ಕ್ರಿಶ್ಚಿಯನ್ ಧರ್ಮ
ಹಿಂದೆ

ಧರ್ಮೋಪದೇಶಕಾಂಡ 22

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಸ್ವದೇಶದವನ ಎತ್ತಾಗಲಿ ಅಥವಾ ಕುರಿಯಾಗಲಿ ದಾರಿ ತಪ್ಪಿ ಹೋಗಿರುವುದನ್ನು ನೀವು ನೋಡಿಯೂ ನೋಡದಂತೆ ಅದನ್ನು ಬಿಟ್ಟು ಹೋಗಬಾರದು; ಅದನ್ನು ಅಟ್ಟಿಸಿಕೊಂಡು ಹೋಗಿ ಅವನಿಗೆ ಕೊಡಲೇಬೇಕು.

2ಅವನು ನಿಮಗೆ ದೂರವಾಗಿದ್ದರೆ ಇಲ್ಲವೆ ಅವನು ಯಾರೋ ಎಂದು ನಿಮಗೆ ತಿಳಿಯದೆ ಹೋದರೆ, ಆ ಪಶುವನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ ನೀವು ಅದನ್ನು ಅವನಿಗೆ ಹಿಂತಿರುಗಿ ಕೊಡಬೇಕು.

3ಅವನ ಕತ್ತೆಯಾಗಲಿ, ಬಟ್ಟೆಯಾಗಲಿ, ಅವನು ಕಳೆದುಕೊಂಡ ಯಾವ ವಸ್ತುವಾಗಲಿ ನಿಮಗೆ ಸಿಕ್ಕಿದರೆ ಹಾಗೆಯೇ ಮಾಡಬೇಕು; ನೋಡದಂತೆ ಇರಲೇ ಬಾರದು.

4ಸ್ವದೇಶದವನ ಕತ್ತೆಯಾಗಲಿ ಅಥವಾ ಎತ್ತಾಗಲಿ ದಾರಿಯಲ್ಲಿ ಬಿದ್ದಿರುವುದನ್ನು ನೀವು ಕಂಡರೆ ಕಾಣದವರಂತೆ ಹೋಗದೆ ಅವನಿಗೆ ಸಹಾಯಮಾಡಿ ಎಬ್ಬಿಸಬೇಕು.

5ಸ್ತ್ರೀಯು ಪುರುಷವೇಷವನ್ನಾಗಲಿ ಅಥವಾ ಪುರುಷನು ಸ್ತ್ರೀವೇಷವನ್ನಾಗಲಿ ಹಾಕಿಕೊಳ್ಳಬಾರದು; ಹಾಗೆ ಮಾಡುವವರು ನಿಮ್ಮ ದೇವರಾದ ಯೆಹೋವನಿಗೆ ಅಸಹ್ಯರು.

6ನೀವು ದಾರಿಯಲ್ಲಿ ಹೋಗುವಾಗ ಮರದ ಮೇಲಾಗಲಿ ಅಥವಾ ನೆಲದ ಮೇಲಾಗಲಿ ಇರುವ ಒಂದು ಪಕ್ಷಿಯ ಗೂಡಿನೊಳಗೆ ಮರಿಗಳು ಅಥವಾ ಮೊಟ್ಟೆಗಳು ಇದ್ದು, ಅವುಗಳ ಮೇಲೆ ತಾಯಿ ಹೊದಗಿರುವುದನ್ನು ಕಂಡರೆ ಮರಿಗಳನ್ನು ತೆಗೆದುಕೊಳ್ಳಬಹುದೇ ಹೊರತು ತಾಯಿಯನ್ನು ಹಿಡಿದುಕೊಳ್ಳಬಾರದು.

7ನೀವು ಹೀಗೆ ನಡೆದುಕೊಂಡರೆ ನಿಮಗೆ ಶ್ರೇಯಸ್ಸು ಉಂಟಾಗುವುದು, ಮತ್ತು ಬಹುಕಾಲ ಬಾಳುವಿರಿ.

8ಹೊಸ ಮನೆಯನ್ನು ಕಟ್ಟಿಸಿಕೊಳ್ಳುವಾಗ ಯಾವನಾದರೂ ಅದರ ಮಾಳಿಗೆಯಿಂದ ಬಿದ್ದು ನಿಮಗೆ ಜೀವಹತ್ಯ ದೋಷವುಂಟಾಗದಂತೆ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಗೋಡೆಯನ್ನು ಕಟ್ಟಿಸಬೇಕು.

9ದ್ರಾಕ್ಷಿತೋಟಗಳಲ್ಲಿ ಬೇರೆ ವಿಧವಾದ ಬೀಜವನ್ನು ಬಿತ್ತಬಾರದು; ಹಾಗೆ ಮಾಡಿದರೆ ಯಾಜಕರು ಆ ಬೆಳೆಯನ್ನು, ದ್ರಾಕ್ಷಿಯ ಬೆಳೆಯನ್ನು ಅಂತೂ ಆ ತೋಟದ ಎಲ್ಲಾ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕು.

10ಎತ್ತನ್ನೂ ಮತ್ತು ಕತ್ತೆಯನ್ನೂ ಜೊತೆಮಾಡಿ ನೇಗಿಲಿಗೆ ಕಟ್ಟಿ ಉಳಬಾರದು.

11ನಾರು ಹಾಗು ಉಣ್ಣೆಯೂ ಕೂಡಿರುವ ಬಟ್ಟೆಯನ್ನು ಹಾಕಿಕೊಳ್ಳಬಾರದು.

12ನೀವು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಲ್ಲಿ ಗೊಂಡೆಗಳನ್ನು ಕಟ್ಟಬೇಕು.

13ಯಾವನಾದರೂ ತಾನು ಮದುವೆಮಾಡಿಕೊಂಡ ಸ್ತ್ರೀಯನ್ನು ದ್ವೇಷಿಸಿ, ಅವಳ ವಿಷಯದಲ್ಲಿ ಇಲ್ಲಸಲ್ಲದ ಕೆಟ್ಟ ಮಾತುಗಳನ್ನು ಆಡಿ,

14“ನಾನು ಇವಳನ್ನು ಮದುವೆಮಾಡಿಕೊಂಡೆನು; ಆದರೆ ಇವಳೊಡನೆ ಸಂಗಮಿಸಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು” ಎಂದು ಹೇಳಿ ಅವಳ ಹೆಸರನ್ನು ಕೆಡಿಸಿದರೆ,

15ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕವಿಲ್ಲದವಳು ಎಂಬುವುದಕ್ಕೆ ನಿದರ್ಶನವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.

16ಆ ಸ್ತ್ರೀಯ ತಂದೆ ಅವರಿಗೆ, “ನಾನು ನನ್ನ ಮಗಳನ್ನು ಈ ಪುರುಷನಿಗೆ ಮದುವೆಮಾಡಿಕೊಟ್ಟ ಮೇಲೆ

17ಇವನು ಅವಳನ್ನು ದ್ವೇಷಿಸಿ, ಪರಪುರುಷನ ಸಂಪರ್ಕ ಮಾಡಿದವಳೆಂದು ನಿರಾಧಾರವಾದ ಮಾತುಗಳನ್ನಾಡಿ ಅವಳ ಹೆಸರನ್ನು ಅವಮಾನಪಡಿಸುತ್ತಾನೆ. ಇಗೋ ನನ್ನ ಮಗಳು ವಿವಾಹಕ್ಕೆ ಮುಂಚೆ ಪುರುಷಸಂಪರ್ಕ ಮಾಡಿದವಳಲ್ಲ ಎಂಬುವುದಕ್ಕೆ ಇದೇ ಪ್ರಮಾಣ” ಎಂದು ಹೇಳಿ ಅವಳ ಹೊದಿಕೆಯನ್ನು ಆ ಊರಿನ ಹಿರಿಯರ ಮುಂದೆ ಇಡಬೇಕು.

18ಆ ಊರಿನ ಹಿರಿಯರು ಅವನನ್ನು ಹಿಡಿಸಿ ಅವನನ್ನು ಹೊಡಿಸಬೇಕು.

19ಇಸ್ರಾಯೇಲಳಾದ ಹೆಣ್ಣಿನ ವಿಷಯದಲ್ಲಿ ಆ ಪುರುಷನು ನಿರಾಧಾರವಾದ ತಪ್ಪು ಹೊರಿಸಿದ್ದರಿಂದ, ಅವನಿಗೆ ನೂರು ಶೆಕೆಲ್ ಬೆಳ್ಳಿ ದಂಡವನ್ನು ವಿಧಿಸಿ, ಆ ಹಣವನ್ನು ಅವಳ ತಂದೆಗೆ ಕೊಡಿಸಬೇಕು. ಮತ್ತು ಅವನು ಆ ಸ್ತ್ರೀಯನ್ನು ಹೆಂಡತಿಯನ್ನಾಗಿಯೇ ಇಟ್ಟುಕೊಳ್ಳಬೇಕು; ಅವನ ಜೀವಮಾನಕಾಲವೆಲ್ಲಾ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.

20ಆದರೆ ಆ ಹೆಣ್ಣು ವಿವಾಹಕ್ಕೆ ಮುಂಚೆ ದೈಹಿಕವಾಗಿ ಪುರುಷಸಂಪರ್ಕ ಮಾಡಿದ್ದು ನಿಜ ಎಂದು ತಿಳಿದುಬಂದರೆ,

21ಅವಳು ತಂದೆಯ ಅಧೀನದಲ್ಲಿರುವಾಗಲ್ಲೇ ಪರಪುರುಷನೊಡನೆ ಸಂಪರ್ಕಮಾಡಿ ಇಸ್ರಾಯೇಲರೊಳಗೆ ದುರಾಚಾರವನ್ನು ನಡಿಸಿದ್ದರಿಂದ, ಅವರು ಅವಳನ್ನು ತಂದೆಯ ಮನೆಯ ಬಾಗಿಲಿಗೆ ಕರೆಯಿಸಬೇಕು; ಊರಿನವರೆಲ್ಲರು ಅವಳನ್ನು ಕಲ್ಲೆಸೆದು ಕೊಲ್ಲಬೇಕು. ಹೀಗೆ ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ನಿವಾರಿಸಿಕೊಳ್ಳಬೇಕು.

22ಯಾವನಾದರೂ ಇನ್ನೊಬ್ಬನ ಹೆಂಡತಿಯೊಡನೆ ವ್ಯಭಿಚಾರಮಾಡಿದ್ದು ತಿಳಿದುಬಂದರೆ ಆ ಸ್ತ್ರೀ ಮತ್ತು ಪುರುಷರಿಬ್ಬರಿಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ಇಸ್ರಾಯೇಲರ ಮಧ್ಯದಿಂದ ತೆಗೆದುಹಾಕಬೇಕು.

23ಒಬ್ಬನಿಗೆ ನಿಶ್ಚಿತಳಾದ ಹೆಣ್ಣನ್ನು ಯಾವನಾದರೂ ಊರೊಳಗೆ ಮರುಳುಗೊಳಿಸಿ ಸಂಗಮಿಸಿದರೆ,

24ನೀವು ಅವರಿಬ್ಬರನ್ನೂ ಊರುಬಾಗಿಲಿನ ಹೊರಕ್ಕೆ ಕರೆತಂದು ಕಲ್ಲೆಸೆದು ಕೊಲ್ಲಬೇಕು. ಒಬ್ಬನಿಗೆ ನಿಶ್ಚಿತಳಾದ ಸ್ತ್ರೀಯನ್ನು ಕೆಡಿಸಿದ್ದರಿಂದ ಆ ಪುರುಷನಿಗೂ, ಊರಲ್ಲಿದ್ದು ರಕ್ಷಣೆಗಾಗಿ ಕೂಗಿಕೊಳ್ಳದೆ ಹೋದುದರಿಂದ ಆ ಸ್ತ್ರೀಗೂ ಮರಣಶಿಕ್ಷೆಯಾಗಬೇಕು. ಹೀಗೆ ನೀವು ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.

25ಆದರೆ ಆ ಪುರುಷನು ನಿಶ್ಚಿತಳಾದ ಆ ಸ್ತ್ರೀಯನ್ನು ಅಡವಿಯಲ್ಲಿ ಬಲಾತ್ಕಾರದಿಂದ ಸಂಗಮಿಸಿದ್ದರೆ ಪುರುಷನಿಗೆ ಮಾತ್ರ ಮರಣಶಿಕ್ಷೆಯಾಗಬೇಕು.

26ಆ ಸ್ತ್ರೀಗೆ ಯಾವ ಶಿಕ್ಷೆಯೂ ಆಗಬಾರದು; ಅವಳಲ್ಲಿ ಮರಣ ಶಿಕ್ಷೆಗೆ ಪಾತ್ರವಾದ ಅಪರಾಧವೇನೂ ಇಲ್ಲ. ಒಬ್ಬ ಮನುಷ್ಯನು ಮತ್ತೊಬ್ಬನ ಮೇಲೆ ಬಿದ್ದು ಕೊಲ್ಲುವುದು ಹೇಗೋ ಈ ಸಂಗತಿಯೂ ಹಾಗೆಯೇ ಎಂದು ತಿಳಿಯಬೇಕು.

27ಆ ಸ್ತ್ರೀಯು ಅಡವಿಯಲ್ಲೇ ಅವನ ಕೈಗೆ ಸಿಕ್ಕಿದ್ದರಿಂದ ಅವಳು ಕೂಗಿಕೊಂಡರೂ ತಪ್ಪಿಸುವವರು ಇರಲಿಲ್ಲ.

28ಯಾರಿಗೂ ನಿಶ್ಚಯವಾಗದೆ ಇರುವ ಸ್ತ್ರೀಯನ್ನು ಒಬ್ಬನು ಹಿಡಿದು ಸಂಗಮಿಸಿದ್ದು ತಿಳಿದು ಬಂದರೆ,

29ಅವನು ಅವಳನ್ನು ಮಾನಭಂಗಪಡಿಸಿದ್ದರಿಂದ, ಅವಳ ತಂದೆಗೆ ಐವತ್ತು ಶೆಕೆಲ್ ಬೆಳ್ಳಿಯನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು. ಅವನು ಬದುಕುವ ತನಕ ಅವಳನ್ನು ಪರಿತ್ಯಾಗಮಾಡುವುದಕ್ಕೆ ಅವನಿಗೆ ಅಧಿಕಾರವಿರುವುದಿಲ್ಲ.

30ತಂದೆಗೆ ಹೆಂಡತಿಯಾದವಳನ್ನು ಸಂಗಮಿಸಲೇ ಬಾರದು; ಅದು ತಂದೆಗೆ ಅಪಮಾನಪಡಿಸಿದ ಹಾಗಾಗುವುದು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath