ಅಪೊಸ್ತಲರ ಕೃತ್ಯಗಳು 12
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಆ ಸಮಯದಲ್ಲೇ ಅರಸನಾದ ಹೆರೋದನು ಸಭೆಯವರಲ್ಲಿ ಕೆಲವರನ್ನು ಹಿಂಸೆಪಡಿಸುವುದಕ್ಕೆ ಕೈಹಾಕಿದನು.
2ಯೋಹಾನನ ಅಣ್ಣನಾದ ಯಾಕೋಬನನ್ನು ಕತ್ತಿಯಿಂದ ಕೊಲ್ಲಿಸಿದನು.
3ಇದು ಯೆಹೂದ್ಯರಿಗೆ ಮೆಚ್ಚಿಕೆಯಾಗಿದೆ ಎಂದು ತಿಳಿದು, ಅಷ್ಟಕ್ಕೆ ನಿಲ್ಲದೆ ಪೇತ್ರನನ್ನೂ ಬಂಧಿಸಿದನು. ಆ ಕಾಲದಲ್ಲಿ ಪಸ್ಕಹಬ್ಬ ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬ ನಡೆಯುತ್ತಿತ್ತು.
4ಅವನನ್ನು ಪಸ್ಕ ಹಬ್ಬವಾದ ಮೇಲೆ ಜನರ ಮುಂದೆ ತರಿಸಬೇಕೆಂಬ ಯೋಚನೆಯಿಂದ ಸೆರೆಯಲ್ಲಿ ಹಾಕಿಸಿ ಅವನನ್ನು ಕಾಯಲಿಕ್ಕೆ ನಾಲ್ಕು ನಾಲ್ಕು ಸಿಪಾಯಿಗಳಿದ್ದ ನಾಲ್ಕು ಗುಂಪುಗಳ ವಶಕ್ಕೆ ಕೊಟ್ಟನು.
5ಪೇತ್ರನು ಸೆರೆಮನೆಯೊಳಗೆ ಕಾವಲಲ್ಲಿದ್ದಾಗ, ಸಭೆಯವರು ಅವನಿಗೋಸ್ಕರ ಆಸಕ್ತಿಯಿಂದ ದೇವರಿಗೆ ಪ್ರಾರ್ಥನೆ ಮಾಡುತ್ತಿದ್ದರು.
6ಹೆರೋದನು ಅವನನ್ನು ಜನರ ಮುಂದೆ ತರಿಸಬೇಕೆಂದಿದ್ದ ದಿನದ ಹಿಂದಿನ ರಾತ್ರಿಯಲ್ಲಿ, ಪೇತ್ರನು ಎರಡು ಸರಪಣಿಗಳಿಂದ ಕಟ್ಟಲ್ಪಟ್ಟವನಾಗಿ, ಇಬ್ಬರು ಸಿಪಾಯಿಗಳ ನಡುವೆ ನಿದ್ದೆಮಾಡುತ್ತಿದ್ದನು. ಕಾವಲುಗಾರರು ಬಾಗಿಲ ಮುಂದೆ ನಿಂತು ಸೆರೆಮನೆಯನ್ನು ಕಾಯುತ್ತಿದ್ದರು.
7ಫಕ್ಕನೆ ಕರ್ತನ ದೂತನು ಪೇತ್ರನೆದುರಿಗೆ ನಿಂತನು; ಅವನಿದ್ದ ಕೋಣೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನ ಪಕ್ಕೆಯನ್ನು ತಟ್ಟಿ ಎಬ್ಬಿಸಿ; “ತಟ್ಟನೆ ಏಳು” ಅಂದನು. ಆಗಲೇ ಅವನ ಕೈಗಳಿಗೆ ಹಾಕಿದ್ದ ಸರಪಣಿಗಳು ಕಳಚಿಬಿದ್ದವು.
8ಆ ದೂತನು ಅವನಿಗೆ; “ನಡುಕಟ್ಟಿಕೊಂಡು, ನಿನ್ನ ಕೆರಗಳನ್ನು ಮೆಟ್ಟಿಕೋ” ಎಂದು ಹೇಳಲು, ಅವನು ಹಾಗೆಯೇ ಮಾಡಿದನು. “ನಿನ್ನ ಮೇಲಂಗಿಯನ್ನು ಹಾಕಿಕೊಂಡು ನನ್ನ ಹಿಂದೆ ಬಾ” ಅಂದನು.
9ಅವನು ಹೊರಗೆ ಬಂದು ಆ ದೂತನ ಹಿಂದೆಯೇ ಹೋಗುತ್ತಾ, ದೂತನ ಮೂಲಕವಾಗಿ ನಡೆದ ಸಂಗತಿ ನಿಜವಾದದ್ದೆಂದು ತಿಳಿಯದೆ ತಾನು ನೋಡಿದ್ದು ಕನಸು ಎಂದು ತಿಳಿದನು.
10ಅವರು ಮೊದಲನೆಯ ಮತ್ತು ಎರಡನೆಯ ಕಾವಲುಗಳನ್ನು ದಾಟಿ, ಪಟ್ಟಣಕ್ಕೆ ಹೋಗುವ ಕಬ್ಬಿಣದ ಬಾಗಿಲಿಗೆ ಬಂದಾಗ ಅದು ತನ್ನಷ್ಟಕ್ಕೆ ತಾನೇ ಅವರಿಗೆ ತೆರೆಯಿತು; ಅವರು ಹೊರಗೆ ಬಂದು ಒಂದು ಬೀದಿಯನ್ನು ದಾಟಿದರು; ಕೂಡಲೇ ಆ ದೂತನು ಅವನನ್ನು ಬಿಟ್ಟು ಹೋದನು.
11ಆಗ ಪೇತ್ರನು ಎಚ್ಚರಗೊಂಡು; “ಕರ್ತನು ತನ್ನ ದೂತನನ್ನು ಕಳುಹಿಸಿ ಹೆರೋದನ ಕೈಯಿಂದಲೂ, ಯೆಹೂದ್ಯಜನರು ನನಗೆ ಮಾಡಬೇಕೆಂದಿದ್ದ ಕೇಡಿನಿಂದಲೂ, ನನ್ನನ್ನು ಬಿಡಿಸಿದನೆಂದು ನನಗೀಗ ನಿಜವಾಗಿ ತಿಳಿಯಿತು” ಎಂದು ಅಂದುಕೊಂಡನು.
12ಆತನು ಇದನ್ನು ತಿಳಿದುಕೊಂಡ ತರುವಾಯ, ಅವನು ಮಾರ್ಕನೆನಿಸಿಕೊಳ್ಳುವ ಯೋಹಾನನ ತಾಯಿಯಾದ ಮರಿಯಳ ಮನೆಗೆ ಬಂದನು. ಅಲ್ಲಿ ಅನೇಕರು ಕೂಡಿಬಂದು ಪ್ರಾರ್ಥನೆಮಾಡುತ್ತಿದ್ದರು.
13ಪೇತ್ರನು ಬಾಗಿಲಿನ ಕದವನ್ನು ತಟ್ಟಲು ರೋದೆ ಎಂಬ ಒಬ್ಬ ಕೆಲಸದವಳು ನೋಡುವುದಕ್ಕೆ ಬಂದಳು.
14ಅವಳು ಪೇತ್ರನ ಧ್ವನಿಯನ್ನು ಗುರುತುಹಿಡಿದು ಅತಿಯಾದ ಆನಂದದಿಂದ ಬಾಗಿಲನ್ನು ತೆರೆಯದೆ ಒಳಕ್ಕೆ ಓಡಿಹೋಗಿ; “ಪೇತ್ರನು ಬಾಗಿಲ ಮುಂದೆ ನಿಂತಿದ್ದಾನೆ” ಎಂದು ತಿಳಿಸಿದಳು. ಅವರು ಅವಳಿಗೆ; “ನಿನಗೆ ಹುಚ್ಚು ಹಿಡಿದದೆ” ಎಂದು ಹೇಳಿದರು.
15ಆದರೆ ಅವಳು ತಾನು ಹೇಳಿದಂತೆಯೇ ಅದೆ ಎಂದು ದೃಢವಾಗಿ ಹೇಳುತ್ತಾ ಇರಲು, ಅದಕ್ಕೆ ಅವರು; “ಅವನ ದೂತನಾಗಿರಬೇಕು” ಅಂದರು.
16ಆದರೆ ಪೇತ್ರನು ಬಾಗಿಲು ತಟ್ಟುತ್ತಲೇ ಇರಲು, ಅವರು ಬಾಗಿಲನ್ನು ತೆರೆದು ಅವನನ್ನು ಕಂಡು ಬೆರಗಾದರು.
17ಅವನು ಸುಮ್ಮನಿರಿ ಎಂದು ಅವರಿಗೆ ಕೈಸನ್ನೆ ಮಾಡಿ ತನ್ನನ್ನು ಕರ್ತನು ಸೆರೆಮನೆಯೊಳಗಿಂದ ಹೊರಗೆ ಕರೆದುಕೊಂಡು ಬಂದ ರೀತಿಯನ್ನು ವಿವರಿಸಿ; “ಈ ಸಂಗತಿಗಳನ್ನು ಯಾಕೋಬನಿಗೂ, ಸಹೋದರರೆಲ್ಲರಿಗೂ ತಿಳಿಸಿರೆಂದು” ಹೇಳಿ ಬೇರೆ ಸ್ಥಳಕ್ಕೆ ಹೊರಟುಹೋದನು.
18ಬೆಳಗಾದ ಮೇಲೆ ಪೇತ್ರನು ಏನಾದನೆಂದು ಸಿಪಾಯಿಗಳಲ್ಲಿ ಬಹಳ ಕಳವಳ ಉಂಟಾಯಿತು.
19ಹೆರೋದನು ಅವನನ್ನು ಹುಡುಕಿಸಿ ಅವನು ಸಿಕ್ಕಲಿಲ್ಲವಾದ್ದರಿಂದ, ಕಾವಲುಗಾರರನ್ನು ವಿಚಾರಣೆಮಾಡಿ, ಅವರಿಗೆ ಮರಣದಂಡನೆಯನ್ನು ವಿಧಿಸಿದನು. ಬಳಿಕ ಹೆರೋದನು ಯೂದಾಯದಿಂದ ಕೈಸರೈಗೆ ಹೋಗಿ ಅಲ್ಲಿ ಕೆಲವು ಕಾಲ ಇದ್ದನು.
20ಆ ಕಾಲದಲ್ಲಿ ತೂರ್ ಮತ್ತು ಸೀದೋನ್ ಪಟ್ಟಣಗಳ ನಿವಾಸಿಗಳು ತಮ್ಮ ಮೇಲೆ ಹೆರೋದನು ಬಹಳವಾಗಿ ಕೋಪಿಸಿಕೊಂಡಿರುವುದನ್ನು ನೋಡಿ ಒಮ್ಮನಸ್ಸಿನಿಂದ ಅವನ ಸನ್ನಿಧಿಗೆ ಬಂದು ಅರಸನ ಅಂತಃಪುರದ ಮೇಲಣ ಅಧಿಕಾರಿಯಾದ ಬ್ಲಾಸ್ತನನ್ನು ಒಲಿಸಿಕೊಂಡು ಸಮಾಧಾನವಾಗಿರಬೇಕೆಂದು ಅರಸನನ್ನು ಬೇಡಿಕೊಂಡರು. ಏಕೆಂದರೆ ಅರಸನ ಸೀಮೆಯಿಂದಲೇ ಅವರ ಸೀಮೆಗೆ ದವಸಧಾನ್ಯ ಬರುತ್ತಿತ್ತು.
21ಗೊತ್ತುಮಾಡಿದ ಒಂದು ದಿನದಲ್ಲಿ ಹೆರೋದನು ರಾಜವಸ್ತ್ರವನ್ನು ಧರಿಸಿಕೊಂಡು ಸಿಂಹಾಸನದ ಮೇಲೆ ಕುಳಿತು ಅವರಿಗೆ ಉಪನ್ಯಾಸ ಮಾಡಿದನು.
22ಕೂಡಿದ್ದ ಜನರು; “ಇದು ಮನುಷ್ಯನ ಧ್ವನಿಯಲ್ಲ, ದೇವರ ಧ್ವನಿಯೇ” ಎಂದು ಆರ್ಭಟಿಸಿದರು.
23ಆ ಘನತೆಯನ್ನು ಅವನು ದೇವರಿಗೆ ಸಲ್ಲಿಸದೆ, ಹೋದುದರಿಂದ ಕರ್ತನ ದೂತನು ಆ ಕ್ಷಣದಲ್ಲೇ ಅವನನ್ನು ಬಡಿದನು; ಅವನು ಹುಳಬಿದ್ದು ಸತ್ತನು.
24ಆದರೆ ದೇವರ ವಾಕ್ಯವು ಹಬ್ಬಿ ಹೆಚ್ಚುತ್ತಾ ಬಂದಿತು.
25ಬಾರ್ನಬನು ಮತ್ತು ಸೌಲನು ಮಾಡಬೇಕಾದ ಧರ್ಮ ಕಾರ್ಯವನ್ನು ಮುಗಿಸಿ ಮಾರ್ಕನೆನಿಸಿಕೊಳ್ಳುವ ಯೋಹಾನನನ್ನು ಕರೆದುಕೊಂಡು ಯೆರೂಸಲೇಮಿನಿಂದ ಹಿಂತಿರುಗಿ ಬಂದರು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath