ಕ್ರಿಶ್ಚಿಯನ್ ಧರ್ಮ
ಹಿಂದೆ

ಅಪೊಸ್ತಲರ ಕೃತ್ಯಗಳು 19

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಅಪೊಲ್ಲೋಸನು ಕೊರಿಂಥದಲ್ಲಿದ್ದಾಗ ಪೌಲನು ಮಲೆನಾಡಿನಲ್ಲಿ ಸಂಚಾರಮಾಡಿ ಎಫೆಸಕ್ಕೆ ಬಂದು ಕೆಲವು ಮಂದಿ ಶಿಷ್ಯರನ್ನು ಕಂಡು;

2“ನೀವು ನಂಬಿದಾಗ ಪವಿತ್ರಾತ್ಮವರವನ್ನು ಹೊಂದಿದಿರೋ?” ಎಂದು ಅವರನ್ನು ಕೇಳಲು ಅವರು ಅವನಿಗೆ; “ಇಲ್ಲ, ಪವಿತ್ರಾತ್ಮವರವು ಉಂಟೆಂಬುದನ್ನೇ ನಾವು ಕೇಳಿಲ್ಲ” ಅಂದರು.

3ಅವನು; “ನೀವು ಏನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಂಡಿರಿ” ಎಂದು ಕೇಳಿದ್ದಕ್ಕೆ ಅವರು; “ಯೋಹಾನನ ಬೋಧನೆಯನ್ನು ನಂಬಿ ದೀಕ್ಷಾಸ್ನಾನಮಾಡಿಸಿಕೊಂಡೆವು” ಅಂದರು.

4ಅದಕ್ಕೆ ಪೌಲನು; “ಯೋಹಾನನು ಪಶ್ಚಾತ್ತಾಪಪಟ್ಟು ದೇವರ ಕಡೆಗೆ ತಿರುಗಿಕೊಂಡವರಿಗೆ ದೀಕ್ಷಾಸ್ನಾನ ಮಾಡಿಸಿ ತನ್ನ ಹಿಂದೆ ಬರುವ ಯೇಸುವಿನಲ್ಲಿ ನಂಬಿಕೆಯಿಡಬೇಕೆಂಬುದಾಗಿ ಜನರಿಗೆ ಹೇಳಿದನು” ಎಂದು ಹೇಳಲು,

5ಅವರು ಆ ಮಾತನ್ನು ಕೇಳಿ ಕರ್ತನಾದ ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡರು.

6ಪೌಲನು ಅವರ ಮೇಲೆ ಕೈಗಳನ್ನಿಡಲು ಪವಿತ್ರಾತ್ಮನು ಅವರ ಮೇಲೆ ಇಳಿದುಬಂದನು; ಅವರು ನಾನಾ ಭಾಷೆಗಳನ್ನಾಡಿದರು, ಪ್ರವಾದಿಸಿದರು.

7ಅಲ್ಲಿ ಸುಮಾರು ಹನ್ನೆರಡು ಮಂದಿ ಗಂಡಸರಿದ್ದರು.

8ಆ ಪಟ್ಟಣದಲ್ಲಿ ಪೌಲನು ಸಭಾಮಂದಿರದೊಳಗೆ ಹೋಗಿ, ಮೂರು ತಿಂಗಳು ಅಲ್ಲೇ ದೇವರ ರಾಜ್ಯದ ವಿಷಯಗಳನ್ನು ಕುರಿತು, ವಾದಿಸುತ್ತಾ ಜನರನ್ನು ಒಡಂಬಡಿಸುತ್ತಾ ಧೈರ್ಯದಿಂದ ಮಾತನಾಡಿದನು.

9ಕೆಲವರು ತಮ್ಮ ಮನಸ್ಸುಗಳನ್ನು ಕಠಿಣಮಾಡಿಕೊಂಡು ಒಡಂಬಡದೆ ಗುಂಪುಕೂಡಿದ ಜನರ ಮುಂದೆ ಈ ಮಾರ್ಗವು ಕೆಟ್ಟದ್ದೆಂದು ಹೇಳಲು ಅವನು ಅವರನ್ನು ಬಿಟ್ಟುಹೋಗಿ ಶಿಷ್ಯರನ್ನು ಬೇರೆಮಾಡಿ ತುರನ್ನ ಎಂಬುವನ ತರ್ಕಶಾಲೆಯಲ್ಲಿ ಪ್ರತಿದಿನವೂ ವಾದಿಸಿದನು.

10ಇದು ಎರಡು ವರ್ಷಗಳ ವರೆಗೂ ನಡೆದಿದ್ದರಿಂದ ಅಸ್ಯಸೀಮೆಯಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರೂ, ಗ್ರೀಕರೂ, ಕರ್ತನ ವಾಕ್ಯವನ್ನು ಕೇಳಿದರು.

11ದೇವರು ಪೌಲನ ಕೈಯಿಂದ ವಿಶೇಷವಾದ ಮಹತ್ಕಾರ್ಯಗಳನ್ನು ನಡಿಸುತ್ತಾ ಇದ್ದುದರಿಂದ,

12ಜನರು ಅವನ ಮೈಮೇಲಿನಿಂದ ಕೈವಸ್ತ್ರಗಳನ್ನೂ, ರುಮಾಲುಗಳನ್ನೂ ತಂದು ರೋಗಿಗಳ ಮೇಲೆ ಹಾಕಲು ಅವರ ರೋಗಗಳು ವಾಸಿಯಾದವು, ದುರಾತ್ಮಗಳೂ ಬಿಟ್ಟುಹೋದವು.

13ದುರಾತ್ಮಗಳನ್ನೂ ಬಿಡಿಸುವವರೆನಿಸಿಕೊಂಡು, ದೇಶಸಂಚಾರಿಗಳಾದ ಯೆಹೂದ್ಯರಿದ್ದರು. ಅವರಲ್ಲಿ ಕೆಲವರು ದುರಾತ್ಮ ಪೀಡಿತರ ಮೇಲೆ; “ಪೌಲನು ಸಾರುವ ಯೇಸುವಿನ ಆಣೆ” ಎಂದು ಹೇಳಿ ಕರ್ತನಾದ ಯೇಸುವಿನ ಹೆಸರನ್ನು ಪ್ರಯೋಗಮಾಡುವುದಕ್ಕೆ ತೊಡಗಿದರು.

14ಮುಖ್ಯಯಾಜಕ ಸ್ಕೇವನೆಂಬ ಒಬ್ಬ ಯೆಹೂದ್ಯನ ಏಳು ಮಂದಿ ಮಕ್ಕಳೂ ಹಾಗೆ ಮಾಡುತ್ತಿದ್ದರು.

15ಆದರೆ ದುರಾತ್ಮವು ಅವರಿಗೆ; “ಯೇಸುವಿನ ಗುರುತು ನನಗುಂಟು, ಪೌಲನನ್ನೂ ಬಲ್ಲೆನು, ಆದರೆ ನೀವು ಯಾರು?” ಎಂದು ಹೇಳಿತು;

16ಮತ್ತು ದುರಾತ್ಮ ಹಿಡಿದಿದ್ದ ಆ ಮನುಷ್ಯನು ಅವರ ಮೇಲೆ ಹಾರಿ ಬಿದ್ದು, ಅವರನ್ನೂ ಸೋಲಿಸಿ ಸದೆಬಡಿದಿದ್ದರಿಂದ ಅವರು ಗಾಯಗೊಂಡು ಬೆತ್ತಲೆಯಾಗಿ ಆ ಮನೆಯೊಳಗಿಂದ ಓಡಿಹೋದರು.

17ಈ ಸಂಗತಿಯು ಎಫೆಸದಲ್ಲಿ ವಾಸವಾಗಿದ್ದ ಎಲ್ಲಾ ಯೆಹೂದ್ಯರಿಗೂ, ಗ್ರೀಕರಿಗೂ ತಿಳಿದುಬಂದಾಗ ಅವರೆಲ್ಲರೂ ಭಯಭೀತರಾದರು. ಮತ್ತು ಕರ್ತನಾದ ಯೇಸುವಿನ ಹೆಸರು ಪ್ರಖ್ಯಾತಿಗೆ ಬಂದಿತು.

18ಆತನನ್ನು ನಂಬಿದವರಲ್ಲಿ ಅನೇಕರು ಪಶ್ಚಾತ್ತಾಪದಿಂದ ಬಂದು ತಮ್ಮ ತಮ್ಮ ಪಾಪಕೃತ್ಯಗಳನ್ನು ಒಪ್ಪಿಕೊಂಡರು.

19ಇದಲ್ಲದೆ ಮಾಟ ಮಂತ್ರಗಳನ್ನು ನಡಿಸಿದವರಲ್ಲಿ ಅನೇಕರು ತಮ್ಮ ಮಾಟಮಂತ್ರಗಳ ಪುಸ್ತಕಗಳನ್ನು ತಂದು, ಕೂಡಿಸಿ ಎಲ್ಲರ ಮುಂದೆ ಸುಟ್ಟುಬಿಟ್ಟರು. ಅವುಗಳ ಮೌಲ್ಯವನ್ನು ಲೆಕ್ಕಮಾಡಿ ಐವತ್ತು ಸಾವಿರ ಬೆಳ್ಳಿ ನಾಣ್ಯ ಆಯಿತೆಂದು ತಿಳಿದುಕೊಂಡರು.

20ಈ ರೀತಿಯಾಗಿ ಕರ್ತನ ವಾಕ್ಯವು ಬಹಳವಾಗಿ ಹೆಚ್ಚುತ್ತಾ ಪ್ರಬಲವಾಯಿತು.

21ಈ ಸಂಗತಿಗಳು ಆದ ಮೇಲೆ ಪೌಲನು ತಾನು ಮಕೆದೋನ್ಯದಲ್ಲಿಯೂ, ಅಖಾಯದಲ್ಲಿಯೂ ಸಂಚಾರಮಾಡಿ ಯೆರೂಸಲೇಮಿಗೆ ಹೋಗಬೇಕೆಂದು ಮನಸ್ಸಿನಲ್ಲಿ ಯೋಚಿಸಿ; “ಅಲ್ಲಿಗೆ ಹೋದ ಮೇಲೆ ರೋಮಾಪುರವನ್ನು ಸಹ ನೋಡಬೇಕೆಂದು” ಹೇಳಿದನು.

22ಆದರೆ ಅವನು ತನಗೆ ಸೇವೆಮಾಡುವವರಲ್ಲಿ ಇಬ್ಬರಾದ ತಿಮೊಥೆಯನನ್ನೂ ಮತ್ತು ಎರಸ್ತನನ್ನೂ ಮಕೆದೋನ್ಯಕ್ಕೆ ಕಳುಹಿಸಿ ತಾನು ಆಸ್ಯಸೀಮೆಯಲ್ಲಿ ಕೆಲವು ಕಾಲ ತಂಗಿದನು.

23ಆ ಕಾಲದಲ್ಲಿ ಈ ಮಾರ್ಗದ ವಿಷಯವಾಗಿ ಬಹಳ ಗಲಭೆ ಹುಟ್ಟಿತು.

24ಹೇಗೆಂದರೆ, ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀ ದೇವಿಯ ಗುಡಿಯಂತೆ ಸಣ್ಣಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸುಬಿನವರಿಗೆ ಬಹಳ ಲಾಭವನ್ನು ಕೊಡುತ್ತಿದ್ದನು.

25ಅವನು ಅವರನ್ನೂ ಮತ್ತು ಆ ಕಸುಬಿಗೆ ಸಂಬಂಧಪಟ್ಟ ಕೆಲಸದವರನ್ನೂ ಒಟ್ಟಿಗೆ ಕರೆಸಿ ಅವರಿಗೆ; “ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ.

26ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ.

27ಇದರಿಂದ ನಮ್ಮ ಉದ್ಯೋಗಕ್ಕೆ ಕುಂದು ಬರುವುದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ, ಎಲ್ಲಾ ಆಸ್ಯಸೀಮೆಯೂ, ಲೋಕವೆಲ್ಲಾ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆ ಗಂಡಾಂತರವುಂಟಾಗುತ್ತದೆಂದು” ಹೇಳಿದನು.

28ಅವರು ಈ ಮಾತುಗಳನ್ನು ಕೇಳಿ ಕೋಪಗೊಂಡು; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಅರ್ಭಟಿಸಿದರು.

29ಆಗ ಊರಿನಲ್ಲೆಲ್ಲಾ ಗಲಿಬಿಲಿಯಾಯಿತು. ಪ್ರಯಾಣದಲ್ಲಿ ಪೌಲನಿಗೆ ಜೊತೆಯವರಾಗಿದ್ದ ಮಕೆದೋನ್ಯದ ಗಾಯನನ್ನೂ, ಅರಿಸ್ತಾರ್ಕನನ್ನೂ ಜನರು ಹಿಡಿದುಕೊಂಡು ಒಟ್ಟಾಗಿ ನಾಟಕ ಶಾಲೆಯೊಳಗೆ ನುಗ್ಗಿದರು.

30ಪೌಲನು ಜನರೊಳಗೆ ನುಗ್ಗಬೇಕೆಂದಿದ್ದಾಗ ಶಿಷ್ಯರು ಅವನನ್ನು ಬಿಡಲಿಲ್ಲ.

31ಇದಲ್ಲದೆ ಆಸ್ಯಸೀಮೆಯ ಅಧಿಕಾರಿಗಳಲ್ಲಿ ಕೆಲವರು ಪೌಲನ ಸ್ನೇಹಿತರಾಗಿದ್ದುದರಿಂದ ಅವನ ಬಳಿಗೆ ಜನರನ್ನು ಕಳುಹಿಸಿ; ನೀನು ನಾಟಕ ಶಾಲೆಯೊಳಗೆ ಹೋಗ ಬೇಡ ಎಂದು ಬೇಡಿಕೊಂಡರು.

32ಜನಸಮೂಹದಲ್ಲಿ ಗೊಂದಲವೆದ್ದಿತು, ಕೆಲವರು ಒಂದು ವಿಧದಲ್ಲಿ ಕೂಗಾಡಿದರೆ ಮತ್ತೆ ಕೆಲವರು ಇನ್ನೊಂದು ವಿಧದಲ್ಲಿ ಕೂಗುತ್ತಿದ್ದರು. ಬಹುಜನರಿಗೆ ತಾವು ಅಲ್ಲಿ ಕೂಡಿ ಬಂದಿದ್ದ ಕಾರಣವು ಗೊತ್ತಿರಲಿಲ್ಲ.

33ಯೆಹೂದ್ಯರು ಅಲೆಕ್ಸಾಂದ್ರನನ್ನು ಮುಂದಕ್ಕೆ ನೂಕಲು, ಗುಂಪಿನಲ್ಲಿ ಕೆಲವರು ಅವನಿಗೆ ಸೂಚನೆ ಕೊಟ್ಟರು. ಆಗ ಅಲೆಕ್ಸಾಂದ್ರನು ಕೈಸನ್ನೆ ಮಾಡಿ ಕೂಡಿದ್ದ ಜನರಿಗೆ ಪ್ರತಿವಾದ ಮಾಡಬೇಕೆಂದಿದ್ದನು.

34ಆದರೆ ಅವನು ಯೆಹೂದ್ಯನೆಂದು ತಿಳಿದಾಗ ಎಲ್ಲರೂ ಒಂದೇ ಶಬ್ದದಿಂದ; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಎರಡು ಘಂಟೆ ಹೊತ್ತು ಕೂಗಿದರು.

35ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?

36ಈ ಸಂಗತಿ ಅಲ್ಲವೆನ್ನುವುದಕ್ಕೆ ಯಾರಿಂದಲೂ ಆಗದಿರುವುದರಿಂದ ನೀವು ಶಾಂತಿಯಿಂದಿರಬೇಕು; ದುಡುಕಿ ಏನೂ ಮಾಡಬಾರದು.

37ನೀವು ಹಿಡಿದುತಂದಿರುವ ಈ ಮನುಷ್ಯರು ದೇವಸ್ಥಾನದಲ್ಲಿ ಕಳ್ಳತನ ಮಾಡುವವರಲ್ಲ, ನಮ್ಮ ದೇವಿಯನ್ನು ದೂಷಿಸುವವರೂ ಅಲ್ಲ.

38ಹೀಗಿರುವುದರಿಂದ ದೇಮೇತ್ರಿಯನಿಗೂ ಅವನ ಪಕ್ಷವನ್ನು ಹಿಡಿದಿರುವ ಅಕ್ಕಸಾಲಿಗರಿಗೂ ಯಾವನ ಮೇಲಾದರೂ ದೂರುಗಳಿದ್ದರೆ ನ್ಯಾಯಸ್ಥಾನಗಳುಂಟು, ಅಧಿಪತಿಗಳಿದ್ದಾರೆ, ಒಬ್ಬರ ಮೇಲೊಬ್ಬರು ವ್ಯಾಜ್ಯವಾಡಿಕೊಳ್ಳಲಿ.

39ಏನಾದರೂ ಹೆಚ್ಚು ವಿಚಾರಣೆ ಬೇಕಾದರೆ ಅದು ನ್ಯಾಯವಾಗಿ ನೆರೆದ ಸಭೆಯಲ್ಲಿ ತೀರ್ಮಾನಿಸಲ್ಪಡಬೇಕು.

40ಈ ದಿನದಲ್ಲಿ ನ್ಯಾಯವಾದ ಕಾರಣವಿಲ್ಲದೆ ನೆರೆದ ಜನರ ವಿಷಯದಲ್ಲಿ ಇದು ಒಂದು ದಂಗೆ ಎಂಬುದಾಗಿ ನಮ್ಮ ಮೇಲೆ ತಪ್ಪುಹೊರಿಸುವುದಕ್ಕೆ ಆಸ್ಪದವಾಯಿತು. ಈ ದೊಂಬಿಯನ್ನು ಕುರಿತು ವಿಚಾರಣೆನಡೆಸಿದರೆ ನಮ್ಮಿಂದ ಉತ್ತರಕೊಡುವುದಕ್ಕೆ ಆಗುವುದೇ ಇಲ್ಲ” ಎಂದು ಹೇಳಿದನು.

41ಈ ಮಾತುಗಳನ್ನು ಹೇಳಿ ಜನರ ಗುಂಪನ್ನು ಕಳುಹಿಸಿಬಿಟ್ಟನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath