ಕ್ರಿಶ್ಚಿಯನ್ ಧರ್ಮ
ಹಿಂದೆ

ದಾನಿಯೇಲನು 4

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಲೋಕದಲ್ಲೆಲ್ಲಾ ವಾಸಿಸುವ ಸಕಲ ಜನಾಂಗ, ಕುಲ ಭಾಷೆಗಳವರಿಗೆ ರಾಜನಾದ ನೆಬೂಕದ್ನೆಚ್ಚರನ ಪ್ರಕಟನೆ, “ನಿಮಗೆ ಸುಖವು ಹೆಚ್ಚೆಚ್ಚಾಗಲಿ!

2ಪರಾತ್ಪರನಾದ ದೇವರು ನನ್ನ ವಿಷಯದಲ್ಲಿ ನಡೆಸಿರುವ ಮಹತ್ತುಗಳನ್ನೂ, ಅದ್ಭುತಗಳನ್ನೂ ಪ್ರಚುರಪಡಿಸಬೇಕೆಂಬುವುದು ನನಗೆ ಸ್ಪಷ್ಟವಾಗಿ ತೋರಿಬಂದಿದೆ.

3ಆತನ ಮಹತ್ತುಗಳು ಎಷ್ಟೋ ಅತಿಶಯ! ಆತನ ಅದ್ಭುತಗಳು ಎಷ್ಟೋ ವಿಶೇಷ! ಆತನ ರಾಜ್ಯವು ಶಾಶ್ವತರಾಜ್ಯ, ಆತನ ಆಳ್ವಿಕೆಯು ತಲತಲಾಂತರಕ್ಕೂ ಸ್ಥಿರವಾಗಿ ನಿಲ್ಲುವುದು.”

4“ನೆಬೂಕದ್ನೆಚ್ಚರನಾದ ನಾನು ನನ್ನ ಆಲಯದಲ್ಲಿ ಹಾಯಾಗಿದ್ದೆನು, ಹೌದು ನನ್ನ ಅರಮನೆಯಲ್ಲಿ ಸುಖವಾಗಿದ್ದೆನು.

5ಹೀಗಿರಲು ನನ್ನನ್ನು ಹೆದರಿಸುವ ಒಂದು ಕನಸನ್ನು ಕಂಡೆನು; ಹಾಸಿಗೆಯಲ್ಲಿ ನನಗುಂಟಾದ ಯೋಚನೆಗಳೂ, ನನ್ನ ಮನಸ್ಸಿಗೆ ಬಿದ್ದ ಸ್ವಪ್ನಗಳೂ ನನ್ನನ್ನು ಕಳವಳಗೊಳಿಸಿದವು.

6ಆದುದರಿಂದ ಕನಸಿನ ಅರ್ಥವನ್ನು ನನಗೆ ತಿಳಿಸಲಿಕ್ಕೆ ಬಾಬೆಲಿನ ವಿದ್ವಾಂಸರೆಲ್ಲರನ್ನೂ ಕರೆದುತರುವ ಹಾಗೆ ಆಜ್ಞಾಪಿಸಿದೆನು.

7“ಜೋಯಿಸರು, ಮಂತ್ರವಾದಿಗಳು, ಪಂಡಿತರು, ಶಾಕುನಿಕರು, ನನ್ನ ಸಮ್ಮುಖಕ್ಕೆ ಬಂದಾಗ ನಾನು ಆ ಕನಸನ್ನು ತಿಳಿಸಲು ಅವರು ಅದರ ಅಭಿಪ್ರಾಯವನ್ನು ವಿವರಿಸಲಾರದೆ ಹೋದರು.

8ನನ್ನ ದೇವರ ಹೆಸರು ಸೇರಿರುವ ಬೇಲ್ತೆಶಚ್ಚರನೆಂಬ ಅಡ್ಡಹೆಸರನ್ನು ಹೊಂದಿದವನೂ, ಪರಿಶುದ್ಧದೇವರುಗಳ ಆತ್ಮವುಳ್ಳವನೂ ಆದ ದಾನಿಯೇಲನು ಕಟ್ಟಕಡೆಯಲ್ಲಿ ನನ್ನ ಬಳಿಗೆ ಬರಲು ನಾನು ಆ ಕನಸನ್ನು ಅವನಿಗೆ ಹೀಗೆ ತಿಳಿಸಿದೆನು,

9‘ಬೇಲ್ತೆಶಚ್ಚರನೇ, ಜೋಯಿಸರಲ್ಲಿ ಪ್ರಧಾನನೇ, ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಯಾಗಿದೆ ಎಂದು ತಿಳಿದಿದ್ದೇನೆ, ಯಾವ ರಹಸ್ಯವೂ ನಿನಗೆ ಅಶೋಧ್ಯವಲ್ಲವೆಂಬುದು ನನಗೆ ಗೊತ್ತು; ಆದುದರಿಂದ ನಾನು ಕಂಡ ಕನಸನ್ನೂ ಅದರ ಅರ್ಥವನ್ನೂ ನನಗೆ ತಿಳಿಸು.

10ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸುಗಳು ಇವೇ. ಇಗೋ, ಲೋಕದ ನಡುವೆ ಬಹು ಎತ್ತರವಾದ ಒಂದು ವೃಕ್ಷವನ್ನು ಕಂಡೆನು.

11ಆ ವೃಕ್ಷವು ಬೆಳೆದು ಬಲಗೊಂಡಿತ್ತು, ಅದರ ತುದಿಯು ಆಕಾಶವನ್ನು ಮುಟ್ಟಿತ್ತು, ಅದು ಭೂಲೋಕದ ಕಟ್ಟಕಡೆಗೂ ಕಾಣಿಸುತ್ತಿತ್ತು.

12ಅದರ ಎಲೆಗಳು ಅಂದ, ಹಣ್ಣುಗಳು ಬಹಳ, ಆದ್ದರಿಂದ ಎಲ್ಲಕ್ಕೂ ಆಹಾರ, ನೆರಳೂ, ಭೂಜಂತುಗಳಿಗೆ ಆಶ್ರಯ, ಕೊಂಬೆಗಳು ಆಕಾಶ ಪಕ್ಷಿಗಳಿಗೆ ನೆಲೆ, ಅದು ಸಕಲ ಜೀವಿಗಳಿಗೂ ಜೀವನ.

13ನಾನು ಹಾಸಿಗೆಯ ಮೇಲೆ ಮಲಗಿದ್ದಾಗ ನನ್ನ ಮನಸ್ಸಿಗೆ ಬಿದ್ದ ಕನಸಿನಲ್ಲಿ ನೋಡಲಾಗಿ ದೇವದೂತನು ಆಕಾಶದಿಂದಿಳಿದು ಗಟ್ಟಿಯಾಗಿ ಕೂಗಿ,

14ವೃಕ್ಷವನ್ನು ಕಡಿಯಿರಿ, ಕೊಂಬೆಗಳನ್ನು ಕತ್ತರಿಸಿರಿ, ಎಲೆಗಳನ್ನು ಉದುರಿಸಿರಿ, ಹಣ್ಣುಗಳನ್ನು ಚೆಲ್ಲಿರಿ; ಮೃಗಗಳು ನೆರಳನ್ನು ಬಿಟ್ಟುಬಿಡಲಿ, ಪಕ್ಷಿಗಳು ರೆಂಬೆಗಳನ್ನು ತೊರೆದು ಹೋಗಲಿ!

15ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣ, ತಾಮ್ರಗಳ ಪಟ್ಟಿಯನ್ನು ಅದಕ್ಕೆ ಬಿಗಿಯಿರಿ; ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಭೂಮಿಯ ಹುಲ್ಲು ಮೃಗಗಳಿಗೆ ಗತಿಯಾದಂತೆ ಅದಕ್ಕೆ ಗತಿಯಾಗಲಿ.

16ಅದಕ್ಕೆ ಮನುಷ್ಯನ ಹೃದಯವು ಹೋಗಿ ಮೃಗದ ಹೃದಯವು ಬರಲಿ; ಹೀಗೆ ಅದಕ್ಕೆ ಏಳು ವರ್ಷ ಕಳೆಯಲಿ.

17ಇದು ಸಾಕ್ಷಿಗಳ ತೀರ್ಮಾನ, ದೇವರ ತೀರ್ಪು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಆಳ್ವಿಕೆಯನ್ನು ತನಗೆ ಬೇಕಾದವರಿಗೆ ಒಪ್ಪಿಸಿ ಕನಿಷ್ಠರನ್ನೂ ಅದರ ಮೇಲೆ ನೇಮಿಸುತ್ತಾನೆಂಬುದು ಜೀವಂತರಿಗೆ ತಿಳಿದುಬರಬೇಕೆಂದೇ ಈ ತೀರ್ಮಾನವಾಯಿತು’ ಎಂದು ಸಾರಿದನು.

18ರಾಜನಾದ ನೆಬೂಕದ್ನೆಚ್ಚರನೆಂಬ ನಾನು ಈ ಕನಸನ್ನು ಕಂಡೆನು; ಬೇಲ್ತೆಶಚ್ಚರನೇ, ನನ್ನ ರಾಜ್ಯದ ಸಕಲ ವಿದ್ವಾಂಸರಲ್ಲಿ ಯಾರೂ ಅದರ ಅರ್ಥವನ್ನು ತಿಳಿಸಲಾರರು; ನೀನು ಅದನ್ನು ತಿಳಿಸು; ಪರಿಶುದ್ಧ ದೇವರುಗಳ ಆತ್ಮವು ನಿನ್ನಲ್ಲಿ ನೆಲೆಸಿರುವುದರಿಂದ ನೀನೇ ಅದಕ್ಕೆ ಶಕ್ತನು.”

19ಆಗ ಬೇಲ್ತೆಶಚ್ಚರನೆಂಬ ಅಡ್ಡಹೆಸರಿನ ದಾನಿಯೇಲನು ತನ್ನ ಬುದ್ಧಿಗೆ ತೋರಿದ್ದನ್ನು ಕಂಡು ಭಯಪಟ್ಟು ಸ್ವಲ್ಪ ಸಮಯ ಸ್ತಬ್ಧನಾದನು. ರಾಜನು ಇದನ್ನು ನೋಡಿ, “ಬೇಲ್ತೆಶಚ್ಚರನೇ, ನನ್ನ ಕನಸಾಗಲಿ, ಅದರ ಅರ್ಥವಾಗಲಿ ನಿನ್ನನ್ನು ಹೆದರಿಸದಿರಲಿ” ಎಂದು ಹೇಳಲು ಬೇಲ್ತೆಶಚ್ಚರನು, “ನನ್ನ ಒಡೆಯನೇ, ಆ ಕನಸು ನಿನ್ನ ಶತ್ರುಗಳಿಗೆ ಫಲಿಸಲಿ, ಅದರ ಅರ್ಥವು ನಿನ್ನ ವಿರೋಧಿಗಳ ಅನುಭವಕ್ಕೆ ಬರಲಿ!

20“ಯಾವ ವೃಕ್ಷವು ಬೆಳೆದು ಬಲಗೊಂಡು ಆಕಾಶದ ತುದಿಯನ್ನು ಮುಟ್ಟುತ್ತಾ,

21ಲೋಕದವರೆಲ್ಲರಿಗೂ ಕಾಣಿಸುತ್ತಾ, ಅಂದವಾದ ಎಲೆಗಳನ್ನೂ ಬಹಳ ಹಣ್ಣುಗಳನ್ನೂ ಬಿಡುತ್ತಾ, ಎಲ್ಲಕ್ಕೂ ಆಹಾರವನ್ನು ಒದಗಿಸುತ್ತಾ ತನ್ನ ನೆರಳನ್ನು ಭೂಜಂತುಗಳಿಗೆ ಆಶ್ರಯವಾಗಿಯೂ ತನ್ನ ಕೊಂಬೆಗಳನ್ನು ಆಕಾಶ ಪಕ್ಷಿಗಳಿಗೆ ನೆಲೆಯಾಗಿಯೂ ಮಾಡುತ್ತಾ ಕನಸಿನಲ್ಲಿ ನಿನಗೆ ತೋರಿತೋ,

22ಆ ವೃಕ್ಷವು ನೀನೇ; ರಾಜಾ, ನೀನು ಬೆಳೆದು ಬಲಗೊಂಡಿದ್ದೀ, ನಿನ್ನ ಮಹಿಮೆಯು ವೃದ್ಧಿಯಾಗಿ ಆಕಾಶಕ್ಕೆ ಮುಟ್ಟಿದೆ, ನಿನ್ನ ಆಳ್ವಿಕೆಯು ಲೋಕದ ಕಟ್ಟಕಡೆಗೂ ವ್ಯಾಪಿಸಿದೆ.

23“ಕಾವಲುಗಾರನಾದ ದೇವದೂತನು ಆಕಾಶದಿಂದಿಳಿದು, ‘ವೃಕ್ಷವನ್ನು ಕಡಿದು ಹಾಳುಮಾಡಿರಿ; ಆದರೆ ಬುಡದ ಮೋಟನ್ನು ನೆಲದಲ್ಲಿ ಉಳಿಸಿ ಕಬ್ಬಿಣ, ತಾಮ್ರಗಳ ಪಟ್ಟೆಯನ್ನು ಅದಕ್ಕೆ ಬಿಗಿಯಿರಿ, ಅಡವಿಯ ಹುಲ್ಲು ಅದರ ಸುತ್ತ ಬೆಳೆದಿರಲಿ, ಆಕಾಶದ ಇಬ್ಬನಿಯು ಅದನ್ನು ತೋಯಿಸಲಿ, ಅದಕ್ಕೆ ಏಳು ವರ್ಷ ಕಳೆಯುವ ತನಕ ಕಾಡು ಮೃಗಗಳ ಸಹವಾಸದ ಗತಿಯು ಬರಲಿ’ ಎಂದು ಸಾರುವುದನ್ನು ರಾಜನಾದ ನೀನು ನೋಡಿದಿಯಲ್ಲಾ.

24“ರಾಜನೇ ಇದರ ತಾತ್ಪರ್ಯವೇನೆಂದರೆ, ಎನ್ನೊಡೆಯನಾದ ಅರಸನಿಗೆ ಉಂಟಾಗಿರುವ ಪರಾತ್ಪರನಾದ ದೇವರ ತೀರ್ಪು ಹೀಗಿದೆ.

25ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡು ಮೃಗಗಳೊಂದಿಗೆ ವಾಸಿಸುವಿ, ಎತ್ತುಗಳಂತೆ ಹುಲ್ಲು ಮೇಯುವುದೇ ನಿನಗೆ ಗತಿಯಾಗುವುದು, ಆಕಾಶದ ಇಬ್ಬನಿಯು ನಿನ್ನನ್ನು ತೋಯಿಸುವುದು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬುದು ನಿನಗೆ ತಿಳಿದು ಬರುವುದರೊಳಗೆ ಏಳು ವರ್ಷ ಹೀಗೆ ಕಳೆಯುವುದು.

26ವೃಕ್ಷದ ಬುಡದ ಮೋಟನ್ನು ಉಳಿಸಿರಿ ಎಂದು ಅಪ್ಪಣೆಯಾಯಿತಲ್ಲಾ; ಇದರ ತಾತ್ಪರ್ಯವೇನೆಂದರೆ ಪರಲೋಕಕ್ಕೆ ಸರ್ವಾಧಿಕಾರ ಉಂಟೆಂಬುವುದನ್ನು ನೀನು ತಿಳಿದುಕೊಂಡ ನಂತರ ನಿನ್ನ ರಾಜ್ಯವು ನಿನಗೆ ಸ್ಥಿರವಾಗುವುದು ಎಂಬುವುದೇ.

27ಆದಕಾರಣ, ಅರಸನೇ, ಈ ನನ್ನ ಬುದ್ಧಿವಾದವು ನಿನಗೆ ಒಪ್ಪಿಗೆಯಾಗಲಿ, ನೀನು ಧರ್ಮವನ್ನು ಆಚರಿಸಿ ನಿನ್ನ ಪಾಪಗಳನ್ನು ನಾಶಗೊಳಿಸು, ಬಡವರಿಗೆ ಕರುಣೆಯನ್ನು ತೋರಿಸಿ ನಿನ್ನ ಅಪರಾಧಗಳನ್ನು ಧ್ವಂಸಮಾಡು; ಇದರಿಂದ ನಿನ್ನ ನೆಮ್ಮದಿಯ ಕಾಲವು ಹೆಚ್ಚಾದೀತು” ಎಂದು ಅರಿಕೆ ಮಾಡಿದನು.

28ಇದೆಲ್ಲಾ ರಾಜನಾದ ನೆಬೂಕದ್ನೆಚ್ಚರನ ಅನುಭವಕ್ಕೆ ಬಂತು.

29ಹನ್ನೆರಡು ತಿಂಗಳು ಕಳೆದನಂತರ ಅವನು ಬಾಬೆಲಿನ ಅರಮನೆಯ ಮಹಡಿಯ ಮೇಲೆ ತಿರುಗಾಡುತ್ತಾ,

30“ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯ ಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವುದು ಇಗೋ, ಮಹಾ ಪಟ್ಟಣವಾದ ಈ ಬಾಬೆಲ್” ಎಂದು ಕೊಚ್ಚಿಕೊಂಡನು.

31ಈ ಮಾತು ರಾಜನ ಬಾಯಿಂದ ಹೊರಡುತ್ತಿರುವಾಗ, “ಅರಸನಾದ ನೆಬೂಕದ್ನೆಚ್ಚರನೇ, ನಿನಗಾದ ದೈವೋಕ್ತಿಯನ್ನು ಕೇಳು;

32ರಾಜ್ಯವು ನಿನ್ನಿಂದ ತೊಲಗಿದೆ, ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡು ಮೃಗಗಳೊಂದಿಗೆ ವಾಸಿಸುವಿ, ಎತ್ತುಗಳಂತೆ ಹುಲ್ಲು ಮೇಯುವುದೇ ನಿನಗೆ ಗತಿಯಾಗುವುದು; ಪರಾತ್ಪರನಾದ ದೇವರು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬುದು ನಿನ್ನ ತಿಳಿವಳಿಕೆಗೆ ಬರುವುದರೊಳಗೆ ಏಳು ವರ್ಷ ನಿನಗೆ ಹೀಗೆ ಕಳೆಯುವುದು” ಎಂದು ಆಕಾಶವಾಣಿಯಾಯಿತು.

33ಈ ನುಡಿಯು ನೆಬೂಕದ್ನೆಚ್ಚರನಲ್ಲಿ ತಕ್ಷಣವೇ ನೆರವೇರಿತು; ಅವನು ಮನುಷ್ಯರೊಳಗಿಂದ ತಳ್ಳಲ್ಪಟ್ಟು, ಎತ್ತುಗಳಂತೆ ಹುಲ್ಲು ಮೇಯುತ್ತಾ, ಆಕಾಶದ ಇಬ್ಬನಿಯಿಂದ ನೆನೆಯುತ್ತಾ ಇದ್ದನು; ಅವನ ಕೂದಲು ಹದ್ದುಗಳ ಗರಿಯಂತೆಯೂ, ಅವನ ಉಗುರು ಹಕ್ಕಿಗಳ ಉಗುರಿನ ಹಾಗೂ ಬೆಳೆದವು.

34ನೇಮಿಸಿದ ಆ ಕಾಲವು ಕಳೆದ ಮೇಲೆ ನೆಬೂಕದ್ನೆಚ್ಚರನಾದ ನಾನು ಪರಲೋಕದ ಕಡೆಗೆ ಕಣ್ಣೆತ್ತಲು ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು. “ಆಗ ನಾನು ಪರಾತ್ಪರನಾದ ದೇವರನ್ನು ಕೊಂಡಾಡಿ, ಸದಾ ಜೀವಸ್ವರೂಪನಾದವನಿಗೆ ಸ್ತುತಿಸ್ತೋತ್ರಗಳನ್ನು ಸಲ್ಲಿಸಿದೆನು; ಆತನ ಆಳ್ವಿಕೆಯು ಶಾಶ್ವತ, ಆತನ ರಾಜ್ಯವು ತಲತಲಾಂತರಕ್ಕೂ ಸ್ಥಿರವಾಗಿರುವುದು.

35ಭೂನಿವಾಸಿಗಳೆಲ್ಲರೂ ಆತನ ದೃಷ್ಟಿಯಲ್ಲಿ ಶೂನ್ಯರಾಗಿ ಪರಲೋಕ ಸೈನ್ಯದವರಲ್ಲಿಯೂ, ಭೂಲೋಕದವರಲ್ಲಿಯೂ ತನ್ನ ಚಿತ್ತದ ಪ್ರಕಾರ ಮಾಡುತ್ತಾನೆ; ಆತನ ಶಕ್ತಿಯುತ ಕೈಯನ್ನು ತಡೆಹಿಡಿಯಲು ಸಾಧ್ಯವಿಲ್ಲ ‘ನೀನು ಏನು ಮಾಡುತ್ತೀ?’” ಎಂದು ಯಾರೂ ಕೇಳಲಾರರು.

36ಅದೇ ಸಮಯದಲ್ಲಿ ನನ್ನ ಬುದ್ಧಿಯು ಪುನಃ ನನ್ನ ಸ್ವಾಧೀನವಾಯಿತು; ನನ್ನ ಪ್ರಭಾವ ವೈಭವಗಳು ನನಗೆ ಮತ್ತೆ ಲಭಿಸಿ ನನ್ನ ರಾಜ್ಯದ ಕೀರ್ತಿಯು ಪ್ರಕಾಶಿಸಿತು; ನನ್ನ ಮಂತ್ರಿಗಳೂ ಅಧಿಪತಿಗಳೂ ನನ್ನನ್ನು ಸಮಾಧಾನಪಡಿಸಿದರು; ನನ್ನ ರಾಜ್ಯದಲ್ಲಿ ರಾಜನಾಗಿ ನೆಲೆಗೊಂಡೆನು; ನನ್ನ ಮಹಿಮೆಯು ಅತ್ಯಧಿಕವಾಯಿತು.

37ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ, ಕೊಂಡಾಡಿ ಕೀರ್ತಿಸುತ್ತೇನೆ. ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ; ಸೊಕ್ಕಿನಿಂದ ನಡೆಯುವವರನ್ನು ತಗ್ಗಿಸಬಲ್ಲನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath