ಕ್ರಿಶ್ಚಿಯನ್ ಧರ್ಮ
ಹಿಂದೆ

1 ಅರಸುಗಳು 9

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಸೊಲೊಮೋನನು ಯೆಹೋವನ ಆಲಯವನ್ನೂ ತನ್ನ ಅರಮನೆಯನ್ನೂ ಕಟ್ಟಿಸಿದ ನಂತರ,

2ಯೆಹೋವನು ಅವನಿಗೆ ಗಿಬ್ಯೋನಿನಲ್ಲಿ ಪ್ರತ್ಯಕ್ಷನಾದಂತೆ ಎರಡನೆಯ ಸಾರಿ ಪ್ರತ್ಯಕ್ಷನಾದನು.

3ಆತನು ಅವನಿಗೆ, “ನೀನು ನನಗೆ ಮಾಡಿದ ಪ್ರಾರ್ಥನೆಯನ್ನೂ ಮತ್ತು ವಿಜ್ಞಾಪನೆಯನ್ನೂ ಕೇಳಿದ್ದೇನೆ. ನನ್ನ ನಾಮಮಹತ್ತು ನೀನು ಕಟ್ಟಿಸಿದ ಆಲಯದಲ್ಲಿ ಸದಾ ಇರುವಂತೆ ಅದನ್ನು ನನಗೋಸ್ಕರ ಪ್ರತಿಷ್ಠಿಸಿಕೊಂಡಿದ್ದೇನೆ. ನನ್ನ ದೃಷ್ಟಿಯೂ, ಮನಸ್ಸೂ ಪ್ರತಿದಿನವೂ ಅದರ ಮೇಲಿರುವವು.

4ನೀನು ನಿನ್ನ ತಂದೆಯಾದ ದಾವೀದನಂತೆ ಪೂರ್ಣಮನಸ್ಸಿನಿಂದಲೂ, ಯಥಾರ್ಥಚಿತ್ತದಿಂದಲೂ ನನಗೆ ನಡೆದುಕೊಂಡು ನನ್ನ ಆಜ್ಞಾವಿಧಿನ್ಯಾಯಗಳನ್ನು ಕೈಕೊಳ್ಳುತ್ತಾ ಬರುವುದಾದರೆ,

5ಇಸ್ರಾಯೇಲರಲ್ಲಿ ನಿನ್ನ ಸಿಂಹಾಸನವನ್ನು ಸದಾ ಸ್ಥಿರಪಡಿಸುವೆನು. ‘ಇಸ್ರಾಯೇಲ್ ಸಿಂಹಾಸನದ ಮೇಲೆ ನಿನ್ನ ಸಂತಾನದವರು ತಪ್ಪದೆ ಕುಳಿತುಕೊಳ್ಳುವರು’ ಎಂಬುದಾಗಿ ನಿನ್ನ ತಂದೆಯಾದ ದಾವೀದನಿಗೆ ನಾನು ಮಾಡಿದ ವಾಗ್ದಾನವನ್ನು ನೆರವೇರಿಸುವೆನು.

6ಆದರೆ ನೀವಾಗಲಿ, ನಿಮ್ಮ ಮಕ್ಕಳಾಗಲಿ, ನನ್ನ ಆಜ್ಞಾವಿಧಿಗಳನ್ನು ಕೈಕೊಳ್ಳದೆ, ನನ್ನನ್ನು ಬಿಟ್ಟು ಅನ್ಯದೇವತೆಗಳನ್ನು ಹಿಂಬಾಲಿಸಿ, ಅವುಗಳಿಗೆ ಕೈಮುಗಿಯುವುದಾದರೆ

7ಇಸ್ರಾಯೇಲರನ್ನು ನಾನು ಅವರಿಗೆ ಕೊಟ್ಟ ದೇಶದಿಂದ ತೆಗೆದು ಹಾಕಿ, ನನ್ನ ಹೆಸರಿಗೋಸ್ಕರ ಪ್ರತಿಷ್ಠಿಸಿಕೊಂಡ ಆಲಯವನ್ನು ನಿರಾಕರಿಸಿಬಿಡುವೆನು. ‘ಇಸ್ರಾಯೇಲರು’ ಎಲ್ಲಾ ಜನಾಂಗಗಳವರ ಗಾದೆಗೂ ನಿಂದೆಗೂ, ಲೋಕದ ಅಪವಾದಕ್ಕೂ ಗುರಿಯಾಗುವಾಗುವರು.

8ಉನ್ನತವಾದ ಈ ಮಂದಿರದ ಮಾರ್ಗವಾಗಿ ಹಾದುಹೋಗುವವರು ಅದನ್ನು ನೋಡಿ ವಿಸ್ಮಿತರಾಗಿ, ‘ಅಬ್ಬಬ್ಬಾ ಇದೇನು, ಯೆಹೋವನು ಈ ದೇಶವನ್ನು ಮತ್ತು ಈ ಆಲಯವನ್ನೂ ಹೀಗೇಕೆ ಮಾಡಿದನು?’ ಎಂದು ಕೇಳುವರು.

9ಆಗ ಈ ದೇಶದವರು ಅವರಿಗೆ, ‘ನಮ್ಮ ಪೂರ್ವಿಕರನ್ನು ಐಗುಪ್ತದಿಂದ ಬರಮಾಡಿದ ದೇವರಾದ ಯೆಹೋವನನ್ನು ಬಿಟ್ಟು, ಅನ್ಯದೇವತೆಗಳನ್ನು ಅವಲಂಬಿಸಿ, ಅವುಗಳಿಗೆ ಅಡ್ಡಬಿದ್ದು ಸೇವಿಸಿದ್ದರಿಂದಲೇ ಯೆಹೋವನು ಈ ಎಲ್ಲಾ ಆಪತ್ತನ್ನು ಬರಮಾಡಿದ್ದಾನೆ’ ಎಂಬ ಉತ್ತರ ಹೇಳುವರು” ಎಂದನು.

10ಅರಸನಾದ ಸೊಲೊಮೋನನು ಇಪ್ಪತ್ತು ವರ್ಷಗಳಲ್ಲಿ ಯೆಹೋವನ ಆಲಯವನ್ನೂ ಮತ್ತು ತನ್ನ ಅರಮನೆಯನ್ನೂ ಕಟ್ಟಿಸಿ ಮುಗಿಸಿದನು.

11ಆನಂತರ ಅವನು ತನಗೆ ಬೇಕಾದಷ್ಟು ದೇವದಾರುಮರಗಳನ್ನೂ, ತುರಾಯಿಮರಗಳನ್ನೂ ಮತ್ತು ಬಂಗಾರವನ್ನೂ ಕೊಟ್ಟಂಥ ತೂರಿನ ಅರಸನಾದ ಹೀರಾಮನಿಗೆ ಗಲಿಲಾಯ ಪ್ರಾಂತ್ಯದಲ್ಲಿ ಇಪ್ಪತ್ತು ಪಟ್ಟಣಗಳನ್ನು ಕೊಟ್ಟನು.

12ಹೀರಾಮನು ತೂರಿನಿಂದ ಬಂದು ಆ ಪಟ್ಟಣಗಳನ್ನು ನೋಡಲು ಅವು ಅವನಿಗೆ ಮೆಚ್ಚಿಗೆಯಾಗಲಿಲ್ಲ.

13ಆದುದರಿಂದ ಅವನು ಸೊಲೊಮೋನನಿಗೆ, “ಸಹೋದರನೇ, ನೀನು ನನಗೆ ಎಂಥಾ ಪಟ್ಟಣಗಳನ್ನು ಕೊಟ್ಟಿರುವೇ?” ಎಂದು ಹೇಳಿ ಅವುಗಳಿಗೆ ಕಾಬೂಲ್ ದೇಶವೆಂದು ಹೆಸರಿಟ್ಟನು. ಅವುಗಳಿಗೆ ಇಂದಿನವರೆಗೂ ಇದೇ ಹೆಸರಿರುತ್ತದೆ.

14ಹೀರಾಮನು ಸೊಲೊಮೋನನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನು ಕೊಟ್ಟನು.

15ಸೊಲೊಮೋನನ ಬಿಟ್ಟೀ ಕೆಲಸದವರು ಕಟ್ಟಿದವುಗಳು ಯಾವುವೆಂದರೆ, ಯೆಹೋವನ ಆಲಯ, ಅರಮನೆ, ಮಿಲ್ಲೋ ಕೋಟೆ, ಯೆರೂಸಲೇಮಿನ ಪೌಳಿಗೋಡೆ, ಹಾಚೋರ್ ಮೆಗಿದ್ದೋ ಮತ್ತು ಗೆಜೆರ್ ಇವುಗಳೇ.

16ಐಗುಪ್ತದ ಅರಸನಾದ ಫರೋಹನು ಗೆಜೆರ್ ಪಟ್ಟಣವನ್ನು ಹಿಡಿದು ಅದಕ್ಕೆ ಬೆಂಕಿಹೊತ್ತಿಸಿ, ಅದರಲ್ಲಿದ್ದ ಕಾನಾನ್ಯರನ್ನು ಹತಿಸಿ, ಅದನ್ನು ವಶಮಾಡಿಕೊಂಡು ಸೊಲೊಮೋನನ ಹೆಂಡತಿಯಾದ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಕೊಟ್ಟಿದ್ದನು.

17ಸೊಲೊಮೋನನು ಗೆಜೆರ್ ಪಟ್ಟಣದ ಹೊರತಾಗಿ ಕೆಳಗಿನ ಬೆತ್ ಹೋರೋನ್,

18ಯೆಹೂದದ ಅರಣ್ಯಪ್ರದೇಶದಲ್ಲಿರುವ ಬಾಲಾತ್ ಮತ್ತು ತಾಮಾರ್,

19ತನ್ನ ಎಲ್ಲಾ ಉಗ್ರಾಣ ಪಟ್ಟಣಗಳು, ಯುದ್ಧ ರಥಗಳನ್ನಿರಿಸುವ ಪಟ್ಟಣಗಳು, ರಾಹುತರ ಪಟ್ಟಣಗಳು ಇವುಗಳನ್ನೂ ಕಟ್ಟಿಸಿದನು. ಇದಲ್ಲದೆ ಯೆರೂಸಲೇಮಿನಲ್ಲಿಯೂ ಲೆಬನೋನಿನಲ್ಲಿಯೂ ತನ್ನ ರಾಜ್ಯದ ಎಲ್ಲಾ ಪ್ರಾಂತ್ಯಗಳಲ್ಲಿಯೂ ತನ್ನ ಮನಸ್ಸಿಗೆ ಬಂದವುಗಳನ್ನೆಲ್ಲಾ ಕಟ್ಟಿಸಿದನು.

20ಇದಲ್ಲದೆ ಅವನು ಇಸ್ರಾಯೇಲರಿಂದ ಸಂಹೃತರಾದ ಅನ್ಯ ಜನರನ್ನೂ, ಕಾನಾನ್ ದೇಶದಲ್ಲಿ ಉಳಿದ ಅಮೋರಿಯ, ಹಿತ್ತಿಯ, ಪೆರಿಜ್ಜೀಯ, ಹಿವ್ವಿಯ, ಯೆಬೂಸಿಯ,

21ಮೊದಲಾದ ಅನ್ಯಜನಾಂಗಗಳ ಸಂತಾನದವರೆಲ್ಲರನ್ನು ತನ್ನ ಕೆಲಸಕ್ಕಾಗಿ ಬಿಟ್ಟೀಹಿಡಿದನು. ಇಂದಿನ ವರೆಗೂ ಅವರು ಬಿಟ್ಟೀಕೆಲಸದವರಾಗಿರುತ್ತಾರೆ.

22ಆದರೆ ಅವನು ಇಸ್ರಾಯೇಲರನ್ನು ಬಿಟ್ಟೀಹಿಡಿಯಲಿಲ್ಲ. ಅವರನ್ನು ಸೈನಿಕರನ್ನಾಗಿಯೂ, ಪರಿವಾರದವರನ್ನಾಗಿಯೂ ಅಧಿಪತಿಗಳನ್ನಾಗಿಯೂ, ಸರದಾರರನ್ನಾಗಿಯೂ, ರಥಾಶ್ವಬಲಗಳ ನಾಯಕರನ್ನಾಗಿಯೂ ನೇಮಿಸಿಕೊಂಡನು.

23ಇದಲ್ಲದೆ ಅವನು ಬಿಟ್ಟೀಕೆಲಸ ಮಾಡುವವರ ಮೇಲೆ ಐನೂರೈವತ್ತು ಮಂದಿ ಇಸ್ರಾಯೇಲರನ್ನು ಅಧಿಕಾರಿಗಳನ್ನಾಗಿಯೂ ನೇಮಿಸಿದನು.

24ಫರೋಹನ ಮಗಳು ದಾವೀದನಗರದಿಂದ ತನಗೋಸ್ಕರ ಕಟ್ಟಿಸಿದ ಅರಮನೆಗೆ ಬಂದಳು. ಅನಂತರ ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿದನು.

25ಸೊಲೊಮೋನನು ಯೆಹೋವನ ಆಲಯದ ಮುಂದೆ ತಾನು ಯೆಹೋವನಿಗೋಸ್ಕರ ಕಟ್ಟಿಸಿದ ಯಜ್ಞವೇದಿಯ ಮೇಲೆ ವರ್ಷಕ್ಕೆ ಮೂರು ಸಾರಿ ಸರ್ವಾಂಗಹೋಮ, ಸಮಾಧಾನಯಜ್ಞ ಇವುಗಳನ್ನು ಸಮರ್ಪಿಸಿ ಧೂಪಹಾಕುತ್ತಿದ್ದನು. ಹೀಗೆ ಅವನು ದೇವಾಲಯವನ್ನು ಕಟ್ಟಿ ಸಂಪೂರ್ಣಗೊಳಿಸಿದನು.

26ಇದಲ್ಲದೆ ಅರಸನಾದ ಸೊಲೊಮೋನನು ಎದೋಮ್ ದೇಶದಲ್ಲಿ ಏಲೋತಿನ ಹತ್ತಿರ ಕೆಂಪುಸಮುದ್ರದ ತೀರದಲ್ಲಿರುವ ಎಚ್ಯೋನ್ಗೆಬೆರಿನಲ್ಲಿ ಹಡಗುಗಳನ್ನು ಕಟ್ಟಿಸಿದನು.

27ಹೀರಾಮನು ಸಮುದ್ರ ಪ್ರಯಾಣದಲ್ಲಿ ನಿಪುಣರಾದ ತನ್ನ ನಾವಿಕರನ್ನು ಸೊಲೊಮೋನನ ಸೇವಕರೊಡನೆ ಆ ಹಡಗುಗಳಲ್ಲಿ ಕಳುಹಿಸಿದನು.

28ಅವರು ಓಫೀರಿಗೆ ಪ್ರಯಾಣಮಾಡಿ ಅಲ್ಲಿಂದ ಅರಸನಾದ ಸೊಲೊಮೋನನಿಗೆ ನಾನೂರಿಪ್ಪತ್ತು ತಲಾಂತು ಬಂಗಾರವನ್ನು ತೆಗೆದುಕೊಂಡು ಬಂದರು.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath