ಕ್ರಿಶ್ಚಿಯನ್ ಧರ್ಮ
ಹಿಂದೆ

ಧರ್ಮೋಪದೇಶಕಾಂಡ 28

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ, ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಗಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.

2ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು ನಡೆದರೆ ಈ ಶುಭಗಳೆಲ್ಲಾ ನಿಮಗೆ ಪ್ರಾಪ್ತವಾಗುವವು. ಅವು ಯಾವುವೆಂದರೆ:

3ನಿಮಗೆ ಊರಿನಲ್ಲಿಯೂ ಮತ್ತು ಹೊಲದಲ್ಲಿಯೂ ಶುಭವುಂಟಾಗುವುದು.

4ನಿಮ್ಮ ಸಂತಾನದವರಿಗೂ, ವ್ಯವಸಾಯಗಳಿಗೂ, ದನ, ಕುರಿ ಮುಂತಾದ ಪಶುಗಳಿಗೂ ಶುಭವುಂಟಾಗುವುದು.

5ನಿಮ್ಮ ಪುಟ್ಟಿಗಳಿಗೂ ಮತ್ತು ಕೊಣವಿಗೆಗಳಿಗೂ ಶುಭವುಂಟಾಗುವುದು.

6ನೀವು ಹೊರಗೆ ಹೋಗುವಾಗಲೂ ಒಳಗೆ ಬರುವಾಗಲೂ ಶುಭವುಂಟಾಗುವುದು.

7ನಿಮ್ಮ ವಿರುದ್ಧವಾಗಿ ಬರುವ ಶತ್ರುಗಳು ನಿಮ್ಮಿಂದ ಸೋತುಹೋಗುವಂತೆ ಯೆಹೋವನು ಮಾಡುವನು; ಅವರು ಒಂದೇ ದಾರಿಯಿಂದ ನಿಮ್ಮ ವಿರುದ್ಧವಾಗಿ ಬಂದರೂ ಏಳು ದಾರಿಗಳಿಂದ ಓಡಿಹೋಗುವರು.

8ನಿಮ್ಮ ಕಣಜಗಳು ಯಾವಾಗಲೂ ತುಂಬಿರುವಂತೆಯೂ ಮತ್ತು ನಿಮ್ಮ ಪ್ರಯತ್ನಗಳೆಲ್ಲಾ ಸಫಲವಾಗುವಂತೆಯೂ ನಿಮ್ಮ ದೇವರಾದ ಯೆಹೋವನು ನಿಮಗೆ ಶುಭವನ್ನು ಅನುಗ್ರಹಿಸುವನು. ಆತನು ನಿಮಗೆ ಕೊಡುವ ದೇಶದಲ್ಲಿ ನಿಮಗೆ ಶುಭವನ್ನೇ ಉಂಟುಮಾಡುವನು.

9ನೀವು ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನು ಅನುಸರಿಸಿ ಆತನು ಹೇಳಿದ ಮಾರ್ಗದಲ್ಲೇ ನಡೆದರೆ, ಆತನು ವಾಗ್ದಾನಮಾಡಿದಂತೆ ನಿಮ್ಮನ್ನು ತನಗೋಸ್ಕರ ಮೀಸಲಾದ ಜನರನ್ನಾಗಿ ಸ್ಥಾಪಿಸುವನು.

10ಭೂಮಿಯಲ್ಲಿರುವ ಎಲ್ಲಾ ಜನಗಳೂ ನಿಮ್ಮನ್ನು ಯೆಹೋವನ ಜನರೆಂದು ತಿಳಿದುಕೊಂಡು ನಿಮಗೆ ಭಯಪಡುವರು.

11ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣ ಮಾಡಿದ ಮೇರೆಗೆ ನಿಮಗೆ ಕೊಡುವ ದೇಶದಲ್ಲಿ ಆತನು ನಿಮ್ಮ ಸಂತಾನ, ಪಶು ಮತ್ತು ವ್ಯವಸಾಯಗಳಲ್ಲಿ ಸಮೃದ್ಧಿಯನ್ನು ಉಂಟುಮಾಡುವನು.

12ಯೆಹೋವನು ಆಕಾಶದಲ್ಲಿರುವ ತನ್ನ ಜಲನಿಧಿಯನ್ನು ತೆರೆದು ನಿಮ್ಮ ದೇಶದ ಮೇಲೆ ಬೆಳೆಗೆ ಬೇಕಾದ ಹಾಗೆ ಮಳೆಯನ್ನು ಸುರಿಸಿ, ನಿಮ್ಮ ಎಲ್ಲಾ ವ್ಯವಸಾಯವು ಫಲಭರಿತವಾಗುವಂತೆ ಸಾಫಲ್ಯತೆ ಉಂಟುಮಾಡುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಸಾಲತೆಗೆದುಕೊಳ್ಳುವುದಿಲ್ಲ.

13ನಿಮ್ಮ ದೇವರಾದ ಯೆಹೋವನ ಆಜ್ಞೆಗಳನ್ನೇ ಲಕ್ಷ್ಯವಿಟ್ಟು ಕೇಳಿದರೆ, ನೀವು ಎಲ್ಲರಿಗಿಂತಲೂ ಮೇಲಿನವರಾಗಿರುವಿರೇ ಹೊರತು ಇತರರಿಗೆ ಅಧೀನರಾಗುವುದಿಲ್ಲ.

14ನಾನು ಈಗ ನಿಮಗೆ ಬೋಧಿಸುವ ಮಾತುಗಳನ್ನು ಬಿಟ್ಟು ಎಡಕ್ಕಾಗಲಿ ಅಥವಾ ಬಲಕ್ಕಾಗಲಿ ತಿರುಗದೆ, ಬೇರೆ ದೇವರುಗಳನ್ನು ಅವಲಂಬಿಸದೆ, ಅವುಗಳನ್ನೇ ಅನುಸರಿಸಿ ನಡೆದರೆ ಆತನು ಇತರರಿಗೆ ನಿಮ್ಮನ್ನು ಅಧೀನಮಾಡದೆ ಎಲ್ಲರಿಗೂ ಶಿರಸ್ಸನ್ನಾಗಿಯೇ ಮಾಡುವನು.

15ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡದೆ, ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸದೆ ಹೋದರೆ ಈ ಶಾಪಗಳು ನಿಮಗೆ ಪ್ರಾಪ್ತವಾಗುವವು:

16ನಿಮಗೆ ಊರಿನಲ್ಲಿಯೂ ಮತ್ತು ಅಡವಿಯಲ್ಲಿಯೂ ಶಾಪ ಉಂಟಾಗುವುದು.

17ನಿಮ್ಮ ಪುಟ್ಟಿಗಳಿಗೂ ಮತ್ತು ಕೊಣವಿಗೆಗಳಿಗೂ ಶಾಪ ಉಂಟಾಗುವುದು.

18ನಿಮ್ಮ ಸಂತಾನ, ವ್ಯವಸಾಯ, ದನ ಮತ್ತು ಕುರಿಗಳಿಗೂ ಶಾಪ ಉಂಟಾಗುವುದು.

19ನೀವು ಹೊರಗೆ ಹೋಗುವಾಗಲೂ, ಒಳಗೆ ಬರುವಾಗಲೂ ಶಾಪ ಉಂಟಾಗುವುದು.

20ನೀವು ದುರ್ನಡತೆಯುಳ್ಳವರಾಗಿ ಯೆಹೋವನನ್ನು ಬಿಟ್ಟಿದ್ದರಿಂದ ಆತನು ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿಯೂ ವಿಪತ್ತು, ಕಳವಳ, ಶಾಪ ಇವುಗಳನ್ನು ಉಂಟುಮಾಡುತ್ತಾ ನಿಮ್ಮನ್ನು ಬೇಗನೆ ನಾಶಮಾಡುವನು.

21ವ್ಯಾಧಿಯು ನಿಮಗೆ ಹತ್ತಿಕೊಂಡೇ ಇರುವಂತೆ ಯೆಹೋವನು ಮಾಡಿ, ನೀವು ಸ್ವಾಧೀನ ಮಾಡಿಕೊಳ್ಳುವುದಕ್ಕೆ ಹೋಗುವ ದೇಶದಲ್ಲಿ ನಿಮ್ಮಲ್ಲಿ ಒಬ್ಬರೂ ಉಳಿಯದಂತೆ ಮಾಡುವನು.

22ಆತನು ನಿಮ್ಮನ್ನು ಕ್ಷಯರೋಗ, ಚಳಿಜ್ವರ, ಉರಿತ, ಉಷ್ಣಜ್ವರಗಳಿಂದಲೂ, ದೇಶವನ್ನು ಕ್ಷಾಮದಿಂದಲೂ ಮತ್ತು ಬೆಳೆಯನ್ನು ಕಾಡಿನ ಬಿಸಿಗಾಳಿಗಳಿಂದಲೂ ನರಳುವಂತೆ ಮಾಡುವನು. ನೀವು ಸಾಯುವ ತನಕ ಇವು ನಿಮ್ಮನ್ನು ಬೆನ್ನತ್ತುವವು.

23ಮೇಲೆ ಆಕಾಶವು ಮಳೆಸುರಿಸದೆ ತಾಮ್ರದಂತೆಯೂ ಮತ್ತು ಕೆಳಗೆ ಭೂಮಿಯು ಬೆಳೆಕೊಡದೆ ಕಬ್ಬಿಣದಂತೆಯೂ ಇರುವವು.

24ನಿಮ್ಮ ದೇಶದಲ್ಲಿ ಯೆಹೋವನು ಆಕಾಶದಿಂದ ಮಳೆಗೆ ಬದಲಾಗಿ ಧೂಳನ್ನೂ ಮತ್ತು ಉಸುಬನ್ನೂ ನಿಮ್ಮ ಮೇಲೆ ಸುರಿಸುವನು; ಅದುದರಿಂದ ನೀವು ನಾಶವಾಗಿ ಹೋಗುವಿರಿ.

25ನೀವು ಶತ್ರುಗಳಿಂದ ಸೋಲನ್ನು ಅನುಭವಿಸುವಂತೆ ಯೆಹೋವನು ಮಾಡುವನು; ನೀವು ಒಂದೇ ದಾರಿಯಿಂದ ಅವರೆದುರಿಗೆ ಹೋಗಿ ಏಳು ದಾರಿಗಳಿಂದ ಓಡಿಹೋಗುವಿರಿ. ಲೋಕದ ಎಲ್ಲಾ ರಾಜ್ಯಗಳವರೂ ಇದನ್ನು ಕಂಡು ಬೆರಗಾಗುವರು.

26ನಿಮ್ಮ ಹೆಣಗಳು ಪಕ್ಷಿಗಳಿಗೂ ಮತ್ತು ಕಾಡು ಮೃಗಗಳಿಗೂ ಆಹಾರವಾಗುವವು; ಅವುಗಳನ್ನು ಬೆದರಿಸುವವರು ಯಾರೂ ಇರುವುದಿಲ್ಲ.

27ಐಗುಪ್ತ್ಯರ ಹುಣ್ಣು, ಬಾವು, ತುರಿಕಜ್ಜಿ ಮುಂತಾದ ವಾಸಿಯಾಗದ ರೋಗಗಳಿಂದ ಯೆಹೋವನು ನಿಮ್ಮನ್ನು ಬಾಧಿಸುವನು.

28ಚಿತ್ತಭ್ರಮಣೆ, ಕುರುಡುತನ, ಮನೋವಿಸ್ಮಯ ಇವುಗಳಿಂದ ಯೆಹೋವನು ನಿಮ್ಮನ್ನು ಬಾಧಿಸುವನು.

29ನೀವು ಕುರುಡರಂತೆ ಮಧ್ಯಾಹ್ನದಲ್ಲಿಯೂ ಕತ್ತಲಾಯಿತೆಂದು ತಡವರಿಸುತ್ತಾ ಇರುವಿರಿ; ನೀವು ಮಾಡುವ ಯಾವ ಕೆಲಸವೂ ಕೈಗೂಡುವುದಿಲ್ಲ. ಅನ್ಯರು ಯಾವಾಗಲೂ ನಿಮ್ಮನ್ನು ಪೀಡಿಸುತ್ತಾ ನಿಮ್ಮ ಸೊತ್ತನ್ನು ಸೂರೆಮಾಡುತ್ತಾ ಇರುವರು; ತಪ್ಪಿಸುವವರು ಯಾರೂ ಇರುವುದಿಲ್ಲ.

30ನೀವು ಮದುವೆಮಾಡಿಕೊಂಡ ಸ್ತ್ರೀಯನ್ನು ಮತ್ತೊಬ್ಬನು ಮಾನಭಂಗಪಡಿಸುವನು; ನೀವು ಕಟ್ಟಿಕೊಂಡ ಮನೆಯಲ್ಲಿ ಮತ್ತೊಬ್ಬನು ವಾಸಮಾಡುವನು; ನೀವು ಮಾಡಿಕೊಂಡ ದ್ರಾಕ್ಷಿತೋಟದ ಬೆಳೆಯು ನಿಮಗೆ ದೊರೆಯುವುದಿಲ್ಲ.

31ನಿಮ್ಮ ದನಗಳನ್ನು ನಿಮ್ಮ ಕಣ್ಣು ಮುಂದೆ ಕೊಯ್ಯುವರು; ಅವುಗಳ ಮಾಂಸವು ನಿಮಗೆ ಸಿಕ್ಕುವುದಿಲ್ಲ. ನಿಮ್ಮ ಕತ್ತೆಯನ್ನು ನಿಮ್ಮ ಮುಂದೆಯೇ ಬಲಾತ್ಕಾರದಿಂದ ಹಿಡಿದುಕೊಂಡುಹೋಗುವರು. ಕೇಳಿದರೆ ನಿಮಗೆ ಹಿಂದಕ್ಕೆ ಕೊಡುವುದಿಲ್ಲ. ನಿಮ್ಮ ಆಡು ಮತ್ತು ಕುರಿಗಳು ಶತ್ರುಗಳ ಪಾಲಾಗುವವು. ನಿಮಗೆ ರಕ್ಷಕರು ಯಾರೂ ಇರುವುದಿಲ್ಲ.

32ನಿಮ್ಮ ಗಂಡು ಮತ್ತು ಹೆಣ್ಣು ಮಕ್ಕಳನ್ನು ನಿಮ್ಮ ಮುಂದೆಯೇ ಹಿಡಿದು ಅನ್ಯರಿಗೆ ವಶಪಡಿಸುವರು; ನೀವು ಹಗಲೆಲ್ಲಾ ಅವರನ್ನು ಕಾಣಬೇಕೆಂದು ಹಂಬಲಿಸುತ್ತಾ ಕಂಗೆಡುವಿರಿ; ಆದರೆ ನಿಮ್ಮ ಪ್ರಯತ್ನವೇನೂ ಸಾಗುವುದಿಲ್ಲ.

33ನಿಮಗೆ ಗುರುತೇ ಇಲ್ಲದ ಜನಾಂಗದವರು ಬಂದು ನಿಮ್ಮ ದೇಶದ ಬೆಳೆಯನ್ನೂ ಮತ್ತು ನಿಮ್ಮ ಕಷ್ಟಾರ್ಜಿತವನ್ನೂ ತಿಂದುಬಿಡುವರು. ನೀವಾದರೋ ಯಾವಾಗಲೂ ಹಿಂಸೆಗೂ ಬಲಾತ್ಕಾರಕ್ಕೂ ಗುರಿಯಾಗಿ,

34ನಿಮ್ಮ ಮುಂದೆ ನಡೆಯುವ ಸಂಗತಿಗಳ ದೆಸೆಯಿಂದ ಹುಚ್ಚರಾಗಿ ಹೋಗುವಿರಿ.

35ಯೆಹೋವನು ನಿಮ್ಮ ಮೊಣಕಾಲುಗಳಲ್ಲಿಯೂ, ತೊಡೆಗಳಲ್ಲಿಯೂ ಮತ್ತು ಅಂಗಾಲು ಮೊದಲುಗೊಂಡು ನಡುನೆತ್ತಿಯ ವರೆಗೂ ವಾಸಿಯಾಗದ ಕೆಟ್ಟ ಹುಣ್ಣುಗಳನ್ನು ಹುಟ್ಟಿಸಿ ಬಾಧಿಸುವನು.

36ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಜನಾಂಗದವರ ದೇಶಕ್ಕೆ ಯೆಹೋವನು ನಿಮ್ಮನ್ನೂ ಮತ್ತು ನೀವು ನೇಮಿಸಿಕೊಳ್ಳುವ ಅರಸರನ್ನೂ ಒಯ್ಯುವನು; ಅಲ್ಲಿ ನೀವು ಮರದ ದೇವರುಗಳನ್ನೂ ಮತ್ತು ಕಲ್ಲಿನ ದೇವರುಗಳನ್ನೂ ಸೇವಿಸುವಿರಿ.

37ಯೆಹೋವನು ನಿಮ್ಮನ್ನು ನಡೆಸುವ ಜನಾಂಗಗಳಲ್ಲಿ ನೀವು ಭೀಕರತೆಗೂ, ಗಾದೆಗೂ ಮತ್ತು ಪರಿಹಾಸ್ಯಕ್ಕೂ ಗುರಿಯಾಗುವಿರಿ.

38ನೀವು ಹೊಲದಲ್ಲಿ ಎಷ್ಟು ಬೀಜವನ್ನು ಬಿತ್ತಿದ್ದರೂ ಮಿಡತೆಯ ದಂಡು ಬಂದು ಅದನ್ನು ತಿಂದು ಬಿಡುವುದರಿಂದ ನಿಮಗೆ ದೊರೆಯುವ ಬೆಳೆ ಅತ್ಯಲ್ಪವಾಗುವುದು.

39ನೀವು ದ್ರಾಕ್ಷಿ ವ್ಯವಸಾಯವನ್ನು ಎಷ್ಟು ಮಾಡಿದರೂ ಅದರ ಹಣ್ಣುಗಳನ್ನು ಹುಳಗಳೇ ತಿಂದುಹಾಕುವುದರಿಂದ ನೀವು ಅದರ ಸಾರವನ್ನು ರುಚಿನೋಡಲು ಆಗುವುದಿಲ್ಲ.

40ನಿಮ್ಮ ಎಲ್ಲಾ ಪ್ರದೇಶಗಳಲ್ಲಿ ಎಣ್ಣೇಮರಗಳು ಎಷ್ಟಿದ್ದರೂ ಅವುಗಳ ಕಾಯಿಗಳು ಉದುರಿಹೋಗುವುದರಿಂದ ನೀವು ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದಿಲ್ಲ.

41ನಿಮಗೆ ಗಂಡು ಮತ್ತು ಹೆಣ್ಣು ಮಕ್ಕಳು ಎಷ್ಟು ಹುಟ್ಟಿದರೂ ಅವರು ಸೆರೆಯವರಾಗಿ ಒಯ್ಯಲ್ಪಡುವುದರಿಂದ ನಿಮ್ಮ ಬಳಿಯಲ್ಲಿ ಇರುವುದಿಲ್ಲ.

42ನಿಮ್ಮ ಎಲ್ಲಾ ಮರಗಳೂ ಮತ್ತು ಪೈರುಗಳೂ ಮಿಡತೆಯ ಪಾಲಾಗುವವು.

43ನಿಮ್ಮ ಮಧ್ಯದಲ್ಲಿರುವ ಅನ್ಯರು ನಿಮಗಿಂತಲೂ ಹೆಚ್ಚೆಚ್ಚಾಗಿ ಅಭಿವೃದ್ಧಿಗೆ ಬರುವರು; ನೀವೋ ಕಡಿಮೆಯಾಗುತ್ತಾ ಹೀನಸ್ಥಿತಿಗೆ ಬರುವಿರಿ.

44ಅವರು ನಿಮಗೆ ಸಾಲಕೊಡುವರೇ ಹೊರತು ನೀವು ಅವರಿಗೆ ಸಾಲ ಕೊಡುವುದಿಲ್ಲ. ನೀವು ಅವರಿಗೆ ಅಧೀನರಾಗುವಿರಿ; ಅವರು ನಿಮಗೆ ಶಿರಸ್ಸಾಗುವರು.

45ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಡದೆಯೂ, ಆತನು ನೇಮಿಸಿದ ಆಜ್ಞಾವಿಧಿಗಳನ್ನು ಅನುಸರಿಸದೆಯೂ ಹೋದುದರಿಂದ ಈ ಎಲ್ಲಾ ಅಶುಭಗಳು ನಿಮಗೆ ಪ್ರಾಪ್ತವಾಗಿ ನಿಮ್ಮನ್ನು ಹಿಂದಟ್ಟಿ ಹಿಡಿದು ಕಡೆಗೆ ನಾಶಮಾಡುವವು.

46ಇವು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಯಾವಾಗಲೂ ಪ್ರಾಪ್ತವಾಗುತ್ತಾ ಎಲ್ಲರಿಗೂ ಎಚ್ಚರಿಕೆಯನ್ನೂ ಮತ್ತು ಬೆರಗನ್ನೂ ಉಂಟುಮಾಡುವವು.

47ನಿಮಗೆ ಸರ್ವಸಮೃದ್ಧಿಯುಂಟಾದ ಕಾಲದಲ್ಲಿಯೂ ನೀವು ನಿಮ್ಮ ದೇವರಾದ ಯೆಹೋವನನ್ನು ಹರ್ಷಾನಂದಗಳುಳ್ಳವರಾಗಿ ಸೇವಿಸದೆ ಹೋದುದರಿಂದ,

48ಯೆಹೋವನು ನಿಮ್ಮ ಮೇಲೆ ಶತ್ರುಗಳನ್ನು ಬರಮಾಡುವನು; ಆಗ ನೀವು ಹಸಿವೆ, ಬಾಯಾರಿಕೆಗಳುಳ್ಳವರಾಗಿ, ಬಟ್ಟೆಯೂ ಮತ್ತು ಏನೂ ಇಲ್ಲದವರಾಗಿ ಆ ಶತ್ರುಗಳಿಗೇ ಸೇವಕರಾಗಬೇಕಾಗುವುದು. ಯೆಹೋವನು ಕಬ್ಬಿಣದ ನೊಗವನ್ನು ಹೇರಿಸಿ ನಿಮ್ಮನ್ನು ನಾಶಮಾಡುವನು.

49ರಣಹದ್ದು ಹೇಗೆ ದೂರದಿಂದ ಹಾರಿಬರುವುದೋ ಹಾಗೆಯೇ ನಿಮಗೆ ತಿಳಿಯದ ಭಾಷೆಯನ್ನಾಡುವ ಒಂದು ಜನಾಂಗವು ನಿಮ್ಮ ಮೇಲೆ ಬರುವಂತೆ ಯೆಹೋವನು ಮಾಡುವನು.

50ಆ ಜನಾಂಗದವರು ಕ್ರೂರಮುಖವುಳ್ಳವರಾಗಿ ನಿಮ್ಮನ್ನು ವೃದ್ಧರೆಂದು ಮರ್ಯಾದೆ ತೋರಿಸುವುದಿಲ್ಲ ಮತ್ತು ಚಿಕ್ಕವರೆಂದು ಕನಿಕರಿಸುವುದಿಲ್ಲ.

51ಅವರು ನಿಮ್ಮ ದನಗಳನ್ನೂ ಮತ್ತು ಬೆಳೆಗಳನ್ನೂ ತಿಂದುಬಿಟ್ಟು ನಿಮಗೆ ಧಾನ್ಯವನ್ನಾಗಲಿ, ದ್ರಾಕ್ಷಾರಸವನ್ನಾಗಲಿ, ಎಣ್ಣೆಯನ್ನಾಗಲಿ, ದನ ಮತ್ತು ಕುರಿಗಳ ಸಂತಾನವನ್ನಾಗಲಿ ಉಳಿಸದೆ ನಿಮ್ಮನ್ನು ಸಂಪೂರ್ಣವಾಗಿ ನಾಶಮಾಡುವರು.

52ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ದೇಶದ ಎಲ್ಲಾ ಪಟ್ಟಣಗಳಿಗೂ ಅವರು ಮುತ್ತಿಗೆಹಾಕಿ, ನೀವು ನಂಬಿಕೊಂಡಿದ್ದ ಎತ್ತರವಾದ ಕೊತ್ತಲುಗಳುಳ್ಳ ಗೋಡೆಗಳನ್ನು ಕೆಡವಿಬಿಡುವರು.

53ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವುದರಿಂದ ನೀವು ನಿಮ್ಮ ಸಂತಾನವನ್ನೇ ಅಂದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಕೊಟ್ಟಿರುವ ಗಂಡು ಮತ್ತು ಹೆಣ್ಣು ಮಕ್ಕಳ ಮಾಂಸವನ್ನೇ ತಿನ್ನುವಿರಿ.

54ನಿಮ್ಮಲ್ಲಿ ಮೃದುಸ್ವಭಾವಿಯೂ ಮತ್ತು ಸೂಕ್ಷ್ಮಗುಣವುಳ್ಳವನು ಆಗಿರುವ ಸಹೋದರನು ಆಹಾರಕ್ಕಾಗಿ ತನ್ನ ಸಹೋದರ, ಪ್ರೀತಿಯ ಹೆಂಡತಿ ಮತ್ತು ತನ್ನ ಮಕ್ಕಳನ್ನು ದ್ವೇಷಿಸುವನು.

55ಶತ್ರುಗಳು ನಿಮ್ಮ ಎಲ್ಲಾ ಪಟ್ಟಣಗಳಿಗೆ ಮುತ್ತಿಗೆಹಾಕಿ, ನಿಮ್ಮನ್ನು ಇಕ್ಕಟ್ಟಿಗೆ ಸಿಕ್ಕಿಸುವ ಕಾಲದಲ್ಲಿ ತನಗೆ ತಿನ್ನಲಿಕ್ಕೆ ಏನೂ ಉಳಿಯದೆ ಹೋಗುವುದರಿಂದ ಅವನು ತನ್ನ ಮಕ್ಕಳ ಮಾಂಸವನ್ನು ತಾನೇ ತಿನ್ನಬೇಕೆಂದು ಅಣ್ಣತಮ್ಮಂದಿರಿಗೂ, ಪ್ರಾಣಪ್ರಿಯಳಾದ ಹೆಂಡತಿಗೂ ಮತ್ತು ಉಳಿದ ಮಕ್ಕಳಿಗೂ ಕೋಪಗೊಂಡವನಂತೆ ನಟಿಸುತ್ತಾ ಆ ಮಾಂಸದಲ್ಲಿ ಅವರಿಗೆ ಸ್ವಲ್ಪವನ್ನಾದರೂ ಕೊಡದೆ ಹೋಗುವನು.

