ಕ್ರಿಶ್ಚಿಯನ್ ಧರ್ಮ
ಹಿಂದೆ

2 ಸಮುವೇಲನು 5

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ,

2ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’” ಅಂದರು.

3ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲಿಯೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು.

4ದಾವೀದನು ಮೂವತ್ತು ವರ್ಷದವನಾದಾಗ ಅರಸನಾಗಿ, ನಲ್ವತ್ತು ವರ್ಷ ಆಳಿದನು.

5ಅವನು ಹೆಬ್ರೋನಿನಲ್ಲಿದ್ದು ಯೆಹೂದ ಕುಲವೊಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು. ಯೆರೂಸಲೇಮಿನಲ್ಲಿದ್ದು ಯೆಹೂದ್ಯರನ್ನು ಮತ್ತು ಎಲ್ಲಾ ಇಸ್ರಾಯೇಲರನ್ನು ಆಳಿದ್ದು ಮೂವತ್ತು ಮೂರು ವರ್ಷಗಳು.

6ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು.

7ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು.

8ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು.

9ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು.

10ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಆಧಿಕ ಪ್ರಬಲಗೊಳ್ಳುತ್ತಾ ಬಂದನು.

11ತೂರಿನ ಅರಸನಾದ ಹೀರಾಮನು ದಾವೀದನಿಗೆ ದೂತರನ್ನೂ, ದೇವದಾರುಮರಗಳನ್ನೂ, ಬಡಗಿಯವರನ್ನೂ ಶಿಲ್ಪಿಗಳನ್ನೂ ಕಳುಹಿಸಲು ಅವರು ದಾವೀದನಿಗೋಸ್ಕರ ಅರಮನೆಯನ್ನು ಕಟ್ಟಿದರು.

12ಇದರಿಂದ ದಾವೀದನು, “ಯೆಹೋವನು ನನ್ನನ್ನು ಇಸ್ರಾಯೇಲರ ರಾಜನನ್ನಾಗಿ ಸ್ಥಿರಪಡಿಸಿ, ತನ್ನ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ನನ್ನ ರಾಜ್ಯವನ್ನು ವೃದ್ಧಿಪಡಿಸಿದ್ದಾನೆ” ಎಂದು ತಿಳಿದುಕೊಂಡನು.

13ದಾವೀದನು ಹೆಬ್ರೋನಿನಿಂದ ಯೆರೂಸಲೇಮಿಗೆ ಬಂದ ಮೇಲೆ ಅಲ್ಲಿಯೂ ಅನೇಕ ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಮತ್ತು ಉಪಪತ್ನಿಯರನ್ನಾಗಿಯೂ ಮಾಡಿಕೊಂಡಿದ್ದರಿಂದ ಅವನಿಗೆ ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳು ಹುಟ್ಟಿದರು.

14ಅಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್,

15ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ,

16ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್.

17ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು.

18ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು.

19ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು.

20ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು.

21ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು.

22ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು.

23ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು.

24ಆ ಬಾಕಾ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು.

25ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath