ಕ್ರಿಶ್ಚಿಯನ್ ಧರ್ಮ
ಹಿಂದೆ

2 ಥೆಸಲೋನಿಕದವರಿಗೆ 3

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಕಡೆಯದಾಗಿ, ಸಹೋದರರೇ, ನಮಗೋಸ್ಕರ ಪ್ರಾರ್ಥನೆಮಾಡಿರಿ. ಕರ್ತನ ವಾಕ್ಯವು ನಿಮ್ಮಲ್ಲಿ ಹಬ್ಬಿಹರಡಿದ ಪ್ರಕಾರವೇ ಅದು ಬೇಗನೆ ಪಸರಿಸಿ ಮಹಿಮೆ ಹೊಂದಲಿ,

2ದೇವರು ನಮ್ಮನ್ನು ಮೂರ್ಖರಾದ ದುಷ್ಟಜನರ ಕೈಯಿಂದ ತಪ್ಪಿಸುವ ಹಾಗೆಯೂ ಪ್ರಾರ್ಥಿಸಿರಿ, ಕ್ರಿಸ್ತ ನಂಬಿಕೆಯು ಎಲ್ಲರಲ್ಲಿ ಇರುವುದಿಲ್ಲವಲ್ಲಾ.

3ಆದರೆ ಕರ್ತನು ನಂಬಿಗಸ್ತನು, ಆತನು ನಿಮ್ಮನ್ನು ದೃಢಪಡಿಸಿ ನೀವು ಕೆಡುಕನ ಕೈಗೆ ಸಿಕ್ಕದಂತೆ ಕಾಪಾಡುವನು.

4ನಾವು ಆಜ್ಞಾಪಿಸುವ ಪ್ರಕಾರ ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ, ನಿಮ್ಮ ವಿಷಯದಲ್ಲಿ ಕರ್ತನ ಮೂಲಕವಾಗಿ ನಮಗೆ ಭರವಸವುಂಟು.

5ನೀವು ದೇವರ ಪ್ರೀತಿಯಲ್ಲಿಯೂ ಕ್ರಿಸ್ತನ ತಾಳ್ಮೆಯಲ್ಲಿಯೂ ಸೇರುವಂತೆ ಕರ್ತನೇ ನಿಮ್ಮನ್ನು ನಡೆಸಲಿ.

6ಸಹೋದರರೇ, ನಾವು ಬೋಧಿಸಿದ ಸಂಪ್ರದಾಯವನ್ನು ಅನುಸರಿಸದೆ ಸೋಮಾರಿಯಾಗಿ ಜೀವಿಸುವ ಪ್ರತಿಯೊಬ್ಬ ಸಹೋದರನಿಂದ ನೀವು ದೂರವಾಗಿರಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ನಿಮಗೆ ಆಜ್ಞಾಪಿಸುತ್ತೇವೆ.

7ನೀವು ನಮ್ಮನ್ನು ಅನುಸರಿಸಿ ಹೇಗೆ ನಡೆಯಬೇಕೆಂಬುದನ್ನು ನೀವೇ ಬಲ್ಲಿರಿ, ನಾವು ನಿಮ್ಮಲ್ಲಿ ಸೋಮಾರಿಯಾಗಿ ನಡೆಯಲಿಲ್ಲ.

8ನಾವು ಹಣಕೊಡದೆ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ, ನಿಮ್ಮಲ್ಲಿ ಯಾರಿಗೂ ಭಾರವಾಗಬಾರದೆಂದು ಹಗಲಿರುಳು ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದು ಜೀವನ ಮಾಡಿದೆವು.

9ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದು ಹಾಗೆ ಮಾಡಲಿಲ್ಲ, ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಮಾದರಿಯಾಗಿರಬೇಕೆಂದೇ ಹಾಗೆ ಮಾಡಿದೆವು.

10ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ.

11ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ.

12ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ.

13ಸಹೋದರರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.

14ಈ ಪತ್ರಿಕೆಯ ಮೂಲಕವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ಒಳಗಾಗದಿದ್ದರೆ ಅವನನ್ನು ಗುರುತಿಸಿ ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.

15ಆದರೂ ಅವನನ್ನು ವೈರಿಯೆಂದು ಭಾವಿಸದೆ ಸಹೋದರನೆಂದು ಎಣಿಸಿಕೊಂಡು ಬುದ್ಧಿಹೇಳಿರಿ.

16ಶಾಂತಿದಾಯಕನಾದ ಕರ್ತನು ತಾನೇ ಸದಾಕಾಲದಲ್ಲಿಯೂ ಸಕಲವಿಧದಲ್ಲಿಯೂ ನಿಮಗೆ ಶಾಂತಿಯನ್ನು ದಯಪಾಲಿಸಲಿ. ಕರ್ತನು ನಿಮ್ಮೆಲ್ಲರೊಂದಿಗಿರಲಿ.

17ಪೌಲನೆಂಬ ನಾನು ಸ್ವಂತ ಕೈಯಿಂದ ವಂದನೆಯನ್ನು ಬರೆದಿದ್ದೇನೆ. ಎಲ್ಲಾ ಪತ್ರಿಕೆಗಳಲ್ಲಿಯೂ ಇದೇ ನನ್ನ ಗುರುತು, ಹೀಗೆಯೇ ನನ್ನ ಕೈ ಬರಹ.

18ನಮ್ಮ ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರ ಸಂಗಡವಿರಲಿ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath