ಕ್ರಿಶ್ಚಿಯನ್ ಧರ್ಮ
ಹಿಂದೆ

2 ಪೇತ್ರನು 1

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಯೇಸು ಕ್ರಿಸ್ತನ ದಾಸನೂ ಅಪೊಸ್ತಲನೂ ಆಗಿರುವ ಸಿಮೆಯೋನ ಪೇತ್ರನು ನಮ್ಮ ದೇವರು ಮತ್ತು ರಕ್ಷಕನಾದ ಯೇಸು ಕ್ರಿಸ್ತನ ನೀತಿಯಿಂದ ನಮ್ಮಂತೆಯೇ ಅಮೂಲ್ಯವಾದ ನಂಬಿಕೆಯನ್ನು ಹೊಂದಿದವರಿಗೆ ಬರೆಯುವುದೇನಂದರೆ,

2ದೇವರನ್ನು ಕುರಿತಾಗಿಯೂ, ನಮ್ಮ ಕರ್ತನಾದ ಯೇಸು ಕ್ರಿಸ್ತನ ವಿಷಯವಾಗಿಯೂ ಇರುವ ಪರಿಜ್ಞಾನದಲ್ಲಿ ನಿಮಗೆ ಕೃಪೆಯೂ, ಶಾಂತಿಯೂ ಹೆಚ್ಚುಹೆಚ್ಚಾಗಿ ದೊರೆಯಲಿ.

3ನಮ್ಮನ್ನು ತನ್ನ ಮಹಿಮೆಯಿಂದಲೂ, ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯಶಕ್ತಿಯು ನಮಗೆ ದೈವಿಕ ಪರಿಜ್ಞಾನವನ್ನು ಕೊಟ್ಟಿರುವುದರ ಮೂಲಕ ಜೀವಕ್ಕೂ, ಭಕ್ತಿಗೂ ಬೇಕಾದದ್ದೆಲ್ಲವನ್ನೂ ದಾನಮಾಡಲಾಗಿದೆಯೆಂದು ನಾವು ಬಲ್ಲೆವು.

4ನೀವು ಲೋಕದಲ್ಲಿ ದುರಾಶೆಯಿಂದುಂಟಾಗುವ ಕೆಟ್ಟತನದಿಂದ ದೂರವಾಗಿ ದೈವಸ್ವಭಾವದಲ್ಲಿ ಪಾಲನ್ನು ಹೊಂದುವವರಾಗಬೇಕೆಂಬ ಉದ್ದೇಶದಿಂದ ದೇವರು ತನ್ನ ಅತ್ಯಂತ ಮಹತ್ವವುಳ್ಳ ಮತ್ತು ಅಮೂಲ್ಯವಾದ ವಾಗ್ದಾನಗಳನ್ನು ನಮಗೆ ದಯಪಾಲಿಸಿದ್ದಾನೆ.

5ಈ ಕಾರಣದಿಂದಲೇ ನೀವು ಪೂರ್ಣಾಸಕ್ತಿಯುಳ್ಳವರಾಗಿ ನಿಮಗಿರುವ ನಂಬಿಕೆಗೆ ಸದ್ಗುಣವನ್ನೂ, ಸದ್ಗುಣಕ್ಕೆ ಜ್ಞಾನವನ್ನೂ,

6ಜ್ಞಾನಕ್ಕೆ ದಮೆಯನ್ನೂ, ದಮೆಗೆ ತಾಳ್ಮೆಯನ್ನೂ,

7ತಾಳ್ಮೆಗೆ ಭಕ್ತಿಯನ್ನೂ, ಭಕ್ತಿಗೆ ಸಹೋದರ ಸ್ನೇಹವನ್ನೂ, ಸಹೋದರ ಸ್ನೇಹಕ್ಕೆ ಪ್ರೀತಿಯನ್ನೂ ಕೂಡಿಸಿರಿ.

8ಇವು ನಿಮ್ಮಲ್ಲಿದ್ದು ಬೆಳೆದು ಬಂದರೆ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಕುರಿತಾದ ಪರಿಜ್ಞಾನದಲ್ಲಿ ನೀವು ನಿರುತ್ಸಾಹಿಗಳೂ, ನಿಷ್ಪ್ರಯೋಜಕರೂ ಆಗದಂತೆ ಮಾಡುತ್ತವೆ.

9ಇವುಗಳಿಲ್ಲದವನು ಕುರುಡನಾಗಿದ್ದಾನೆ. ಅವನು ದೂರ ದೃಷ್ಟಿಯಿಲ್ಲದವನಾಗಿದ್ದು ತನ್ನ ಹಿಂದಣ ಪಾಪಗಳು ಪರಿಹಾರವಾಗಿ ತಾನು ಶುದ್ಧನಾದದ್ದನ್ನು ಮರೆತುಬಿಟ್ಟಿದ್ದಾನೆ.

10ಆದ್ದರಿಂದ ಸಹೋದರರೇ, ದೇವರಲ್ಲಿ ನಿಮ್ಮ ಕರೆಯುವಿಕೆಯನ್ನೂ, ಆಯ್ಕೆಯನ್ನೂ ದೃಢಪಡಿಸಿಕೊಳ್ಳುವುದಕ್ಕೆ ಮತ್ತಷ್ಟು ಪ್ರಯಾಸಪಡಿರಿ. ಏಕೆಂದರೆ ನೀವು ಹೀಗೆ ಮಾಡುವುದಾದರೆ ಎಂದಿಗೂ ಎಡುವುದಿಲ್ಲ.

11ಹೀಗಿರುವುದರಿಂದ ನಮ್ಮ ಕರ್ತನೂ, ರಕ್ಷಕನೂ ಆಗಿರುವ ಯೇಸುಕ್ರಿಸ್ತನ ನಿತ್ಯ ರಾಜ್ಯದಲ್ಲಿ ನಿಮಗೆ ಧಾರಾಳವಾಗಿ ಪ್ರವೇಶವು ದೊರೆಯುವುದು.

12ಆದ್ದರಿಂದ ನೀವು ಈ ಸಂಗತಿಗಳನ್ನು ತಿಳಿದವರಾಗಿ ನಿಮಗೆ ದೊರೆತಿರುವ ಸತ್ಯದಲ್ಲಿ ಸ್ಥಿರವಾಗಿದ್ದರೂ ಅವುಗಳನ್ನು ನಿಮಗೆ ನೆನಪಿಸಿಕೊಡುವುದಕ್ಕೆ ನಾನು ಯಾವಾಗಲೂ ಸಿದ್ಧವಾಗಿರುವೆನು.

13ನಾನು ನನ್ನ ದೇಹವೆಂಬ ಗುಡಾರದಲ್ಲಿರುವ ತನಕ ನಿಮ್ಮನ್ನು ನೆನಪುಮಾಡಿಸಿ ಪ್ರೇರೇಪಿಸುವುದು ಯುಕ್ತವೆಂದೆಣಿಸಿದ್ದೇನೆ.

14ಏಕೆಂದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನು ನನಗೆ ತಿಳಿಸಿದ ಪ್ರಕಾರ ನಾನು ಈ ಗುಡಾರವನ್ನು ಬಿಟ್ಟುಹೋಗುವ ಕಾಲವು ಸಮೀಪವಾಗಿದೆಯೆಂದು ಬಲ್ಲೆನು.

15ನೀವು ನನ್ನ ಮರಣಾನಂತರ ಇವುಗಳನ್ನು ಯಾವಾಗಲೂ ಜ್ಞಾಪಕ ಮಾಡಿಕೊಳ್ಳುವುದಕ್ಕಾಗಿ ನಾನು ಆಸಕ್ತಿವಹಿಸುವೆನು.

16ನಮ್ಮ ಕರ್ತನಾದ ಯೇಸುಕ್ರಿಸ್ತನ ಶಕ್ತಿಯನ್ನೂ, ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಟ್ಟುಕಥೆಗಳನ್ನು ನಾವು ಅನುಸರಿಸಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ಅದನ್ನು ತಿಳಿಯಪಡಿಸಿದೆವು.

17ಏಕೆಂದರೆ, “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ” ಎಂಬ ವಾಣಿಯು ಮಹೋನ್ನತವಾದ ಮಹಿಮೆಯಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಗೌರವವನ್ನೂ, ಮಹಿಮೆಯನ್ನೂ ಹೊಂದಿದನಲ್ಲವೇ.

18ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಪರಲೋಕದಿಂದ ಬಂದ ಆ ವಾಣಿಯನ್ನು ನಾವು ಕೇಳಿಸಿಕೊಂಡೆವು.

19ಇದಲ್ಲದೆ ಪ್ರವಾದನವಾಕ್ಯವು ನಮಗೆ ಬಹುದೃಢವಾಗಿ ದೊರೆತಿದೆ. ಆ ದಿನವು ಅರುಣೋದಯವಾಗುವರೆಗೆ ಮತ್ತು ಉದಯ ನಕ್ಷತ್ರವು ನಿಮ್ಮ ಹೃದಯಗಳಲ್ಲಿ ಮೂಡುವತನಕ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಟ್ಟರೆ ಒಳ್ಳೆಯದು.

20ಯಾವ ಪ್ರವಾದನಾ ವಾಕ್ಯವೂ ಕೇವಲ ಮನುಷ್ಯನ ಸ್ವಬುದ್ಧಿಯಿಂದ ವಿವರಿಸತಕ್ಕಂಥದ್ದಲ್ಲವೆಂಬುದನ್ನು ಮುಖ್ಯವಾಗಿ ಮೊದಲು ತಿಳಿದುಕೊಳ್ಳಿರಿ.

21ಏಕೆಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ. ಆದರೆ ಮನುಷ್ಯರು ಪವಿತ್ರಾತ್ಮಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತನಾಡಿರುವುದು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath