1 ಅರಸುಗಳು 12
ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ
1ರೆಹಬ್ಬಾಮನು ಶೆಕೆಮಿಗೆ ಹೋದನು. ಅಲ್ಲಿ ಎಲ್ಲಾ ಇಸ್ರಾಯೇಲರೂ ಅವನನ್ನು ಅರಸನನ್ನಾಗಿ ಮಾಡುವುದಕ್ಕೆ ಸೇರಿಬಂದಿದ್ದರು.
2ಇದಲ್ಲದೆ ಅರಸನಾದ ಸೊಲೊಮೋನನಿಗೆ ತಪ್ಪಿಸಿಕೊಂಡು ಐಗುಪ್ತಕ್ಕೆ ಓಡಿಹೋಗಿದ್ದ ನೆಬಾಟನ ಮಗನಾದ ಯಾರೊಬ್ಬಾಮನನ್ನು ಇದನ್ನು ಕೇಳಿ ಕರೆಯಿಸಿಕೊಂಡಿದ್ದರು.
3ಯಾರೊಬ್ಬಾಮನು ನಡೆದ ಸಂಗತಿಗಳ ವರ್ತಮಾನವನ್ನು ಕೇಳಿ ಎಲ್ಲಾ ಇಸ್ರಾಯೇಲರೊಡನೆ ರೆಹಬ್ಬಾಮನ ಬಳಿಗೆ ಹೋಗಿ,
4ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದನು. ನಿನ್ನ ತಂದೆಯು ನೇಮಿಸಿದ ಬಿಟ್ಟೀಕೆಲಸವನ್ನು ನೀನು ಕಡಿಮೆ ಮಾಡಿ ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವುದಾದರೆ ನಾವು ನಿನಗೆ ಸೇವೆಮಾಡುತ್ತೇವೆ” ಎಂದು ಹೇಳಿದರು.
5ಅದಕ್ಕೆ ಅವನು, “ನೀವು ಈಗ ಹೋಗಿ ಮೂರು ದಿನಗಳಾದ ನಂತರ ಪುನಃ ಬನ್ನಿರಿ” ಎಂದು ಉತ್ತರಕೊಟ್ಟನು. ಜನರು ಹಿಂದಿರುಗಿ ಹೋದರು.
6ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನ ಕಾಲದಲ್ಲಿ ಮಂತ್ರಿಗಳಾಗಿದ್ದ ಹಿರಿಯರನ್ನು ಕರೆಯಿಸಿ ತಾನು ಜನರಿಗೆ ಕೊಡತಕ್ಕ ಉತ್ತರದ ವಿಷಯದಲ್ಲಿ ಅವರ ಆಲೋಚನೆಯನ್ನು ಕೇಳಿದನು.
7ಅವರು ಅವನಿಗೆ, “ನೀನು ಈ ಹೊತ್ತು ಈ ಜನರ ಮಾತನ್ನು ಕೇಳಿ, ಅವರಿಗೆ ವಿನಯವಾಗಿ ಒಳ್ಳೆಯ ಉತ್ತರ ಕೊಡುವುದಾದರೆ ಅವರು ಯಾವಾಗಲೂ ನಿನ್ನ ಸೇವಕರಾಗಿರುವರು” ಎಂದರು.
8ಆದರೆ ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ ತನ್ನ ಸಂಗಡ ಬೆಳೆದ ತನ್ನ ಮಂತ್ರಿಗಳಾದ ಯೌವನಸ್ಥರನ್ನು ಕರೆಯಿಸಿ,
9“ನನ್ನ ತಂದೆಯು ಹೇರಿದ ನೊಗವನ್ನು ಹಗುರಮಾಡಬೇಕೆಂದು ಬೇಡಿಕೊಳ್ಳುವ ಈ ಜನರಿಗೆ ಯಾವ ಉತ್ತರವನ್ನು ಕೊಡಬೇಕು, ಈ ವಿಷಯದಲ್ಲಿ ನಿಮ್ಮ ಆಲೋಚನೆ ಏನು?” ಎಂದು ಕೇಳಿದನು.
10ಅವರು ಅವನಿಗೆ, “ನಿನ್ನ ತಂದೆಯು ನಮ್ಮ ಮೇಲೆ ಹೇರಿರುವ ನೊಗವನ್ನು ಹಗುರಮಾಡು ಎಂಬುದಾಗಿ ನಿನ್ನನ್ನು ಬೇಡಿಕೊಂಡ ಜನರಿಗೆ ನೀನು, ‘ನನ್ನ ತಂದೆಯ ನಡುವಿಗಿಂತ ನನ್ನ ಕಿರಿಬೆರಳು ದಪ್ಪವಾಗಿದೆ.
11ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹಾಕಿರುವುದು ನಿಜ. ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ. ನಾನಾದರೋ ನಿಮ್ಮನ್ನು ಮುಳ್ಳುಕೊರಡೆಗಳಿಂದ ದಂಡಿಸುವೆನು’ ಎಂಬುದಾಗಿ ಹೇಳಬೇಕು” ಎಂದು ಉತ್ತರಕೊಟ್ಟನು.
12ಯಾರೊಬ್ಬಾಮನೂ ಮತ್ತು ಎಲ್ಲಾ ಜನರೂ ಅರಸನಾದ ರೆಹಬ್ಬಾಮನ ಅಪ್ಪಣೆಯಂತೆ ಮೂರನೆಯ ದಿನದಲ್ಲಿ ತಿರುಗಿ ಅವನ ಬಳಿಗೆ ಬಂದರು.
13ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು. ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿ ಯೌವನಸ್ಥರ ಆಲೋಚನೆಗನುಸಾರವಾಗಿ ಜನರಿಗೆ,
14“ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹಾಕಿರುವುದು ನಿಜ. ಆದರೆ ನಾನು ಅದಕ್ಕೆ ಇನ್ನೂ ಹೆಚ್ಚಿನ ಭಾರವನ್ನು ಕೂಡಿಸುತ್ತೇನೆ, ಅವನು ನಿಮ್ಮನ್ನು ಬಾರುಕೋಲುಗಳಿಂದ ಹೊಡೆದದ್ದು ನಿಜ. ನಾನಾದರೋ ನಿಮ್ಮನ್ನು ಮುಳ್ಳು ಕೊರಡೆಗಳಿಂದ ದಂಡಿಸುವೆನು” ಎಂದು ನುಡಿದನು.
15ಅವನು ಜನರ ಮಾತನ್ನು ಕೇಳದೇ ಹೋದದ್ದು ಯೆಹೋವನಿಂದಲೇ. ಈ ಪ್ರಕಾರ ಯೆಹೋವನು ಶಿಲೋವಿನವನಾದ ಅಹೀಯನ ಮುಖಾಂತರವಾಗಿ ನೆಬಾಟನ ಮಗನಾದ ಯಾರೊಬ್ಬಾಮನಿಗೆ ಹೇಳಿಸಿದ ಮಾತು ನೆರವೇರಿತು.
16ಅರಸನು ತಮ್ಮ ಮಾತನ್ನು ಲಕ್ಷಿಸಲಿಲ್ಲವೆಂದೂ ತಿಳಿದು ಇಸ್ರಾಯೇಲರೆಲ್ಲರೂ ಅವನಿಗೆ, “ದಾವೀದನಲ್ಲಿ ನಮಗೇನು ಪಾಲು? ಇಷಯನ ಮಗನಲ್ಲಿ ನಮಗೇನು ಬಾಧ್ಯತೆ? ಇಸ್ರಾಯೇಲರೇ, ನಿಮ್ಮ ನಿಮ್ಮ ನಿವಾಸಗಳಿಗೆ ಹೋಗಿರಿ, ದಾವೀದನವರೇ ನಿಮ್ಮ ಕುಲವನ್ನು ನೀವೇ ನೋಡಿಕೊಳ್ಳಿರಿ” ಎಂದು ಹೇಳಿ ತಮ್ಮ ತಮ್ಮ ನಿವಾಸಗಳಿಗೆ ಹೋದರು.
17ಯೆಹೂದ್ಯ ಪ್ರಾಂತ್ಯದಲ್ಲಿದ್ದ ಇಸ್ರಾಯೇಲರಾದರೋ ರೆಹಬ್ಬಾಮನ ಅಧೀನದಲ್ಲಿದ್ದರು.
18ರೆಹಬ್ಬಾಮನು ಬಿಟ್ಟೀ ಕೆಲಸದವರ ಮೇಲ್ವಿಚಾರಕನಾದ ಅದೋರಾಮನನ್ನು ಇಸ್ರಾಯೇಲರ ಬಳಿಗೆ ಕಳುಹಿಸಲು ಅವರು ಅವನನ್ನು ಕಲ್ಲೆಸೆದು ಕೊಂದರು. ಅರಸನಾದ ರೆಹಬ್ಬಾಮನು ಬೇಗನೆ ರಥವನ್ನೇರಿ ಯೆರೂಸಲೇಮಿಗೆ ಓಡಿಹೋದನು.
19ಇಸ್ರಾಯೇಲರು ಅಂದಿನಿಂದ ಇಂದಿನವರೆಗೂ ದಾವೀದನ ಕುಟುಂಬದವರೊಡನೆ ಸಮಾಧಾನವಾಗಲೇ ಇಲ್ಲ.
20ಯಾರೊಬ್ಬಾಮನು ಹಿಂತಿರುಗಿ ಬಂದಿದ್ದಾನೆಂಬ ವರ್ತಮಾನವು ಇಸ್ರಾಯೇಲರಿಗೆ ತಿಳಿದಾಗ ಅವರೆಲ್ಲರೂ ಅವನನ್ನು ನೆರೆದ ಸಭೆಯ ಮುಂದೆ ಕರೆಯಿಸಿ ತಮ್ಮ ಅರಸನನ್ನಾಗಿ ನೇಮಿಸಿಕೊಂಡರು. ದಾವೀದನ ಕುಟುಂಬದವರನ್ನು ಯೆಹೂದ ಕುಲವೇ ಹೊರತು ಬೇರೆ ಯಾವ ಕುಲವೂ ಹಿಂಬಾಲಿಸಲಿಲ್ಲ.
21ಸೊಲೊಮೋನನ ಮಗನಾದ ರೆಹಬ್ಬಾಮನು ಯೆರೂಸಲೇಮನ್ನು ತಲುಪಿದ ನಂತರ ಇಸ್ರಾಯೇಲರಿಗೆ ವಿರೋಧವಾಗಿ ಯುದ್ಧಮಾಡುವುದಕ್ಕೂ ರಾಜ್ಯವನ್ನು ತಿರುಗಿ ತನಗೆ ವಶಪಡಿಸಿಕೊಳ್ಳುವುದಕ್ಕೂ ಯೆಹೂದ ಬೆನ್ಯಾಮೀನ್ ಕುಲಗಳಿಂದ ಲಕ್ಷದ ಎಂಬತ್ತು ಸಾವಿರ ಶ್ರೇಷ್ಠ ಸೈನಿಕರನ್ನು ಕೂಡಿಸಿದನು.
22ಆಗ ದೇವರ ಮನುಷ್ಯನಾದ ಶೆಮಾಯನಿಗೆ ದೈವೋತ್ತರವುಂಟಾಯಿತು.
23“ನೀನು ಹೋಗಿ, ಸೊಲೊಮೋನನ ಮಗನೂ ಯೆಹೂದದ ಅರಸನೂ ಆದ ರೆಹಬ್ಬಾಮನಿಗೂ, ಯೆಹೂದ ಬೆನ್ಯಾಮೀನ್ ಕುಲಗಳವರಿಗೂ ಮತ್ತು ಉಳಿದ ಜನರಿಗೂ
24‘ಯೆಹೋವನ ಮಾತನ್ನು ಕೇಳಿರಿ, ನೀವು ನಿಮ್ಮ ಸಹೋದರರಾದ ಇಸ್ರಾಯೇಲರೊಡನೆ ಯುದ್ಧಮಾಡುವುದಕ್ಕೆ ಹೋಗಬಾರದು. ಎಲ್ಲರೂ ಹಿಂತಿರುಗಿ ಹೋಗಿರಿ. ಈ ಕಾರ್ಯವು ಯೆಹೋವನಿಂದಾಗಿದೆ’ ಎಂದು ಹೇಳಬೇಕು” ಎಂಬ ಯೆಹೋವನ ಮಾತನ್ನು ಜನರಿಗೆ ಹೇಳಿದನು. ಆಗ ಅವರು ಯೆಹೋವನ ಮಾತನ್ನು ಕೇಳಿ ವಿಧೇಯರಾಗಿ ಹಿಂದಿರುಗಿ ಹೋದರು.
25ಯಾರೊಬ್ಬಾಮನು ಎಫ್ರಾಯೀಮ್ ಬೆಟ್ಟದ ಸೀಮೆಯಲ್ಲಿನ ಶೆಕೆಮ್ ಪಟ್ಟಣವನ್ನು ಭದ್ರಪಡಿಸಿ ಅಲ್ಲಿ ವಾಸಿಸಿದನು. ಅಲ್ಲಿಂದ ಪೆನೂವೇಲಿಗೆ ಹೋಗಿ ಅದನ್ನೂ ಭದ್ರಪಡಿಸಿದನು.
26ಅವನು ತನ್ನ ಮನಸ್ಸಿನಲ್ಲಿ, “ರಾಜ್ಯವು ಪುನಃ ದಾವೀದನ ಕುಟುಂಬದವರಿಗೆ ಆಗುವುದೋ ಏನೋ,
27ಜನರು ಯೆರೂಸಲೇಮಿನಲ್ಲಿರುವ ಯೆಹೋವನ ಆಲಯಕ್ಕೆ ಯಜ್ಞಸಮರ್ಪಣೆಗಾಗಿ ಹೋಗುವುದಾದರೆ, ಅವರ ಮನಸ್ಸು ಅವರ ಒಡೆಯನೂ ಯೆಹೂದದ ಅರಸನೂ ಆದ ರೆಹಬ್ಬಾಮನ ಕಡೆಗೆ ತಿರುಗಿತು. ಅವರು ನನ್ನನ್ನು ಕೊಂದು ಅವನ ಬಳಿಗೆ ಹೋದಾರು” ಅಂದುಕೊಂಡನು.
28ಅವನು ಬಹಳವಾಗಿ ಆಲೋಚಿಸಿ, ಕಡೆಯಲ್ಲಿ ಬಂಗಾರದ ಎರಡು ಬಸವನ ಮೂರ್ತಿಗಳನ್ನು ಮಾಡಿಸಿ ಇಸ್ರಾಯೇಲರಿಗೆ, “ನೀವು ಜಾತ್ರೆಗಾಗಿ ಯೆರೂಸಲೇಮಿಗೆ ಹೋದದ್ದು ಸಾಕಾಯಿತು, ಇಗೋ, ನಿಮ್ಮನ್ನು ಐಗುಪ್ತದಿಂದ ಕರೆತಂದ ದೇವರುಗಳು ಇಲ್ಲಿರುತ್ತವೆ” ಎಂದು ಹೇಳಿದನು.
29ನಂತರ ಅವನು ಅವುಗಳಲ್ಲಿ ಒಂದನ್ನು ಬೇತೇಲಿನಲ್ಲಿರಿಸಿ, ಇನ್ನೊಂದನ್ನು ದಾನಿಗೆ ಕಳುಹಿಸಿದನು.
30ಇದು ಪಾಪಕ್ಕೆ ಕಾರಣವಾಯಿತು. ಜನರು ಈ ಎರಡನೆಯ ವಿಗ್ರಹವನ್ನು ಮೆರವಣಿಗೆಯಾಗಿ ದಾನಿಗೆ ಒಯ್ದರು.
31ಇದಲ್ಲದೆ ಅವನು ಪೂಜಾಗಿರಿಗಳ ಮೇಲೆ ಗುಡಿಗಳನ್ನು ಕಟ್ಟಿಸಿ, ಲೇವಿಯರಲ್ಲದ ಸಾಮಾನ್ಯ ಜನರನ್ನು ಯಾಜಕರನ್ನಾಗಿ ನೇಮಿಸಿದನು.
32ಅವನು ಎಂಟನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ, “ಬೇತೇಲಿನಲ್ಲಿ ಯೆಹೂದ ದೇಶದ ಜಾತ್ರೆಗೆ ಸರಿಯಾದ ಜಾತ್ರೆಯು ನಡೆಯಬೇಕು” ಎಂದು ಅಪ್ಪಣೆ ಮಾಡಿ, ತಾನು ಅಲ್ಲಿಗೆ ಹೋಗಿ ಅಲ್ಲಿ ನಿಲ್ಲಿಸಿದ ಬಸವನ ಮೂರ್ತಿಗಳಿಗೋಸ್ಕರ ಯಜ್ಞವೇದಿಯ ಮೇಲೆ ಯಜ್ಞ ಮಾಡಿದನು. ತಾನು ಏರ್ಪಡಿಸಿದ ಪೂಜಾಸ್ಥಳಗಳ ಯಾಜಕರನ್ನು ಬೇತೇಲಿನ ದೇವಸ್ಥಾನದ ಸೇವೆಗೆ ನೇಮಿಸಿದನು.
33ಇಸ್ರಾಯೇಲರು ಎಂಟನೆಯ ತಿಂಗಳ ಹದಿನೈದನೆಯ ದಿನದಲ್ಲಿ ಹಬ್ಬವನ್ನಾಚರಿಸಬೇಕೆಂದು ಯಾರೊಬ್ಬಾಮನು ಸ್ವ ಇಚ್ಛೆಯಿಂದ ಗೊತ್ತುಮಾಡಿ ಆ ಸಮಯಕ್ಕೆ ತಾನೂ ಬೇತೇಲಿನ ಯಜ್ಞವೇದಿಯ ಬಳಿಗೆ ಹೋಗಿ ಧೂಪಹಾಕುವುದಕ್ಕಾಗಿ ಅದರ ಮೆಟ್ಟಲುಗಳನ್ನು ಹತ್ತುತ್ತಿದ್ದನು.
WEBREATH · 11:11
«He himself gives everyone life and breath and everything else» — Acts 17:25
Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.
WEBREATH — the Minute at 11:11, your own local time — we are One Breath