56ಶತ್ರುಗಳು ನಿಮ್ಮ ಪಟ್ಟಣಗಳಿಗೆ ಮುತ್ತಿಗೆ ಹಾಕಿ, ನಿಮ್ಮನ್ನು ಬಹಳವಾಗಿ ಹಿಂಸಿಸುವ ಕಾಲದಲ್ಲಿ ಕೋಮಲತೆಯ ಮತ್ತು ಅತಿಸೂಕ್ಷ್ಮತೆಯ ದೆಸೆಯಿಂದ ಅಂಗಾಲನ್ನೂ ನೆಲಕ್ಕೆ ಇಡದವಳಾದ ಸ್ತ್ರೀಯು ತಿನ್ನಲಿಕ್ಕೆ ಏನೂ ಇಲ್ಲದವಳಾಗಿ, ನರಳುವಾಗ

57ತಾನು ಆಗಲೇ ಹೆತ್ತ ಮಗುವಿನ ಮಾಂಸವನ್ನೂ ರಹಸ್ಯವಾಗಿ ತಿನ್ನಬೇಕೆಂದು ಯೋಚಿಸಿ, ಪ್ರಾಣಪ್ರಿಯನಾದ ಗಂಡನಿಗೂ, ಮಕ್ಕಳಿಗೂ ತಿಳಿಯದಂತೆ ಆ ಕಾರ್ಯವನ್ನು ಮಾಡುವಳು.

58ಈ ಗ್ರಂಥದಲ್ಲಿ ಬರೆದಿರುವ ಧರ್ಮಶಾಸ್ತ್ರವಾಕ್ಯಗಳನ್ನೆಲ್ಲಾ ನೀವು ಅನುಸರಿಸದೆ ನಿಮ್ಮ ದೇವರಾದ ಯೆಹೋವನೆಂಬ ಮಹಾಮಹಿಮೆಯುಳ್ಳ ಅದ್ಭುತ ನಾಮದಲ್ಲಿ ನೀವು ಭಯಭಕ್ತಿಯುಳ್ಳವರಾಗಿ ನಡೆಯದೆ ಹೋದರೆ,

59ಆತನು ನಿಮಗೂ, ನಿಮ್ಮ ಸಂತತಿಯವರಿಗೂ ದೀರ್ಘಕಾಲವಿರುವ ಬಹುಭಯಂಕರವಾದ ಉಪದ್ರವಗಳನ್ನು ಬರಮಾಡುವನು. ಬಹುಕಾಲದವರೆಗೂ ವಾಸಿಯಾಗದ ಘೋರ ವ್ಯಾಧಿಗಳಿಂದ ನಿಮ್ಮನ್ನು ಬಾಧಿಸುವನು.

60ನೀವು ಹೆದರಿಕೊಳ್ಳುತ್ತಿದ್ದ ಐಗುಪ್ತದೇಶದ ರೋಗಗಳನ್ನೆಲ್ಲಾ ತಿರುಗಿ ನಿಮ್ಮ ಮೇಲೆ ಬರಮಾಡುವನು; ಅವು ನಿಮ್ಮನ್ನು ಅಂಟಿಕೊಂಡೇ ಇರುವವು.

61ಇಷ್ಟು ಮಾತ್ರವಲ್ಲದೆ ಈ ಧರ್ಮಶಾಸ್ತ್ರಗ್ರಂಥದಲ್ಲಿ ಬರೆಯದೆ ಇರುವ ವಿಧವಿಧವಾದ ರೋಗಗಳನ್ನೂ ಮತ್ತು ವ್ಯಾಧಿಗಳನ್ನೂ ನಿಮ್ಮ ಮೇಲೆ ಬರಮಾಡಿ ನಿಮ್ಮನ್ನು ನಾಶಮಾಡುವನು.

62ನಕ್ಷತ್ರಗಳಷ್ಟು ಅಸಂಖ್ಯರಾಗಿರುವ ನೀವು ನಿಮ್ಮ ದೇವರಾದ ಯೆಹೋವನ ಮಾತಿನಲ್ಲಿ ಲಕ್ಷ್ಯವಿಡದೆ ಹೋಗುವುದರಿಂದ ಸ್ವಲ್ಪ ಜನರಾಗಿಯೇ ಉಳಿಯುವಿರಿ.

63ಹೇಗೆ ಯೆಹೋವನು ಈಗ ನಿಮ್ಮನ್ನು ಅಭಿವೃದ್ಧಿಪಡಿಸುವುದರಲ್ಲಿಯೂ, ಹೆಚ್ಚಿಸುವುದರಲ್ಲಿಯೂ ಸಂತೋಷಪಡುತ್ತಾನೋ ಹಾಗೆಯೇ ಆಗ ನಿಮ್ಮನ್ನು ಕೆಡಿಸಿ ನಾಶಮಾಡುವುದರಲ್ಲಿ ಸಂತೋಷಪಟ್ಟು, ನೀವು ಸ್ವಾಧೀನಮಾಡಿಕೊಳ್ಳುವುದಕ್ಕೆ ಹೋಗುವ ದೇಶದೊಳಗಿಂದ ನಿಮ್ಮನ್ನು ಕಿತ್ತುಹಾಕುವನು.

64ಭೂಮಂಡಲದ ಚತುರ್ದಿಕ್ಕುಗಳಲ್ಲಿರುವ ಎಲ್ಲಾ ಜನಾಂಗಗಳಲ್ಲಿಯೂ ಯೆಹೋವನು ನಿಮ್ಮನ್ನು ಚದರಿಸುವನು. ಅಲ್ಲಿ ನಿಮಗಾಗಲಿ ಅಥವಾ ನಿಮ್ಮ ಪೂರ್ವಿಕರಿಗಾಗಲಿ ಗೊತ್ತಿಲ್ಲದ ಮರದ ದೇವರುಗಳನ್ನೂ ಕಲ್ಲಿನ ದೇವರುಗಳನ್ನೂ ಪೂಜಿಸುವಿರಿ.

65ಆ ದೇಶಗಳಲ್ಲಿ ನಿಮಗೆ ಯಾವ ವಿಶ್ರಾಂತಿಯೂ ದೊರೆಯುವುದಿಲ್ಲ; ಸ್ವಲ್ಪ ಹೊತ್ತು ಅಂಗಾಲಿಡುವುದಕ್ಕೂ ನಿಮಗೆ ಸ್ಥಳಸಿಕ್ಕುವುದಿಲ್ಲ. ನೀವು ನಡುಗುವ ಹೃದಯವುಳ್ಳವರಾಗಿಯೂ, ದಿಕ್ಕುತೋರದೆ ಕಂಗೆಟ್ಟವರಾಗಿಯೂ, ಮನಗುಂದಿದವರಾಗಿಯೂ ಇರುವಂತೆ ಯೆಹೋವನು ಮಾಡುವನು.

66ಬದುಕುವೆವೋ ಇಲ್ಲವೋ ಎಂಬುದಾಗಿ ಅನುಮಾನಪಟ್ಟು ನೀವು ಹಗಲಿರುಳು ಪ್ರಾಣಭಯದಲ್ಲಿರುವಿರಿ; ಪ್ರಾಣದ ಮೇಲಣ ನಂಬಿಕೆಯನ್ನು ಬಿಟ್ಟೇಬಿಡುವಿರಿ.

67ಮನಸ್ಸಿನಲ್ಲಿ ಯಾವಾಗಲೂ ಪ್ರಾಣಭಯವಿರುವುದರಿಂದಲೂ ಕಣ್ಣಿನಿಂದ ಭಯಂಕರವಾದ ಸಂಗತಿಗಳನ್ನು ನೋಡುವುದರಿಂದಲೂ ನೀವು ಹೊತ್ತಾರೆಯಲ್ಲಿ, “ಅಯ್ಯೋ, ಅಯ್ಯೋ ಸಾಯಂಕಾಲ ಯಾವಾಗ ಬರುವುದೋ” ಎಂದೂ, ಸಾಯಂಕಾಲದಲ್ಲಿ, “ಅಯ್ಯೋ, ಅಯ್ಯೋ! ಬೆಳಿಗ್ಗೆ ಯಾವಾಗ ಬರುವುದೋ” ಎಂದು ಕೊರಗುವಿರಿ.

68ನೀವು ಐಗುಪ್ತದೇಶವನ್ನು ತಿರುಗಿ ಎಂದಿಗೂ ನೋಡುವುದಿಲ್ಲವೆಂದು ಯೆಹೋವನು ಹೇಳಿದ್ದರೂ ಆತನು ನಿಮ್ಮನ್ನು ಹಡಗುಗಳನ್ನೇರಿಸಿ ಅಲ್ಲಿಗೆ ತಿರುಗಿ ಹೋಗ ಮಾಡುವನು. ಅಲ್ಲಿ ನೀವು ಶತ್ರುಗಳಿಗೆ ನಿಮ್ಮನ್ನು ದಾಸದಾಸಿಯರನ್ನಾಗಿ ಮಾರಿಕೊಳ್ಳಬೇಕೆಂದು ಅಪೇಕ್ಷಿಸಿದರೂ ಯಾರೂ ನಿಮ್ಮನ್ನು ಕೊಂಡುಕೊಳ್ಳುವುದಿಲ್ಲ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath