1 ಪೇತ್ರನು 4
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ಕ್ರಿಸ್ತನು ನಮಗೋಸ್ಕರ ತನ್ನ ಶರೀರದಲ್ಲಿ ಬಾಧೆಪಟ್ಟದ್ದರಿಂದ ನೀವು ಸಹ ಅದೇ ಮನೋಭಾವವುಳ್ಳವರಾಗಿದ್ದು ಬಾಧೆಪಡಲು ಸಿದ್ಧರಾಗಿರಿ. ಏಕೆಂದರೆ ಶರೀರದಲ್ಲಿ ಬಾಧೆಪಟ್ಟವನು ಪಾಪ ಮಾಡುವುದನ್ನು ನಿಲ್ಲಿಸಿದವನಾಗಿದ್ದಾನೆ.
2ಆದ್ದರಿಂದ ಉಳಿದಿರುವ ತನ್ನ ಜೀವಮಾನ ಕಾಲದಲ್ಲಿ ಇನ್ನೂ ಮನುಷ್ಯರ ಅಭಿಲಾಷೆಗಳ ಪ್ರಕಾರ ಬದುಕದೆ ದೇವರ ಚಿತ್ತದ ಪ್ರಕಾರ ಬದುಕುವುದಕ್ಕೆ ಪ್ರಯತ್ನಮಾಡುವನು.
3ನೀವು ಬಂಡುತನ, ದುರಾಶೆ, ಕುಡುಕತನ, ದುಂದೌತಣ, ಮದ್ಯಪಾನ ಗೋಷ್ಠಿ, ಅಸಹ್ಯವಾದ ವಿಗ್ರಹಾರಾಧನೆ, ಈ ಮೊದಲಾದವುಗಳನ್ನು ನಡಿಸುವುದರಲ್ಲಿಯೂ ಅನ್ಯಜನರಿಗೆ ಇಷ್ಟವಾದ ದುಷ್ಕೃತ್ಯಗಳನ್ನು ಮಾಡುವುದರಲ್ಲಿಯೂ ಕಾಲಕಳೆದದ್ದು ಸಾಕು.
4ಅವರು ಮಾಡುವ ಅಪರಿಮಿತವಾದ ಪಟಿಂಗತನದಲ್ಲಿ ನೀವು ಸೇರದೆ ಇದ್ದದ್ದಕ್ಕೆ ಅವರು ಆಶ್ಚರ್ಯಪಟ್ಟು ನಿಮ್ಮನ್ನು ದೂಷಿಸುತ್ತಾರೆ.
5ಅವರು ಬದುಕಿರುವವರಿಗೂ ಸತ್ತವರಿಗೂ ನ್ಯಾಯತೀರಿಸುವುದಕ್ಕೆ ಸಿದ್ಧವಾಗಿರುವಾತನಿಗೆ ಉತ್ತರ ಕೊಡಬೇಕು.
6ಸತ್ತಿರುವವರು ಮನುಷ್ಯ ಜಾತಿಗೆ ಬರುವ ಮರಣವೆಂಬ ತೀರ್ಪನ್ನು ಶರೀರಗಳಲ್ಲಿದ್ದಾಗ ಹೊಂದಿದರು. ಅವರು ಆತ್ಮ ಸಂಬಂಧವಾಗಿ ದೇವರಂತೆ ಜೀವಿಸಲೆಂದು ಅವರಿಗೂ ಸುವಾರ್ತೆಯು ತಿಳಿಸಲ್ಪಟ್ಟಿತು.
7ಎಲ್ಲವುಗಳ ಅಂತ್ಯವು ಹತ್ತಿರವಾಗಿದೆ. ಆದ್ದರಿಂದ ನೀವು ಜಿತೇಂದ್ರಿಯರಾಗಿಯೂ ಯಾವಾಗಲೂ ಪ್ರಾರ್ಥನೆಗೆ ಸಿದ್ಧವಾಗಿರುವಂತೆ ಸ್ವಸ್ಥಚಿತ್ತರಾಗಿಯೂ ಇರಿ.
8ಮೊಟ್ಟಮೊದಲು ನಿಮ್ಮ ನಿಮ್ಮೊಳಗೆ ಪ್ರಾಮಾಣಿಕವಾದ ಪ್ರೀತಿಯಿರಲಿ. ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.
9ಗುಣಗುಟ್ಟದೆ ಒಬ್ಬರಿಗೊಬ್ಬರು ಅತಿಥಿ ಸತ್ಕಾರ ಮಾಡಿರಿ.
10ನೀವೆಲ್ಲರು ದೇವರ ವಿವಿಧ ವರಗಳ ವಿಷಯದಲ್ಲಿ ಒಳ್ಳೆಯ ನಿರ್ವಾಹಕರಾಗಿದ್ದು ಪ್ರತಿಯೊಬ್ಬನು ತಾನು ಹೊಂದಿದ ಕೃಪಾವರವನ್ನು ಎಲ್ಲರ ಸೇವೆಗಾಗಿ ಉಪಯೋಗಿಸಕೊಳ್ಳಲಿ.
11ಒಬ್ಬನು ಬೋಧಿಸುವವನಾದರೆ ದೈವೋಕ್ತಿಗಳನ್ನು ನುಡಿಯುವವನಾಗಿ ಬೋಧಿಸಲಿ. ಒಬ್ಬನು ಸೇವೆ ಮಾಡುವವನಾದರೆ ದೇವರು ಕೊಡುವ ಶಕ್ತಿಗನುಗುಣವಾಗಿ ಮಾಡಲಿ. ಇವೆಲ್ಲವುಗಳಿಂದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ ಉಂಟಾಗುವುದು. ಯೇಸು ಕ್ರಿಸ್ತನಿಗೆ ಅಧಿಪತ್ಯವೂ ಮತ್ತು ಘನವೂ ಯುಗಯುಗಾಂತರಗಳಲ್ಲಿಯೂ ಇರುವವು ಆಮೆನ್.
12ಪ್ರಿಯರೇ, ನಿಮ್ಮನ್ನು ಪರಿಶೋಧಿಸುವುದಕ್ಕಾಗಿ ಅಗ್ನಿ ಪರೀಕ್ಷೆ ಬರುವಾಗ ನೀವು ಆಶ್ಚರ್ಯಪಡಬೇಡಿರಿ. ವಿಪರೀತವಾದ ಸಂಗತಿ ಸಂಭವಿಸಿತೆಂದು ಯೋಚಿಸಬೇಡಿರಿ.
13ಆದರೆ ನೀವು ಎಷ್ಟರ ಮಟ್ಟಿಗೆ ಕ್ರಿಸ್ತನ ಬಾಧೆಗಳಲ್ಲಿ ಪಾಲುಗಾರರಾಗಿದ್ದೀರೋ ಅಷ್ಟರ ಮಟ್ಟಿಗೆ ಸಂತೋಷಪಡಿರಿ. ಆದ್ದರಿಂದ ಆತನ ಮಹಿಮೆಯ ಪ್ರತ್ಯಕ್ಷತೆಯಲ್ಲಿಯೂ ನೀವು ಸಂತೋಷಪಟ್ಟು ಉಲ್ಲಾಸಗೊಳ್ಳುವಿರಿ
14ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಧನ್ಯರು. ಮಹಿಮೆಯ ಆತ್ಮನಾಗಿರುವ ದೇವರಾತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನಲ್ಲಾ.
15ನಿಮ್ಮಲ್ಲಿ ಯಾವನಾದರು ಕೊಲೆಗಾರನು, ಕಳ್ಳನು, ದುಷ್ಟನು, ಪರರ ಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಶಿಕ್ಷಾಪಾತ್ರನಾಗಬಾರದು.
16ಆದರೆ ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಆ ಹೆಸರಿನಿಂದಲೇ ದೇವರನ್ನು ಘನಪಡಿಸಲಿ.
17ನ್ಯಾಯವಿಚಾರಣೆಯ ಸಮಯ ಬಂದಿದೆ. ಆ ವಿಚಾರಣೆಯು ದೇವರ ಮನೆಯಲ್ಲಿಯೇ ಪ್ರಾರಂಭವಾಗಿದೆಯಲ್ಲಾ. ಅದು ನಮ್ಮಲ್ಲಿ ಪ್ರಾರಂಭವಾಗುವುದಾದರೆ, ದೇವರ ಸುವಾರ್ತೆಯನ್ನು ನಂಬಲೊಲ್ಲದವರ ಅಂತ್ಯ ಹೇಗಿರಬಹುದು?
18ನೀತಿವಂತನೇ ರಕ್ಷಣೆ ಹೊಂದುವುದು ಕಷ್ಟವಾದರೆ, ಭಕ್ತಿಹೀನನೂ ಮತ್ತು ಪಾಪಿಷ್ಠನೂ ರಕ್ಷಣೆ ಹೊಂದುವುದು ಹೇಗೆ?
19ಹೀಗಿರಲಾಗಿ ದೇವರ ಚಿತ್ತಾನುಸಾರ ಬಾಧೆಪಡುವವರು ಒಳ್ಳೆದನ್ನು ಮಾಡುವವರಾಗಿದ್ದು ತಮ್ಮ ಆತ್ಮಗಳನ್ನು ನಂಬಿಗಸ್ತನಾದ ಸೃಷ್ಟಿ ಕರ್ತನಿಗೆ ಒಪ್ಪಿಸಲಿ.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath