ಕ್ರಿಶ್ಚಿಯನ್ ಧರ್ಮ
ಹಿಂದೆ

1 ಪೂರ್ವಕಾಲವೃತ್ತಾಂತ 19

ನಿಮ್ಮ ಭಾಷೆಯಲ್ಲಿ ಇನ್ನೂ ಯಾವುದೇ ಅನುವಾದವಿಲ್ಲ — ಇಂಗ್ಲಿಷ್ ತೋರಿಸಲಾಗುತ್ತಿದೆ

1ಇದಾದನಂತರ ಅಮ್ಮೋನಿಯರ ಅರಸನಾದ ನಾಹಾಷನು ಸತ್ತನು. ಅವನಿಗೆ ಬದಲಾಗಿ ಅವನ ಮಗನು ಅರಸನಾದನು.

2ದಾವೀದನು, “ನಾಹಾಷನು ನನಗೆ ದಯೆತೋರಿಸಿದ್ದರಿಂದ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು” ಅಂದುಕೊಂಡು ಪಿತೃಶೋಕದಲ್ಲಿದ್ದ ಹಾನೂನನನ್ನು ಸಂತೈಸುವುದಕ್ಕೋಸ್ಕರ ದೂತರನ್ನು ಕಳುಹಿಸಿದನು. ದಾವೀದನ ಸೇವಕರು ಹಾನೂನನನ್ನು ಸಂತೈಸುವುದಕ್ಕೋಸ್ಕರ ಅಮ್ಮೋನಿಯರ ದೇಶಕ್ಕೆ ಬಂದರು.

3ಆಗ ಅಮ್ಮೋನ್ ಪ್ರಭುಗಳು ಹಾನೂನನಿಗೆ, “ದಾವೀದನು ನಿನ್ನ ಬಳಿಗೆ ಸಂತೈಸುವವರನ್ನು ಕಳುಹಿಸಿದ್ದರಿಂದ ಅವನು ನಿನ್ನ ತಂದೆಯನ್ನು ಸನ್ಮಾನಿಸುವವನಾಗಿದ್ದಾನೆಂದು ನೆನಸುತ್ತೀಯೋ? ಅವನ ಆಳುಗಳು ದೇಶವನ್ನು ಸಂಚರಿಸಿ ನೋಡಿ, ಅದನ್ನು ಸ್ವಾಧೀನಮಾಡಿಕೊಳ್ಳಬೇಕೆಂದು ಬಂದಿದ್ದಾರೆ” ಎಂದು ಹೇಳಿದರು.

4ಆದುದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿಸಿ, ಗಡ್ಡದ ಅರ್ಧ ಭಾಗವನ್ನು ಬೋಳಿಸಿ, ಅವರ ಸೊಂಟದ ಕೆಳಭಾಗದ ನಿಲುವಂಗಿಗಳನ್ನು ಕತ್ತರಿಸಿ ಕಳುಹಿಸಿಬಿಟ್ಟನು.

5ಅವರು ಹೋಗಿ ಈ ವರ್ತಮಾನವನ್ನು ದಾವೀದನಿಗೆ ಹೇಳಿಕಳುಹಿಸಿದಾಗ ಅವನು ಬಹಳ ಅವಮಾನಹೊಂದಿ ಅವರಿಗೆ ಆಳುಗಳ ಮುಖಾಂತರವಾಗಿ, “ನಿಮ್ಮ ಗಡ್ಡ ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿದ್ದು ಅನಂತರ ಬನ್ನಿರಿ” ಎಂದು ಹೇಳಿಸಿದನು.

6ತಾವು ದಾವೀದನಿಗೆ ಅಸಹ್ಯರಾದೆವೆಂದು ಹಾನೂನನೂ ಮತ್ತು ಅಮ್ಮೋನಿಯರೂ ತಿಳಿದು ಎರಡು ನದಿಗಳ ಮಧ್ಯದಲ್ಲಿರುವ ಅರಾಮ್ ಸೀಮೆಯಿಂದಲೂ, ಮಾಕದಿಂದಲೂ, ಚೋಬಾ ರಾಜ್ಯದಿಂದಲೂ ರಥಗಳನ್ನೂ, ರಾಹುತರನ್ನು ತರಿಸುವುದಕ್ಕೋಸ್ಕರ ಸಾವಿರ ತಲಾಂತು ಬೆಳ್ಳಿಯನ್ನೂ ಕಳುಹಿಸಿದರು.

7ಆಗ ಮೂವತ್ತೆರಡು ಸಾವಿರ ರಥಬಲದವರೂ, ಮಾಕದ ಅರಸನೂ ಮತ್ತು ಅವನ ದಂಡಾಳುಗಳು ಬಂದು ಅವರ ಸಹಾಯಕ್ಕೋಸ್ಕರ ಮೇದೆಬ ಊರಿನ ಮುಂದೆ ಪಾಳೆಯ ಮಾಡಿಕೊಂಡರು. ಅಮ್ಮೋನಿಯರೂ ತಮ್ಮ ಪಟ್ಟಣಗಳಿಂದ ಯುದ್ಧಕ್ಕೆ ಕೂಡಿಬಂದರು.

8ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಯೋವಾಬನನ್ನೂ, ಎಲ್ಲಾ ಶೂರಸೈನಿಕರನ್ನೂ ಕಳುಹಿಸಿದನು.

9ಕೂಡಲೆ ಅಮ್ಮೋನಿಯರು ಹೊರಗೆ ಬಂದು ಊರ ಬಾಗಿಲಿನ ಬಳಿಯಲ್ಲಿ ವ್ಯೂಹಕಟ್ಟಿದರು. ಅವರ ಸಹಾಯಕ್ಕಾಗಿ ಬಂದ ಅರಸರು ಪ್ರತ್ಯೇಕವಾಗಿ ಮೈದಾನದಲ್ಲಿ ನಿಂತರು.

10ಯೋವಾಬನು ತನ್ನ ಮುಂದೆಯೂ ಹಿಂದೆಯೂ ಯುದ್ಧ ಪ್ರಾರಂಭವಾದದ್ದನ್ನು ಕಂಡು ಇಸ್ರಾಯೇಲ್ಯರಲ್ಲಿ ಶ್ರೇಷ್ಠರಾದ ಎಲ್ಲಾ ಸೈನಿಕರನ್ನು ಆರಿಸಿಕೊಂಡು, ಅವರನ್ನು ಅರಾಮ್ಯರಿಗೆ ವಿರೋಧವಾಗಿ ನಿಲ್ಲಿಸಿದನು.

11ಉಳಿದ ಜನರನ್ನು ತನ್ನ ತಮ್ಮನಾದ ಅಬ್ಷೈಯ ವಶಕ್ಕೆ ಕೊಟ್ಟು ಅವನಿಗೆ,

12“ಅರಾಮ್ಯರು ನನ್ನನ್ನು ಸೋಲಿಸುವಂತೆ ಕಂಡರೆ ನೀನು ನನ್ನ ಸಹಾಯಕ್ಕೆ ಬಾ, ಅಮ್ಮೋನಿಯರು ನಿನ್ನನ್ನು ಸೋಲಿಸುವಂತೆ ಕಂಡರೆ ನಾನು ನಿನ್ನ ಸಹಾಯಕ್ಕೆ ಬರುವೆನು.

13ಧೈರ್ಯದಿಂದಿರು, ನಮ್ಮ ಜನರಿಗೋಸ್ಕರವೂ, ನಮ್ಮ ದೇವರ ಪಟ್ಟಣಗಳಿಗೋಸ್ಕರವೂ, ನಮ್ಮ ಪೌರುಷವನ್ನು ತೋರಿಸೋಣ. ಯೆಹೋವನು ತನಗೆ ಸರಿಕಾಣುವ ಹಾಗೆ ಮಾಡಲಿ” ಎಂದು ಹೇಳಿ ಅವನನ್ನು ಅಮ್ಮೋನಿಯರಿಗೆ ವಿರುದ್ಧವಾಗಿ ಕಳುಹಿಸಿದನು.

14ಯೋವಾಬನೂ ಅವನ ಜನರೂ ಅರಾಮ್ಯರಿಗೆ ವಿರುದ್ಧವಾಗಿ ಯುದ್ಧಪ್ರಾರಂಭಿಸಿದಾಗ ಅರಾಮ್ಯರು ಓಡಿಹೋದರು.

15ಅವರು ಓಡಿಹೋಗುವುದನ್ನು ಅಮ್ಮೋನಿಯರು ಕಂಡು ಅವರೂ ಅವನ ತಮ್ಮನಾದ ಅಬ್ಷೈಯ ಎದುರಿನಿಂದ ಓಡಿಹೋಗಿ ಪಟ್ಟಣವನ್ನು ಪ್ರವೇಶಿಸಿದರು. ಯೋವಾಬನು ಯೆರೂಸಲೇಮಿಗೆ ಹೋದನು.

16ಅರಾಮ್ಯರಿಗೆ ತಾವು ಇಸ್ರಾಯೇಲರಿಂದ ಅಪಜಯ ಹೊಂದಿದ್ದೇವೆಂದು ಗೊತ್ತಾದಾಗ ಅವರು ಯೂಫ್ರೆಟಿಸ್ ನದಿಯ ಆಚೆಯಲ್ಲಿದ್ದ ಅರಾಮ್ಯರನ್ನು ಕರೆಕಳುಹಿಸಿದರು. ಹದರೆಜರನ ಸೇನಾಧಿಪತಿಯಾದ ಶೋಫಕನು ಅವರ ನಾಯಕನಾದನು.

17ಈ ಸುದ್ದಿಯು ದಾವೀದನಿಗೆ ಮುಟ್ಟಿದಾಗ ಅವನು ಇಸ್ರಾಯೇಲರನ್ನು ಕೂಡಿಸಿಕೊಂಡು ಯೊರ್ದನ್ ಹೊಳೆಯನ್ನು ದಾಟಿ, ಅರಾಮ್ಯರ ಸಮೀಪಕ್ಕೆ ಬಂದು ಅವರೊಡನೆ ಕಾದಾಡುವುದಕ್ಕೊಸ್ಕರ ವ್ಯೂಹ ಕಟ್ಟಿದನು.

18ಅರಾಮ್ಯರು ಯುದ್ಧಕ್ಕೆ ನಿಂತಾಗ ಇಸ್ರಾಯೇಲರ ಮುಂದೆ ಸೋತು ಓಡಿಹೋದರು. ದಾವೀದನು ಅರಾಮ್ಯರ ಏಳುಸಾವಿರ ರಥಗಳನ್ನು ಹಾಳುಮಾಡಿ, ನಲ್ವತ್ತು ಸಾವಿರ ಕಾಲಾಳುಗಳನ್ನು ಕೊಂದುಬಿಟ್ಟನು. ಅವನು ಸೇನಾಧಿಪತಿಯಾದ ಶೋಫಕನನ್ನೂ ಕೊಂದನು.

19ಹದರೆಜರನ ದಾಸರು ಇಸ್ರಾಯೇಲರ ಮುಂದೆ ತಮ್ಮ ಕೈ ಸಾಗದೆಂದು ತಿಳಿದು ದಾವೀದನೊಡನೆ ಒಪ್ಪಂದ ಮಾಡಿಕೊಂಡು ಅವನ ದಾಸರಾದರು. ಅಂದಿನಿಂದ ಅರಾಮ್ಯರು ಅಮ್ಮೋನಿಯರಿಗೆ ಸಹಾಯಮಾಡುವುದಕ್ಕೆ ಮನಸ್ಸು ಮಾಡಲ್ಲಿಲ್ಲ.

ಮೂಲ: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

WEBREATH · 11:11

«He himself gives everyone life and breath and everything else» — Acts 17:25

Breath is one for all: everyone lives by it, whoever they are and whatever they believe. Every day at 11:11 local time people stop for sixty seconds, breathe, and thank GOD for the breath — each in their own words, each within themselves. In that minute we are One Breath.

WEBREATH — the Minute at 11:11, your own local time — we are One Breath