ಕ್ರಿಶ್ಚಿಯನ್ ಧರ್ಮ
ಹಿಂದೆ

ಅಪೊಸ್ತಲರ ಕೃತ್ಯಗಳು 27

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ನಾವು ಸಮುದ್ರಮಾರ್ಗವಾಗಿ ಇತಾಲ್ಯದೇಶಕ್ಕೆ ಹೋಗಬೇಕೆಂದು ತೀರ್ಮಾನವಾದ ಮೇಲೆ, ಪೌಲನನ್ನೂ, ಬೇರೆ ಕೆಲವು ಸೆರೆಯವರನ್ನೂ ಔಗುಸ್ತ ಸೇನೆಗೆ ಸೇರಿದ ಯೂಲ್ಯನೆಂಬ ಒಬ್ಬ ಶತಾಧಿಪತಿಗೆ ಒಪ್ಪಿಸಿದರು.

2ಆಗ ಅದ್ರಮಿತ್ತಿಯದಿಂದ ಬಂದು ಆಸ್ಯಸೀಮೆಯ ಕರಾವಳಿಯ ಸ್ಥಳಗಳಿಗೆ ಹೋಗುವುದಕ್ಕಿದ್ದ ಒಂದು ಹಡಗನ್ನು ಹತ್ತಿ ಸಮುದ್ರಪ್ರಯಾಣವನ್ನು ಪ್ರಾರಂಭಿಸಿದೆವು. ಮಕೆದೋನ್ಯಕ್ಕೆ ಸೇರಿದ ಥೆಸಲೋನಿಕದ ಅರಿಸ್ತಾರ್ಕನು ನಮ್ಮ ಜೊತೆಯಲ್ಲಿದ್ದನು.

3ಮರುದಿನ ಸೀದೋನಿಗೆ ತಲುಪಿದೆವು. ಯೂಲ್ಯನು ಪೌಲನಿಗೆ ದಯೆಯನ್ನು ತೋರಿಸುವವನಾಗಿ, ಅವನನ್ನು ಸ್ನೇಹಿತರ ಬಳಿಗೆ ಹೋಗಿ ಸತ್ಕಾರ ಹೊಂದುವುದಕ್ಕೆ ಅನುಮತಿಕೊಟ್ಟನು.

4ಅಲ್ಲಿಂದ ಹೊರಟು ವಿರುದ್ಧ ದಿಕ್ಕಿನಲ್ಲಿ ಗಾಳಿ ಬೀಸುತ್ತಿದ್ದುದರಿಂದ ಕುಪ್ರದ್ವೀಪದ ಮರೆಯಲ್ಲಿ ಸಾಗಿ,

5ಕಿಲಿಕ್ಯಕ್ಕೂ, ಪಂಫುಲ್ಯಕ್ಕೂ ಎದುರಾಗಿರುವ ಸಮುದ್ರವನ್ನು ದಾಟಿ ಲುಕೀಯ ಸೀಮೆಯಲ್ಲಿರುವ ಮುರಕ್ಕೆ ಬಂದೆವು.

6ಅಲ್ಲಿ ಅಲೆಕ್ಸಾಂದ್ರಿಯದಿಂದ ಬಂದು ಇತಾಲ್ಯದೇಶಕ್ಕೆ ಹೋಗುತ್ತಿದ್ದ ಒಂದು ಹಡಗನ್ನು ಶತಾಧಿಪತಿಯು ಕಂಡು ನಮ್ಮನ್ನು ಅದರೊಳಗೆ ಹತ್ತಿಸಿದನು.

7ಅನೇಕ ದಿನಗಳ ಕಾಲ ನಿಧಾನವಾಗಿ ಸಾಗುತ್ತಾ ಎಷ್ಟೋ ಪ್ರಯಾಸದಿಂದ ಕ್ನೀದಕ್ಕೆ ಸಮೀಪವಾಗಿ ಬಂದಾಗ ಗಾಳಿಯು ನಮ್ಮನ್ನು ಅಲ್ಲಿಗೆ ಮುಟ್ಟಗೊಡಿಸದೆ ಇದ್ದುದರಿಂದ ಕ್ರೇತ ದ್ವೀಪದ ಮರೆಯಲ್ಲಿ ಸಾಗಿ ಸಲ್ಮೋನೆಗೆ ಸಮೀಪವಾಗಿ ಬಂದು,

8ಪ್ರಯಾಸದಿಂದ ಆ ದ್ವೀಪದ ಕರಾವಳಿಯ ಮೂಲಕವಾಗಿ ಚಂದರೇವುಗಳೆಂಬ ಸ್ಥಳಕ್ಕೆ ಸೇರಿದೆವು. ಅದರ ಹತ್ತಿರದಲ್ಲಿ ಲಸಾಯವೆಂಬ ಪಟ್ಟಣವು ಇತ್ತು.

9ಹೀಗೆ ಬಹುಕಾಲ ಕಳೆದುಹೋಯಿತು; ಉಪವಾಸದ ದಿನವು ಮುಗಿದುಹೋಗಿತ್ತು. ಈ ಸಂದರ್ಭದಲ್ಲಿ ಸಮುದ್ರಪ್ರಯಾಣ ಮಾಡುವುದು ಅಪಾಯಕರವಾಗಿದ್ದುದರಿಂದ ಪೌಲನು;

10“ಜನರೇ, ಈ ಪ್ರಯಾಣದಿಂದ ಸರಕಿಗೂ, ಹಡಗಿಗೆ ಮಾತ್ರವಲ್ಲದೆ, ನಮ್ಮ ಪ್ರಾಣಗಳಿಗೂ ಕಷ್ಟವೂ, ಬಹು ನಷ್ಟವೂ ಸಂಭವಿಸುವುದೆಂದು ನನಗೆ ತೋರುತ್ತಿದೆ” ಎಂದು ಅವರನ್ನು ಎಚ್ಚರಿಸಿದನು.

11ಆದರೆ ಪೌಲನು ಹೇಳಿದ ಮಾತುಗಳಿಗಿಂತ, ನಾವಿಕನೂ ಹಡಗಿನ ಯಜಮಾನನೂ ಹೇಳಿದ ಮಾತಿಗೆ ಶತಾಧಿಪತಿಯು ಹೆಚ್ಚಾಗಿ ಲಕ್ಷ್ಯಕೊಟ್ಟನು.

12ಆ ಬಂದರು ಪ್ರದೇಶ; ಚಳಿಗಾಲವನ್ನು ಕಳೆಯುವುದಕ್ಕೆ ಅನುಕೂಲವಲ್ಲವಾದುದರಿಂದ, ಅಲ್ಲಿಂದ ಹೊರಟು ಸಾಧ್ಯವಾದರೆ ಹೇಗೂ ಫೊಯಿನಿಕ್ಸ ಊರನ್ನು ಸೇರಿ, ಅಲ್ಲೇ ಆ ಚಳಿಗಾಲವನ್ನು ಕಳೆಯಬೇಕೆಂದು ಹೆಚ್ಚು ಜನರು ತಮ್ಮ ಅಭಿಪ್ರಾಯಗಳನ್ನು ಹೇಳಿದರು. ಫೊಯಿನಿಕ್ಸವು ಕ್ರೇತ ದ್ವೀಪದ ಒಂದು ಬಂದರು ಪ್ರದೇಶ, ಈಶಾನ್ಯ ದಿಕ್ಕಿಗೂ, ಆಗ್ನೇಯ ದಿಕ್ಕಿಗೂ ಅಭಿಮುಖವಾಗಿದೆ.

13ತೆಂಕಣ ಗಾಳಿ ಮೆಲ್ಲಗೆ ಬೀಸಲಾಗಿ ತಮ್ಮ ಉದ್ದೇಶವು ಸಾರ್ಥಕವಾಯಿತೆಂದು ಭಾವಿಸಿ ಲಂಗರುಗಳನ್ನು ತೆಗೆದು ಕ್ರೇತ ದ್ವೀಪವನ್ನು ಅನುಸರಿಸಿ ತೀರದ ಮಗ್ಗುಲಲ್ಲೇ ಹೋಗುತ್ತಿದ್ದರು.

14ಸ್ವಲ್ಪ ಹೊತ್ತಿನಮೇಲೆ ಆ ದ್ವೀಪದ ಮೇಲೆ ಈಶಾನ್ಯ ಮಾರುತ ಎಂಬ ಉರಕಲೋನ್ ಗಾಳಿಯು ಅಪ್ಪಳಿಸಿತು.

15ಆ ಹೊಡೆತಕ್ಕೆ ಹಡಗು ಸಿಕ್ಕಿಕೊಂಡು ಗಾಳಿಗೆದುರಾಗಿ ನಿಲ್ಲುವುದಕ್ಕೆ ಆಗದೆಹೋದುದರಿಂದ ಗಾಳಿ ಬಂದ ಕಡೆಗೆ ಹಡಗನ್ನು ನೂಕಿಸಿಕೊಂಡು ಹೋದೆವು.

16ಕ್ಲೌಡ ಎಂಬ ಒಂದು ಪುಟ್ಟ ದ್ವೀಪದ ಸಮೀಪಕ್ಕೆ ಹಾದುಹೋಗುವಾಗ ಹಡಗಿನಲ್ಲಿ ಇದ್ದ ಚಿಕ್ಕ ದೋಣಿಯನ್ನು ಸುಭದ್ರಪಡಿಸಿಕೊಳ್ಳುವುದು ಸಾಧ್ಯವಾಯಿತು.

17ಅದನ್ನು ಮೇಲಕ್ಕೆ ಎತ್ತಿದ ನಂತರ ಹಗ್ಗಗಳನ್ನು ತೆಗೆದುಕೊಂಡು ಹಡಗಿನ ಕೆಳಭಾಗವನ್ನು ಬಿಗಿದರು. ಆ ಮೇಲೆ ಸುರ್ತಿಸ್ ಎಂಬ ಮರಳುದಿಬ್ಬಕ್ಕೆ ಎಲ್ಲಿ ಸಿಕ್ಕಿಕೊಳ್ಳುವುದೋ ಎಂಬ ಭಯ ಆವರಿಸಿತು. ಆದುದರಿಂದ ಅವರು ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಯೇ ಹಡಗು ತೇಲಲೆಂದು ಬಿಟ್ಟರು.

18ಬಿರುಗಾಳಿಯ ಮಳೆಯೂ ನಮ್ಮನ್ನು ಅತ್ಯಂತವಾಗಿ ಹೊಯಿದಾಡಿಸಿದ್ದರಿಂದ ಅವರು ಮರುದಿನ ಹಡಗಿನಲ್ಲಿದ್ದ ಸರಕು ಸಾಮಗ್ರಿಗಳನ್ನು ಸಮುದ್ರಕ್ಕೆ ಎಸೆಯಲು ಆರಂಭಿಸಿದರು.

19ಮೂರನೆಯ ದಿನದಲ್ಲಿ ಹಡಗಿನ ಕೆಲವು ಸಲಕರಣೆಗಳನ್ನು ಸ್ವತಃ ಎತ್ತಿ ಹೊರಗೆಸೆದರು.

20ಅನೇಕ ದಿನಗಳ ತನಕ ಸೂರ್ಯನಾಗಲಿ, ನಕ್ಷತ್ರಗಳಾಗಲಿ ನಮಗೆ ಕಾಣಿಸದೆ, ದೊಡ್ಡ ಬಿರುಗಾಳಿ ಮಳೆ ನಮ್ಮ ಮೇಲೆ ಹೊಡೆದುದರಿಂದ ತಪ್ಪಿಸಿಕೊಂಡೇವೆಂಬ ಎಲ್ಲಾ ನಿರೀಕ್ಷೆಯು ವಿಫಲವಾಯಿತು.

21ಅವರು ಬಹುಕಾಲ ಊಟವಿಲ್ಲದೆ ಇದ್ದ ಮೇಲೆ, ಪೌಲನು ಅವರ ಮಧ್ಯದಲ್ಲಿ ನಿಂತುಕೊಂಡು; “ಎಲೈ ಜನರೇ, ನೀವು ಕ್ರೇತದಿಂದ ಹೊರಟು ಈ ಕಷ್ಟನಷ್ಟಗಳಿಗೆ ಗುರಿಯಾಗದಂತೆ ನನ್ನ ಮಾತನ್ನು ಕೇಳಬೇಕಾಗಿತ್ತು.

22ಈಗಲಾದರೂ ನೀವು ಧೈರ್ಯದಿಂದಿರಬೇಕೆಂದು ನಿಮಗೆ ಬುದ್ಧಿಹೇಳುತ್ತೇನೆ; ಹಡಗು ನಷ್ಟವಾಗುವುದೇ ಹೊರತು, ನಿಮ್ಮಲ್ಲಿ ಒಬ್ಬರಿಗೂ ಪ್ರಾಣನಷ್ಟವಾಗುವುದಿಲ್ಲ.

23ಏಕೆಂದರೆ, ನಾನು ಯಾರವನಾಗಿದ್ದೇನೋ, ಯಾರನ್ನು ಸ್ತುತಿಸುತ್ತೇನೋ ಆ ದೇವರಿಂದ ಬಂದ ಒಬ್ಬ ದೂತನು ಕಳೆದ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು;

24‘ಪೌಲನೇ, ಭಯಪಡಬೇಡ, ನೀನು ಕೈಸರನ ಮುಂದೆ ನಿಲ್ಲಬೇಕು; ಇದಲ್ಲದೆ ನಿನ್ನ ಸಂಗಡ ಈ ಹಡಗಿನಲ್ಲಿ ಪ್ರಯಾಣಮಾಡುವವರೆಲ್ಲರ ಪ್ರಾಣವನ್ನು, ದೇವರು ನಿನ್ನ ಮೇಲಣ ದಯೆಯಿಂದ ಉಳಿಸಿಕೊಟ್ಟಿದ್ದಾನೆಂದು’ ನನ್ನ ಸಂಗಡ ಹೇಳಿದನು.

25ಆದುದರಿಂದ, ಜನರೇ ಧೈರ್ಯವಾಗಿರಿ. ನನಗೆ ಹೇಳಲ್ಪಟ್ಟ ಪ್ರಕಾರವೇ ಆಗುವುದೆಂದು ದೇವರನ್ನು ನಂಬಿದ್ದೇನೆ.

26ಆದರೆ, ನಾವು ಯಾವುದೋ ಒಂದು ದ್ವೀಪದ ದಡವನ್ನು ತಾಕಬೇಕಾಗಿದೆ” ಎಂದು ಹೇಳಿದನು.

27ಹದಿನಾಲ್ಕನೆಯ ರಾತ್ರಿಯಲ್ಲಿ ನಾವು ಆದ್ರಿಯ ಸಮುದ್ರದಲ್ಲಿ ಅತ್ತ ಇತ್ತ ಬಡಿಸಿಕೊಂಡು ಹೋಗುತ್ತಿರುವಾಗ ಸುಮಾರು ಮಧ್ಯರಾತ್ರಿಯಲ್ಲಿ ನಾವಿಕರು ಒಂದು ದೇಶದ ಹತ್ತಿರ ಬಂದೆವೆಂದು ನೆನಸಿ,

28ಅಳತೆ ಮಾಪನವನ್ನು ಇಳಿಸಿ ಇಪ್ಪತ್ತು ಮಾರುದ್ದವೆಂದು ಕಂಡರು. ಸ್ವಲ್ಪ ಹೊತ್ತಿನ ಮೇಲೆ ಅವರು ತಿರುಗಿ ಮಾಪನದ ಗುಂಡನ್ನು ಇಳಿಸಿ ನೋಡಲಾಗಿ ಹದಿನೈದು ಮಾರುದ್ದವೆಂದು ಕಂಡರು.

29ಬಂಡೆಗಳಿಗೆ ಡಿಕ್ಕಿಹೊಡೆದೆವೋ ಎಂದು ಭಯಪಟ್ಟು ಹಡಗಿನ ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಬಿಟ್ಟು ಬೇಗ ಬೆಳಗಾಗಲಿ ಎಂದು ಪ್ರಾರ್ಥಿಸಿದೆವು.

30ಆದರೆ, ನಾವಿಕರು ಮುಂಭಾಗದಲ್ಲಿ ಲಂಗರುಗಳನ್ನು ಹಾಕಬೇಕೆಂಬ ಸುಳ್ಳುಕಾರಣ ಕೊಟ್ಟು ದೋಣಿಯನ್ನು ಸಮುದ್ರದಲ್ಲಿ ಇಳಿಸಿ ಹಡಗನ್ನು ಬಿಟ್ಟು ತಪ್ಪಿಸಿಕೊಂಡು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ,

31ಪೌಲನು ಶತಾಧಿಪತಿಗೂ, ಸಿಪಾಯಿಗಳಿಗೂ; “ಇವರು ಹಡಗಿನಲ್ಲಿ ಉಳಿಯದಿದ್ದರೆ ನಿಮ್ಮ ಪ್ರಾಣ ಉಳಿಯುವುದಿಲ್ಲವೆಂದು” ಹೇಳಿದನು.

32ಆಗ ಸಿಪಾಯಿಗಳು ದೋಣಿಯ ಹಗ್ಗಗಳನ್ನು ಕತ್ತರಿಸಿ ಅದು ಬಿದ್ದು ಹೋಗುವಂತೆ ಮಾಡಿದರು.

33ಬೆಳಗಾಗುತ್ತಿರುವಷ್ಟರಲ್ಲಿ ಪೌಲನು ಏನಾದರೂ ಆಹಾರವನ್ನು ತೆಗೆದುಕೊಳ್ಳಬೇಕೆಂದು ಎಲ್ಲರನ್ನು ಬೇಡಿಕೊಳ್ಳುತ್ತಾ; “ಇಂದಿಗೆ ನೀವು ಹದಿನಾಲ್ಕು ದಿನದಿಂದ ಕಾದುಕೊಂಡು ಆಹಾರವನ್ನು ತೆಗೆದುಕೊಳ್ಳದೆ, ಹಸಿದುಕೊಂಡು ಇದ್ದೀರಿ.

34ಅದುದರಿಂದ, ಆಹಾರ ತೆಗೆದುಕೊಳ್ಳಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣರಕ್ಷಣೆಗೆ ಅಗತ್ಯವಾಗಿದೆ. ನಿಮ್ಮಲ್ಲಿ ಯಾರ ತಲೆಯಿಂದಲಾದರೂ ಒಂದು ಕೂದಲೂ ಉದುರಿಹೋಗುವುದಿಲ್ಲವೆಂದು” ಹೇಳಿ,

35ರೊಟ್ಟಿಯನ್ನು ತೆಗೆದುಕೊಂಡು, ಎಲ್ಲರ ಮುಂದೆ ದೇವರ ಸ್ತೋತ್ರಮಾಡಿ ಅದನ್ನು ಮುರಿದು ತಿನ್ನುವುದಕ್ಕೆ ಪ್ರಾರಂಭಿಸಿದನು.

36ಆಗ ಎಲ್ಲರೂ ಧೈರ್ಯ ತಂದುಕೊಂಡು, ತಾವೂ ಆಹಾರವನ್ನು ಸೇವಿಸಿದರು.

37ಆ ಹಡಗಿನಲ್ಲಿದ್ದ ನಾವೆಲ್ಲರೂ ಒಟ್ಟು ಇನ್ನೂರ ಎಪ್ಪತ್ತಾರು ಮಂದಿ ಇದ್ದೇವು.

38ಸಾಕಾದಷ್ಟು ತಿಂದ ಮೇಲೆ, ಮಿಕ್ಕ ಗೋದಿಯನ್ನು ಸಮುದ್ರಕ್ಕೆ ಚೆಲ್ಲಿ, ಹಡಗನ್ನು ಹಗುರ ಮಾಡಿದರು.

39ಬೆಳಗಾದ ಮೇಲೆ ಆ ದೇಶದ ಗುರುತನ್ನು ತಿಳಿಯದೆ ಉಸುಬಿನ ದಡವುಳ್ಳ ಒಂದು ಕೊಲ್ಲಿಯನ್ನು ನೋಡಿ ಆ ದಡದ ಮೇಲೆ ಹಡಗನ್ನು ನೂಕುವುದಕ್ಕೆ ಸಾಧ್ಯವಾದೀತೆಂದು ಯೋಚಿಸಿದರು.

40ಅವರು ಲಂಗರುಗಳನ್ನು ಸರಿಸಿ ಸಮುದ್ರದಲ್ಲೇ ಬಿಟ್ಟು, ಚುಕ್ಕಾಣಿಗಳ ಕಟ್ಟುಗಳನ್ನು ಬಿಚ್ಚಿ, ದೊಡ್ಡ ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ಹಡಗನ್ನು ಆ ದಡಕ್ಕೆ ನಡಿಸುತ್ತಿದ್ದರು.

41ಆದರೆ ಮಧ್ಯದಲ್ಲಿ ಅವರಿಗೆ ಮರಳದಿಬ್ಬ ಸಿಕ್ಕಿದಾಗ ಅದಕ್ಕೆ ನಾವೆಯನ್ನು ಹತ್ತಿಸಿದರು. ಮುಂಭಾಗವು ದಿಣ್ಣೆಗೆ ತಗಲಿಕೊಂಡು ಅಲ್ಲಾಡದೆ ನಿಂತಿತು. ಹಿಂಭಾಗವು ಹುಚ್ಚು ಅಲೆಗಳ ಹೊಡೆತದಿಂದ ಒಡೆದು ತುಂಡಾಯಿತು.

42ಸೆರೆಯವರಲ್ಲಿ ಕೆಲವರು ಈಜಿ ತಪ್ಪಿಸಿಕೊಂಡಾರೆಂದು ಸಿಪಾಯಿಗಳು ಅವರನ್ನು ಕೊಲ್ಲಬೇಕೆಂಬುದಾಗಿ ಯೋಚಿಸಿದರು.

43ಆದರೆ ಶತಾಧಿಪತಿಯು, ಪೌಲನನ್ನು ಉಳಿಸಬೇಕೆಂದು ಅಪೇಕ್ಷಿಸಿ ಅವರ ಆಲೋಚನೆಯನ್ನು ಬೇಡವೆಂದು ಹೇಳಿ, ಈಜಬಲ್ಲವರು ಹಡಗಿನಿಂದ ಧುಮುಕಿ ಮೊದಲು ತೀರಕ್ಕೆ ಹೋಗಬೇಕೆಂತಲೂ,

44ಉಳಿದವರಲ್ಲಿ ಕೆಲವರು ಹಲಿಗೆಗಳ ಮೇಲೆ, ಕೆಲವರು ಹಡಗಿನ ತುಂಡುಗಳ ಮೇಲೆ ಹೋಗಬೇಕೆಂತಲೂ ಅಪ್ಪಣೆಕೊಟ್ಟನು. ಈ ರೀತಿಯಿಂದ ಎಲ್ಲರೂ ಸುರಕ್ಷಿತವಾಗಿ ತೀರವನ್ನು ತಲುಪಿದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath