ಕ್ರಿಶ್ಚಿಯನ್ ಧರ್ಮ
ಹಿಂದೆ

2 ಸಮುವೇಲನು 17

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ತರುವಾಯ ಅಹೀತೋಫೆಲನು ಅಬ್ಷಾಲೋಮನಿಗೆ, “ಅಪ್ಪಣೆಯಾಗಲಿ, ನಾನು ಹನ್ನೆರಡು ಸಾವಿರ ಜನರನ್ನು ಆರಿಸಿಕೊಂಡು ಈ ರಾತ್ರಿಯೇ ದಾವೀದನನ್ನು ಹಿಂದಟ್ಟುವೆನು.

2ಅವನು ದಣಿದವನೂ, ಧೈರ್ಯಗುಂದಿದವನೂ ಆಗಿರುವಾಗಲೇ ಪಕ್ಕನೇ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು. ಅವನ ಜನರೆಲ್ಲರೂ ಓಡಿಹೋಗುವರು.

3ನಾನು ಅರಸನೊಬ್ಬನನ್ನೇ ಕೊಂದು, ನಿನ್ನ ಅಪೇಕ್ಷೆಯಂತೆ ಎಲ್ಲಾ ಜನರನ್ನು ನಿನ್ನ ಬಳಿಗೆ ತಿರುಗಿ ಬರಮಾಡುವೆನು. ನಿನ್ನ ದೇಶದಲ್ಲೆಲ್ಲಾ ಸಮಾಧಾನವುಂಟಾಗುವುದು” ಎಂದು ಹೇಳಿದನು.

4ಈ ಮಾತು ಅಬ್ಷಾಲೋಮನಿಗೂ, ಇಸ್ರಾಯೇಲರ ಎಲ್ಲಾ ಹಿರಿಯರಿಗೂ ಸರಿಯಾಗಿ ಕಂಡಿತು.

5ಆಮೇಲೆ ಅಬ್ಷಾಲೋಮನು, “ಅರ್ಕೀಯನಾದ ಹೂಷೈಯನ್ನು ಕರೆದು ಅವನ ಅಭಿಪ್ರಾಯವನ್ನು ಕೇಳೋಣ” ಎಂದು ಹೇಳಿದನು.

6ಹೂಷೈಯನು ಅಬ್ಷಾಲೋಮನ ಬಳಿಗೆ ಬಂದಾಗ ಅವನನ್ನು, “ಅಹೀತೋಫೆಲನು ಹೀಗೆ ಹೇಳುತ್ತಿದ್ದಾನೆ, ಇದರಂತೆ ಮಾಡಿದರೆ ಒಳ್ಳೆಯದಾಗುವುದೋ, ಇಲ್ಲವಾದರೆ ನಿನ್ನ ಅಭಿಪ್ರಾಯವೇನು?” ಎಂದು ಕೇಳಿದನು.

7ಹೂಷೈಯು ಅಬ್ಷಾಲೋಮನಿಗೆ, “ಈ ಸಾರಿ ಅಹೀತೋಫೆಲನು ಹೇಳಿದ ಆಲೋಚನೆ ಒಳ್ಳೆಯದಲ್ಲ.

8ನಿನ್ನ ತಂದೆಯೂ ಮತ್ತು ಅವನ ಜನರೂ ಶೂರರಾಗಿದ್ದಾರೆ, ಈಗ ಅವರು ಮರಿಯನ್ನು ಕಳೆದುಕೊಂಡ ಕರಡಿಯಂತೆ ರೋಷವುಳ್ಳವರಾಗಿದ್ದಾರೆಂದು ನಿನಗೆ ಗೊತ್ತಿದೆ. ಇದಲ್ಲದೆ ಅವನು ಯುದ್ಧದಲ್ಲಿ ನಿಪುಣನು, ಜನರ ಮಧ್ಯದಲ್ಲಿ ರಾತ್ರಿ ಕಳೆಯುವವನಲ್ಲ.

9ಅವನು ಈಗ ಒಂದು ಗುಹೆಯಲ್ಲಾಗಲಿ, ಬೇರೆ ಯಾವುದಾದರೊಂದು ಸ್ಥಳದಲ್ಲಾಗಲಿ ಅಡಗಿಕೊಂಡಿರುವನು. ಮೊದಲು ನಮ್ಮವರಲ್ಲೇ ಕೆಲವರು ಸತ್ತರೆ, ಜನರು ಇದನ್ನು ಕೇಳಿ ಅಬ್ಷಾಲೋಮನ ಪಕ್ಷದವರಿಗೆ ಅಪಜಯವುಂಟಾಯಿತೆಂದು ಸುದ್ದಿ ಹಬ್ಬಿಸುವರು.

10ಆಗ ಸಿಂಹಹೃದಯಿಗಳಾದ ಶೂರರ ಎದೆಯು ಕರಗಿ ನೀರಾಗುವುದು. ನಿನ್ನ ತಂದೆಯು ರಣವೀರನೆಂದೂ, ಅವನ ಸಂಗಡ ಇದ್ದವರು ಪರಾಕ್ರಮಶಾಲಿಗಳೆಂದೂ ಎಲ್ಲಾ ಇಸ್ರಾಯೇಲರು ಬಲ್ಲರಷ್ಟೆ.

11ಹೀಗಿರುವುದರಿಂದ ನನ್ನ ಆಲೋಚನೆಯನ್ನು ಕೇಳು. ದಾನಿನಿಂದ ಬೇರ್ಷೆಬದ ವರೆಗೆ ವಾಸವಾಗಿರುವ ಇಸ್ರಾಯೇಲರೊಳಗಿನಿಂದ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಸೈನ್ಯವನ್ನು ಕೂಡಿಸಿ, ನೀನೂ ಅವರ ಜೊತೆಯಲ್ಲಿ ಯುದ್ಧಕ್ಕೆ ಹೋಗಬೇಕು.

12ನಾವು ಅವನಿರುವ ಸ್ಥಳವನ್ನು ಗೊತ್ತುಮಾಡಿಕೊಂಡು ಹೋಗಿ, ಇಬ್ಬನಿಯು ನೆಲದ ಮೇಲೆ ಹೇಗೊ, ಹಾಗೆಯೇ ನಾವು ಅವರ ಮೇಲೆ ಬೀಳೋಣ. ಆಗ ಅವನೂ ಮತ್ತು ಅವನ ಜನರೂ ನಮ್ಮ ಕೈಗೆ ಸಿಕ್ಕುವರು. ಒಬ್ಬನೂ ತಪ್ಪಿಸಿಕೊಳ್ಳಲಾರನು.

13ಅವನು ಒಂದು ಪಟ್ಟಣವನ್ನು ಹೊಕ್ಕಿರುವುದಾದರೆ, ಇಸ್ರಾಯೇಲ್ಯರೆಲ್ಲರೂ ಹಗ್ಗಗಳನ್ನು ತೆಗೆದುಕೊಂಡು ಅಲ್ಲಿಗೆ ಬರಲಿ. ಆಗ ಆ ಊರನ್ನು ಒಂದು ಹರಳಾದರೂ ಉಳಿಯದಂತೆ ಹಗ್ಗಗಳಿಂದ ಎಳೆದುಕೊಂಡು ಹೋಗಿ ಹೊಳೆಯಲ್ಲಿ ಹಾಕಿ ಬಿಡೋಣ” ಎಂದನು.

14ಇದನ್ನು ಕೇಳಿ ಅಬ್ಷಾಲೋಮನೂ, ಎಲ್ಲಾ ಇಸ್ರಾಯೇಲರೂ, “ಅರ್ಕೀಯನಾದ ಹೂಷೈಯ ಆಲೋಚನೆಯು ಅಹೀತೋಫೇಲನ ಆಲೋಚನೆಗಿಂತ ಒಳ್ಳೆಯದಾಗಿದೆ” ಎಂದರು. ಯೆಹೋವನು ಅಬ್ಷಾಲೋಮನಿಗೆ ಕೇಡನ್ನುಂಟುಮಾಡಬೇಕೆಂದು ಅಹೀತೋಫೇಲನ ಆಲೋಚನೆಯನ್ನು ನಿರರ್ಥಕಮಾಡಿದನು.

15ತರುವಾಯ ಹೂಷೈಯು ಯಾಜಕನಾದ ಚಾದೋಕ್ ಎಬ್ಯಾತಾರರಿಗೆ, “ಅಹೀತೋಫೆಲನು ಅಬ್ಷಾಲೋಮನಿಗೂ ಮತ್ತು ಇಸ್ರಾಯೇಲರ ಹಿರಿಯರಿಗೂ ಇಂಥಿಂಥ ಆಲೋಚನೆಯನ್ನು ಹೇಳಿದನು, ನಾನು ಹೀಗೆ ಹೇಳಿದ್ದೇನೆ.

16ಆದುದರಿಂದ ನೀವು ಬೇಗನೆ ಅರಸನಾದ ದಾವೀದನಿಗೆ, ‘ನೀನು ಈ ರಾತ್ರಿ ಅಡವಿಯಲ್ಲಿ ನದಿ ದಾಟುವ ಸ್ಥಳದ ಹತ್ತಿರ ಇಳಿದುಕೊಳ್ಳಬೇಡ. ಶೀಘ್ರವಾಗಿ ನದಿದಾಟಿ ಮುಂದೆ ಹೋಗಿಬಿಡಬೇಕು. ಇಲ್ಲವಾದರೆ ನೀನೂ ನಿನ್ನ ಜನರೂ ನಾಶವಾಗುವಿರಿ’ ಎಂದು ಹೇಳಿಕಳುಹಿಸಿರಿ” ಎಂದನು

17ಯೋನಾತಾನ ಮತ್ತು ಅಹೀಮಾಚರು ರೋಗೆಲಿನ ಬುಗ್ಗೆಯ ಬಳಿಯಲ್ಲಿದ್ದರು. ಇವರ ಮನೆಯ ದಾಸಿಯು ಎಲ್ಲಾ ವರ್ತಮಾನಗಳನ್ನು ಇವರಿಗೂ ಮತ್ತು ಇವರ ಅರಸನಾದ ದಾವೀದನಿಗೂ ಮುಟ್ಟಿಸುವಂತೆ ಗೊತ್ತುಮಾಡಿಕೊಂಡಿದ್ದರು. ತಮ್ಮನ್ನು ಯಾರೂ ನೋಡಬಾರದೆಂದು ಇವರು ತಾವಾಗಿ ಊರೊಳಕ್ಕೆ ಬರಲಿಲ್ಲ.

18ಆದರೂ ಒಬ್ಬ ಯೌವನಸ್ಥನು ಅವರನ್ನು ನೋಡಿ ಅಬ್ಷಾಲೋಮನಿಗೆ ತಿಳಿಸಿದನು. ಅಷ್ಟರಲ್ಲಿ ಅವರಿಬ್ಬರೂ ಓಡಿಹೋಗಿ ಬಹುರೀಮಿನಲ್ಲಿ ಇದ್ದ ಒಬ್ಬನ ಮನೆಯನ್ನು ಹೊಕ್ಕರು. ಆ ಮನೆಯ ಅಂಗಳದಲ್ಲಿ ಒಂದು ಬಾವಿಯಿತ್ತು. ಅವರು ಅದರಲ್ಲಿ ಇಳಿದುಕೊಂಡರು.

19ಕೂಡಲೆ ಆ ಮನೆಯ ಹೆಂಗಸು ಅದರ ಮೇಲೆ ಒಂದು ಬಟ್ಟೆಯನ್ನು ಹಾಸಿ, ಅದರ ಮೇಲೆ ಗೋದಿಯ ನುಚ್ಚನ್ನು ಹರಡಿದಳು. ಇದರಿಂದ ಅವರು ಅಲ್ಲಿ ಅಡಗಿರುವ ವಿಷಯ ಯಾರಿಗೂ ಗೊತ್ತಾಗಲಿಲ್ಲ.

20ಅಬ್ಷಾಲೋಮನ ಸೇವಕರು ಆ ಸ್ತ್ರೀಯ ಮನೆಗೆ ಹೋಗಿ, “ಅಹೀಮಾಚ ಮತ್ತು ಯೋನಾತಾನರು ಎಲ್ಲಿದ್ದಾರೆ?” ಎಂದು ಆಕೆಯನ್ನು ಕೇಳಿದ್ದಕ್ಕೆ ಆಕೆಯು, “ಅವರು ಹಳ್ಳ ದಾಟಿ ಹೋಗಿಬಿಟ್ಟರು” ಎಂದು ಉತ್ತರ ಕೊಟ್ಟಳು. ಅವರು ಅಹೀಮಾಚ ಮತ್ತು ಯೋನಾತಾನರನ್ನು ಹುಡುಕುವುದಕ್ಕೆ ಹೋಗಿ, ಕಾಣದೆ ಯೆರೂಸಲೇಮಿಗೆ ಹಿಂತಿರುಗಿದರು.

21ಅವರು ಹೋದ ಕೂಡಲೆ ಇವರಿಬ್ಬರೂ ಬಾವಿಯಿಂದ ಮೇಲಕ್ಕೆ ಬಂದು ಅರಸನಾದ ದಾವೀದನ ಬಳಿಗೆ ಹೋದರು. ಅವರು ದಾವೀದನಿಗೆ, “ಅಹೀತೋಫೆಲನು ನಿನಗೆ ವಿರೋಧವಾಗಿ ಇಂಥಿಂಥ ಆಲೋಚನೆಯನ್ನು ಹೇಳಿದ್ದಾನೆ. ಆದುದರಿಂದ ಬೇಗನೆ ಎದ್ದು ನದಿದಾಟಿ ಹೋಗು” ಎಂದು ಹೇಳಿದನು.

22ಆಗ ದಾವೀದನೂ ಮತ್ತು ಅವನ ಜೊತೆಯಲ್ಲಿದ್ದವರೆಲ್ಲರೂ ಯೊರ್ದನ್ ನದಿಯನ್ನು ದಾಟಿದರು. ಬೆಳಗಾದಾಗ ದಾಟಬೇಕಾದವನು ಒಬ್ಬನೂ ಇರಲಿಲ್ಲ.

23ಅಹೀತೋಫೆಲನು ತನ್ನ ಆಲೋಚನೆಯು ನಡೆಯಲಿಲ್ಲವೆಂದು ತಿಳಿದಾಗ ಅವನು ಕತ್ತೆಗೆ ತಡಿಹಾಕಿಸಿ, ಅದರ ಮೇಲೆ ತನ್ನ ಊರಿಗೆ ಹೋದನು. ತನ್ನ ಮನೆಯಲ್ಲಿ ವ್ಯವಸ್ಥೆಮಾಡಿದ ನಂತರ, ಉರ್ಲು ಹಾಕಿಕೊಂಡು ಸತ್ತನು. ಅವನ ಶವವನ್ನು ಅವನ ತಂದೆಯ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.

24ದಾವೀದನು ಮಹನಯಿಮಿಗೆ ಹೋದನು. ಅಬ್ಷಾಲೋಮನು ಮತ್ತು ಇಸ್ರಾಯೇಲರೆಲ್ಲರೂ ಕೂಡಿಕೊಂಡು ಯೊರ್ದನ್ ನದಿಯನ್ನು ದಾಟಿದರು.

25ಅವನು ಯೋವಾಬನಿಗೆ ಬದಲಾಗಿ ಅಮಾಸನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇಸ್ರಾಯೇಲನಾದ ಇತ್ರನು, ನಾಹಾಷನ ಮಗಳೂ ಯೋವಾಬನ ತಾಯಿಯಾದ ಚೆರೂಯಳ ತಂಗಿಯೂ ಆದ ಅಬೀಗೈಲ್ ಎಂಬುವಳನ್ನು ಸಂಗಮಿಸಿದ್ದರಿಂದ ಈ ಅಮಾಸನು ಹುಟ್ಟಿದನು.

26ಇಸ್ರಾಯೇಲ್ಯರೂ ಅಬ್ಷಾಲೋಮನೂ ಗಿಲ್ಯಾದ್ ದೇಶದಲ್ಲಿ ಪಾಳೆಯಮಾಡಿಕೊಂಡರು.

27ದಾವೀದನು ಮಹನಯಿಮಿಗೆ ಬಂದಾಗ ಅಮ್ಮೋನಿಯರ ರಬ್ಬಾ ಊರಿನವನಾದ ನಾಹಾಷನ ಮಗ ಶೋಬಿ, ಲೋದೆಬಾರಿನ ಅಮ್ಮೀಯೇಲನ ಮಗನಾದ ಮಾಕೀರ್, ರೋಗೆಲೀಮ್ ಊರಿನ ಗಿಲ್ಯಾದ್ಯನಾದ ಬರ್ಜಿಲ್ಲೈ ಎಂಬುವರು

28ದಾವೀದನಿಗೂ ಅವನ ಜನರಿಗೂ ಹಾಸಿಗೆ, ಬಟ್ಟಲು, ಮಡಕೆ ಇವುಗಳೊಂದಿಗೆ, ಊಟಕ್ಕಾಗಿ ಗೋದಿ, ಜವೆಗೋದಿ, ಹಿಟ್ಟು, ಹುರಿಗಾಳು, ಅವರೆಕಾಳು, ಅಲಸಂದಿ, ಬೇಳೆ ಜೇನುತುಪ್ಪ,

29ಬೆಣ್ಣೆ, ಕುರಿ ಹಸುವಿನ ಗಿಣ್ಣು ಇವುಗಳನ್ನು ತಂದುಕೊಟ್ಟರು. ಜನರು ಅರಣ್ಯ ಪ್ರಯಾಣದಿಂದ ಹಸಿದವರೂ, ದಣಿದವರೂ ಮತ್ತು ಬಾಯಾರಿದವರೂ ಆಗಿದ್ದಾರೆ ಎಂದುಕೊಂಡು ಇವುಗಳನ್ನು ತಂದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath