ಕ್ರಿಶ್ಚಿಯನ್ ಧರ್ಮ
ಹಿಂದೆ

ಧರ್ಮೋಪದೇಶಕಾಂಡ 4

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಇಸ್ರಾಯೇಲರೇ ಕೇಳಿರಿ, ನೀವು ಜೀವದಿಂದ ಉಳಿದು ನಿಮ್ಮ ಪೂರ್ವಿಕರ ದೇವರಾದ ಯೆಹೋವನು ನಿಮಗೆ ಕೊಡುವ ದೇಶವನ್ನು ಸೇರಿ, ಸ್ವಾಧೀನಮಾಡಿಕೊಳ್ಳುವಂತೆ ಸಾಧ್ಯವಾಗಲು ನಾನು ಈಗ ಬೋಧಿಸುವ ಆಜ್ಞಾವಿಧಿಗಳನ್ನು ಗಮನಿಸಿ ಅನುಸರಿಸಬೇಕು.

2ನಿಮ್ಮ ದೇವರಾದ ಯೆಹೋವನು ಕೊಟ್ಟ ಆಜ್ಞೆಗಳನ್ನೇ ನಾನು ನಿಮಗೆ ತಿಳಿಸುತ್ತಾ ಇದ್ದೇನೆ. ಈ ಮಾತುಗಳನ್ನು ನೀವು ಕೈಕೊಳ್ಳಬೇಕೇ ಹೊರತು ಅವುಗಳಿಗೆ ಯಾವುದನ್ನೂ ಕೂಡಿಸಬಾರದು, ಅವುಗಳಿಂದ ಯಾವುದನ್ನೂ ತೆಗೆಯಬಾರದು.

3ಪೆಗೋರದ ಬಾಳನ ಸಂಗತಿಯಲ್ಲಿ ಯೆಹೋವನು ಮಾಡಿದ ಕಾರ್ಯವನ್ನು ನೀವು ಗಮನಿಸಿದ್ದೀರಿ. ಪೆಗೋರದ ಬಾಳನನ್ನು ಅನುಸರಿಸಿದವರೆಲ್ಲರನ್ನೂ ನಿಮ್ಮ ದೇವರಾದ ಯೆಹೋವನು ನಿಮ್ಮಲ್ಲಿರದಂತೆ ನಾಶಮಾಡಿದ್ದಾನೆ.

4ನಿಮ್ಮ ದೇವರಾದ ಯೆಹೋವನನ್ನು ನೀವು ನಂಬಿ ನಡೆದುದರಿಂದ ನೀವಾದರೋ ಇಂದಿನವರೆಗೂ ಉಳಿದಿದ್ದೀರಿ.

5ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನನ್ನ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದಂತೆಯೇ ನಿಮಗೆ ಬೋಧಿಸಿದ್ದೇನೆ.

6ಇವುಗಳನ್ನು ಕೈಕೊಂಡು ಅನುಸರಿಸಿರಿ. ನೀವು ಅನುಸರಿಸಿ ನಡೆದರೆ ಅನ್ಯಜನಗಳು ನಿಮ್ಮನ್ನು ಜ್ಞಾನಿಗಳೂ, ವಿವೇಕಿಗಳೂ ಎಂದು ತಿಳಿಯುವರು. ಅವರು ಈ ಆಜ್ಞೆಗಳ ವಿಷಯದಲ್ಲಿ ವರ್ತಮಾನವನ್ನು ಕೇಳಿ, “ಈ ದೊಡ್ಡ ಜನಾಂಗವು ಜ್ಞಾನವಿವೇಕವುಳ್ಳ ಜನಾಂಗ” ಎಂದು ಹೇಳುವರು.

7ನಾವು ನಮ್ಮ ದೇವರಾದ ಯೆಹೋವನಿಗೆ ಮೊರೆಯಿಡುವಾಗೆಲ್ಲಾ ಆತನು ಸಮೀಪವಾಗಿಯೇ ಇದ್ದಾನಲ್ಲಾ; ಬೇರೆ ಎಷ್ಟು ದೊಡ್ಡ ಜನಾಂಗಕ್ಕಾದರೂ ಯಾವ ದೇವರು ಹೀಗೆ ಸಮೀಪವಾಗಿರುವನು?

8ನಾನು ಈ ಹೊತ್ತು ನಿಮ್ಮ ಮುಂದೆ ಇಡುವ ಇಂಥ ನ್ಯಾಯವಾದ ಆಜ್ಞಾವಿಧಿಗಳುಳ್ಳ ಈ ಧರ್ಮಶಾಸ್ತ್ರಕ್ಕೆ ಸಮಾನವಾದದ್ದು ಬೇರೆ ಯಾವ ಜನಾಂಗಕ್ಕೆ ಉಂಟು?

9ಹೀಗಿರುವುದರಿಂದ ನೀವು ಬಹು ಜಾಗರೂಕತೆಯಿಂದ ನಿಮ್ಮ ನಿಮ್ಮ ಮನಸ್ಸುಗಳನ್ನು ಕಾಪಾಡಿಕೊಳ್ಳುವವರಾಗಿ, ನೀವು ನೋಡಿದ ಸಂಗತಿಗಳನ್ನು ಎಷ್ಟು ಮಾತ್ರವೂ ಮರೆಯದೆ ಜೀವದಿಂದಿರುವ ವರೆಗೂ ಅವುಗಳನ್ನು ನೆನಪಿನಲ್ಲಿಟ್ಟುಕೊಂಡು ನಿಮ್ಮ ಮಕ್ಕಳಿಗೂ ಮತ್ತು ಮೊಮ್ಮಕ್ಕಳಿಗೂ ತಿಳಿಸುತ್ತಾ ಹೋಗಬೇಕು.

10ಆ ಸಂಗತಿಗಳು ಯಾವುವೆಂದರೆ, ನೀವು ಹೋರೇಬಿನಲ್ಲಿ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದಾಗ ಆತನು ನನಗೆ, “ಜನರೆಲ್ಲರನ್ನು ನನ್ನ ಹತ್ತಿರಕ್ಕೆ ಕೂಡಿಸು; ಅವರು ತಾವು ಭೂಮಿಯ ಮೇಲಿರುವ ದಿನಗಳಲ್ಲೆಲ್ಲಾ ನನಗೆ ಭಯಭಕ್ತಿಯಿಂದಿರುವುದಕ್ಕೆ ಕಲಿತುಕೊಂಡು ತಮ್ಮ ಮಕ್ಕಳಿಗೂ ಕಲಿಸಿಕೊಡುವಂತೆ ಅವರಿಗೆ ಆಜ್ಞೆಗಳನ್ನು ತಿಳಿಸುತ್ತೇನೆ” ಎಂದು ಹೇಳಿದನು.

11ಆ ದಿನದಲ್ಲಿ ನೀವು ಹತ್ತಿರ ಬಂದು ಬೆಟ್ಟದ ಬುಡದಲ್ಲಿ ನಿಂತುಕೊಂಡಿರಲು ಕತ್ತಲೂ, ಮೋಡವೂ, ಕಾರ್ಗತ್ತಲೂ ಕವಿದು ಆ ಬೆಟ್ಟವು ಆಕಾಶದ ತುದಿಯವರೆಗೂ ಬೆಂಕಿಯಿಂದ ಉರಿಯಿತು.

12ಆಗ ಯೆಹೋವನು ಆ ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದನು. ಆತನು ಮಾತನಾಡಿದ ಸ್ವರ ನಿಮಗೆ ಕೇಳಿಸಿತೇ ಹೊರತು ಯಾವ ಆಕಾರವೂ ಕಾಣಿಸಲ್ಲಿಲ್ಲ.

13ನೀವು ಅನುಸರಿಸಬೇಕೆಂದು ಆತನು ನೇಮಿಸಿದ ನಿಬಂಧನೆಯನ್ನು ಅಂದರೆ ಹತ್ತು ಆಜ್ಞೆಗಳನ್ನು ನಿಮಗೆ ವಿವರಿಸಿ, ಎರಡು ಕಲ್ಲಿನ ಹಲಗೆಗಳಲ್ಲಿ ಅದನ್ನು ಕೆತ್ತಿಸಿದನು.

14ನೀವು ನದಿ ದಾಟಿ ಸ್ವಾಧೀನಮಾಡಿಕೊಳ್ಳುವ ದೇಶದಲ್ಲಿ ಅನುಸರಿಸಬೇಕಾದ ಆಜ್ಞಾವಿಧಿಗಳನ್ನು ನಿಮಗೆ ಬೋಧಿಸಬೇಕೆಂದು ಯೆಹೋವನು ಆ ಕಾಲದಲ್ಲಿ ನನಗೆ ಆಜ್ಞಾಪಿಸಿದ್ದನ್ನು ನೀವು ನೆನಪಿನಲ್ಲಿಟ್ಟುಕೊಂಡು ನಿಮ್ಮ ಸಂತತಿಯವರಿಗೆ ತಿಳಿಸಬೇಕು.

15ಹೋರೇಬಿನಲ್ಲಿ ಯೆಹೋವನು ಬೆಂಕಿಯ ಜ್ವಾಲೆಯೊಳಗಿಂದ ನಿಮ್ಮ ಸಂಗಡ ಮಾತನಾಡಿದಾಗ ನಿಮಗೆ ಯಾವ ಆಕಾರವೂ ಕಾಣಿಸಲಿಲ್ಲ. ಆದುದರಿಂದ ನೀವು ನಿಮ್ಮ ನಿಮ್ಮ ಮನಸ್ಸುಗಳನ್ನು ಬಹು ಜಾಗರೂಕತೆಯಿಂದ ಕಾಪಾಡಿಕೊಳ್ಳಬೇಕು.

16ನೀವು ಸ್ತ್ರೀಪುರುಷರ ರೂಪವನ್ನಾಗಲಿ,

17ಭೂಮಿಯ ಮೇಲೆ ಸಂಚರಿಸುವ ಮೃಗದ ರೂಪವನ್ನಾಗಲಿ, ಆಕಾಶದಲ್ಲಿ ಹಾರಾಡುವ ಪಕ್ಷಿಯ ರೂಪವನ್ನಾಗಲಿ,

18ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳ ರೂಪವನ್ನಾಗಲಿ ಮತ್ತು ಭೂಮಿಯ ಕೆಳಗಣ ನೀರಿನಲ್ಲಿರುವ ಮೀನಿನ ರೂಪವನ್ನಾಗಲಿ ದೇವರ ಸ್ವರೂಪವೆಂದು ಮಾಡಿಕೊಂಡು ಭ್ರಷ್ಟರಾಗಬಾರದು.

19ನಿಮ್ಮ ದೇವರಾದ ಯೆಹೋವನು ಭೂಲೋಕದಲ್ಲಿರುವ ಬೇರೆ ಎಲ್ಲಾ ಜನಾಂಗಗಳಿಗೋಸ್ಕರ ದಯಪಾಲಿಸಿದ ಸೂರ್ಯ, ಚಂದ್ರ ಅಥವಾ ನಕ್ಷತ್ರಗಳೆನಿಸಿಕೊಳ್ಳುವ ಆಕಾಶಸೈನ್ಯವನ್ನು ನೀವು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವಾಗ, ಮರುಳುಗೊಂಡು ಅವುಗಳನ್ನು ಪೂಜಿಸಲೂ ಬಾರದು ಮತ್ತು ನಮಸ್ಕರಿಸಲೂ ಬಾರದು.

20ನಿಮ್ಮನ್ನಾದರೋ ಯೆಹೋವನು ತನಗೆ ಸ್ವಂತ ಜನರನ್ನಾಗಿ ಮಾಡಿಕೊಳ್ಳಬೇಕೆಂದು ಸಂಕಲ್ಪಿಸಿ, ಕಬ್ಬಿಣವನ್ನು ಕರಗಿಸುವ ಕುಲುಮೆಯೋಪಾದಿಯಲ್ಲಿದ್ದ ಐಗುಪ್ತದೇಶದಿಂದ ತಪ್ಪಿಸಿದನು; ಆ ಸಂಕಲ್ಪವು ಈಗ ನೆರವೇರಿತು.

21ಅದಲ್ಲದೆ ಯೆಹೋವನು ನಿಮ್ಮ ದೆಸೆಯಿಂದ ನನ್ನ ಮೇಲೆಯೂ ಕೋಪಗೊಂಡು ನಾನು ಯೊರ್ದನ್ ನದಿಯನ್ನು ದಾಟಿ, ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವದೇಶವಾಗುವುದಕ್ಕೆ ಕೊಡುವ ಆ ಒಳ್ಳೆಯ ದೇಶವನ್ನು ಸೇರದೆ,

22ಇಲ್ಲಿಯೇ ಸಾಯಬೇಕೆಂದು ಖಂಡಿತವಾಗಿ ಹೇಳಿದನು. ನೀವಾದರೋ ನದಿದಾಟಿ ಆ ಒಳ್ಳೆಯ ದೇಶವನ್ನು ಸೇರಿ ಸ್ವಾಧೀನಮಾಡಿಕೊಳ್ಳುವಿರಿ.

23ಎಚ್ಚರಿಕೆಯಾಗಿರಿ, ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ನೀವು ಮರೆತು, ಪೂಜಿಸಬೇಡಿರೆಂದು ಆತನು ನಿಷೇಧಿಸಿದ ಯಾವ ವಸ್ತುವಿನ ವಿಗ್ರಹವನ್ನೂ ಮಾಡಿಕೊಳ್ಳಬಾರದು.

24ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಮತ್ತೊಬ್ಬನಿಗೆ ಸಲ್ಲಗೊಡಿಸದೆ ಉರಿಯುವ ಬೆಂಕಿಯಂತೆ ದ್ರೋಹಿಗಳನ್ನು ದಹಿಸಿಬಿಡುವವನಾಗಿದ್ದಾನೆಂದು ತಿಳಿಯಿರಿ.

25ನೀವು ಮಕ್ಕಳನ್ನೂ ಮತ್ತು ಮೊಮ್ಮಕ್ಕಳನ್ನೂ ಪಡೆದು ಬಹುಕಾಲ ಆ ದೇಶದಲ್ಲಿದ್ದ ಮೇಲೆ ದ್ರೋಹಿಗಳಾಗಿ ಯಾವ ವಿಗ್ರಹವನ್ನಾದರೂ ಮಾಡಿಕೊಂಡು, ನಿಮ್ಮ ದೇವರಾದ ಯೆಹೋವನ ದೃಷ್ಟಿಗೆ ಕೆಟ್ಟದ್ದನ್ನು ನಡಿಸಿ,

26ಆತನನ್ನು ಕೋಪಗೊಳಿಸಿದರೆ, ನೀವು ಯೊರ್ದನ್ ನದಿಯನ್ನು ದಾಟಿ ಸ್ವಾಧೀನಮಾಡಿಕೊಳ್ಳುವ ಆ ದೇಶದಲ್ಲಿ ಉಳಿಯದೆ, ಬೇಗನೆ ನಾಶವಾಗಿ ಹೋಗುವಿರಿ ಎಂದು ಭೂಮ್ಯಾಕಾಶಗಳನ್ನು ಸಾಕ್ಷಿಯಾಗಿಟ್ಟು ಎಚ್ಚರಿಸುತ್ತೇನೆ. ನೀವು ಆ ದೇಶದಲ್ಲಿ ಬಹುದಿನ ಇರದೆ ನಾಶವಾಗಿಯೇ ಹೋಗುವಿರಿ.

27ಯೆಹೋವನು ನಿಮ್ಮನ್ನು ಅನ್ಯಜನಗಳಲ್ಲಿ ಚದರಿಸುವನು; ಆತನು ನಿಮ್ಮನ್ನು ಓಡಿಸುವ ದೇಶಗಳ ಜನರ ಮಧ್ಯದಲ್ಲಿ ನೀವು ಸ್ವಲ್ಪ ಜನ ಮಾತ್ರ ಉಳಿಯುವಿರಿ.

28ನೀವು ಆ ದೇಶಗಳಲ್ಲಿ ಮನುಷ್ಯರು ಮಾಡಿಕೊಂಡ ದೇವರುಗಳನ್ನು ಅಂದರೆ ಮರದಲ್ಲಾಗಲಿ, ಕಲ್ಲಿನಲ್ಲಾಗಲಿ ಕೆತ್ತಲ್ಪಟ್ಟು ನೋಡಲಾರದೆ, ಕೇಳಲಾರದೆ, ತಿನ್ನಲಾರದೆ, ವಾಸನೆ ಗ್ರಹಿಸಲಾರದೆ ಇರುವ ದೇವರುಗಳನ್ನು ಪೂಜಿಸುವವರಾಗುವಿರಿ.

29ಆಗ ಅಲ್ಲಿಂದಲಾದರೂ ನೀವು ಸಂಪೂರ್ಣ ಹೃದಯದಿಂದಲೂ, ಪೂರ್ಣ ಮನಸ್ಸಿನಿಂದಲೂ ನಿಮ್ಮ ದೇವರಾದ ಯೆಹೋವನನ್ನು ಹುಡುಕಿದರೆ ಆತನು ನಿಮಗೆ ಸಿಕ್ಕುವನು.

30ಮೇಲೆ ಹೇಳಿದ ಎಲ್ಲಾ ಕಷ್ಟಗಳು ನಿಮಗೆ ಸಂಭವಿಸಿ, ನೀವು ಸಂಕಟದಲ್ಲಿರುವಾಗ ಅಂತ್ಯದಲ್ಲಿ ನೀವು ಆತನ ಕಡೆಗೆ ತಿರುಗಿಕೊಂಡು ಆತನ ಮಾತಿಗೆ ಕಿವಿಗೊಡುವಿರಿ.

31ನಿಮ್ಮ ದೇವರಾದ ಯೆಹೋವನು ಕನಿಕರವುಳ್ಳ ದೇವರಾದುದರಿಂದ ಆತನು ನಿಮ್ಮನ್ನು ಅಲಕ್ಷ್ಯಮಾಡುವುದಿಲ್ಲ, ವಿನಾಶಕ್ಕೆ ಬಿಡುವುದಿಲ್ಲ. ಆತನು ನಿಮ್ಮ ಪೂರ್ವಿಕರ ಸಂಗಡ ಪ್ರಮಾಣಪೂರ್ವಕವಾಗಿ ಮಾಡಿಕೊಂಡ ಒಡಂಬಡಿಕೆಯನ್ನು ಮರೆಯುವುದಿಲ್ಲ.

32ದೇವರು, ಮನುಷ್ಯರನ್ನು ಸೃಷ್ಟಿಸಿ ಭೂಮಿಯ ಮೇಲೆ ಇರಿಸಿದ ದಿನ ಮೊದಲುಗೊಂಡು ಇಂದಿನವರೆಗೂ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿನವರೆಗೂ ಇಂತಹ ಅದ್ಭುತ ಕಾರ್ಯವು ನಡೆದದ್ದುಂಟೋ, ಇಲ್ಲವೆ ಇಂತಹ ಸುದ್ದಿ ಕೇಳಿದ್ದುಂಟೋ ಎಂದು ವಿಚಾರಿಸಿಕೊಳ್ಳಿರಿ.

33ದೇವರು ಬೆಂಕಿಯ ಜ್ವಾಲೆಯೊಳಗಿಂದ ಮಾತನಾಡಿದ ಸ್ವರವು ನಿಮಗೆ ಕೇಳಿಸಿತಲ್ಲಾ; ಬೇರೆ ಯಾವ ಜನರಾದರೂ ದೇವರ ಸ್ವರವನ್ನು ಕೇಳಿ ಬದುಕಿದ್ದುಂಟೋ?

34ಬೇರೆ ಯಾವ ದೇವರೂ ಮನಪರಿಶೋಧನೆ, ಮಹತ್ಕಾರ್ಯ, ಉತ್ಪಾತ, ಯುದ್ಧ, ಭುಜಪರಾಕ್ರಮ, ಶಿಕ್ಷಾಹಸ್ತ, ಮಹಾಭೀತಿ ಇವುಗಳನ್ನು ಪ್ರಯೋಗಿಸಿ, ಒಂದು ಜನಾಂಗವನ್ನು ಮತ್ತೊಂದು ಜನಾಂಗದ ಕೈಯೊಳಗಿಂದ ತಪ್ಪಿಸುವುದಕ್ಕೆ ಪ್ರಯತ್ನಿಸಿದ್ದಾನೇ? ನಿಮ್ಮ ದೇವರಾದ ಯೆಹೋವನಾದರೋ ಐಗುಪ್ತದೇಶದಲ್ಲಿ ನಿಮಗೋಸ್ಕರ ಇದನ್ನೆಲ್ಲಾ ನಿಮ್ಮ ಕಣ್ಣು ಮುಂದೆ ನಡಿಸಿದ್ದಾನಲ್ಲಾ.

35ಯೆಹೋವನೊಬ್ಬನೇ ದೇವರು, ಬೇರೆ ದೇವರೇ ಇಲ್ಲವೆಂದು ನೀವು ತಿಳಿದುಕೊಳ್ಳುವುದಕ್ಕಾಗಿ ಇದೆಲ್ಲಾ ನಿಮಗೆ ಮಾತ್ರ ತೋರಿಸಿದ್ದಾನೆ.

36ಆತನು ನಿಮ್ಮ ಶಿಕ್ಷಣಕ್ಕೋಸ್ಕರ ಆಕಾಶದಿಂದ ತನ್ನ ಸ್ವರವನ್ನು ನಿಮಗೆ ಕೇಳಿಸುವಂತೆ ಮಾಡಿದನು; ಮತ್ತು ತನ್ನ ಮಹಾ ಅಗ್ನಿಜ್ವಾಲೆಯನ್ನು ಭೂಮಿಯ ಮೇಲೆ ತೋರಿಸಿದನು. ಅದಲ್ಲದೆ ಆ ಅಗ್ನಿಜ್ವಾಲೆಯೊಳಗಿಂದ ಆತನು ಆಡಿದ ಮಾತುಗಳನ್ನು ಕೇಳಿಸುವಂತೆ ಮಾಡಿದನು.

37ಆತನು ನಿಮ್ಮ ಪೂರ್ವಿಕರನ್ನು ಪ್ರೀತಿಸಿ ಅವರ ತರುವಾಯ ಅವರ ಸಂತತಿಯವರಾದ ನಿಮ್ಮನ್ನು ಆರಿಸಿಕೊಂಡು,

38ಈಗ ನಮ್ಮ ಅನುಭವಕ್ಕೆ ಬಂದ ಪ್ರಕಾರ ನಿಮಗಿಂತ ಮಹಾಬಲಿಷ್ಠವಾದ ಜನಾಂಗಗಳನ್ನು ಹೊರಡಿಸಲು ಅವರ ದೇಶದಲ್ಲಿ ನಿಮ್ಮನ್ನು ಸೇರಿಸಿ, ಆ ದೇಶವನ್ನು ನಿಮಗೇ ಸ್ವದೇಶವಾಗಿ ಕೊಡಬೇಕೆಂದು ಸಂಕಲ್ಪಿಸಿ, ತಾನೇ ನಿಮ್ಮೊಂದಿಗಿದ್ದು ತನ್ನ ಅಪಾರ ಸಾಮರ್ಥ್ಯದಿಂದ ನಿಮ್ಮನ್ನು ಐಗುಪ್ತದೇಶದೊಳಗಿಂದ ಬರಮಾಡಿದನಲ್ಲಾ.

39ನೀವು ಇದನ್ನೆಲ್ಲಾ ಆಲೋಚಿಸಿ ಆಕಾಶದಲ್ಲಿಯೂ ಮತ್ತು ಭೂಮಿಯಲ್ಲಿಯೂ ಯೆಹೋವನೊಬ್ಬನೇ ದೇವರು, ಬೇರೆ ಯಾವ ದೇವರೂ ಇಲ್ಲವೆಂಬುವುದನ್ನು ಈಗ ಗ್ರಹಿಸಿಕೊಂಡು ಜ್ಞಾಪಕದಲ್ಲಿಡಬೇಕು.

40ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶುಭವುಂಟಾಗುವಂತೆಯೂ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದಲ್ಲಿ ನೀವು ಸದಾಕಾಲ ಬಾಳುವಂತೆಯೂ, ನಾನು ನಿಮಗೆ ಈಗ ತಿಳಿಸಿದ ಆತನ ಆಜ್ಞಾವಿಧಿಗಳನ್ನು ನೀವು ಅನುಸರಿಸಿ ನಡೆಯಬೇಕು.

41ಆ ಕಾಲದಲ್ಲಿ ಮೋಶೆ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿ ಮೂರು ಆಶ್ರಯ ಪಟ್ಟಣಗಳನ್ನು ಗೊತ್ತುಮಾಡಿದನು.

42ಯಾವ ದ್ವೇಷವೂ ಇಲ್ಲದೆ ಕೈತಪ್ಪಿ ಮತ್ತೊಬ್ಬನನ್ನು ಕೊಂದವನು ಆ ಪಟ್ಟಣಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಲಿ ಎಂದು ಆ ಪಟ್ಟಣಗಳನ್ನು ನೇಮಿಸಿದನು.

43ಅವು ಯಾವುವೆಂದರೆ - ರೂಬೇನ್ಯರಿಗೋಸ್ಕರ ಮೀಶೋರ್ ಎಂಬ ಎತ್ತರವಾದ ಬಯಲು ಸೀಮೆಯ ಅರಣ್ಯದಲ್ಲಿರುವ ಬೆಚೆರ್; ಗಾದ್ಯರಿಗೋಸ್ಕರ ಗಿಲ್ಯಾದಿನಲ್ಲಿರುವ ರಾಮೋತ್ ಮತ್ತು ಮನಸ್ಸೆಯವರಿಗೋಸ್ಕರ ಬಾಷಾನಿನಲ್ಲಿರುವ ಗೋಲಾನ್ ಪಟ್ಟಣಗಳು.

44ಮೋಶೆ ಇಸ್ರಾಯೇಲರಿಗೆ ಕೊಟ್ಟ ಧರ್ಮಶಾಸ್ತ್ರವು ಇದೇ.

45ಇಸ್ರಾಯೇಲರು ಐಗುಪ್ತ ದೇಶದಿಂದ ಬಂದಾಗ ಮೋಶೆಯು ಇಸ್ರಾಯೇಲರಿಗೆ ತಿಳಿಸಿದ ಆಜ್ಞಾವಿಧಿನಿಯಮಗಳು ಇವೇ.

46ಅವರು ಯೊರ್ದನ್ ನದಿಯ ಆಚೆ ಬೇತ್‍ಪೆಗೋರಿಗೆ ಎದುರಾಗಿರುವ ಕಣಿವೆಯಲ್ಲಿ ಹೆಷ್ಬೋನಿನಲ್ಲಿ ವಾಸಿಸಿದರು. ಅಮೋರಿಯರ ಅರಸನಾದ ಸೀಹೋನನ ದೇಶದಲ್ಲಿ ಮೋಶೆಯೂ ಮತ್ತು ಇಸ್ರಾಯೇಲರೂ ಐಗುಪ್ತದೇಶದಿಂದ ಬಂದಾಗ ಆ ಸೀಹೋನನನ್ನು ಜಯಿಸಿದ್ದರು.

47ಅವರು ಅವನ ರಾಜ್ಯವನ್ನೂ, ಬಾಷಾನ್ ದೇಶದ ಅರಸನಾದ ಓಗನ ರಾಜ್ಯವನ್ನೂ ಮತ್ತು ಯೊರ್ದನ್ ನದಿಯ ಆಚೆ ಪೂರ್ವದಿಕ್ಕಿನಲ್ಲಿದ್ದ ಅಮೋರಿಯರ ಇಬ್ಬರು ಅರಸರ ರಾಜ್ಯಗಳನ್ನು ಗೆದ್ದುಕೊಂಡಿದ್ದರು.

48ಅಂತು ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣ ಮೊದಲುಗೊಂಡು ಹೆರ್ಮೋನ್ ಎಂಬ ಸೀಯೋನ್ ಪರ್ವತದವರೆಗೂ ಮತ್ತು

49ಅರಾಬಾ ಎಂಬ ತಗ್ಗಿನಲ್ಲಿ ಪಿಸ್ಗಾ ಬೆಟ್ಟದ ಬುಡದಲ್ಲಿರುವ ಅರಾಬ್ ಸಮುದ್ರದ ವರೆಗೆ ಯೊರ್ದನ್ ನದಿಯ ಆಚೆ ಇರುವ ಭಾಗವನ್ನೆಲ್ಲಾ ಸ್ವಾಧೀನಮಾಡಿಕೊಂಡಿದ್ದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath