1 ಸಮುವೇಲನು 16
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಯೆಹೋವನು ಸಮುವೇಲನಿಗೆ, “ನಾನು ಸೌಲನನ್ನು ಇಸ್ರಾಯೇಲರ ಅರಸನಾಗಿರುವುದಕ್ಕೆ ಯೋಗ್ಯನಲ್ಲವೆಂದು ತಳ್ಳಿಬಿಟ್ಟಿದ್ದೇನಲ್ಲಾ; ನೀನು ಅವನಿಗೋಸ್ಕರ ಎಷ್ಟರವರೆಗೆ ದುಃಖಿಸುತ್ತಿರುವಿ? ಕೊಂಬಿನಲ್ಲಿ ಎಣ್ಣೆಯಿಂದ ತುಂಬಿಸಿಕೊಂಡು ಬಾ; ನಾನು ನಿನ್ನನ್ನು ಬೇತ್ಲೆಹೇಮಿನವನಾದ ಇಷಯನ ಬಳಿಗೆ ಕಳುಹಿಸುತ್ತೇನೆ; ಅವನ ಮಕ್ಕಳಲ್ಲೊಬ್ಬನನ್ನು ಅರಸನನ್ನಾಗಿ ಆರಿಸಿಕೊಂಡಿದ್ದೇನೆ” ಎಂದು ಹೇಳಿದನು.
2ಅದಕ್ಕೆ ಸಮುವೇಲನು, “ನಾನು ಹೋಗುವುದು ಹೇಗೆ? ಇದು ಸೌಲನಿಗೆ ಗೊತ್ತಾದರೆ ಅವನು ನನ್ನನ್ನು ಕೊಂದುಹಾಕುವನಲ್ಲವೇ” ಎಂದನು. ಅದಕ್ಕೆ ಯೆಹೋವನು, “ನೀನು ಒಂದು ಕರುವನ್ನು ತೆಗೆದುಕೊಂಡು ಹೋಗಿ ಯೆಹೋವನಿಗೋಸ್ಕರ ಯಜ್ಞಮಾಡುವುದಕ್ಕೆ ಬಂದಿದ್ದೇನೆಂದು ಹೇಳಿ ಇಷಯನನ್ನು ಅದಕ್ಕಾಗಿ ಕರೆ.
3ಆ ನಂತರ ನೀನು ಮಾಡಬೇಕಾದದ್ದನ್ನು ನಾನೇ ನಿನಗೆ ತಿಳಿಸುತ್ತೇನೆ. ನಾನು ಯಾರನ್ನು ತೋರಿಸುತ್ತೇನೋ, ಅವನನ್ನು ನೀನು ಅಭಿಷೇಕಿಸಬೇಕು” ಎಂದನು.
4ಯೆಹೋವನು ಹೇಳಿದಂತೆಯೇ ಸಮುವೇಲನು ಬೇತ್ಲೆಹೇಮಿಗೆ ಹೋದನು. ಆ ಊರಿನ ಹಿರಿಯರು ನಡುಗುತ್ತಾ ಬಂದು ಅವನನ್ನು ಎದುರುಗೊಂಡು “ನಿನ್ನ ಆಗಮನವು ನಮಗೆ ಶುಭಕರವಾಗಿದೆಯೇ?” ಎಂದು ಕೇಳಲು
5ಅವನು, “ಹೌದು, ಶುಭಕರವಾಗಿದೆ; ಯೆಹೋವನಿಗೆ ಯಜ್ಞವನ್ನರ್ಪಿಸುವುದಕ್ಕೆ ಬಂದಿದ್ದೇನೆ. ನೀವು ನಿಮ್ಮನ್ನು ಶುದ್ಧಪಡಿಸಿಕೊಂಡು ನನ್ನ ಜೊತೆಯಲ್ಲಿ ಯಜ್ಞಕ್ಕೆ ಬನ್ನಿರಿ” ಎಂದು ಹೇಳಿ ಇಷಯನನ್ನೂ, ಅವನ ಮಕ್ಕಳನ್ನೂ ಶುದ್ಧೀಕರಿಸಿ ಅವರನ್ನೂ ಯಜ್ಞಕ್ಕೆ ಕರೆದನು.
6ಅವರು ಬರಲು ಅವನು ಎಲೀಯಾಬನನ್ನು ನೋಡಿ, ನಿಶ್ಚಯವಾಗಿ ಯೆಹೋವನು ಅಭಿಷೇಕಕ್ಕೆ ಆರಿಸಿಕೊಂಡವನು ಆತನ ಮುಂದೆ ಇದ್ದಾನೆ ಎಂದುಕೊಂಡನು.
7ಆದರೆ ಯೆಹೋವನು ಸಮುವೇಲನಿಗೆ, “ ನೀನು ಅವನ ಸೌಂದರ್ಯವನ್ನೂ, ಎತ್ತರವನ್ನೂ ನೋಡಬೇಡ; ನಾನು ಅವನನ್ನು ನಿರಾಕರಿಸಿದ್ದೇನೆ. ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯದ ಮತ್ತು ಅಂತರಂಗದ ಸೌಂದರ್ಯ ನೋಡುವವನಾಗಿದ್ದಾನೆ” ಅಂದನು.
8ಇಷಯನು ಅಬೀನಾದಾಬನನ್ನು ಸಮುವೇಲನ ಬಳಿಗೆ ಬರಮಾಡಲು ಸಮುವೇಲನು, “ಯೆಹೋವನು ಇವನನ್ನು ಆರಿಸಿಕೊಳ್ಳಲಿಲ್ಲ” ಎಂದನು.
9ತರುವಾಯ ಇಷಯನು ಶಮ್ಮನನ್ನು ಬರಮಾಡಲು ಸಮುವೇಲನು, “ಯೆಹೋವನು ಇವನನ್ನೂ ಆರಿಸಿಕೊಳ್ಳಲಿಲ್ಲ” ಎಂದು ಹೇಳಿದನು.
10ಹೀಗೆ ಇಷಯನು ತನ್ನ ಮಕ್ಕಳಲ್ಲಿ ಏಳು ಮಂದಿಯನ್ನು ಸಮುವೇಲನ ಬಳಿಗೆ ಬರಮಾಡಿದರೂ ಅವನು, “ಯೆಹೋವನು ಇವರನ್ನು ಆರಿಸಿಕೊಳ್ಳಲಿಲ್ಲ” ಎಂದು ನುಡಿದನು.
11ಅನಂತರ ಸಮುವೇಲನು ಇಷಯನನ್ನು, “ನಿನ್ನ ಮಕ್ಕಳೆಲ್ಲಾ ಇಷ್ಟೇ ಮಂದಿಯೋ” ಎಂದು ಕೇಳಲು ಅವನು, “ಇವರೆಲ್ಲರಿಗಿಂತಲೂ ಚಿಕ್ಕವನು ಒಬ್ಬನಿರುತ್ತಾನೆ; ಅವನು ಕುರಿಮೇಯಿಸುವುದಕ್ಕೆ ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆಗ ಸಮುವೇಲನು, “ಅವನನ್ನು ಕರೆದುಕೊಂಡು ಬರಲು ತಿಳಿಸು; ಅವನು ಬರುವವರೆಗೂ ನಾವು ಊಟಕ್ಕೆ ಕುಳಿತುಕೊಳ್ಳಬಾರದು” ಎಂದು ಹೇಳಲು ಇಷಯನು ಅವನನ್ನು ಕರೆದು ಕರೆದುಕೊಂಡು ಬರಲು ತಿಳಿಸಿದನು.
12ಅವನು ಕೆಂಪುಬಣ್ಣದವನೂ, ಸುಂದರನೇತ್ರನೂ, ನೋಡುವುದಕ್ಕೆ ರಮಣೀಯನೂ ಆಗಿದ್ದನು. ಯೆಹೋವನು ಸಮುವೇಲನಿಗೆ, “ಎದ್ದು ಇವನನ್ನು ಅಭಿಷೇಕಿಸು; ನಾನು ಆರಿಸಿಕೊಂಡವನು ಇವನೇ” ಎಂದು ಆಜ್ಞಾಪಿಸಲು
13ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು, ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು. ಅನಂತರ ಸಮುವೇಲನು ರಾಮಕ್ಕೆ ಹೊರಟುಹೋದನು.
14ಯೆಹೋವನ ಆತ್ಮವು ಸೌಲನನ್ನು ಬಿಟ್ಟು ಹೋಯಿತು; ಯೆಹೋವನು ಕಳುಹಿಸಿದ ದುರಾತ್ಮವು ಬಂದು ಅವನನ್ನು ಪೀಡಿಸುತ್ತಿದ್ದರಿಂದ
15ಅವನ ಸೇವಕರು ಅವನಿಗೆ, “ಇಗೋ, ದೇವರಿಂದ ಬಂದ ದುರಾತ್ಮವು ನಿನ್ನನ್ನು ಪೀಡಿಸುತ್ತಾ ಇದೆ.
16ಸ್ವಾಮೀ, ಅಪ್ಪಣೆಯಾಗಲಿ; ನಿನ್ನ ಸನ್ನಿಧಿಯಲ್ಲಿ ನಿಂತಿರುವ ನಿನ್ನ ಸೇವಕರಾದ ನಾವು ಹೋಗಿ ಕಿನ್ನರಿ ನುಡಿಸುವುದರಲ್ಲಿ ನಿಪುಣನಾದ ಒಬ್ಬನನ್ನು ಹುಡುಕಿ ತರುತ್ತೇನೆ. ಯೆಹೋವನಿಂದ ಕಳುಹಿಸಲ್ಪಟ್ಟ ದುರಾತ್ಮವು ನಿನ್ನ ಮೇಲೆ ಬರುವಾಗ ಅವನು ಕಿನ್ನರಿ ನುಡಿಸಿದರೆ ನಿನಗೆ ಉಪಶಮನವಾಗುವುದು” ಎಂದು ಹೇಳಿದರು.
17ಸೌಲನು ಅವರಿಗೆ, “ಚೆನ್ನಾಗಿ ನುಡಿಸಬಲ್ಲವನಾದ ಒಬ್ಬನನ್ನು ನನಗೋಸ್ಕರ ಹುಡುಕಿ ಕರೆದುಕೊಂಡು ಬನ್ನಿರಿ” ಎಂದು ಆಜ್ಞಾಪಿಸಿದನು.
18ಸೇವಕರಲ್ಲೊಬ್ಬನು ಅವನಿಗೆ, “ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದ್ದೇನೆ; ಅವನು ಚೆನ್ನಾಗಿ ಕಿನ್ನರಿ ನುಡಿಸಬಲ್ಲವನೂ, ಪರಾಕ್ರಮಶಾಲಿಯೂ, ಯುದ್ಧ ನಿಪುಣನೂ, ವಾಕ್ಚತುರನೂ, ಸುಂದರನೂ, ಯೆಹೋವನ ಅನುಗ್ರಹವನ್ನು ಹೊಂದಿದವನೂ ಆಗಿದ್ದಾನೆ” ಎಂದು ತಿಳಿಸಿದನು.
19ಕೂಡಲೆ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ಕುರಿಗಳನ್ನು ಮೇಯಿಸುತ್ತಿರುವ ನಿನ್ನ ಮಗನಾದ ದಾವೀದನನ್ನು ನನ್ನ ಬಳಿಗೆ ಕಳುಹಿಸು” ಎಂದು ಹೇಳಿಸಿದನು.
20ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಹೋತಮರಿಯನ್ನೂ, ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು.
21ಹೀಗೆ ದಾವೀದನು ಸೌಲನ ಬಳಿಗೆ ಬಂದು ಅವನ ಸೇವಕನಾದನು. ಸೌಲನು ಅವನನ್ನು ಬಹಳವಾಗಿ ಪ್ರೀತಿಸಿ ತನ್ನ ಆಯುಧಗಳನ್ನು ಹೊರುವುದಕ್ಕೆ ನೇಮಿಸಿಕೊಂಡನು.
22ತರುವಾಯ ಸೌಲನು ಇಷಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ, “ನಾನು ದಾವೀದನನ್ನು ಮೆಚ್ಚಿದ್ದೇನೆ; ಅವನು ನನ್ನ ಸನ್ನಿಧಿಯಲ್ಲಿ ಸೇವೆಮಾಡಲಿ” ಎಂದು ತಿಳಿಸಿದನು.
23ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದಾಗ ದಾವೀದನು ಕಿನ್ನರಿಯನ್ನು ನುಡಿಸುವನು; ಅದರಿಂದ ದುರಾತ್ಮವು ಸೌಲನನ್ನು ಬಿಟ್ಟುಹೋಗುವುದು; ಅವನು ಉಪಶಮನಹೊಂದಿ ಚೆನ್ನಾಗಿರುತ್ತಿದ್ದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath