ಕ್ರಿಶ್ಚಿಯನ್ ಧರ್ಮ
ಹಿಂದೆ

ಧರ್ಮೋಪದೇಶಕಾಂಡ 2

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಆಗ ಯೆಹೋವನು ನನಗೆ ಆಜ್ಞಾಪಿಸಿದಂತೆ ನಾವು ಹಿಂದಿರುಗಿ ಅರಣ್ಯಕ್ಕೆ ಹೊರಟು ಕೆಂಪು ಸಮುದ್ರದ ಮಾರ್ಗದಲ್ಲಿ ನಡೆದು ಅನೇಕ ದಿನಗಳು ಸೇಯೀರ್ ಬೆಟ್ಟದ ಸೀಮೆಯನ್ನು ಸುತ್ತುತ್ತಿದ್ದೆವು.

2ಆ ಮೇಲೆ ಯೆಹೋವನು ನನಗೆ,

3“ನೀವು ಈ ಬೆಟ್ಟದ ಸೀಮೆಯನ್ನು ಸುತ್ತಿದ್ದು ಸಾಕು; ಉತ್ತರದಿಕ್ಕಿಗೆ ತಿರುಗಿಕೊಳ್ಳಿರಿ.

4ಮತ್ತು ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸು, ‘ಸೇಯೀರ್ ದೇಶದಲ್ಲಿ ವಾಸವಾಗಿರುವ ನಿಮ್ಮ ಬಂಧುಗಳಾದ ಏಸಾವನ ವಂಶದವರ ದೇಶವನ್ನು ದಾಟುವುದಕ್ಕಿದ್ದೀರಷ್ಟೆ. ಅವರು ನಿಮಗೆ ಭಯಪಡುವರು; ನೀವು ಅವರ ಸಂಗಡ ಯುದ್ಧಕ್ಕೆ ಹೋಗದೆ ಬಹಳ ಜಾಗರೂಕತೆಯಿಂದಿರಬೇಕು.

5ನಾನು ಸೇಯೀರ್ ಬೆಟ್ಟದ ಸೀಮೆಯನ್ನು ಏಸಾವ್ಯರಿಗೇ ಸ್ವದೇಶವಾಗಿ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಹೆಜ್ಜೆಯಿಡುವಷ್ಟು ನೆಲವನ್ನಾದರೂ ಕೊಡುವುದಿಲ್ಲ.

6ನೀವು ಅಲ್ಲಿ ಹಣವನ್ನು ಕೊಟ್ಟು ಆಹಾರಪದಾರ್ಥಗಳನ್ನು ತಿನ್ನಬೇಕು; ನೀರನ್ನು ಕೊಂಡುಕೊಂಡು ಕುಡಿಯಬೇಕು.

7ನೀವು ಕೈಹಾಕಿದ ಎಲ್ಲಾ ಕೆಲಸಗಳನ್ನೂ ನಿಮ್ಮ ದೇವರಾದ ಯೆಹೋವನು ಸಫಲಪಡಿಸಿದ್ದಾನಲ್ಲಾ. ಈ ದೊಡ್ಡ ಅರಣ್ಯದಲ್ಲಿ ನೀವು ಸಂಚರಿಸುತ್ತಿರುವಾಗೆಲ್ಲಾ ಆತನು ನಿಮ್ಮನ್ನು ಪರಾಂಬರಿಸುತ್ತಾ ಬಂದನು. ಈ ನಲ್ವತ್ತು ವರ್ಷ ನಿಮ್ಮ ದೇವರಾದ ಯೆಹೋವನು ನಿಮ್ಮ ಸಂಗಡ ಇದ್ದುದರಿಂದ ನಿಮಗೆ ಏನೂ ಕೊರತೆಯಾಗಲಿಲ್ಲ’” ಎಂದು ಹೇಳಿದನು.

8ಆದಕಾರಣ ನಾವು ಸೇಯೀರಿನಲ್ಲಿರುವ ನಮ್ಮ ಬಂಧುಗಳಾದ ಏಸಾವ್ಯರಿಗೆ ಗೊತ್ತಾಗದಂತೆ ಎಚ್ಚರಿಕೆಯಿಂದ ಅರಾಬದ ಮಾರ್ಗವನ್ನು ಬಿಟ್ಟು ಏಲತ್ ಮತ್ತು ಎಚ್ಯೋನ್ ಗೆಬೆರ್ ಎಂಬ ಪಟ್ಟಣಗಳಿಂದ ಪ್ರಯಾಣಮಾಡಿ ಮೋವಾಬ್ಯರ ಅಡವಿಯ ದಾರಿಯಲ್ಲಿ ನಡೆದೆವು.

9ಆಗ ಯೆಹೋವನು ನನಗೆ, “ನೀವು ಮೋವಾಬ್ಯರಿಗೆ ವೈರಿಗಳಾಗಿ ನಡೆದು ಅವರೊಡನೆ ಯುದ್ಧಮಾಡಬಾರದು. ಲೋಟನ ವಂಶದವರಾದ ಅವರಿಗೆ ನಾನು ಆರ್ ಎಂಬ ಪ್ರದೇಶವನ್ನು ಸ್ವದೇಶವಾಗುವುದಕ್ಕೆ ಕೊಟ್ಟಿರುವುದರಿಂದ ಅದರಲ್ಲಿ ನಿಮಗೆ ಸ್ವತ್ತನ್ನು ಕೊಡುವುದಿಲ್ಲ” ಎಂದು ಆಜ್ಞಾಪಿಸಿದನು.

10ಏಮಿಯರು ಮೊದಲು ಆ ದೇಶದಲ್ಲಿ ವಾಸವಾಗಿದ್ದರು. ಅವರು ಬಲಿಷ್ಠರೂ, ಬಹುಜನರೂ ಮತ್ತು ಅನಾಕೀಮ್ಯರಂತೆ ಎತ್ತರವಾದ ಪುರುಷರಾಗಿದ್ದರು.

11ಅವರು ಅನಾಕ್ಯರಂತೆ ರೆಫಾಯರಿಗೆ ಸೇರಿದವರೆಂದು ಹೇಳುವುದುಂಟು; ಆದರೆ ಮೋವಾಬ್ಯರು ಅವರನ್ನು ಏಮಿಯರೆಂದು ಹೇಳುತ್ತಾರೆ.

12ಹೋರಿಯರು ಸಹ ಪೂರ್ವಕಾಲದಲ್ಲಿ ಸೇಯೀರಿನಲ್ಲಿ ವಾಸವಾಗಿದ್ದರು. ತರುವಾಯ ಇಸ್ರಾಯೇಲರು ತಮಗೆ ಯೆಹೋವನು ಕೊಟ್ಟ ದೇಶವನ್ನು ಹೇಗೆ ಸ್ವಾಧೀನಮಾಡಿಕೊಂಡರೋ ಹಾಗೆಯೇ ಏಸಾವ್ಯರು ಬಂದು ಹೋರಿಯರನ್ನು ಸಂಹರಿಸಿ ಅವರ ದೇಶದಲ್ಲಿ ವಾಸಮಾಡಿದರು.

13ಆಗ ನಾನು, “ಎದ್ದು ಜೆರೆದ್ ಹಳ್ಳವನ್ನು ದಾಟಿರಿ” ಎಂದು ಹೇಳಲು ನಾವು ಜೆರೆದ್ ಹಳ್ಳವನ್ನು ದಾಟಿದೆವು.

14ನಾವು ಕಾದೇಶ್‌ಬರ್ನೇಯದಿಂದ ಹೊರಟು ಜೆರೆದ್ ಹಳ್ಳವನ್ನು ದಾಟಲು ಮೂವತ್ತೆಂಟು ವರ್ಷವಾಯಿತು. ಯೆಹೋವನು ಪ್ರಮಾಣಪೂರ್ವಕವಾಗಿ ಹೇಳಿದ್ದಂತೆ ಅಷ್ಟರಲ್ಲಿ ಆ ತಲೆಮಾರಿನ ಸೈನಿಕರೆಲ್ಲರೂ ಸತ್ತುಹೋಗಿದ್ದರು.

15ಯೆಹೋವನ ಹಸ್ತವು ಅವರಿಗೆ ವಿರುದ್ಧವಾಗಿದ್ದುದರಿಂದ ಪಾಳೆಯದಲ್ಲಿ ಒಬ್ಬನೂ ಉಳಿಯದಂತೆ ನಾಶವಾದರು.

16ಆ ಕಾಲದಲ್ಲಿ ಯುದ್ಧನಿಪುಣರಾಗಿದ್ದ ಸೈನಿಕರೆಲ್ಲರೂ ಸತ್ತುಹೋದರು.

17ಆಗ ಯೆಹೋವನು ನನ್ನೊಂದಿಗೆ ಮಾತನಾಡಿ ನನಗೆ,

18“ನೀವು ಈಗ ಮೋವಾಬ್ಯರ ಪ್ರಾಂತ್ಯವಾಗಿರುವ ಆರ್ ಎಂಬ ಪ್ರದೇಶವನ್ನು ದಾಟುವವರಾಗಿದ್ದೀರಿ.

19ಮುಂದೆ ನೀವು ಅಮೋನಿಯರ ಹತ್ತಿರಕ್ಕೆ ಬರುವಾಗ ಅವರಿಗೆ ತೊಂದರೆಪಡಿಸಲೂ ಬೇಡಿರಿ, ಅವರಿಗೆ ವೈರಿಗಳಾಗಿ ನಡೆದು ಯುದ್ಧಮಾಡಲೂಬೇಡಿರಿ. ನಾನು ಆ ದೇಶವನ್ನು ಲೋಟನ ವಂಶದವರಾದ ಅಮ್ಮೋನಿಯರಿಗೆ ಸ್ವತ್ತಾಗಿ ಕೊಟ್ಟಿರುವುದರಿಂದ ನಿಮಗೆ ಅದರಲ್ಲಿ ಯಾವ ಭಾಗವನ್ನಾದರೂ ಕೊಡುವುದಿಲ್ಲ.”

20ಪೂರ್ವಕಾಲದಲ್ಲಿ ರೆಫಾಯರು ಆ ದೇಶದಲ್ಲಿ ವಾಸವಾಗಿದ್ದುದರಿಂದ ಅದು ರೆಫಾಯರ ದೇಶವೆನಿಸಿಕೊಳ್ಳುತ್ತದೆ. ಅಮ್ಮೋನಿಯರು ಅವರನ್ನು ಜಂಜುಮ್ಯರೆಂದು ಹೇಳುತ್ತಾರೆ.

21ಅವರು ಬಲಿಷ್ಠರೂ, ಬಹುಜನರೂ ಮತ್ತು ಅನಾಕ್ಯರಂತೆ ಎತ್ತರವಾದ ಪುರುಷರೂ ಆಗಿದ್ದರು.

22ಆದರೆ ಹೇಗೆ ಯೆಹೋವನು ಸೇಯೀರಿನಲ್ಲಿರುವ ಏಸಾವ್ಯರಿಗೋಸ್ಕರ ಹೋರಿಯರನ್ನು ಹೊರಡಿಸಿದಾಗ ಏಸಾವ್ಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಇಂದಿನವರೆಗೂ ಅಲ್ಲೇ ವಾಸವಾಗಿದ್ದಾರೋ,

23ಮತ್ತು ಹೇಗೆ ಕಫ್ತೋರಿಂದ ಬಂದ ಕಫ್ತೋರ್ಯರು ಗಾಜಾ ಪಟ್ಟಣದವರೆಗೂ ಹಳ್ಳಿಗಳಲ್ಲಿದ್ದ ಅವ್ವಿಯರನ್ನು ನಾಶಮಾಡಿ ಅವರ ಸ್ಥಳದಲ್ಲಿ ವಾಸಮಾಡಿದರೋ, ಹಾಗೆಯೇ ಯೆಹೋವನು ರೆಫಾಯರನ್ನು ಅಮ್ಮೋನಿಯರ ನಾಡಿನಿಂದ ಹೊರಗೆ ಹೋಗುವಂತೆ ಮಾಡಿದನು. ಅಮ್ಮೋನಿಯರು ಆ ದೇಶವನ್ನು ಸ್ವಾಧೀನಮಾಡಿಕೊಂಡು ಅವರಲ್ಲಿ ವಾಸಮಾಡ ತೊಡಗಿದರು.

24“ಈಗ ನೀವು ಹೊರಟು ಅರ್ನೋನ್ ಹಳ್ಳವನ್ನು ದಾಟಿರಿ. ಅಮೋರಿಯನಾಗಿರುವ ಹೆಷ್ಬೋನಿನ ಅರಸನಾದ ಸೀಹೋನನು ನಿಮ್ಮಿಂದ ಸೋತುಹೋಗುವನು, ಅವನ ರಾಜ್ಯವು ನಿಮಗೇ ವಶವಾಗಬೇಕೆಂದು ನಾನು ಅನುಗ್ರಹಿಸಿದ್ದೇನೆ. ಅವನೊಡನೆ ಯುದ್ಧಮಾಡಿ, ಆ ದೇಶವನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಿಸಿರಿ.

25ಲೋಕದಲ್ಲಿರುವ ಎಲ್ಲಾ ಜನಗಳಿಗೂ ನಿಮ್ಮಿಂದ ದಿಗಿಲೂ ಮತ್ತು ಹೆದರಿಕೆಯೂ ಉಂಟಾಗುವಂತೆ ಮಾಡುತ್ತೇನೆ. ಇಂದಿನಿಂದ ನಿಮ್ಮ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ಎಲ್ಲರೂ ಗಡಗಡನೆ ನಡುಗಿ ಸಂಕಟಪಡುವರು” ಎಂದು ಹೇಳಿದನು.

26ಆಗ ನಾನು ಕೆದೇಮೋತಿನ ಅರಣ್ಯದಿಂದ ಹೆಷ್ಬೋನಿನ ಅರಸನಾದ ಸೀಹೋನನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ,

27“ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಮಗೆ ಅಪ್ಪಣೆಯಾಗಬೇಕು. ನಾವು ಎಡಬಲಕ್ಕೆ ತಿರುಗದೆ ದಾರಿಹಿಡಿದು ನಡೆದುಹೋಗುವೆವು.

28ನಮ್ಮಿಂದ ಕ್ರಯ ತೆಗೆದುಕೊಂಡು ಆಹಾರಪದಾರ್ಥಗಳನ್ನೂ ಮತ್ತು ಕುಡಿಯಲಿಕ್ಕೆ ನೀರನ್ನೂ ಕೊಡಿರಿ.

29ನಾವು ಯೊರ್ದನ್ ನದಿಯನ್ನು ದಾಟಿ ನಮ್ಮ ದೇವರಾದ ಯೆಹೋವನು ನಮಗೆ ಕೊಡುವ ದೇಶವನ್ನು ಸೇರಬೇಕೆಂದಿದ್ದೇವೆ. ಸೇಯೀರಿನಲ್ಲಿರುವ ಏಸಾವ್ಯರೂ ಮತ್ತು ಆರ್ ಪ್ರದೇಶದಲ್ಲಿರುವ ಮೋವಾಬ್ಯರೂ ನಮಗೆ ದಾರಿ ಕೊಟ್ಟಂತೆ ನೀನೂ ಕೊಡಬೇಕು. ಕಾಲ್ನಡೆಯಾಗಿ ನಿನ್ನ ದೇಶವನ್ನು ದಾಟಿಹೋಗುವುದಕ್ಕೆ ನಿನ್ನ ಅಪ್ಪಣೆಯಾಗಬೇಕೇ ಹೊರತು ಬೇರೆ ಏನೂ ಬೇಕಿಲ್ಲ” ಎಂದು ಸಮಾಧಾನಕರವಾದ ಮಾತುಗಳಿಂದ ಹೇಳಿ ಕಳುಹಿಸಿದೆನು.

30ಆದರೆ ಯೆಹೋವನು ಅವನಿಗೆ ಮೂರ್ಖಬುದ್ಧಿಯನ್ನು ಕೊಟ್ಟು ಹಟವನ್ನು ಹುಟ್ಟಿಸಿದ್ದರಿಂದ ಅವನು ಸಮ್ಮತಿಸಲಿಲ್ಲ. ಅವನು ನಿಮ್ಮಿಂದ ಸೋತುಹೋಗಬೇಕೆಂಬುದೇ ನಿಮ್ಮ ದೇವರಾದ ಯೆಹೋವನ ಸಂಕಲ್ಪವಾಗಿತ್ತು; ಅದು ಈಗಾಗಲೇ ನೆರವೇರಿತಲ್ಲಾ.

31ತರುವಾಯ ಯೆಹೋವನು ನನಗೆ, “ಈಗ ನಾನು ಸೀಹೋನನನ್ನೂ ಮತ್ತು ಅವನ ದೇಶವನ್ನೂ ನಿಮಗೆ ವಶಪಡಿಸುವುದಕ್ಕೆ ಪ್ರಾರಂಭಿಸಿದ್ದೇನೆ; ಅದನ್ನು ಸ್ವಾಧೀನಮಾಡಿಕೊಳ್ಳುವುದಕ್ಕೆ ಪ್ರಾರಂಭಮಾಡಿರಿ” ಎಂದು ಹೇಳಿದನು.

32ಸೀಹೋನನು ತನ್ನ ಜನರೆಲ್ಲರ ಸಮೇತ ನಮ್ಮೊಡನೆ ಯುದ್ಧಮಾಡುವುದಕ್ಕೆ ಯಹಜಿಗೆ ಹೊರಟುಬಂದನು.

33ನಮ್ಮ ದೇವರಾದ ಯೆಹೋವನು ಅವನನ್ನು ನಮ್ಮಿಂದ ಪರಾಜಯಪಡಿಸಿದನು. ನಾವು ಅವನನ್ನೂ, ಅವನ ಮಕ್ಕಳನ್ನೂ ಮತ್ತು ಜನರೆಲ್ಲರನ್ನೂ ಸಂಹರಿಸಿದೆವು.

34ಆ ಕಾಲದಲ್ಲಿ ನಾವು ಅವನ ಎಲ್ಲಾ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡು ಅವುಗಳಲ್ಲಿದ್ದ ಗಂಡಸರನ್ನೂ, ಹೆಂಗಸರನ್ನು ಮತ್ತು ಮಕ್ಕಳನ್ನೂ ನಿಶ್ಶೇಷವಾಗಿ ಹತಮಾಡಿದೆವು; ಒಬ್ಬನನ್ನೂ ಉಳಿಸಲಿಲ್ಲ.

35ಪಶುಗಳನ್ನು ಮಾತ್ರ ಉಳಿಸಿ ನಮ್ಮ ಸ್ವಂತಕ್ಕಾಗಿ ತೆಗೆದುಕೊಂಡು ಊರುಗಳನ್ನು ಸೂರೆಮಾಡಿಬಿಟ್ಟೆವು.

36ಅರ್ನೋನ್ ತಗ್ಗಿನ ಅಂಚಿನಲ್ಲಿರುವ ಅರೋಯೇರ್ ಪಟ್ಟಣವು ಮತ್ತು ತಗ್ಗಿನಲ್ಲಿಯೇ ಇರುವ ಪಟ್ಟಣವು ಇವುಗಳು ಮೊದಲುಗೊಂಡು ಗಿಲ್ಯಾದ್ ಸೀಮೆಯವರೆಗೂ ಯಾವ ಪಟ್ಟಣವನ್ನು ಜಯಿಸಲು ನಮಗೆ ಅಸಾಧ್ಯವಾಗಲಿಲ್ಲ. ನಮ್ಮ ದೇವರಾದ ಯೆಹೋವನು ಅವುಗಳನ್ನೆಲ್ಲಾ ನಮ್ಮ ಕೈಗೆ ಸಿಕ್ಕುವಂತೆ ಮಾಡಿದನು.

37ಅಮ್ಮೋನಿಯರ ದೇಶವನ್ನು ಮಾತ್ರ ಅಂದರೆ ಯಬ್ಬೋಕ್ ಹೊಳೆಯ ಬಳಿಯಲ್ಲಿರುವ ಪ್ರದೇಶವು ಮತ್ತು ಬೆಟ್ಟದ ಸೀಮೆಯ ಊರುಗಳು ಇವೇ ಮೊದಲಾದ ಸ್ಥಳಗಳನ್ನು ನೀವು ಅತಿಕ್ರಮಿಸಲಿಲ್ಲ; ಅಲ್ಲಿಗೆ ಹೋಗಲೇ ಬಾರದೆಂದು ನಮ್ಮ ದೇವರಾದ ಯೆಹೋವನು ಆಜ್ಞಾಪಿಸಿದ್ದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath