ಕ್ರಿಶ್ಚಿಯನ್ ಧರ್ಮ
ಹಿಂದೆ

1 ಕೊರಿಂಥದವರಿಗೆ 15

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಸಹೋದರರೇ, ನಾನು ನಿಮಗೆ ತಿಳಿಸಿದ ಸುವಾರ್ತೆಯನ್ನು ನಿಮ್ಮ ನೆನಪಿಗೆ ತರುತ್ತೇನೆ; ನೀವು ಅದನ್ನು ಸ್ವೀಕರಿಸಿ, ಅದರಲ್ಲಿ ನಿಂತಿದ್ದೀರಿ.

2ನಾನು ನಿಮಗೆ ಸಾರಿದ ಸುವಾರ್ತೆಯನ್ನು ನೀವು ದೃಢವಾಗಿ ಹಿಡಿದುಕೊಂಡರೆ ನಿಮಗೆ ರಕ್ಷಣೆಯಾಗುತ್ತದೆ. ಇಲ್ಲದಿದ್ದರೆ ನಿಮ್ಮ ನಂಬಿಕೆಯು ನಿರರ್ಥಕವಾಗುತ್ತದೆ.

3ನಾನು ಸಹ ಕಲಿತುಕೊಂಡ ಮೊದಲನೆಯ ಸಂಗತಿಗಳೊಳಗೆ ಪ್ರಮುಖವಾದ ಸಂಗತಿಯನ್ನೇ ನಿಮಗೆ ತಿಳಿಸಿದ್ದೇನೆ ಅದೇನೆಂದರೆ ಧರ್ಮಶಾಸ್ತ್ರದಲ್ಲಿ ತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು;

4ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು.

5ಅನಂತರ ಕೇಫನಿಗೂ ತರುವಾಯ ಆತನು ಹನ್ನೆರಡು ಜನ ಅಪೊಸ್ತಲರಿಗೂ ಕಾಣಿಸಿಕೊಂಡನು.

6ತರುವಾಯ ಒಂದೇ ಸಮಯದಲ್ಲಿ ಐನೂರಕ್ಕಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನವರೆಗೂ ಜೀವಿಸುತ್ತಿದ್ದಾರೆ, ಆದರೆ ಕೆಲವರು ನಿದ್ರೆ ಹೋಗಿದ್ದಾರೆ.

7ತರುವಾಯ ಆತನು ಯಾಕೋಬನಿಗೂ ಅನಂತರ ಎಲ್ಲಾ ಅಪೊಸ್ತಲರಿಗೂ ಕಾಣಿಸಿಕೊಂಡನು.

8ಕಟ್ಟಕಡೆಗೆ, ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.

9ನಾನಂತೂ ಅಪೊಸ್ತಲರಲ್ಲಿ ಕನಿಷ್ಠನು; ನಾನು ದೇವರ ಸಭೆಯನ್ನು ಹಿಂಸೆಪಡಿಸಿದ್ದರಿಂದ ಅಪೊಸ್ತಲೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ.

10ಆದರೆ ನಾನು ಈಗ ಎಂಥವನಾಗಿದ್ದೇನೊ ಅದು ದೇವರ ಕೃಪೆಯಿಂದಲೇ ಮತ್ತು ಆತನ ಕೃಪೆಯು ನನ್ನಲ್ಲಿ ನಿಷ್ಫಲವಾಗಲಿಲ್ಲ. ನಾನು ಅವರೆಲ್ಲರಿಗಿಂತಲೂ ಹೆಚ್ಚಾಗಿ ಪ್ರಯಾಸಪಟ್ಟೆನು. ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿರುವ ದೇವರ ಕೃಪೆಯೇ.

11ಆದ್ದರಿಂದ ನಾನಾದರೇನು ಅಥವಾ ಅವರಾದರೇನು, ಈ ರೀತಿಯಾಗಿ ನಾವೆಲ್ಲರೂ ಸುರ್ವಾತೆಯನ್ನು ಸಾರಿದ್ದೇವೆ; ಅದನ್ನು ನೀವು ನಂಬಿದಿರಿ.

12ಕ್ರಿಸ್ತನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೆಂದು ಸಾರುತ್ತಿರುವಲ್ಲಿ, ನಿಮ್ಮೊಳಗೆ ಕೆಲವರು ಸತ್ತವರಿಗೆ ಪುನರುತ್ಥಾನವೇ ಇಲ್ಲವೆಂದು ಹೇಳುವುದಾದರೂ ಹೇಗೆ?

13ಸತ್ತವರಿಗೆ ಪುನರುತ್ಥಾನವಿಲ್ಲವೆಂಬುದು ನಿಜವಾಗಿದ್ದರೆ ಕ್ರಿಸ್ತನು ಸಹ ಎದ್ದುಬರಲಿಲ್ಲ.

14ಕ್ರಿಸ್ತನೂ ಎದ್ದುಬರಲಿಲ್ಲವಾದರೆ ನಮ್ಮ ಬೋಧನೆಯು ವ್ಯರ್ಥ ಮತ್ತು ನಿಮ್ಮ ನಂಬಿಕೆಯು ಸಹ ವ್ಯರ್ಥವಾದದ್ದು.

15ಇದಲ್ಲದೆ ಸತ್ತವರು ಎದ್ದುಬರುವುದಿಲ್ಲವೆಂಬುದು ನಿಜವಾಗಿದ್ದ ಪಕ್ಷದಲ್ಲಿ ದೇವರು ಕ್ರಿಸ್ತನನ್ನು ಎಬ್ಬಿಸಲೇ ಇಲ್ಲ; ಎಬ್ಬಿಸಿದನೆಂದು ಸಾಕ್ಷಿಕೊಟ್ಟ ನಾವು ದೇವರ ವಿಷಯವಾಗಿ ಸುಳ್ಳುಸಾಕ್ಷಿ ಹೇಳಿದವರಾಗಿ ಕಂಡುಬಂದೆವು.

16ಸತ್ತವರು ಎದ್ದು ಬರುವುದಿಲ್ಲವಾದರೆ ಕ್ರಿಸ್ತನೂ ಎದ್ದು ಬರಲಿಲ್ಲ.

17ಕ್ರಿಸ್ತನು ಎದ್ದುಬರಲಿಲ್ಲವಾದರೆ ನಿಮ್ಮ ನಂಬಿಕೆಯು ನಿರರ್ಥಕವಾಗಿದೆ, ಹಾಗೂ ನೀವು ಇನ್ನೂ ನಿಮ್ಮ ಪಾಪಗಳಲ್ಲಿಯೇ ಇದ್ದೀರಿ.

18ಇದು ಮಾತ್ರವಲ್ಲದೆ ಕ್ರಿಸ್ತನಲ್ಲಿ ನಿದ್ರೆಹೋದವರು ನಾಶವಾದರು ಎಂದರ್ಥ.

19ಕ್ರಿಸ್ತನಲ್ಲಿ ನಮಗಿರುವ ನಿರೀಕ್ಷೆಯು ಕೇವಲ ಈ ಬದುಕಿಗೆ ಮಾತ್ರ ಸೀಮಿತವಾಗಿದ್ದರೆ ನಾವು ಎಲ್ಲಾ ಮನುಷ್ಯರಿಗಿಂತಲೂ ಹೀನರಾಗುತ್ತೇವೆ.

20ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದನು. ಸತ್ತುಹೋದವರಲ್ಲಿ ಪ್ರಥಮಫಲವಾದನು.

21ಮನುಷ್ಯನ ಮೂಲಕ ಮರಣ ಉಂಟಾದ ಕಾರಣ, ಮನುಷ್ಯನ ಮೂಲಕವೇ ಸತ್ತವರಿಗೆ ಪುನರುತ್ಥಾನವುಂಟಾಗಿದೆ.

22ಆದಾಮನಿಂದ ಹೇಗೆ ಎಲ್ಲರೂ ಸಾಯುವವರಾದರೋ ಅದೇ ಪ್ರಕಾರ ಯೇಸು ಕ್ರಿಸ್ತನಿಂದ ಎಲ್ಲರೂ ಬದುಕುವವರಾದರು.

23ಆದರೆ ಪ್ರತಿಯೊಬ್ಬನು ತನ್ನ ಕ್ರಮದಲ್ಲಿ ಎದ್ದುಬರುವನು. ಕ್ರಿಸ್ತನು ಪ್ರಥಮಫಲವಾದನು; ತರುವಾಯ ಕ್ರಿಸ್ತನಿಗೆ ಸೇರಿದವರು ಆತನ ಬರೋಣದಲ್ಲಿ ಜೀವವುಳ್ಳವರಾಗಿ ಎದ್ದು ಬರುವರು.

24ಅನಂತರ ಆತನು ಎಲ್ಲಾ ದೊರೆತನವನ್ನೂ, ಎಲ್ಲಾ ಅಧಿಕಾರವನ್ನೂ ಮತ್ತು ಬಲವನ್ನೂ ನಿರ್ಮೂಲಗೊಳಿಸಿ ತಂದೆ ದೇವರಿಗೆ ರಾಜ್ಯವನ್ನು ಒಪ್ಪಿಸಿಕೊಡುವಾಗ ಸಮಾಪ್ತಿಯಾಗುವುದು.

25ಯಾಕೆಂದರೆ ತಾನು ಎಲ್ಲಾ ವಿರೋಧಿಗಳನ್ನು ತನ್ನ ಪಾದಗಳ ಕೆಳಗೆ ಹಾಕಿಕೊಳ್ಳುವ ತನಕ ರಾಜ್ಯವನ್ನಾಳುವುದು ಅವಶ್ಯ.

26ನಿರ್ಮೂಲವಾಗುವ ಕಡೆ ಶತ್ರುವು ಮರಣವಾಗಿದೆ.

27“ದೇವರು ಸಮಸ್ತವನ್ನೂ ಆತನ ಪಾದಗಳ ಕೆಳಗೆ ಹಾಕಿ ಆತನಿಗೆ ಅಧೀನಮಾಡಿದ್ದಾನೆ.” ಆದರೆ “ಸಮಸ್ತವೂ ಆತನಿಗೆ ಅಧೀನಮಾಡಲ್ಪಟ್ಟಿದೆ” ಎಂದು ಹೇಳುವಾಗ ಸಮಸ್ತವನ್ನು ಅಧೀನಮಾಡಿಕೊಟ್ಟಾತನು ಅದರಲ್ಲಿ ಸೇರಲಿಲ್ಲವೆಂಬುದು ಸ್ಪಷ್ಟವಾಗಿದೆ.

28ಸಮಸ್ತವೂ ಆತನಿಗೆ ಅಧೀನವಾದ ಮೇಲೆ ಮಗನು ಸಮಸ್ತವನ್ನೂ ತನಗೆ ಅಧೀನಮಾಡಿ ಕೊಟ್ಟಾತನಿಗೆ ತಾನೇ ಅಧೀನನಾಗುವನು; ಹೀಗೆ ದೇವರು ಸಮಸ್ತರಲ್ಲಿಯೂ ಸಮಸ್ತವೂ ಆಗುವನು.

29ಸತ್ತವರಿಗೆ ಪುನರುತ್ಥಾನವಿಲ್ಲವಾದರೆ ಸತ್ತವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುವವರು ಏನು ಮಾಡುವರು? ಸತ್ತವರು ಎದ್ದು ಬರುವುದೇ ಇಲ್ಲ ಎನ್ನುವುದು ನಿಜವಾಗಿದ್ದರೆ ಯಾಕೆ ಅವರಿಗೋಸ್ಕರ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೆ.

30ನಾವು ಸಹ ಯಾಕೆ ಪ್ರತಿ ಗಳಿಗೆಯಲ್ಲಿಯೂ ಭಯದಲ್ಲಿದ್ದೇವೆ?

31ಪ್ರಿಯರೇ, ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿ ನಿಮ್ಮನ್ನು ಕುರಿತಾಗಿ ನನಗಿರುವ ಹೆಮ್ಮೆಯ ನಿಮಿತ್ತ ನಾನು ದಿನಾಲು ಸಾಯುತ್ತಲಿದ್ದೇನೆ ಎಂದು ಹೇಳುತ್ತೇನೆ.

32ನಾನು ಎಫೆಸದಲ್ಲಿ ಮೃಗ ಯುದ್ಧ ಮಾಡಿದ್ದು ಕೇವಲ ಮಾನುಷಾಭಿಪ್ರಾಯದಿಂದಾದರೆ ನನಗೇನು ಪ್ರಯೋಜನ? ಸತ್ತವರು ಎದ್ದು ಬರುವುದಿಲ್ಲವಾದರೆ, ನಾವು ತಿನ್ನೋಣ, ಕುಡಿಯೋಣ, ನಾಳೆ ಸಾಯುತ್ತೇವಲ್ಲಾ.

33ಮೋಸಹೋಗಬೇಡಿರಿ; “ಕೆಟ್ಟ ಸಹವಾಸವು ಸದಾಚಾರವನ್ನು ಕೆಡಿಸುತ್ತವೆ.”

34ಗಂಭೀರವಾಗಿ ಯೋಚಿಸಿರಿ! ನೀತಿವಂತರಾಗಿ ಎಚ್ಚರದಿಂದಿರಿ. ಪಾಪಮಾಡಬೇಡಿರಿ. ಕೆಲವರಿಗೆ ದೇವರ ಕುರಿತಾಗಿ ಜ್ಞಾನವೇ ಇಲ್ಲ; ನಿಮಗೆ ನಾಚಿಕೆ ಆಗಲೆಂದೇ ಇದನ್ನು ಹೇಳುತ್ತಿದ್ದೇನೆ.

35“ಸತ್ತವರನ್ನು ಮರಳಿ ಜೀವಂತರಾಗಿಸುವುದು ಹೇಗೆ ಸಾಧ್ಯ? ಎಂಥ ದೇಹದಿಂದ ಎದ್ದುಬರುತ್ತಾರೆ?” ಎಂದು ಯಾರಾದರೂ ಪ್ರಶ್ನಿಸಬಹುದು.

36ಮೂರ್ಖನೇ; ನೀನು ಬಿತ್ತುವ ಬೀಜವು ಸಾಯದಿದ್ದರೆ, ಅದು ಜೀವ ತಾಳುವುದುಂಟೆ? ಇಲ್ಲ.

37ನೋಡು; ಒಂದು ವೇಳೆ ಗೋದಿಯಕಾಳನ್ನಾಗಲಿ ಬೇರೆ ಯಾವುದೇ ಬೀಜವನ್ನಾಗಲಿ ಬಿತ್ತುವಾಗ ಬರೀ ಕಾಳನ್ನೇ ಹೊರತು ಮುಂದೆ ಬೆಳೆಯಬೇಕಾದ ಗಿಡವನ್ನು ಬಿತ್ತುವುದಿಲ್ಲ.

38ಆದರೆ ದೇವರು ತನ್ನ ಇಷ್ಟದಂತೆ ಅದಕ್ಕೆ ದೇಹವನ್ನು ಕೊಡುತ್ತಾನೆ. ಒಂದೊಂದು ಬೀಜಕ್ಕೂ ಅದಕ್ಕೆ ತಕ್ಕ ದೇಹವನ್ನು ಕೊಡುತ್ತಾನೆ.

39ಎಲ್ಲಾ ಶರೀರಗಳು ಒಂದೇ ವಿಧವಾದವುಗಳಲ್ಲ; ಮನುಷ್ಯನ ಶರೀರ ಬೇರೆ, ಪಶುಗಳ ಶರೀರ ಬೇರೆ, ಪಕ್ಷಿಗಳ ಶರೀರ ಬೇರೆ, ಮೀನುಗಳದು ಬೇರೆ.

40ಇದಲ್ಲದೆ ಸ್ವರ್ಗೀಯ ಶರೀರಗಳುಂಟು, ಭೂಲೋಕದ ಶರೀರಗಳುಂಟು, ಆದರೆ ಪರಲೋಕದ ಶರೀರಗಳ ಮಹಿಮೆ ಬೇರೆ, ಭೂಲೋಕದ ಶರೀರಗಳ ಮಹಿಮೆ ಬೇರೆ.

41ಸೂರ್ಯನ ತೇಜಸ್ಸು ಒಂದು ವಿಧವಾದರೆ, ಚಂದ್ರನ ಪ್ರಕಾಶವೇ ಮತ್ತೊಂದು ವಿಧ, ಹಾಗೆಯೇ ನಕ್ಷತ್ರ ನಕ್ಷತ್ರಗಳ ಪ್ರಕಾಶವು ಸಹ ವೈವಿಧ್ಯವಾದುದು.

42ಸತ್ತವರಿಗಾಗುವ ಪುನರುತ್ಥಾನವು ಅದೇ ಪ್ರಕಾರವಾಗಿರುವುದು. ಬಿತ್ತುವಂಥದ್ದು ಅಳಿದುಹೊಗುವಂಥದ್ದು. ಪುನರುತ್ಥಾನವಾಗುವಂಥದ್ದು ಅಮರವಾದದ್ದು.

43ಹೀನಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಮಹಿಮೆಯಲ್ಲಿ ಪುನರುತ್ಥಾನಹೊಂದುವುದು; ನಿರ್ಬಲಾವಸ್ಥೆಯಲ್ಲಿ ಬಿತ್ತಲ್ಪಡುತ್ತದೆ, ಬಲಹೊಂದಿ ಪುನರುತ್ಥಾನಹೊಂದುವುದು;

44ಬಿತ್ತಿದ್ದು ಪ್ರಾಕೃತ ದೇಹವಾಗಿ ಬಿತ್ತಲ್ಪಡುತ್ತದೆ, ಪುನರುತ್ಥಾನಹೊಂದುವಂಥದ್ದು ಆತ್ಮೀಕ ದೇಹ. ಪ್ರಾಕೃತದೇಹ ಇರುವುದಾದರೆ ಆತ್ಮೀಕ ದೇಹವೂ ಇರುವುದು ಸತ್ಯ.

45“ಮೊದಲನೆಯ ಮನುಷ್ಯನಾದ ಆದಾಮನು ಜೀವ ಪಡೆದ ವ್ಯಕ್ತಿ” ಎಂಬುದಾಗಿ ಪವಿತ್ರ ಗ್ರಂಥದಲ್ಲಿ ಬರೆದದೆಯಲ್ಲಾ. ಕಡೆ ಆದಾಮನಾದರೋ ಜೀವ ಕೊಡುವ ಆತ್ಮನಾದನು.

46ಆತ್ಮೀಕವಾದದ್ದು ಮೊದಲು ಬಂದದ್ದಲ್ಲಾ, ಪ್ರಾಕೃತವಾದದ್ದು ಮೊದಲನೆಯದು; ಅನಂತರ ಆತ್ಮೀಕವಾದದ್ದು.

47ಮೊದಲನೆಯ ಮನುಷ್ಯನು ಮಣ್ಣಿನಿಂದ ಮಾಡಲ್ಪಟ್ಟವನು; ಭೂಮಿಗೆ ಸೇರಿದವನು, ಎರಡನೆಯ ಮನುಷ್ಯನು ಪರಲೋಕದಿಂದ ಬಂದವನು.

48ಮಣ್ಣಿನಿಂದ ಹುಟ್ಟಿದವನು ಎಂಥವನೋ ಮಣ್ಣಿಗೆ ಸಂಬಂಧಪಟ್ಟವರೂ ಅಂಥವರೇ ಆಗಿರುತ್ತಾರೆ; ಪರಲೋಕದಿಂದ ಬಂದಾತನು ಎಂಥವನೋ ಪರಲೋಕಕ್ಕೆ ಸಂಬಂಧಪಟ್ಟವರೂ ಅಂಥವರೇ.

49ನಾವು ಮಣ್ಣಿನಿಂದ ಹುಟ್ಟಿದವನ ಸಾರೂಪ್ಯವನ್ನು ಧರಿಸಿಕೊಂಡಿರುವ ಪ್ರಕಾರ ಪರಲೋಕದಿಂದ ಬಂದಾತನ ಸಾರೂಪ್ಯವನ್ನೂ ಧರಿಸಿಕೊಳ್ಳಬೇಕು.

50ಸಹೋದರರೇ, ನಾನು ಹೇಳುವುದೇನಂದರೆ, ರಕ್ತ ಮಾಂಸಗಳು ದೇವರ ರಾಜ್ಯವನ್ನು ವಶಪಡಿಸಿಕೊಳ್ಳಲಾರದು; ಅಂತೆಯೇ, ಅಳಿದುಹೋಗುವಂಥದ್ದು ಅಮರತ್ವಕ್ಕೆ ಬಾಧ್ಯವಾಗಲು ಸಾಧ್ಯವಿಲ್ಲ.

51ನೋಡಿರಿ! ಇದುವರೆಗೆ ಗುಪ್ತವಾಗಿದ್ದ ಸಂಗತಿಯನ್ನು ನಾನು ನಿಮಗೆ ತಿಳಿಸುತ್ತೇನೆ, ನಾವೆಲ್ಲರೂ ಸಾಯುವುದಿಲ್ಲ, ಮಾರ್ಪಡುವೆವು.

52ಕಡೆ ತುತ್ತೂರಿಯ ಧ್ವನಿಯು ಮೊಳಗುವಲ್ಲಿ, ಕ್ಷಣಮಾತ್ರದಲ್ಲಿ, ರೆಪ್ಪೆಬಡಿಯುವಷ್ಟರೊಳಗಾಗಿ ನಾವೆಲ್ಲರೂ ಮಾರ್ಪಡುವೆವು. ಹೌದು, ತುತ್ತೂರಿಯು ಮೊಳಗಿ ಸತ್ತವರು ನಿರ್ಲಯರಾಗಿ ಎಬ್ಬಿಸಲ್ಪಡುವರು, ನಾವು ರೂಪಾಂತರ ಹೊಂದುವೆವು.

53ನಶಿಸುವಂಥ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಳ್ಳುವುದೂ, ಮರಣಕ್ಕೆ ಅಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಳ್ಳುವುದೂ ಅಗತ್ಯವಾಗಿದೆ.

54ನಶಿಸಿಹೋಗುವ ಈ ದೇಹವು ನಿರ್ಲಯತ್ವವನ್ನು ಧರಿಸಿಕೊಂಡಾಗ ಮರಣಾಧೀನವಾಗಿರುವ ಈ ದೇಹವು ಅಮರತ್ವವನ್ನು ಧರಿಸಿಕೊಂಡಾಗ ಬರೆದಿರುವ ಮಾತು ನೆರವೇರುವುದು.

55“ಹೇ! ಮರಣವೇ ನಿನ್ನ ಜಯವೆಲ್ಲಿ? ಹೇ! ಮರಣವೇ ನಿನ್ನ ವಿಷದ ಕೊಂಡಿ ಎಲ್ಲಿ?”

56ಸಾವಿನ ವಿಷಕೊಂಡಿ ಪಾಪವೇ; ಪಾಪದ ಶಕ್ತಿಯ ಆಧಾರವು ಧರ್ಮಶಾಸ್ತ್ರವಿಧಿಗಳೇ.

57ಆದರೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ನಮಗೆ ಜಯವನ್ನು ಕೊಡುವ ದೇವರಿಗೆ ಸದಾಕಾಲ ಮಹಿಮೆಯುಂಟಾಗಲಿ.

58ಆದ್ದರಿಂದ, ನನ್ನ ಸಹೋದರರೇ, ಸ್ಥಿರಚಿತ್ತರಾಗಿಯೂ, ನಿಶ್ಚಲರಾಗಿರಿ. ಯಾಕೆಂದರೆ ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವುದಿಲ್ಲ. ಅದನ್ನು ತಿಳಿದು ಕರ್ತನ ಕೆಲಸವನ್ನು ಸದಾ ಅತ್ಯಾಸಕ್ತಿಯಿಂದಲೂ ಮತ್ತು ನಿರಂತರ ಶ್ರದ್ಧೆಯುಳ್ಳವರಾಗಿಯೂ ಮಾಡುವವರಾಗಿರಿ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath