ಕ್ರಿಶ್ಚಿಯನ್ ಧರ್ಮ
ಹಿಂದೆ

2 ಅರಸುಗಳು 9

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಪ್ರವಾದಿಯಾದ ಎಲೀಷನು ಪ್ರವಾದಿಮಂಡಳಿಯವರಲ್ಲಿ ಒಬ್ಬನನ್ನು ಕರೆದು ಅವನಿಗೆ, “ಈ ಎಣ್ಣೆಯ ಕುಪ್ಪಿಯನ್ನು ತೆಗೆದುಕೊಂಡು ರಾಮೋತ್ ಗಿಲ್ಯಾದಿಗೆ ಹೋಗಲು ಸಿದ್ಧನಾಗು.”

2ಆ ಊರನ್ನು ತಲುಪಿದ ನಂತರ ನಿಂಷಿಯ ಮೊಮ್ಮಗನೂ, ಯೆಹೋಷಾಫಾಟನ ಮಗನೂ ಆದ ಯೇಹುವು ಎಲ್ಲಿರುತ್ತಾನೆಂದು ವಿಚಾರಿಸಿ, ಅವನು ಸಿಕ್ಕಿದಾಗ ಅವನನ್ನು ಅವರ ಜೊತೆಗಾರರ ಗುಂಪಿನಿಂದ ಒಳಗಿನ ಕೋಣೆಗೆ ಕರೆದುಕೊಂಡು ಹೋಗು.

3ತರುವಾಯ ಕುಪ್ಪಿಯಲ್ಲಿರುವ ಎಣ್ಣೆಯನ್ನು ಅವನ ತಲೆಯ ಮೇಲೆ ಹೊಯ್ದು, “ಯೆಹೋವನು ಹೀಗೆ ಅನ್ನುತ್ತಾನೆ, ‘ನಾನು ನಿನ್ನನ್ನು ಇಸ್ರಾಯೇಲರ ಅರಸನಾಗುವುದಕ್ಕೆ ಅಭಿಷೇಕಿಸಿದ್ದೇನೆ’ ಎಂಬುದಾಗಿ ಹೇಳಿದ ಕೂಡಲೆ ಬಾಗಿಲು ತೆರೆದು ಓಡಿಹೋಗು” ಎಂದು ಆಜ್ಞಾಪಿಸಿದನು.

4ಆಗ ಯೌವನಸ್ಥನಾದ ಪ್ರವಾದಿಯು ಎಲೀಷನ ಅಪ್ಪಣೆಯಂತೆ ರಾಮೋತ್ ಗಿಲ್ಯಾದಿಗೆ ಹೋದನು.

5ಸೈನ್ಯಾಧಿಪತಿಗಳೆಲ್ಲಾ ಒಂದು ಕಡೆ ಸೇರಿರುವುದನ್ನು ಕಂಡು ಅವನು ಅವರನ್ನು ಸಮೀಪಿಸಿ, “ನಾಯಕನೇ ನಿನಗೊಂದು ಮಾತು ಹೇಳುವುದಿದೆ” ಎಂದನು. ಯೇಹುವು ಅವನಿಗೆ, “ನಮ್ಮಲ್ಲಿ ಯಾರಿಗೆ?” ಎಂದು ಕೇಳಲು ಅವನು, “ಸೇನಾಧಿಪತಿಯಾದ ನಿನಗೆ” ಎಂದು ಉತ್ತರಕೊಟ್ಟನು.

6ಯೇಹುವು ಎದ್ದು ಒಳಗಿನ ಕೋಣೆಗೆ ಹೋಗಲು ಆ ಯೌವನಸ್ಥನು ಅವನ ತಲೆಯ ಮೇಲೆ ಎಣ್ಣೆಯನ್ನು ಹೊಯ್ದು, “ಇಸ್ರಾಯೇಲರ ದೇವರಾದ ಯೆಹೋವನ ಮಾತನ್ನು ಕೇಳು, ಆತನು ನಿನಗೆ, ‘ನಾನು ನಿನ್ನನ್ನು ನನ್ನ ಪ್ರಜೆಯಾದ ಇಸ್ರಾಯೇಲರ ಅರಸನನ್ನಾಗಿ ಅಭಿಷೇಕಿಸಿದ್ದೇನೆ.

7ನೀನು ನಿನ್ನ ಯಜಮಾನನಾದ ಅಹಾಬನ ಮನೆಯವರನ್ನು ಸಂಹರಿಸಿಬಿಡು; ಆಗ ನನ್ನ ಸೇವಕರಾದ ಪ್ರವಾದಿಗಳೇ ಮೊದಲಾದ ಯೆಹೋವನ ಭಕ್ತರ ರಕ್ತವನ್ನು ಸುರಿಸಿದ್ದಕ್ಕಾಗಿ ನಾನು ಈಜೆಬೆಲಳಿಗೆ ಮುಯ್ಯಿತೀರಿಸಿದಂತಾಗುವುದು.

8ಅಹಾಬನ ಕುಟುಂಬದವರೆಲ್ಲಾ ನಿರ್ನಾಮವಾಗಬೇಕು. ಅವನ ಸಂತಾನದ ಗಂಡಸರಲ್ಲಿ ಸ್ವತಂತ್ರರಾಗಲಿ, ಗುಲಾಮನಾಗಲಿ ಎಲ್ಲರನ್ನೂ ಇಸ್ರಾಯೇಲರೊಳಗಿಂದ ತೆಗೆದುಹಾಕುವೆನು.

9ನೆಬಾಟನ ಮಗನಾದ ಯಾರೊಬ್ಬಾಮನ ಮನೆಗೂ ಅಹೀಯನ ಮಗನಾದ ಬಾಷನ ಮನೆಗೂ ಆದ ಗತಿಯು ಅಹಾಬನ ಮನೆಗೂ ಆಗುವುದು.

10ಈಜೆಬೆಲಳ ಶವವು ಸಮಾಧಿಯನ್ನು ಸೇರುವುದಿಲ್ಲ. ನಾಯಿಗಳು ಅವಳ ಹೆಣವನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು’” ಎನ್ನುತ್ತಾನೆ ಎಂದು ಹೇಳಿ ಬಾಗಿಲನ್ನು ತೆರೆದು ಓಡಿಹೋದನು.

11ಯೇಹುವು ತಿರುಗಿ ತನ್ನ ಒಡೆಯನ ಸೇವಕರ ಹತ್ತಿರ ಬರಲು ಅವರು ಅವನನ್ನು, “ಶುಭವಾರ್ತೆಯೋ? ಆ ಹುಚ್ಚನು ನಿನ್ನ ಬಳಿಗೆ ಬಂದದ್ದೇಕೆ?” ಎಂದು ಕೇಳಿದರು. ಅದಕ್ಕೆ ಯೇಹುವು, “ಆ ಮನುಷ್ಯನು ಎಂಥವನು, ಅವನ ಮಾತು ಎಂಥದು ಎಂಬುದು ನಿಮಗೇ ಗೊತ್ತಿದೆಯಲ್ಲಾ” ಎಂದು ಉತ್ತರಕೊಟ್ಟನು.

12ಆದರೆ ಅವರು, “ಅದು ಸುಳ್ಳು, ಅವನು ಹೇಳಿದ್ದನ್ನು ತಿಳಿಸು” ಎಂದು ಅವನನ್ನು ಒತ್ತಾಯಪಡಿಸಿದ್ದರಿಂದ ಯೇಹುವು, “ನಿನ್ನನ್ನು ಇಸ್ರಾಯೇಲರ ಅರಸನಾಗುವುದಕ್ಕೆ ಅಭಿಷೇಕಿಸಿದ್ದೇನೆ ಎಂಬುದಾಗಿ ಯೆಹೋವನು ಅನ್ನುತ್ತಾನೆ ಎಂದು ಅವನು ಹೇಳಿದ ಎಲ್ಲ ಮಾತುಗಳನ್ನು ಹೇಳಿದನು.”

13ಕೂಡಲೆ ಅವರು ಅವನಿಗೋಸ್ಕರ ಮೆಟ್ಟಿಲುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಸಿ ತುತ್ತೂರಿಯನ್ನು ಊದಿಸಿ ಯೇಹುವು ಅರಸನಾಗಿದ್ದಾನೆಂದು ಘೋಷಣೆಗಳನ್ನು ಕೂಗಿದರು.

14ಹೀಗೆ ನಿಂಷಿಯ ಮೊಮ್ಮಗನೂ ಯೆಹೋಷಾಫಾಟನ ಮಗನೂ ಆದ ಯೇಹುವು ಯೋರಾಮನಿಗೆ ವಿರುದ್ಧವಾಗಿ ಒಳಸಂಚುಮಾಡಿದನು. ಅರಾಮ್ಯರ ಅರಸನಾದ ಹಜಾಯೇಲನು ರಾಮೋತ್ ಗಿಲ್ಯಾದಿಗೆ ವಿರುದ್ಧವಾಗಿ ಬರಲು ಯೋರಾಮನು ಅದನ್ನು ಕಾಪಾಡುವುದಕ್ಕಾಗಿ ಎಲ್ಲಾ ಇಸ್ರಾಯೇಲರ ಸಹಿತವಾಗಿ ಹೋಗಿ ಅದಕ್ಕೆ ಕಾವಲುದಂಡುಗಳನ್ನು ಇರಿಸಿದನು.

15ಅರಸನಾದ ಯೋರಾಮನು, ಅರಾಮ್ಯರ ಅರಸನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಗಾಯ ಹೊಂದಿದ್ದರಿಂದ, ಅದನ್ನು ವಾಸಿಮಾಡಿಕೊಳ್ಳುವುದಕ್ಕಾಗಿ ಹಿಂದಿರುಗಿ ಇಜ್ರೇಲ ಪಟ್ಟಣಕ್ಕೆ ಬಂದಿದ್ದನು. ಯೇಹುವು ತನ್ನ ಜೊತೆಗಾರರಿಗೆ, “ನೀವು ನನ್ನವರಾಗಿದ್ದರೆ ಈ ಸುದ್ದಿಯು ಇಜ್ರೇಲನ್ನು ಮುಟ್ಟದಂತೆ ಒಬ್ಬನನ್ನೂ ಈ ಪಟ್ಟಣದಿಂದ ಹೊರಗೆ ಹೋಗದಂತೆ ನೋಡಿಕೊಳ್ಳಿ” ಎಂದು ಹೇಳಿದನು.

16ಅನಂತರ ಯೇಹುವು ರಥದಲ್ಲಿ ಕುಳಿತು ಇಜ್ರೇಲಿಗೆ ಹೋಗುವುದಕ್ಕಾಗಿ ಹೊರಟನು. ಅಲ್ಲಿ ಅಸ್ವಸ್ಥನಾದ ಯೋರಾಮನು ಅವನನ್ನು ನೋಡುವುದಕ್ಕೆ ಬಂದಿದ್ದ ಯೆಹೂದ್ಯರ ಅರಸನಾದ ಅಹಜ್ಯನೂ ಇದ್ದನು.

17ಇಜ್ರೇಲಿನ ಬುರುಜಿನಲ್ಲಿದ್ದ ಕಾವಲುಗಾರರು ಯೇಹುವಿನ ಗುಂಪಿನವರನ್ನು ಕಂಡು, “ಜನರ ಒಂದು ಗುಂಪು ಬರುವುದು ಕಾಣಿಸುತ್ತದೆ” ಎಂದು ಯೋರಾಮನಿಗೆ ತಿಳಿಸಿದನು. ಯೋರಾಮನು ಅವನಿಗೆ, “ನೀನು ಒಬ್ಬ ರಾಹುತನನ್ನು ಕರೆದು ಬರುತ್ತಿರುವವರು ಶುಭವಾರ್ತೆಯನ್ನು ತರುತ್ತಿದ್ದಾರೊ? ಎಂದು ಕೇಳುವುದಕ್ಕಾಗಿ ಕಳುಹಿಸು” ಎಂಬುದಾಗಿ ಆಜ್ಞಾಪಿಸಿದನು.

18ರಾಹುತನು ಯೇಹುವನ್ನು ಎದುರುಗೊಂಡು, “ಅರಸನು ಶುಭವಾರ್ತೆಯುಂಟೋ? ಎಂದು ಕೇಳುತ್ತಾನೆ” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನಾಗಬೇಕು ನೀನು ನನ್ನ ಹಿಂದೆ ಬಾ” ಎಂದು ಹೇಳಿದನು. ಕಾವಲುಗಾರನು ಅರಸನಿಗೆ, “ರಾಹುತನು ಆ ಗುಂಪನ್ನು ತಲುಪಿದ್ದಾನೆ. ಆದರೆ ಹಿಂತಿರುಗಿ ಬರುವುದು ಕಾಣಿಸುತ್ತಿಲ್ಲ” ಎಂದು ತಿಳಿಸಿದಾಗ ಅರಸನು ಇನ್ನೊಬ್ಬ ರಾಹುತನನ್ನು ಕಳುಹಿಸಿದನು.

19ಅವನು ಹೋಗಿ ಯೇಹುವನ್ನು ಎದುರುಗೊಂಡು, “ಅರಸನು ಶುಭವಾರ್ತೆಯುಂಟೋ? ಎಂದು ಕೇಳುತ್ತಾನೆ” ಎನ್ನಲು ಅವನು, “ಶುಭವಾರ್ತೆಯಿಂದ ನಿನಗೇನಾಗಬೇಕಾಗಿದೆ ನೀನು ನನ್ನ ಹಿಂದೆ ಬಾ” ಎಂದನು.

20ಕಾವಲುಗಾರನು ತಿರುಗಿ ಅರಸನಿಗೆ, “ಎರಡನೆಯವನೂ ಆ ಗುಂಪನ್ನು ತಲುಪಿದ್ದಾನೆ. ಆದರೆ ಹಿಂತಿರುಗಿ ಬರುವುದು ಕಾಣಿಸುತ್ತಿಲ್ಲ. ರಥದಲ್ಲಿ ಕುಳಿತಿರುವವನು ಕುದುರೆಗಳನ್ನು ಹುಚ್ಚು ಹಿಡಿದವನಂತೆ ಓಡಿಸುವುದನ್ನು ನೋಡಿದರೆ ಅವನು ನಿಂಷಿಯ ಮೊಮ್ಮಗನಾದ ಯೇಹುವೇ ಇರಬೇಕು” ಎಂದು ಹೇಳಿದನು.

21ಯೋರಾಮನು ರಥವನ್ನು ಸಿದ್ಧಮಾಡಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದನು. ಅವರು ಸಿದ್ಧಮಾಡಿದರು. ಆಗ ಇಸ್ರಾಯೇಲರ ಅರಸನಾದ ಯೋರಾಮನು ಯೆಹೂದ್ಯರ ಅರಸನಾದ ಅಹಜ್ಯನೂ ತಮ್ಮ ತಮ್ಮ ರಥಗಳಲ್ಲಿ ಕುಳಿತುಕೊಂಡು ಯೇಹುವನ್ನು ಎದುರುಗೊಳ್ಳುವುಕ್ಕಾಗಿ ಹೊರಟು ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಅವನನ್ನು ಸಂಧಿಸಿದರು.

22ಯೋರಾಮನು ಅವನನ್ನು ಕಂಡ ಕೂಡಲೆ, “ಯೇಹುವೇ, ಶುಭವೋ?” ಎಂದು ಅವನನ್ನು ಕೇಳಿದನು. ಅದಕ್ಕೆ ಅವನು, “ನಿನ್ನ ತಾಯಿಯಾದ ಈಜೆಬೆಲಳ ದೇವದ್ರೋಹವೂ, ಮಂತ್ರತಂತ್ರಗಳೂ ಪ್ರಬಲವಾಗಿರುವಲ್ಲಿ ಶುಭವೆಲ್ಲಿಂದ ಬರುವುದು?” ಎಂದು ಉತ್ತರಕೊಟ್ಟನು.

23ಕೂಡಲೆ ಯೋರಾಮನು ತನ್ನ ರಥವನ್ನು ತಿರುಗಿಸಿ ಅಹಜ್ಯನಿಗೆ, “ಅಹಜ್ಯನೇ, ಇದು ಒಳಸಂಚು” ಎಂದು ಹೇಳಿ ಓಡಿಹೋದನು.

24ಯೇಹುವು ಪೂರ್ಣಬಲದಿಂದ ಬಿಲ್ಲನ್ನು ಬೊಗ್ಗಿಸಿ ಯೋರಾಮನ ಬೆನ್ನಿಗೆ ಬಾಣವನ್ನೆಸೆದನು. ಅದು ಅವನ ಹೃದಯದಿಂದ ಹೊರಗೆ ಬಂದಿತು. ಅವನು ಮುದುರಿ ರಥದಲ್ಲಿ ಬಿದ್ದನು.

25ಆಗ ಯೇಹುವು ತನ್ನ ಜೊತೆಯಲ್ಲಿದ್ದ ಬಿದ್ಕರನೆಂಬ ಸೇನಾಪತಿಗೆ, “ಯೋರಾಮನ ಶವವನ್ನು ಎತ್ತಿ ಇಜ್ರೇಲಿನವನಾದ ನಾಬೋತನ ಹೊಲದಲ್ಲಿ ಬಿಸಾಡು. ಒಂದು ದಿನ ನಾವಿಬ್ಬರೂ ಕುದುರೆ ಹತ್ತಿ, ಇವನ ತಂದೆಯಾದ ಅಹಾಬನ ಹಿಂದಿನಿಂದ ಹೋಗುತ್ತಿರುವಾಗ, ಯೆಹೋವನು ಈ ಪ್ರವಾದನೆಯನ್ನು ಅವನ ವಿರುದ್ಧ ಹೇಳಿದ್ದನು:

26ಯೆಹೋವನು ಅಹಾಬನಿಗೆ, ‘ನನ್ನ ಮಾತನ್ನು ಕೇಳು, ನೀನು ನಿನ್ನೆ ಸುರಿಸಿದ ನಾಬೋತನ ಮತ್ತು ಅವನ ಮಕ್ಕಳ ರಕ್ತವನ್ನು ನಿಶ್ಚಯವಾಗಿ ನೋಡಿದ್ದೇನೆ. ನೀನು ಅವರ ರಕ್ತವನ್ನು ಸುರಿಸಿದ ಹೊಲದಲ್ಲೇ ನಿನಗೆ ಮುಯ್ಯಿತೀರಿಸುವೆನು’ ಎಂದು ಪ್ರವಾದಿಯಿಂದ ಹೇಳಿಸಿದ್ದು ನಿನಗೆ ನೆನಪಿರುತ್ತದಲ್ಲಾ, ಯೆಹೋವನ ಆ ಮಾತು ನೆರವೇರುವಂತೆ ಇವನ ಶವವನ್ನು ಆ ಹೊಲದಲ್ಲಿ ಬಿಸಾಡು” ಎಂದು ಹೇಳಿದನು.

27ಯೆಹೂದ್ಯರ ಅರಸನಾದ ಅಹಜ್ಯನು ಇದನ್ನೆಲ್ಲಾ ಕಂಡು ಬೇತಹಗ್ಗನಿನ ಮಾರ್ಗವಾಗಿ ಓಡಿಹೋದನು. ಯೇಹುವು ಅವನನ್ನು ಹಿಂದಟ್ಟಿ, “ಅವನನ್ನೂ ರಥದಲ್ಲಿಯೇ ಹೊಡೆಯಿರಿ” ಎಂದು ಕೂಗಲು, ಅವನ ಜನರು ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಗಟ್ಟದ ಮೇಲೆ ಅವನನ್ನು ಗಾಯಪಡಿಸಿದರು. ಅಹಜ್ಯನು ಮೆಗಿದ್ದೋವಿಗೆ ಓಡಿಹೋಗಿ ಅಲ್ಲಿ ಸತ್ತನು.

28ಅವನ ಸೇವಕರು ಅವನ ಶವವನ್ನು ರಥದಲ್ಲಿ ಹಾಕಿಕೊಂಡು ಯೆರೂಸಲೇಮಿನಲ್ಲಿರುವ ದಾವೀದ ನಗರಕ್ಕೆ ತಂದು ಅದನ್ನು ಅವನ ಕುಟುಂಬದ ಸ್ಮಶಾನಭೂಮಿಯಲ್ಲಿ ಸಮಾಧಿಮಾಡಿದರು.

29ಅಹಜ್ಯನು ಅಹಾಬನ ಮಗನಾದ ಯೋರಾಮನ ಆಳ್ವಿಕೆಯ ಹನ್ನೊಂದನೆಯ ವರ್ಷದಲ್ಲಿ ಯೆಹೂದ್ಯರಿಗೆ ಅರಸನಾಗಿದ್ದನು.

30ಅನಂತರ ಯೇಹುವು ಇಜ್ರೇಲಿಗೆ ಬಂದನು. ಈಜೆಬೆಲಳು ಅದನ್ನು ಕೇಳಿ ತನ್ನ ತಲೆಯನ್ನು ನಯವಾಗಿ ಬಾಚಿಕೊಂಡು, ಕಣ್ಣಿಗೆ ಕಾಡಿಗೆ ಹಚ್ಚಿಕೊಂಡು ಕಿಟಕಿಯಿಂದ ಇಣುಕಿ ನೋಡಿದಳು.

31ಅನಂತರ ಅರಮನೆಯ ಬಾಗಿಲಿನಿಂದ ಪ್ರವೇಶಮಾಡಿದ ಯೇಹುವನ್ನು ಕಂಡು ಅವನಿಗೆ, “ಯಜಮಾನನನ್ನು ಕೊಂದ ಜಿಮ್ರಿಗೆ ಸಮಾಧಾನವೋ? ಕ್ಷೇಮವೋ?” ಎಂದು ಕೇಳಿದಳು.

32ಅವನು ಕಣ್ಣೆತ್ತಿ ಕಿಟಕಿಯ ಕಡೆಗೆ ನೋಡಿ, “ಅಲ್ಲಿ ನನ್ನ ಪಕ್ಷದವರು ಯಾರಿದ್ದಾರೆ?” ಎಂದು ಕೂಗಿದನು. ಕೂಡಲೆ ಆ ಕಿಟಕಿಯಿಂದ ಇಬ್ಬರು, ಮೂವರು ಕಂಚುಕಿಗಳು ಅವನ ಕಡೆಗೆ ನೋಡಿದರು.

33ಅವನು ಅವರಿಗೆ, “ಆಕೆಯನ್ನು ಕೆಳಗೆ ದೊಬ್ಬಿರಿ” ಎಂದು ಆಜ್ಞಾಪಿಸಲು ಅವರು ಆಕೆಯನ್ನು ಕೆಳಗೆ ದೊಬ್ಬಿಬಿಟ್ಟರು. ಆಕೆಯ ರಕ್ತವು ಗೋಡೆಗಳಿಗೂ, ಕುದುರೆಗಳಿಗೂ ಸಿಡಿಯಿತು. ಅವನು ಆಕೆಯ ಶವವನ್ನು ತುಳಿದು ಹಾಕಿದನು.

34ಅನಂತರ ಅವನು ಅರಮನೆಯೊಳಕ್ಕೆ ಹೋಗಿ ಅನ್ನಪಾನಗಳನ್ನು ತೆಗೆದುಕೊಂಡು ತನ್ನ ಸೇವಕರಿಗೆ, “ಆ ಶಾಪಗ್ರಸ್ತ ಸ್ತ್ರೀಯ ಶವವನ್ನು ನೋಡಿ ಅದನ್ನು ಸಮಾಧಿಮಾಡಿರಿ, ಆಕೆಯು ರಾಜಪುತ್ರಿಯಾಗಿರುತ್ತಾಳಲ್ಲವೇ” ಎಂದು ಆಜ್ಞಾಪಿಸಿದನು.

35ಸೇವಕರು ಶವವನ್ನು ಸಮಾಧಿಮಾಡುವುದಕ್ಕಾಗಿ ಹೋದರು. ಆದರೆ ಅವರಿಗೆ ಆಕೆಯ ತಲೆಬುರುಡೆ, ಕೈಕಾಲುಗಳ ಹೊರತಾಗಿ ಬೇರೇನೂ ಸಿಕ್ಕಲಿಲ್ಲ.

36ಅವರು ಹಿಂದಿರುಗಿ ಯೇಹುವಿನ ಹತ್ತಿರ ಬಂದು ಆ ಸಂಗತಿಯನ್ನು ತಿಳಿಸಲು ಅವನು ಅವರಿಗೆ, “ಯೆಹೋವನು, ತನ್ನ ದಾಸನಾಗಿರುವ ತಿಷ್ಬೀಯನಾದ ಎಲೀಯನ ಮುಖಾಂತರವಾಗಿ ಹೇಳಿಸಿದ ಮಾತು ಈಗ ನೆರವೇರಿತು, ನಾಯಿಗಳು ಈಜೆಬೆಲಳ ದೇಹಮಾಂಸವನ್ನು ಇಜ್ರೇಲಿನ ಹೊಲದಲ್ಲಿ ತಿಂದುಬಿಡುವವು.

37ಆಕೆಯ ಶವವು ಇಜ್ರೇಲಿನ ಹೊಲಕ್ಕೆ ಗೊಬ್ಬರವಾಗುವುದು. ಇದು ಈಜೆಬೆಲಳ ಶವವೆಂದು ಯಾರಿಗೂ ಗುರುತು ಸಿಕ್ಕದ ಹಾಗಾಗುವುದು” ಎಂದನು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath