ಕ್ರಿಶ್ಚಿಯನ್ ಧರ್ಮ
ಹಿಂದೆ

2 ಪೂರ್ವಕಾಲವೃತ್ತಾಂತ 10

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಎಲ್ಲಾ ಇಸ್ರಾಯೇಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಕೂಡಿಬಂದಿದ್ದರು.

2ಇದಲ್ಲದೆ ಅರಸನಾದ ಸೊಲೊಮೋನನಿಂದ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿ ಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ನಡೆದ ಸಂಗತಿಗಳನ್ನು ಕೇಳಿದೊಡನೆ ಐಗುಪ್ತದಿಂದ ಹಿಂತಿರುಗಿ ಬಂದಿದ್ದನು.

3ಇಸ್ರಾಯೇಲರು ಅವನನ್ನೂ ತಮ್ಮ ಬಳಿಗೆ ಕರೆಸಿಕೊಂಡರು. ಯಾರೊಬ್ಬಾಮನು ಎಲ್ಲಾ ಇಸ್ರಾಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,

4ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೊರೆಯನ್ನು ಹೊರಿಸಿದ್ದನು; ನಿನ್ನ ತಂದೆಯು ನೇಮಿಸಿದ ಬಿಟ್ಟಿ ಕೆಲಸವನ್ನು ನೀನು ಕಡಿಮೆ ಮಾಡಿ, ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವುದಾದರೆ, ನಾವು ನಿನ್ನನ್ನು ಸೇವಿಸುವೆವು” ಎಂದು ಹೇಳಿದರು.

5ಅದಕ್ಕೆ ರೆಹಬ್ಬಾಮನು, “ನೀವು ಮೂರು ದಿನಗಳ ಬಳಿಕ ಬನ್ನಿರಿ” ಎಂದು ಉತ್ತರಕೊಟ್ಟನು; ಜನರು ಹೊರಟು ಹೋದರು.

6ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕರೆಸಿ ಅವರಿಗೆ, “ಈ ಜನರಿಗೆ ಉತ್ತರ ಕೊಡಲು ನೀವು ಯಾವ ಆಲೋಚನೆಯನ್ನು ನನಗೆ ಹೇಳುವಿರಿ?” ಎಂದನು.

7ಅವರು ಅವನಿಗೆ, “ನೀನು ಈ ಜನರಿಗೆ ದಯತೋರಿಸಿ, ಅವರನ್ನು ಮೆಚ್ಚಿಸುವ ಒಳ್ಳೆಯ ಉತ್ತರ ಕೊಟ್ಟರೆ ಅವರು ಯಾವಾಗಲೂ ನಿನಗೆ ಅಧೀನರಾಗಿರುವರು” ಎಂದರು.

8ಆದರೆ ಅವನು ಅ ಹಿರಿಯರ ಆಲೋಚನೆಯನ್ನು ನಿರಾಕರಿಸಿ, ತನ್ನ ಸಂಗಡವೇ ಬೆಳೆದು ತನಗೆ ಮಂತ್ರಿಗಳಾದ ಯೌವನಸ್ಥರನ್ನು ಕರೆಯಿಸಿದನು.

9“ನನ್ನ ತಂದೆಯು ಹೇರಿದ ನೊಗವನ್ನು ಹಗುರ ಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು? ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.

10ಅವರು ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ಭಾರವಾದ ನೊಗವನ್ನು ಹಗುರ ಮಾಡು ಎಂಬುದಾಗಿ ನಿನ್ನನ್ನು ಬೇಡಿಕೊಂಡಿರುವ ಈ ಜನರಿಗೆ ನೀನು, ‘ನನ್ನ ತಂದೆಯ ನಡುವಿಗಿಂತ ನನ್ನ ಕಿರುಬೆರಳು ದಪ್ಪವಾಗಿದೆ.

11ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೇರಿರುವುದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ; ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು” ಎಂದು ಉತ್ತರಕೊಟ್ಟರು.

12ಯಾರೊಬ್ಬಾಮನೂ ಮತ್ತು ಜನರೆಲ್ಲರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನ ಹಿಂತಿರುಗಿ ಅವನ ಬಳಿಗೆ ಬಂದರು.

13ಅರಸನಾದ ರೆಹಬ್ಬಾಮನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು. ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿದನು.

14ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ, “ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನೂ ಹೇರಿರುವದು ನಿಜ; ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುವೆನು. ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ; ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು” ಎಂದು ನುಡಿದನು.

15ಅರಸನು ಜನರ ಮಾತನ್ನು ಕೇಳದೆ ಹೋದದ್ದು ದೈವಯೋಗದಿಂದಲೇ. ಈ ಪ್ರಕಾರ ಯೆಹೋವನು ಶೀಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿದ ಮಾತು ನೆರವೇರಿತು.

16ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲ ಎಂದು ತಿಳಿದು; ಇಸ್ರಾಯೇಲರೆಲ್ಲರು ಅವನಿಗೆ, “ದಾವೀದನಿಗೂ ನಮಗೂ ಇನ್ನು ಮೇಲೆ ಏನೂ ಸಂಬಂಧವಿಲ್ಲ. ಇಷಯನ ಮಗನಿಗೂ ನಮಗೂ ಯಾವ ಬಾಧ್ಯತೆಯೂ ಇಲ್ಲ. ಇಸ್ರಾಯೇಲರೇ, ನಿಮ್ಮ ನಿಮ್ಮ ಸ್ವತ್ತುಗಳಿಗೆ ಹೋಗಿರಿ; ದಾವೀದನ ಕಡೆಯವರೇ, ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ” ಎಂದು ಹೇಳಿ ತಮ್ಮ ತಮ್ಮ ಗುಡಾರಗಳಿಗೆ ಹಿಂತಿರುಗಿದರು.

17ಯೆಹೂದ ಪಟ್ಟಣದಲ್ಲಿದ್ದ ಇಸ್ರಾಯೇಲರಾದರೋ ಅರಸನಾದ ರೆಹಬ್ಬಾಮನ ಅಧೀನದಲ್ಲಿದ್ದರು.

18ರೆಹಬ್ಬಾಮನು ಬಿಟ್ಟೀಕೆಲಸದವರ ಮೇಲ್ವಿಚಾರಕನಾದ ಹದೋರಾಮನನ್ನು ಇಸ್ರಾಯೇಲರ ಬಳಿಗೆ ಕಳುಹಿಸಿದಾಗ, ಅವರು ಅವನನ್ನು ಕಲ್ಲೆಸೆದು ಕೊಂದರು. ಆಗ ಅರಸನಾದ ರೆಹಬ್ಬಾಮನು ಬೇಗನೆ ರಥವನ್ನೇರಿ ಯೆರೂಸಲೇಮಿಗೆ ಓಡಿ ಹೋದನು.

19ಇಸ್ರಾಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath