು, ತಮ್ಮ ವಿರುದ್ಧವಾಗಿ ಆಯುಧಗಳೊಡನೆ ನೆರೆದು ಬರುವ ಎಲ್ಲಾ ಜನಾಂಗಗಳವರನ್ನೂ, ಸಂಸ್ಥಾನಗಳವರನ್ನೂ, ಅವರ ಹೆಂಡತಿಯರು ಮಕ್ಕಳು ಸಹಿತವಾಗಿ ಕೊಂದು, ಸಂಹರಿಸಿ, ನಿರ್ನಾಮಗೊಳಿಸಬೇಕು.
13ಅವರ ಸೊತ್ತನ್ನು ಸೂರೆಮಾಡಬೇಕು, ಈ ಪತ್ರದ ಒಂದೊಂದು ಪ್ರತಿಯನ್ನು ಪ್ರತಿಯೊಂದು ಸಂಸ್ಥಾನದಲ್ಲಿ ರಾಜವಿಧಿಯೆಂದು ಎಲ್ಲಾ ಜನರಲ್ಲಿ ಪ್ರಕಟಿಸಬೇಕು, ಆ ದಿನದಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೆ ಸಿದ್ಧರಾಗಿರಬೇಕು” ಎಂದು ಅಪ್ಪಣೆಮಾಡಿದ್ದನು.
14ಈ ರಾಜಾಜ್ಞೆಯು ಶೂಷನ್ ಕೋಟೆಯಲ್ಲಿ ಪ್ರಕಟವಾದಾಗಲೇ ಅಂಚೆಯವರು ಅರಮನೆಯ ಸವಾರಿಕುದುರೆಗಳನ್ನು ಹತ್ತಿಕೊಂಡು ಅರಸನ ಅಪ್ಪಣೆಯಿಂದ ಪ್ರೇರಿತರಾಗಿ ಅತಿ ಶೀಘ್ರವಾಗಿ ಹೊರಟರು.
15ಮೊರ್ದೆಕೈಯಾದರೋ ನೀಲಿ ಮತ್ತು ಶುಭ್ರವರ್ಣಗಳುಳ್ಳ ರಾಜವಸ್ತ್ರಗಳನ್ನು ಧರಿಸಿಕೊಂಡು, ಬಂಗಾರದ ದೊಡ್ಡ ಕಿರೀಟವನ್ನು ಇಟ್ಟುಕೊಂಡು, ರಕ್ತವರ್ಣದ ನಾರಿನ ನಿಲುವಂಗಿಯನ್ನು ಹೊದ್ದುಕೊಂಡು ರಾಜಸನ್ನಿಧಿಯಿಂದ ಹೊರಟನು. ಶೂಷನ್ ಪಟ್ಟಣದಲ್ಲಿ ಸಂತೋಷದ ಆರ್ಭಟವು ಕೇಳಿಸಿತು.
16ಅಲ್ಲಿನ ಯೆಹೂದ್ಯರಿಗೆ ಸಂತೋಷ, ಗೌರವ, ಹರ್ಷಪ್ರಭಾವ ಮತ್ತು ತೇಜಸ್ಸುಳ್ಳವರಾದರು.
17ರಾಜನಿರ್ಣಯ ಶಾಸನಗಳು ಪ್ರಕಟಿಸಲ್ಪಟ್ಟ ಪ್ರತಿಯೊಂದು ಸಂಸ್ಥಾನದಲ್ಲಿಯೂ ಪಟ್ಟಣದಲ್ಲಿಯೂ ಇದ್ದ ಯೆಹೂದ್ಯರಿಗೆ ಶುಭದಿನ ಉಂಟಾಯಿತು; ಅವರು ಸಂತೋಷದಿಂದಲೂ, ಉಲ್ಲಾಸದಿಂದಲೂ ಭಕ್ಷ್ಯಭೋಜನಮಾಡಿದರು. ದೇಶದ ಜನರಲ್ಲಿ ಅನೇಕರು ಯೆಹೂದ್ಯರಿಗೆ ಭಯಪಟ್ಟು ಅವರ ಮತಕ್ಕೆ ಸೇರಿದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath