ಕ್ರಿಶ್ಚಿಯನ್ ಧರ್ಮ
ಹಿಂದೆ

2 ಪೇತ್ರನು 3

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ.

2ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ಜ್ಞಾಪಕಮಾಡಿಕೊಳ್ಳಬೇಕೆಂದು ಈ ಎರಡು ಪತ್ರಿಕೆಗಳ ಮೂಲಕ ನಿಮಗೆ ತಿಳಿಸಿಕೊಡುತ್ತಾ ನಿಮ್ಮ ನಿರ್ಮಲವಾದ ಮನಸ್ಸನ್ನು ಎಚ್ಚರಗೊಳಿಸುತ್ತಿದ್ದೇನೆ.

3ಕಡೆ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ,

4“ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪೂರ್ವಿಕರು ನಿದ್ರೆಹೊಂದಿದ ನಂತರದಿಂದ; ಸಮಸ್ತವೂ ಸೃಷ್ಟಿಯ ಆರಂಭದಲ್ಲಿ ಇದ್ದ ಹಾಗೆಯೇ ಇದೆಯಲ್ಲಾ?” ಎಂದು ಪರಿಹಾಸ್ಯಮಾಡುತ್ತಾ ಕೇಳುವರೆಂಬುದಾಗಿ ನೀವು ಮೊದಲು ತಿಳಿದುಕೊಳ್ಳಬೇಕು.

5ಆದರೆ ಪೂರ್ವಕಾಲದಲ್ಲಿ ಭೂಮ್ಯಾಕಾಶಗಳು ದೇವರ ವಾಕ್ಯದ ಮೂಲಕ ನೀರಿನೊಳಗಿನಿಂದ ಹಾಗೂ ನೀರಿನಿಂದ ರೂಪಿಸಲ್ಪಟ್ಟಿತೆಂಬುದನ್ನು ಅವರು ಉದ್ದೇಶರ್ಪೂವಕವಾಗಿಯೇ ಮರೆತುಬಿಡುತ್ತಾರೆ.

6ಆ ನೀರಿನಿಂದಲೇ ಅಂದಿನ ಲೋಕವು ಜಲಪ್ರಳಯದಲ್ಲಿ ನಾಶವಾಯಿತು.

7ಆದರೆ ಈಗಿನ ಭೂಮ್ಯಾಕಾಶಗಳು ಅದೇ ವಾಕ್ಯದಿಂದ ಅಗ್ನಿನಾಶಕ್ಕಾಗಿ ಕಾದಿರಿಸಲ್ಪಟ್ಟಿವೆ. ಅವು ನ್ಯಾಯ ತೀರ್ಪಿನ ದಿನಕ್ಕಾಗಿ ಮತ್ತು ಭಕ್ತಿಹೀನರ ನಾಶಕ್ಕಾಗಿ ಉಳಿಸಲ್ಪಟ್ಟಿವೆ.

8ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.

9ಕರ್ತನು ತನ್ನ ವಾಗ್ದಾನಗಳನ್ನು ನೆರವೇರಿಸುವುದಕ್ಕೆ ತಡಮಾಡುತ್ತಾನೆಂಬುದಾಗಿ ಕೆಲವರು ತಿಳಿದುಕೊಂಡಿರುವ ಪ್ರಕಾರ ಆತನು ತಡಮಾಡುವವನಲ್ಲ. ಯಾರೊಬ್ಬನೂ ನಾಶವಾಗುವುದರಲ್ಲಿ ಆತನು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪ ಪಡಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.

10ಆದರೂ ಕರ್ತನ ದಿನವು ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶ ಮಂಡಲವು ಮಹಾಘೋಷದಿಂದ ಇಲ್ಲದೆ ಹೋಗುವವು. ಮೂಲಧಾತುಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.

11ಇವೆಲ್ಲವುಗಳು ಹೀಗೆ ನಾಶವಾಗಿ ಹೋಗುವುದರಿಂದ ನೀವು ಎಂಥವರಾಗಿರಬೇಕು? ಪರಿಶುದ್ಧವಾಗಿಯೂ ಭಕ್ತಿಯುಳ್ಳವರಾಗಿಯೂ ಜೀವಿಸಬೇಕು.

12ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಮಂಡಲವು ಬೆಂಕಿಯಿಂದ ನಾಶವಾಗಿ ಹೋಗುವವು. ಅತಿ ಉಷ್ಣದಿಂದ ಮೂಲಧಾತುಗಳು ಉರಿದು ಕರಗಿ ಹೋಗುವವು.

13ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶ ಮಂಡಲವನ್ನೂ ಮತ್ತು ನೂತನ ಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.

14ಆದಕಾರಣ ಪ್ರಿಯರೇ, ನೀವು ಇವುಗಳನ್ನು ಎದುರುನೋಡುವವರಾಗಿರುವುದರಿಂದ ಆತನೊಂದಿಗೆ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಆತನಿಗೆ ಕಾಣಿಸಿಕೊಳ್ಳುವಂತೆ ಪ್ರಯತ್ನಿಸಿರಿ.

15ನಮ್ಮ ಕರ್ತನ ದೀರ್ಘಶಾಂತಿಯು ನಮ್ಮ ರಕ್ಷಣಾರ್ಥವಾಗಿ ಇದೆ ಎಂದು ಪರಿಗಣಿಸಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.

16ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ಸಂಗತಿಗಳು ನಿಮಗೆ ಅರ್ಥಮಾಡಿಕೊಳ್ಳುವುದಕ್ಕೆ ಕಠಿಣವಾಗಿವೆ. ಅಜ್ಞಾನಿಗಳೂ, ಚಂಚಲಚಿತ್ತರೂ ಆದವರು ಉಳಿದ ಗ್ರಂಥಗಳ ಹಾಗೆ ಇದನ್ನೂ ತಪ್ಪಾಗಿ ಅರ್ಥ ಕೊಟ್ಟು ತಮಗೆ ನಾಶವನ್ನುಂಟು ಮಾಡಿಕೊಳ್ಳುತ್ತಾರೆ.

17ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂಚಿತವಾಗಿ ತಿಳಿದುಕೊಂಡಿರುವುದರಿಂದ ದುಷ್ಟರ ವಂಚನೆಯಲ್ಲಿ ಸಿಕ್ಕಿ ನಿಮ್ಮ ಸ್ಥಿರವಾದ ನಂಬಿಕೆಯನ್ನು ಬಿಟ್ಟು ಭ್ರಷ್ಟರಾಗದಂತೆಯೂ ಎಚ್ಚರಿಕೆಯಾಗಿರಿ.

18ನಮ್ಮ ಕರ್ತನೂ ರಕ್ಷಕನೂ ಆಗಿರುವ ಯೇಸು ಕ್ರಿಸ್ತನ ಕುರಿತಾದ ಕೃಪೆಯಲ್ಲಿಯೂ ಜ್ಞಾನದಲ್ಲಿಯೂ ನೀವು ಅಭಿವೃದ್ಧಿ ಹೊಂದಿರಿ. ಆತನಿಗೆ ಈಗಲೂ ಸದಾಕಾಲವೂ ಮಹಿಮೆಯುಂಟಾಗಲಿ. ಆಮೆನ್.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath