ಕ್ರಿಶ್ಚಿಯನ್ ಧರ್ಮ
ಹಿಂದೆ

2 ಸಮುವೇಲನು 22

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೆಹೋವನು ದಾವೀದನನ್ನು ಎಲ್ಲಾ ಶತ್ರುಗಳ ಕೈಗೂ ಸೌಲನ ಕೈಗೂ ಸಿಕ್ಕದಂತೆ ತಪ್ಪಿಸಿದಾಗ ಅವನು ಯೆಹೋವನ ಘನಕ್ಕಾಗಿ ಈ ಜಯ ಗೀತೆಯನ್ನು ರಚಿಸಿ ಹೀಗೆ ಹಾಡಿದನು:

2ಯೆಹೋವನು ನನ್ನ ಬಂಡೆಯೂ, ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ.

3ಆತನು ನನ್ನ ಆಶ್ರಯಗಿರಿಯಾಗಿರುವ ದೇವರೂ, ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ, ನನ್ನ ದುರ್ಗವೂ, ನನ್ನ ಶರಣನೂ, ಹಿಂಸೆಯಿಂದ ನನ್ನನ್ನು ರಕ್ಷಿಸುವವನೂ ಆಗಿದ್ದಾನೆ.

4ಯೆಹೋವನು ಸ್ತೋತ್ರಕ್ಕೆ ಅರ್ಹನು. ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.

5ಮರಣ ಪ್ರವಾಹದ ಅಲ್ಲಕಲ್ಲೋಲಗಳು ನನ್ನನ್ನು ಸುತ್ತಿಕೊಂಡವು. ನಾಶಪ್ರವಾಹವು ನನ್ನನ್ನು ನಡುಗಿಸಿತು.

6ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು, ಮರಣಕರವಾದ ಉರುಲುಗಳು ನನ್ನನ್ನು ಸುತ್ತಿಕೊಂಡವು.

7ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು. ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಸ್ವರವನ್ನು ಕೇಳಿದನು. ನನ್ನ ಪ್ರಾರ್ಥನೆ ಆತನ ಸನ್ನಿಧಿಗೆ ಕೇಳಿಸಿತು.

8ಆಗ ಆತನ ಕೋಪದಿಂದ ಭೂಮಿಯು ಕಂಪಿಸಿತು. ಆಕಾಶದ ಆಧಾರಗಳು ನಡುಗಿ ಕದಲಿದವು.

9ಆತನ ಮೂಗಿನಿಂದ ಹೊಗೆಯು ಬಂದಿತು. ಆತನ ಬಾಯಿಂದ ಅಗ್ನಿಜ್ವಾಲೆಯು ಹೊರಟು ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.

10ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು. ಆತನ ಪಾದಗಳ ಕೆಳಗೆ ಕಾರ್ಗತ್ತಲಿತ್ತು.

11ಕೆರೂಬಿವಾಹನನಾಗಿ ಹಾರಿದನು. ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಪ್ರತ್ಯಕ್ಷನಾದನು.

12ಕತ್ತಲನ್ನೂ, ಜಲಮಯವಾಗಿರುವ ನೀಲಮೇಘಗಳನ್ನೂ, ತನ್ನ ಸುತ್ತಲೂ ಗುಡಾರದಂತೆ ಕವಿಸಿಕೊಂಡನು.

13ಆತನ ಸಾನ್ನಿಧ್ಯ ಪ್ರಕಾಶದಿಂದ ಉರಿಗೆಂಡಗಳು ಹೊರಟವು.

14ಯೆಹೋವನು ಆಕಾಶದಿಂದ ಗುಡುಗಿದನು. ಪರಾತ್ಪರನಾದ ದೇವರು ಧ್ವನಿಗೊಟ್ಟನು.

15ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದುರಿಸಿಬಿಟ್ಟನು. ಸಿಡಿಲಿನಿಂದ ಅವುಗಳನ್ನು ಕಳವಳಗೊಳಿಸಿದನು.

16ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ಥಿವಾರವು ತೋರಿಬಂದವು.

17ಆತನು ಮೇಲಣಲೋಕದಿಂದ ಕೈಚಾಚಿ ನನ್ನನ್ನು ಹಿಡಿದು! ಮಹಾಜಲರಾಶಿಯೊಳಗಿಂದ ನನ್ನನ್ನು ಎಳೆದನು.

18ನನಗಿಂತ ಬಲಿಷ್ಠರೂ, ಪುಷ್ಠರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು.

19ಅವರು ನನ್ನ ಆಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು. ಆಗ ಯೆಹೋವನು ನನಗೆ ಉದ್ಧಾರಕನಾದನು.

20ಆತನು ನನ್ನನ್ನು ಅಪಾಯದಿಂದ ಬಿಡಿಸಿದನು. ನನ್ನನ್ನು ಮೆಚ್ಚಿ ರಕ್ಷಿಸಿದನು.

21ಯೆಹೋವನು ನನ್ನ ಸನ್ನಡತೆಗೆ ತಕ್ಕ ಪ್ರತಿಫಲ ನೀಡಿದನು. ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲಕೊಟ್ಟನು.

22ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ ನನ್ನ ದೇವರನ್ನು ಬಿಟ್ಟು ದ್ರೋಹ ಮಾಡಲಿಲ್ಲ.

23ನಾನು ಆತನ ಆಜ್ಞೆಗಳನ್ನು ಯಾವಾಗಲೂ ನನ್ನೆದುರಿನಲ್ಲಿ ಇಟ್ಟುಕೊಂಡೆನು. ಆತನ ವಿಧಿಗಳಿಂದ ತಪ್ಪಿ ಹೋಗಲಿಲ್ಲ.

24ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು. ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು.

25ಆದ್ದರಿಂದ ನನ್ನ ನೀತಿಗೆ ತಕ್ಕಂತೆಯೂ, ಆತನ ದೃಷ್ಟಿಯಲ್ಲಿ ನನ್ನ ನಿರಪರಾಧಕ್ಕೆ ತಕ್ಕಂತೆಯೂ ಯೆಹೋವನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.

26ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವರಿಗೆ ನಿರ್ದೋಷಿಯೂ.

27ಶುದ್ಧನಿಗೆ ಪರಿಶುದ್ಧನೂ, ವಕ್ರಬುದ್ಧಿಯವನಿಗೆ ವಕ್ರನೂ ಆಗಿರುವಿ.

28ದೀನರನ್ನು ಉದ್ಧರಿಸುತ್ತಿ. ಹಮ್ಮಿನವರನ್ನು ಕಂಡುಹಿಡಿದು ತಗ್ಗಿಸಿಬಿಡುತ್ತಿ.

29ಯೆಹೋವನೇ, ನನ್ನ ದೀಪವು ನೀನೇ. ಯೆಹೋವನು ನನಗೆ ಬೆಳಕನ್ನು ಕೊಟ್ಟು ನನ್ನ ಕತ್ತಲನ್ನು ಪರಿಹರಿಸುವನು.

30ನಿನ್ನ ಬಲದಿಂದ ನಾನು ದಂಡಿನ ಮೇಲೆ ಬೀಳುವೆನು. ನನ್ನ ದೇವರ ಸಹಾಯದಿಂದ ಪ್ರಾಕಾರಗಳನ್ನು ಹಾರುವೆನು.

31ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.

32ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?

33ದೇವರು ನನ್ನ ಬಲವಾದ ಕೋಟೆಯಾಗಿದ್ದಾನೆ. ಆತನು ನನ್ನ ಮಾರ್ಗವನ್ನು ಸರಾಗಮಾಡುತ್ತಾನೆ.

34ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ. ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ

35ಆತನು ನನಗೆ ಯುದ್ಧ ವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.

36ನೀನು ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಕೃಪಾಕಟಾಕ್ಷವು ನನ್ನನ್ನು ಉನ್ನತಕ್ಕೆ ಏರಿಸಿದೆ.

37ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದ ನನ್ನ ಕಾಲುಗಳು ಕದಲುವುದಿಲ್ಲ.

38ನನ್ನ ಶತ್ರುಗಳನ್ನು ಹಿಂದಟ್ಟಿ ಸಂಹರಿಸುವೆನು. ಅವರನ್ನು ಇಲ್ಲದಂತೆ ಮಾಡುವವರೆಗೂ ಹಿಂದಿರುಗುವುದಿಲ್ಲ.

39ಅವರನ್ನು ನಿರ್ನಾಮಗೊಳಿಸುವೆನು, ಹೊಡೆದು ಏಳಲಾರದಂತೆ ಮಾಡುವೆನು. ಅವರು ನನ್ನ ಪಾದದ ಕೆಳಗೆ ಬೀಳುವರು.

40ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದಿ. ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದಿ.

41ನನ್ನ ಶತ್ರುಗಳನ್ನು ಬೆಂಗೊಟ್ಟು ಓಡಮಾಡಿದ್ದೀ. ನನ್ನ ಶತ್ರುಗಳನ್ನು ನಿರ್ಮೂಲ ಮಾಡುವೆನು.

42ಅವರು ಸಹಾಯಕ್ಕಾಗಿ ಕೂಗಿಕೊಂಡರೂ ರಕ್ಷಿಸುವವನಿಲ್ಲ. ಯೆಹೋವನಿಗೆ ಮೊರೆಯಿಟ್ಟರೂ ಆತನು ಉತ್ತರವನ್ನು ಕೊಡಲೇ ಇಲ್ಲ.

43ಭೂಮಿಯ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿ ಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ತುಳಿದು ಎಸೆದುಬಿಟ್ಟೆನು.

44ನನ್ನ ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿದ್ದಿ. ಜನಾಂಗಗಳಿಗೆ ದೊರೆಯಾಗುವಂತೆ ನನ್ನನ್ನು ಉಳಿಸಿದ್ದಿ. ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು.

45ದೇಶಾಂತರದವರು ನನ್ನ ಮುಂದೆ ಮುದುರಿಕೊಳ್ಳುವರು. ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು.

46ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು.

47ಯೆಹೋವನು ಚೈತನ್ಯಸ್ವರೂಪನು. ನನ್ನ ಶರಣನಿಗೆ ಸ್ತೋತ್ರ. ನನ್ನ ಆಶ್ರಯಗಿರಿಯಾಗಿರುವ ದೇವರಿಗೆ ಕೊಂಡಾಟ.

48ಆತನು ನನ್ನ ಶತ್ರುಗಳಿಗೆ ಪ್ರತಿದಂಡನೆಮಾಡುವ ದೇವರು. ಜನಾಂಗಗಳನ್ನು ನನಗೆ ಅಧೀನಪಡಿಸುತ್ತಾನೆ.

49ಶತ್ರುಗಳಿಂದ ನನ್ನನ್ನು ಬಿಡಿಸುವಾತನೇ, ನೀನು ನನ್ನನ್ನು ನನ್ನ ಎದುರಾಳಿಗಳಿಂದ ತಪ್ಪಿಸಿ ಉನ್ನತಪಡಿಸುತ್ತಿ. ಬಲಾತ್ಕಾರಿಗಳಿಂದ ನನ್ನನ್ನು ರಕ್ಷಿಸುತ್ತಿ.

50ಈ ಕಾರಣದಿಂದ ಯೆಹೋವನೇ, ಅನ್ಯಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ನಿನ್ನ ನಾಮವನ್ನು ಸಂಕೀರ್ತಿಸುವೆನು.

51ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ. ತಾನು ಅಭಿಷೇಕಿಸಿದ ದಾವೀದನಿಗೂ, ಅವನ ಸಂತತಿಯವರೆಗೆ ಸದಾಕಾಲವೂ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath